ಸೌದಿ: ಮಾ.23ರಿಂದ ಝಮ್‌ಝಮ್ ನೀರಿನ ವಿತರಣೆ ಪುನರಾರಂಭ

Update: 2021-03-22 17:38 GMT

ಮಕ್ಕಾ (ಸೌದಿ ಅರೇಬಿಯ), ಮಾ. 22: ಝಮ್‌ಝಮ್ ನೀರಿನ ಬಾಟಲಿಗಳ ವಿತರಣೆಯನ್ನು ಸೌದಿ ಅರೇಬಿಯವು ಮಂಗಳವಾರದಿಂದ ಪುನರಾರಂಭಿಸಲಿದೆ. ಮಕ್ಕಾದ ಕುದೈಯಲ್ಲಿರುವ ಕಿಂಗ್ ಅಬ್ದುಲ್ಲಾ ಪ್ರಾಜೆಕ್ಟ್ ಫಾರ್ ಝಮ್‌ಝಮ್ ವಾಟರ್‌ನಲ್ಲಿ ಝಮ್‌ಝಮ್ ನೀರು ವಿತರಿಸಲಾಗುತ್ತದೆ.

ರಮಝಾನ್ ಅವಧಿಯಲ್ಲಿ ಹೆಚ್ಚುತ್ತಿರುವ ಝಮ್‌ಝಮ್ ನೀರಿನ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಅಧಿಕೃತ ವಿತರಕ ನ್ಯಾಶನಲ್ ವಾಟರ್ ಕಂಪೆನಿಯು ಮಾರ್ಚ್ 23ರಿಂದ ತನ್ನ ಬಾಗಿಲನ್ನು ಗ್ರಾಹಕರಿಗೆ ತೆರೆಯುವುದು ಎಂದು ಸೌದಿ ಗಝೆಟ್ ತಿಳಿಸಿದೆ.

ಪವಿತ್ರ ನೀರಿನ ವಿತರಣೆಯನ್ನು ಶುಕ್ರವಾರ ಹೊರತುಪಡಿಸಿ ಇತರ ಎಲ್ಲ ದಿನಗಳಂದು ಮಧ್ಯಾಹ್ನ ಒಂದು ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮಾಡಲಾಗುವುದು ಎಂದು ಎರಡು ಪವಿತ್ರ ಮಸೀದಿಗಳ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಶೇಖ್ ಅಬ್ದುರ್ರಹ್ಮಾನ್ ಅಲ್ ಸುದೈಸ್ ತಿಳಿಸಿದರು.

ಐದು ಲೀಟರ್ ನೀರಿನ ಬಾಟಲಿಗೆ ವ್ಯಾಟ್ ಸೇರಿದಂತೆ 5.5 ರಿಯಾಲ್ (ಸುಮಾರು 106 ರೂಪಾಯಿ) ಬೆಲೆ ವಿಧಿಸಲಾಗಿದೆ. ಓರ್ವ ವ್ಯಕ್ತಿ ಪ್ರತಿ 15 ದಿನಗಳಿಗೆ 4 ಬಾಟಲಿ ನೀರು ಪಡೆಯಬಹುದಾಗಿದೆ.

ಕೊರೋನ ವೈರಸ್ ಹಿನ್ನೆಲೆಯಲ್ಲಿ ಝಮ್‌ಝಮ್ ನೀರಿನ ವಿತರಣೆಯನ್ನು ಒಂದು ವರ್ಷದ ಹಿಂದೆ ನಿಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News