ಸೌದಿ: ಮಾಲಕರ ಒಪ್ಪಿಗೆಯಿಲ್ಲದೆ ವಿದೇಶೀಯರು ಕೆಲಸ ಬದಲಿಸುವ ಕಾನೂನು ಜಾರಿಗೆ

Update: 2021-03-14 17:33 GMT

ದುಬೈ (ಯುಎಇ), ಮಾ. 14: ಸೌದಿ ಅರೇಬಿಯದ ಮಹತ್ವದ ಕಾರ್ಮಿಕ ಸುಧಾರಣೆಗಳು ರವಿವಾರ (ಮಾರ್ಚ್ 14) ಜಾರಿಗೆ ಬಂದಿದ್ದು, ದೇಶದಲ್ಲಿ ವಾಸಿಸುತ್ತಿರುವ ಒಂದು ಕೋಟಿಗೂ ಅಧಿಕ ವಿದೇಶೀಯರು ಪ್ರಯೋಜನ ಪಡೆಯಲಿದ್ದಾರೆ.

ಸೌದಿ ಅರೇಬಿಯದಲ್ಲಿ ಕೆಲಸ ಮಾಡುತ್ತಿರುವ ವಿದೇಶೀಯರು ತಮ್ಮ ಉದ್ಯೋಗಗಳನ್ನು ಸುಲಭವಾಗಿ ಬದಲಾಯಿಸಬಹುದು ಹಾಗೂ ಉದ್ಯೋಗದಾತರ ಅನುಮತಿ ಇಲ್ಲದೆಯೇ ದೇಶ ತೊರೆಯಬಹುದು ಎನ್ನುವುದು ನೂತನ ಕಾರ್ಮಿಕ ಸುಧಾರಣೆಗಳ ಪ್ರಮುಖ ಅಂಶವಾಗಿದೆ.

ನವೀಕೃತ ಕಫಾಲ ಸ್ಪಾನ್ಸರ್‌ಶಿಪ್ ವ್ಯವಸ್ಥೆಯ ಪ್ರಕಾರ, ವಿದೇಶಿ ಕೆಲಸಗಾರರು ಡಿಜಿಟಲ್ ಮೂಲಕ ದಾಖಲಾಗಿರುವ ತಮ್ಮ ಉದ್ಯೋಗ ಗುತ್ತಿಗೆಗಳ ಆಧಾರದಲ್ಲೇ ಸರಕಾರಿ ಸೇವೆಗಳಿಗೆ ನೇರವಾಗಿ ಅರ್ಜಿ ಹಾಕಬಹುದಾಗಿದೆ.

ನೂತನ ಸುಧಾರಣೆಗಳನ್ನು ವಿದೇಶಿ ಉದ್ಯೋಗಿಗಳು ವ್ಯಾಪಕವಾಗಿ ಸ್ವಾಗತಿಸಿದ್ದು, ಈಗ ಸೌದಿ ಅರೇಬಿಯದ ಉದ್ಯೋಗ ಮಾರುಕಟ್ಟೆ ವಿದೇಶಿ ಕೆಲಸಗಾರರಿಗೆ ಹೆಚ್ಚು ಆಕರ್ಷಕವಾಗಿದೆ.

 ‘‘ನಾನು ಐದು ವರ್ಷಗಳ ಹಿಂದೆ ಸೌದಿ ಅರೇಬಿಯಕ್ಕೆ ಬಂದಂದಿನಿಂದ ಸಂಭವಿಸಿದ ಅತ್ಯುತ್ತಮ ಬೆಳವಣಿಗೆಗಳ ಪೈಕಿ ಇದು ಒಂದಾಗಿದೆ’’ ಎಂದು ಸೌದಿ ಅರೇಬಿಯದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವಲಸಿಗ ಇಮ್ರೋಝ್ ಅಬ್ದುರ್ರಹ್ಮಾನ್ ‘ಅರಬ್ ನ್ಯೂಸ್’ ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News