ಒತ್ತೆಯಾಳಾಗಿ ಇರುವ ನಾನು ಉಳಿಯುವ ಖಾತರಿ ಇಲ್ಲ: ದುಬೈ ರಾಜಕುಮಾರಿ ಸಂದೇಶ

Update: 2021-02-17 06:30 GMT
ಶೇಖಾ ಲತೀಫಾ ಬಿಂತ್ ಮುಹಮ್ಮದ್ ಅಲ್ ಮಕ್ತುಮ್ (Photo: AFP)

ದುಬೈ: 2018ರಲ್ಲಿ ದೇಶವನ್ನು ತೊರೆಯಲು ಯತ್ನಿಸುವ ಸಂದರ್ಭದಲ್ಲಿ ಕಮಾಂಡೊಗಳಿಂದ ಬಂಧಿತರಾಗಿದ್ದ ದುಬೈನ ಪ್ರಭಾವಿ ದೊರೆಯ ಪುತ್ರಿಯಿಂದ ಬಂದಿರುವ ಹೊಸ ವಿಡಿಯೊ ಸಂದೇಶದಲ್ಲಿ, "ಈ ಸ್ಥಿತಿಯಲ್ಲಿ ನಾನು ಉಳಿಯುತ್ತೇನೆ ಎನ್ನುವ ಬಗ್ಗೆ ಖಾತರಿ ಇಲ್ಲ" ಎಂದು ರಾಜಕುಮಾರಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಬಿಬಿಸಿ ಮಂಗಳವಾರ ಈ ವಿಡಿಯೊ ಬಿಡುಗಡೆ ಮಾಡಿದ್ದು, ಶೇಖಾ ಲತೀಫಾ ಬಿಂತ್ ಮುಹಮ್ಮದ್ ಅಲ್ ಮಕ್ತುಮ್ "ಜೈಲು ವಿಲ್ಲಾ" ದಲ್ಲಿ ಇರುವುದನ್ನು ತೋರಿಸುತ್ತದೆ. ಬಹುಶಃ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಗಗನಚುಂಬಿ ಕಟ್ಟಡಗಳ ದಟ್ಟಣೆ ಇರುವ ನಗರದಲ್ಲಿ ಇರುವ ಸಾಧ್ಯತೆ ಇದೆ. ವಂಶಪಾರಂಪರ್ಯ ಆಳ್ವಿಕೆಯ ಯುಎಇಯಲ್ಲಿ ರಾಜಕುಮಾರಿಯ ತಂದೆ ಶೇಕ್ ಮುಹಮ್ಮದ್ ಬಿನ್ ರಶೀದ್ ಅಲ್ ಮುಕ್ತುಮ್ ಪ್ರಧಾನಿ ಹಾಗೂ ಉಪಾಧ್ಯಕ್ಷರಾಗಿದ್ದಾರೆ.

"ನಾನು ಒತ್ತೆಯಾಳಾಗಿ ಬಂಧಿಯಾಗಿದ್ದೇನೆ" ಎಂದು ಒಂದು ವಿಡಿಯೊದಲ್ಲಿ ಶೇಖಾ ಹೇಳಿದ್ದಾರೆ. "ಈ ವಿಲ್ಲಾವನ್ನು ಜೈಲಾಗಿ ಪರಿವರ್ತಿಸಲಾಗಿದೆ. ತಾಜಾ ಗಾಳಿ ಸೇವಿಸಲು ಕೂಡಾ ನಾನು ಹೊರಹೋಗುವಂತಿಲ್ಲ" ಎಂದು ಹೇಳಿದ್ದಾರೆ.

ಬಂಧನದ ಹಲವು ವರ್ಷಗಳ ಬಳಿಕ ರಹಸ್ಯವಾಗಿ ಪಡೆದ ಮೊಬೈಲ್ ಬಳಸಿಕೊಂಡು ಶೇಖಾ ಸ್ನಾನಗೃಹದಲ್ಲಿ ಹಲವು ತಿಂಗಳುಗಳ ಅವಧಿಯಲ್ಲಿ ಈ ವಿಡಿಯೊ ಚಿತ್ರೀಕರಿಸಿದ್ದಾರೆ ಎಂದು ಬಿಬಿಸಿ ಹೇಳಿದೆ. "ನಾನು ಬಿಡುಗಡೆಯಾಗುತ್ತೇನೆಯೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಬಿಡುಗಡೆಯಾದರೆ ಸ್ಥಿತಿ ಹೇಗಿರುತ್ತದೆ ಎಂಬ ಕಲ್ಪನೆಯೂ ಇಲ್ಲ. ನನ್ನ ಸುರಕ್ಷತೆ ಮತ್ತು ಜೀವದ ಬಗ್ಗೆ ಪ್ರತಿ ದಿನ ಭೀತಿ ಎದುರಾಗುತ್ತಿದೆ" ಎಂದು ವಿವರಿಸಿದ್ದಾರೆ.

ಎಪಿ ವರದಿಯ ಪ್ರಕಾರ 2018ರಲ್ಲಿ ಸ್ನೇಹಿತ ಹಾಗೂ ಮಾಜಿ ಫ್ರೆಂಚ್ ಬೇಹುಗಾರನ ನೆರವಿನಿಂದ ಶೇಖಾ ಲತೀಫಾ ದೋಣಿ ಮೂಲಕ ತಪ್ಪಿಸಿಕೊಂಡಿದ್ದರು. ಅವರನ್ನು ಭಾರತದ ಹೊರಗೆ ಕಮಾಂಡೊಗಳು ಸೆರೆ ಹಿಡಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News