ಖತರ್: ಕನಿಷ್ಠ ವೇತನ ಕಾನೂನು ಜಾರಿಗೆ
ದೋಹಾ (ಖತರ್), ಮಾ. 20: ಲಕ್ಷಾಂತರ ವಲಸೆ ಕೆಲಸಗಾರರಿಗೆ ಅನ್ವಯವಾಗುವ ನೂತನ ಕನಿಷ್ಠ ವೇತನ ಕಾನೂನು ಖತರ್‌ನಲ್ಲಿ ಶನಿವಾರ ಜಾರಿಗೆ ಬಂದಿದೆ. ಇದರೊಂದಿಗೆ, ಅದು ತಾರತಮ್ಯರಹಿತ ಕನಿಷ್ಠ ವೇತನ ನಿಯಮವನ್ನು ಅನುಸರಿಸಿದ ಈ ವಲಯದ ಮೊದಲ ದೇಶವಾಗಿದೆ.
ನೂತನ ಕಾನೂನಿನ ಪ್ರಕಾರ, ದೇಶದ ಎಲ್ಲ ಉದ್ಯೋಗಿಗಳು ತಿಂಗಳಿಗೆ 1,000 ಖತರಿ ರಿಯಾಲ್ (ಸುಮಾರು 19,900 ರೂಪಾಯಿ) ಕನಿಷ್ಠ ವೇತನ ಪಡೆಯಲಿದ್ದಾರೆ. ಜೊತೆಗೆ, ಕನಿಷ್ಠ ಆಹಾರ ಭತ್ತೆಯಾಗಿ 300 ರಿಯಾಲ್ (ಸುಮಾರು 5,970 ರೂಪಾಯಿ) ಮತ್ತು ಕನಿಷ್ಠ ವಸತಿ ಭತ್ತೆಯಾಗಿ 500 ರಿಯಾಲ್ (ಸುಮಾರು 9,950 ರೂಪಾಯಿ) ಪಡೆಯಲಿದ್ದಾರೆ. ಆಹಾರ ಮತ್ತು ವಸತಿಗಳೆರಡನ್ನೂ ಉದ್ಯೋಗದಾತರೇ ಒದಗಿಸಿದ್ದರೆ ಈ ಭತ್ತೆಗಳು ಲಭಿಸುವುದಿಲ್ಲ.
ನೂತನ ಕಾನೂನಿನ ನೇರ ಪ್ರಯೋಜನವನ್ನು 4 ಲಕ್ಷಕ್ಕೂ ಅಧಿಕ ಕೆಲಸಗಾರರು ಪಡೆಯಲಿದ್ದಾರೆ ಎಂದು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ತಿಳಿಸಿದೆ. ಇದು ಖಾಸಗಿ ಕ್ಷೇತ್ರದ ಉದ್ಯೋಗಿಗಳ ಸಂಖ್ಯೆಯ 20 ಶೇಕಡದಷ್ಟಾಗಿದೆ.
ಖತರ್‌ನಲ್ಲಿ 27 ಲಕ್ಷ ಜನಸಂಖ್ಯೆಯಿದ್ದು, ಈ ಪೈಕಿ 3 ಲಕ್ಷ ಮಾತ್ರ ದೇಶದ ಪೌರರಾಗಿದ್ದಾರೆ.
ನೂತನ ಕಾನೂನಿಗೆ ಅನುಸಾರವಾಗಿ 5,000ಕ್ಕೂ ಅಧಿಕ ಕಂಪೆನಿಗಳು ಈಗಾಗಲೇ ತಮ್ಮ ವೇತನ ವ್ಯವಸ್ಥೆಯನ್ನು ಪರಿಷ್ಕರಿಸಿವೆ ಎಂದು ಖತರ್ ಸರಕಾರಿ ವಾರ್ತಾ ಕಚೇರಿ ತಿಳಿಸಿದೆ.
ಉದ್ಯೋಗಿಗಳು ತಮ್ಮ ಕೆಲಸ ಬದಲಿಸಲು ಉದ್ಯೋಗದಾತರ ಅನುಮತಿ ಕೋರುವ ವ್ಯವಸ್ಥೆಯನ್ನು ಖತರ್ 2020 ಆಗಸ್ಟ್‌ನಲ್ಲಿ ರದ್ದುಪಡಿಸಿತ್ತು.