ಅಕ್ಕನ ಅಪಹರಣ ಕುರಿತ ತನಿಖೆ ಪುನರಾರಂಭಿಸಿ: ಬ್ರಿಟಿಷ್ ಪೊಲೀಸರಿಗೆ ದುಬೈ ರಾಜಕುಮಾರಿ ಶೇಖ್ ಲತೀಫಾ ಪತ್ರ
ಲಂಡನ್, ಫೆ. 25: 2000ದಲ್ಲಿ ಕೇಂಬ್ರಿಜ್ ರಸ್ತೆಯೊಂದರಲ್ಲಿ ನಡೆದ ನನ್ನ ಅಕ್ಕನ ಅಪಹರಣ ಕುರಿತ ತನಿಖೆಯನ್ನು ಪುನರಾರಂಭಿಸುವಂತೆ ಕೋರಿ ದುಬೈ ಆಡಳಿತಗಾರನ ಓರ್ವ ಮಗಳು ಶೇಖ್ ಲತೀಫಾ ಬ್ರಿಟಿಶ್ ಪೊಲೀಸರಿಗೆ ಪತ್ರ ಬರೆದಿದ್ದಾರೆ ಎಂದು ಬಿಬಿಸಿ ಗುರುವಾರ ವರದಿ ಮಾಡಿದೆ.
ನನ್ನ ಅಕ್ಕ ಶಮ್ಸಾ (ಈಗ 39 ವರ್ಷ)ರನ್ನು ಆಕೆ 18 ವರ್ಷದವರಾಗಿದ್ದಾಗ ಅಪಹರಿಸಲಾಗಿತ್ತು. ಆ ಪ್ರಕರಣದ ತನಿಖೆಯನ್ನು ಪುನರಾರಂಭಿಸಿ ಎಂದು ಕೋರಿ ಲತೀಫಾ 2018ರಲ್ಲಿ ಕೇಂಬ್ರಿಜ್‌ಶೈರ್ ಪೊಲೀಸರಿಗೆ ಕೈಬರಹದ ಪತ್ರ ಬರೆದಿದ್ದರು ಎಂದು ಬಿಬಿಸಿ ಹೇಳಿದೆ. ಶಮ್ಸಾ ಅಂದಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
ಸ್ವತಃ 35 ವರ್ಷದ ಲತೀಫಾರ ಕ್ಷೇಮದ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ನಾನು ಬೇಲಿಹಾಕಿದ ಮನೆಯೊಂದರಲ್ಲಿ ಬಂಧಿಯಾಗಿದ್ದೇನೆ ಎಂಬುದಾಗಿ ಅವರು ವೀಡಿಯೊವೊಂದರಲ್ಲಿ ಹೇಳಿರುವುದು ಕೂಡ ಇತ್ತೀಚೆಗೆ ಬಿಬಿಸಿಯಲ್ಲಿ ಪ್ರಸಾರವಾಗಿತ್ತು.
ಈ ವಿಷಯದಲ್ಲಿ ಪ್ರತಿಕ್ರಿಯೆ ಕೋರಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ಕಳುಹಿಸಿದ ಮನವಿಗೆ ದುಬೈ ಸರಕಾರದ ಮಾಧ್ಯಮ ಕಚೇರಿ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.
2018ರ ಫೆಬ್ರವರಿ ದಿನಾಂಕದ ಪತ್ರ ಸಿಕ್ಕಿರುವುದನ್ನು ಕೇಂಬ್ರಿಜ್‌ಶೈರ್ ಪೊಲೀಸರು ಖಚಿತಪಡಿಸಿದ್ದಾರೆ.
ಲತೀಫಾರನ್ನು ಮನೆಯಲ್ಲಿ ಕುಟುಂಬ ಸದಸ್ಯರು ಮತ್ತು ವೈದ್ಯರು ಆರೈಕೆ ಮಾಡುತ್ತಿದ್ದಾರೆ ಎಂದು ಯುಎಇ ಕಳೆದ ವಾರ ಹೇಳಿದೆ.
ತನ್ನ ಪುತ್ರಿಯರ ಅಪಹರಣಕ್ಕೆ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಆದೇಶ ನೀಡಿದ್ದಾರೆ ಎಂಬ ಆರೋಪ ಸಾಬೀತಾಗಿದೆ ಎಂಬುದಾಗಿ ಕಳೆದ ವರ್ಷ ಲಂಡನ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಶೇಖ್ ತಿರಸ್ಕರಿಸಿದ್ದಾರೆ.
ಲತೀಫಾ ಈಗಲೂ ಜೀವಂತವಾಗಿದ್ದಾರೆ ಎನ್ನುವುದಕ್ಕೆ ಪುರಾವೆ ನೀಡುವಂತೆ ಬ್ರಿಟನ್ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಕರೆ ನೀಡಿದೆ.