ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ಸಂಘದಿಂದ ಉದ್ಯೋಗ ಮೇಳ
ಅಬುಧಾಬಿ, ಮಾ.3: ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ವತಿಯಿಂದ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರವು ಇತ್ತೀಚೆಗೆ ಝೂಂ ಆ್ಯಪ್ ಮೂಲಕ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಲ್ ಐನ್ ಜ್ಯೂನಿಯರ್ ಸ್ಕೂಲ್ ಪರ್ಸನಾಲಿಟಿ ಡೆವಲಪ್‌ಮೆಂಟ್ ವಿಭಾಗದ ಮುಖ್ಯಸ್ಥ ಉಮರ್ ಫಾರೂಕ್, ಪಾನ್ ವರ್ಲ್ಡ್ ಎಜುಕೇಶನ್ ನಿರ್ದೇಶಕ ರಾಘವೇಂದ್ರ, ವೃತ್ತಿ ಮಾರ್ಗದರ್ಶಕ ತಜ್ಞ ಗುರು ನಾಡಕರ್ಣಿ ಮತ್ತು ಎಚ್.ಆರ್. ಎಕ್ಸಿಕ್ಯೂಟಿವ್ ರಾಧಾ ಜೀವನ್ ಅವರು ಉದ್ಯೋಗ ಸಂದರ್ಶನ ಎದುರಿಸುವುದು ಹೇಗೆ ? ಯಾವ ರೀತಿಯಲ್ಲಿ ಯಾವ ಯಾವ ಕಡೆಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಬೇಕು ಮುಂತಾದ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಯುಎಇಯ ವಿವಿಧ ಎಮಿರೇಟ್‌ಗಳಿಂದ ಹಲವು ಕನ್ನಡಿಗರು ಪಾಲ್ಗೊಂಡು ಇದರ ಪ್ರಯೋಜನ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಮಮತಾ ಮೈಸೂರು ಮಾತನಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಹೆಮ್ಮೆಯ ಕನ್ನಡಿಗರು ತಂಡದ ಗೌರವಾಧ್ಯಕ್ಷ ಎಂ ಸ್ಕ್ವೇರ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಮಾಲಕ ಮುಹಮ್ಮದ್ ಮುಸ್ತಫಾ, ತಂಡದ ಮುಖ್ಯ ಸಂಚಾಲಕ ರಫೀಕಲಿ ಕೊಡಗು ಉದ್ಯೋಗಾಕಾಂಕ್ಷಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಹೆಮ್ಮೆಯ ಕನ್ನಡಿಗರು ತಂಡದ ಜಾಬ್ ಪೋರ್ಟಲ್ ವಿಭಾಗದ ಸಂಚಾಲಕ ನವೀನ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಎನ್.ಆರ್.ಐ ಫೋರಂ ಯುಎಇ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಲವೊಂದು ಸಲಹೆಗಳನ್ನು ನೀಡಿದ್ದಲ್ಲದೆ 8 ಮಂದಿ ಕನ್ನಡಿಗರಿಗೆ ತಮ್ಮ ಹೋಟೆಲ್‌ನಲ್ಲಿ ಉದ್ಯೋಗಾವಕಾಶ ಕಲ್ಪಿಸಿದರು.
ಮಹಿಳಾ ಘಟಕದ ಸಂಚಾಲಕಿ ಪಲ್ಲವಿ ದಾವಣಗೆರೆ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಹೆಮ್ಮೆಯ ಕನ್ನಡಿಗರು ಸಂಘದ ಕಾರ್ಯಚಟುವಟಿಕೆ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಿದರು. ತಂಡದ ಮುಖ್ಯ ಕಾರ್ಯದರ್ಶಿ ಸೆಂಥಿಲ್ ಬೆಂಗಳೂರು, ಮಾಧ್ಯಮ ಘಟಕದ ಸದಸ್ಯ ಸಾದಾತ್ ಬೆಂಗಳೂರು ಸಹಕರಿಸಿದರು.
ಹೆಮ್ಮೆಯ ಕನ್ನಡಿಗರು ತಂಡದ ಮಹಿಳಾ ಘಟಕದ ಸಂಚಾಲಕಿ ಹಾದಿಯ ಮಂಡ್ಯ ಸ್ವಾಗತಿಸಿದರು. ಹೆಮ್ಮೆಯ ಕನ್ನಡಿಗರು ತಂಡದ ದುಬೈ ಕನ್ನಡ ಸಾಹಿತ್ಯ ಘಟಕದ ಮುಖ್ಯ ಸಂಚಾಲಕ ವಿಷ್ಣುಮೂರ್ತಿ ಮೈಸೂರು ವಂದಿಸಿದರು.