5ಕ್ಕಿಂತ ಕಡಿಮೆ ವಯಸ್ಸಿನ ಕನಿಷ್ಠ 4 ಲಕ್ಷ ಯೆಮನ್ ಮಕ್ಕಳು ಹಸಿವೆಗೆ ಬಲಿ ಸಾಧ್ಯತೆ: ವಿಶ್ವಸಂಸ್ಥೆ ಏಜೆನ್ಸಿಗಳು

Update: 2021-02-12 18:56 GMT
ಸಾಂದರ್ಭಿಕ ಚಿತ್ರ

ದುಬೈ: ಯುದ್ದ ಹಾಗೂ ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದ ಪೌಷ್ಟಿಕತೆಯ ದರ ಗಂಭೀರವಾಗಿ ಏರುತ್ತಿರುವ ನಡುವೆ ತುರ್ತು ಮಧ್ಯಪ್ರವೇಶಿಸದೇ  ಇದ್ದರೆ ಈ ವರ್ಷ ಐದು ವರ್ಷದೊಳಗಿನ ಕನಿಷ್ಠ 4,00,000 ಯೆಮನ್ ಮಕ್ಕಳು ಹಸಿವಿನಿಂದ ಸಾಯಬಹುದು ಎಂದು ವಿಶ್ವ ಸಂಸ್ಥೆಯ ಏಜೆನ್ಸಿಗಳು ವರದಿ ಮಾಡಿವೆ.

2020ಕ್ಕೆ ಹೋಲಿಸಿದರೆ ಯೆಮನ್ ನ 5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ತೀವ್ರ ಪೋಷಕಾಂಶದ ಕೊರತೆ ಶೇ.22ರಷ್ಟು ಹೆಚ್ಚಾಗಿರುವುದನ್ನು ಏಜೆನ್ಸಿಗಳು ತಿಳಿಸಿವೆ ಎಂದು ಶುಕ್ರವಾರ ಪ್ರಕಟವಾದ ವರದಿ ಹೇಳಿದೆ.

ತೀವ್ರ ಅಪೌಷ್ಟಿಕತೆ ಎಂದರೆ ಆಹಾರದ ಕೊರತೆಯಿಂದ ಸಾವಿನ ಅಪಾಯ. ಏಡೆನ್, ಹೊಡೆಡಾಹ, ತೈಝ್ ಹಾಗೂ ಸನಾ ಗಳು ತೀವ್ರಬಾಧಿತ ಪ್ರದೇಶಗಳೆಂದು ವರದಿ ತಿಳಿಸಿದೆ.

2021ರಲ್ಲಿ 5 ವರ್ಷಕ್ಕಿಂತ ಕೆಳಗಿನ ಇನ್ನೂ 2.3 ಮಿಲಿಯನ್ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವ ಸಾಧ್ಯತೆ ಇದೆ. ಯೆಮನ್ ನ ಚಿಕ್ಕಮಕ್ಕಳು ಹಾಗೂ ತಾಯಂದಿರಲ್ಲಿ ಕೂಡ ಪ್ರತಿ ವರ್ಷ ಅಪೌಷ್ಟಿಕತೆ ಹೆಚ್ಚುತ್ತಿದೆ.

 ಈವರ್ಷ ಸುಮಾರು 1.2 ಮಿಲಿಯನ್ ಗರ್ಭಿಣಿಯರು ಹಾಗೂ ಮೊಲೆ ಉಣಿಸುವ ಮಹಿಳೆಯರು ಅಪೌಷ್ಟಿಕತೆಗೆ ಒಳಗಾಗಿದ್ದಾರೆ ಎಂದು ಏಜೆನ್ಸಿ ತಿಳಿಸಿದೆ.

ಯೆಮನ್ ನಲ್ಲಿ ಕ್ಷಾಮವನ್ನು ಇದುವರೆಗೆ ಅಧಿಕೃತವಾಗಿ ಘೋಷಿಸಲಾಗಿಲ್ಲ. ದೇಶ ವಿಶ್ವದ ಅತಿದೊಡ್ಡ ಮಾನವೀಯ ಬಿಕ್ಕಟ್ಟು ಎದುರಿಸುತ್ತಿದೆ. ಸಂಘರ್ಷ, ಆರ್ಥಿಕ ಕುಸಿತ ಹಾಗೂ ಸಾಂಕ್ರಾಮಿಕದ ಜೊತೆಗೆ ಕಳೆದ ವರ್ಷದ ದೇಣಿಗೆಯ ಕೊರತೆಯು ಹದಗೆಡುತ್ತಿರುವ ಮಾನವೀಯ ಬಿಕ್ಕಟ್ಟಿಗೆ ಸಹಕಾರಿಯಾಗಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News