ಹಲವು ರಾಜ್ಯಗಳಲ್ಲಿ ವಿಪರೀತ ಚಳಿ: ಕಂಬಳಿ ವಿತರಣಾ ಕಾರ್ಯ ಆರಂಭಿಸಿದ ಕೆಸಿಎಫ್ ಯುಎಇ

Update: 2021-02-12 17:47 GMT

ಯುಎಇ: ಭಾರತದ ಹಲವು ರಾಜ್ಯಗಳಲ್ಲಿ ಜನರು ಮೈಕೊರೆಸುವ ಚಳಿಯಿಂದ ತತ್ತರಿಸಿದ್ದು, ಈ ಪ್ರದೇಶಗಳ ಜನರಿಗೆ ಯುಎಇ ಕೆಸಿಎಫ್ ಸಮಿತಿಯು ಕಂಬಳಿ ವಿತರಣಾ ಕಾರ್ಯಕ್ರಮವನ್ನು ಆರಂಭಿಸಿದೆ.

ಭಾರತದ ದಿಲ್ಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ರಾಜಸ್ಥಾನ, ಪಂಜಾಬ್, ಗುಜರಾತ್ ಸೇರಿದಂತೆ ದೇಶದಾದ್ಯಂತ ಹಲವಾರು ರಾಜ್ಯಗಳು ಈ ಬಾರಿ ಮೈಕೊರೆಯುವ ಚಳಿಯಿಂದ ತತ್ತರಿಸಿವೆ. ಈ ಪ್ರದೇಶಗಳಲ್ಲಿ ಅಸಾಮಾನ್ಯ ಹವಾಮಾನದಿಂದ ಬಳಲುತ್ತಿರುವ ಅನೇಕ ಜನರನ್ನು ಗುರುತಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಯುಎಇ ಸಮಿತಿ ಕಂಬಳಿ ವಿತರಣಾ ಕಾರ್ಯವನ್ನು ಆರಂಭಿಸಿದೆ.

ಈಗಾಗಲೇ ದೇಶದ ಆಯಾ ಪ್ರದೇಶಗಳಲ್ಲಿ ಪ್ರತಿಷ್ಠಿತ ಮರ್ಕಝ್ ಸಂಸ್ಥೆಯ ನೂರಾನಿ ವಿದ್ವಾಂಸರ ಸಹಕಾರದೊಂದಿಗೆ ದಿಲ್ಲಿಯ ತೈಬಾ ಹೆರಿಟೇಜ್ ಮೂಲಕ ಹಲವಾರು ಕಂಬಳಿಗಳನ್ನು ಯುಎಇ ಕೆಸಿಎಫ್ ವಿತರಿಸಿದೆ. ದಿಲ್ಲಿಯಲ್ಲಿ ಶಾಫಿ ನೂರಾನಿ ಮತ್ತು ಅಡ್ವಕೇಟ್ ಸಿದ್ದೀಕ್, ಗುಜರಾತಿನಲ್ಲಿ ಆದಮ್ ನೂರಾನಿ ಮತ್ತು ಉಬೈದ್ ನೂರಾನಿ, ಹರ್ಯಾಣದಲ್ಲಿ ಮುಶ್ರಖ್ ರಬ್ಬಾನಿ, ಉತ್ತರ ಪ್ರದೇಶದಲ್ಲಿ ಜಲೀಲ್ ನಿಝಾಮಿ ಮತ್ತು ಖಾರಿ ಶಹೀರ್, ರಾಜಸ್ಥಾನದಲ್ಲಿ ಮುನೀಬ್ ನ‌ಈಮಿ, ವಹೀದ್ ನ‌ಈಮಿ ಮತ್ತು ವಾಹಿದ್ ಮು‌ಈನಿ, ಜಮ್ಮು ಕಾಶ್ಮೀರದಲ್ಲಿ ಶೌಕತ್ ಬುಖಾರಿ ಹಾಗೂ ಶಬೀರ್ ಸರ್ ಮತ್ತು ಪಂಜಾಬಿನಲ್ಲಿ ಮುಫ್ತಿ ಮೌಲಾನ ನೂರಾನಿ ಶಾಹ್ ಅವರ ನೇತೃತ್ವದಲ್ಲಿ ಕಂಬಳಿಗಳನ್ನು ವಿತರಿಸಲಾಗಿದೆ.

ಕೆಸಿಎಫ್‌ನ ಈ ಕಾರ್ಯವನ್ನು ಕಂಡ ದುಬೈಯ ದಾನಿಯೊಬ್ಬರು ಐದು ಲಕ್ಷ ರೂ. ಮೊತ್ತದ ಕಂಬಳಿಗಳನ್ನು ನೀಡಲು ಮುಂದೆ ಬಂದಿದ್ದಾರೆ. 

ಅಲ್ಲದೇ, ಯುಎಇ ಕೆಸಿಎಫ್‌ನ ಕನಸಿನ ಕೂಸಾದ ಬಹುನಿರೀಕ್ಷಿತ 'ದಾರುಲ್ ಅಮಾನ್' ವಸತಿ ನಿರ್ಮಾಣ ಯೋಜನೆಯ ಮುಂದುವರಿದ ಭಾಗವಾಗಿ ಉತ್ತರಾಖಂಡದ ಬೀದಿಬದಿಯಲ್ಲಿರುವ ಮನೆಯಿಲ್ಲದ ಬಡ ನಿರ್ಗತಿಕರಿಗೆ ನೆಲೆ ಕಲ್ಪಿಸುವ ಸಲುವಾಗಿ ವಸತಿ ನಿರ್ಮಾಣ ಕಾರ್ಯವನ್ನೂ ಕೂಡ ಕೆಸಿಎಫ್ ಯುಎಇ ಕೈಗೆತ್ತಿಕೊಂಡಿದೆ. ಈಗಾಗಲೇ ವಸತಿ ಸಂಕೀರ್ಣದ ಶಿಲಾನ್ಯಾಸ ನೆರವೇರಿದ್ದು, ಕೆಲಸ ಭರದಿಂದ ಸಾಗುತ್ತಿದೆ. ದಾರುಲ್ ಅಮಾನ್ ಯೋಜನೆಯ ಮೊದಲ ಮನೆಯನ್ನು ಈಗಾಗಲೇ ಉಪ್ಪಿನಂಗಡಿಯ ಪೆರ್ಣೆಯ ಅನಿಲ ದುರಂತದಲ್ಲಿ ಅನಾಥರಾದ ಮಕ್ಕಳಿಗೆ ನಿರ್ಮಿಸಿಕೊಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News