ಅಬುಧಾಬಿ ಪ್ರವೇಶಿಸಬೇಕಾದರೆ ‘ಅಲ್ ಹಸನ್’ ಆ್ಯಪ್ ಕಡ್ಡಾಯ
Update: 2021-01-30 17:01 GMT
ಅಬುಧಾಬಿ (ಯುಎಇ), ಜ. 30: ಯುಎಇ ನಿವಾಸಿಗಳು ರಾಜಧಾನಿ ಅಬುಧಾಬಿಯನ್ನು ಪ್ರವೇಶಿಸಬೇಕಾದರೆ ಸಂಪರ್ಕ ಪತ್ತೆಹಚ್ಚುವ ಆ್ಯಪ್ ‘ಅಲ್ ಹಸನ್’ನ್ನು ಚಾಲನೆಯಲ್ಲಿಡುವುದು ಅಗತ್ಯವಾಗಿದೆ ಎಂದು ಅಬುಧಾಬಿ ಪೊಲೀಸರು ಹೇಳಿದ್ದಾರೆ.
ಫೆಬ್ರವರಿ 1ರಿಂದ ಅಬುಧಾಬಿ ಪ್ರವೇಶಿಸಬಯಸುವವರು, ತಮಗೆ ಕೊರೋನ ವೈರಸ್ ಸೋಂಕು ಇಲ್ಲ ಎನ್ನುವುದನ್ನು ತೋರಿಸುವ ಪರೀಕ್ಷಾ ಫಲಿತಾಂಶ ಮತ್ತು ಕೊರೋನ ವೈರಸ್ ಪತ್ತೆಹಚ್ಚಲು ಯಾವ ಮಾದರಿಯ ಪರೀಕ್ಷೆಯನ್ನು ಮಾಡಲಾಗಿದೆ ಎನ್ನುವುದನ್ನು ಈ ಆ್ಯಪ್‌ನ ಮೂಲಕ ತೋರಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊರೋನ ಸೋಂಕು ಇಲ್ಲ ಎನ್ನುವುದನ್ನು ತೋರಿಸುವ ಪಿಸಿಆರ್ ಪರೀಕ್ಷಾ ಫಲಿತಾಂಶ ಪಡೆದ 48 ಗಂಟೆಗಳಲ್ಲಿ ರಾಜಧಾನಿ ಪ್ರವೇಶಿಸಲು ಜನರಿಗೆ ಅವಕಾಶ ಕಲ್ಪಿಸಲಾಗುವುದು. ರಾಜಧಾನಿಯನ್ನು ಪ್ರವೇಶಿಸಿದ 4 ಮತ್ತು 8ನೇ ದಿನಗಳಂದು ಅವರು ಮತ್ತೆ ಪರೀಕ್ಷೆಗೊಳಪಡಬೇಕಾಗುತ್ತದೆ.