ಖಶೋಗಿ ಹತ್ಯೆ ಬಗ್ಗೆ ತನಿಖೆ ನಡೆಸಿದ್ದ ವಿಶ್ವಸಂಸ್ಥೆ ಪರಿಣಿತೆಗೆ ಸೌದಿಯಿಂದ ಬೆದರಿಕೆ: ‘ಗಾರ್ಡಿಯನ್’ ವರದಿ

Update: 2021-03-25 15:45 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 25: ಸೌದಿ ಅರೇಬಿಯದ ಹಿರಿಯ ಅಧಿಕಾರಿಯೊಬ್ಬರು ತನಗೆ ಬೆದರಿಕೆಯೊಡ್ಡಿದ್ದಾರೆ ಎಂಬುದಾಗಿ ವಿಶ್ವಸಂಸ್ಥೆಯ ಸ್ವತಂತ್ರ ಪರಿಣಿತೆಯೊಬ್ಬರು ಆರೋಪ ಮಾಡಿರುವುದು ನಿಜ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಬುಧವಾರ ಹೇಳಿದೆ.

ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಬಗ್ಗೆ ನಡೆದ ತನಿಖೆಯ ನೇತೃತ್ವವನ್ನು ವಹಿಸಿದ್ದ ಆ್ಯಗ್ನೆಸ್ ಕ್ಯಾಲಮಾರ್ಡ್ ಈ ಆರೋಪ ಮಾಡಿದ್ದಾರೆ ಎಂದು ಬ್ರಿಟನ್‌ನ ‘ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.

‘‘ಅವರನ್ನು ನಿಯಂತ್ರಿಸದಿದ್ದರೆ ಅವರನ್ನು ನೋಡಿಕೊಳ್ಳಲಾಗುವುದು’’ ಎಂಬುದಾಗಿ ಪತ್ರಕರ್ತನ ಹತ್ಯೆ ಬಗ್ಗೆ ನಡೆದ ತನಿಖೆಯ ಬಳಿಕ ಸೌದಿ ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದರು ಎಂದು ಆ್ಯಗ್ನೆಸ್ ಕ್ಯಾಲಮಾರ್ಡ್‌ರನ್ನು ಉಲ್ಲೇಖಿಸಿ ‘ಗಾರ್ಡಿಯನ್’ ಮಂಗಳವಾರ ವರದಿ ಮಾಡಿದೆ.

ಆ್ಯಗ್ನೆಸ್ ಕ್ಯಾಲಮಾರ್ಡ್ ನ್ಯಾಯಾಂಗೇತರ ಹತ್ಯೆಗಳ ತನಿಖೆಯಲ್ಲಿ ಪರಿಣತಿ ಹೊಂದಿದ್ದಾರೆ.

‘‘ಆ್ಯಗ್ನೆಸ್ ಕ್ಯಾಲಮಾರ್ಡ್‌ರನ್ನು ಗುರಿಯಾಗಿಸಿ ಸೌದಿ ಅರೇಬಿಯ ಹೊರಡಿಸಿರುವ ಬೆದರಿಕೆಯ ಬಗ್ಗೆ ‘ಗಾರ್ಡಿಯನ್’ ಪತ್ರಿಕೆಯಲ್ಲಿ ಬಂದಿರುವ ವಿವರಗಳು ನಿಖರವಾಗಿವೆ’’ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ವಕ್ತಾರ ರೂಪರ್ಟ್ ಕಾಲ್ವಿಲ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

ಆ್ಯಗ್ನೆಸ್ ಕ್ಯಾಲಮಾರ್ಡ್ ಎದುರಿಸುತ್ತಿರುವ ಬೆದರಿಕೆಯ ಬಗ್ಗೆ ಅವರಿಗೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಮಾಹಿತಿ ನೀಡಿದೆ. ವಿಶ್ವಸಂಸ್ಥೆಯ ಭದ್ರತಾ ವಿಭಾಗ ಮತ್ತು ಅಧಿಕಾರಿಗಳಿಗೂ ಮಾಹಿತಿ ಒದಗಿಸಲಾಗಿದೆ.

2020 ಜನವರಿಯಲ್ಲಿ ಜಿನೀವದಲ್ಲಿ ಸೌದಿ ಅರೇಬಿಯ ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳ ನಡುವೆ ನಡೆದ ಸಭೆಯ ವೇಳೆ ಈ ಬೆದರಿಕೆಯ ಬಗ್ಗೆ ನನಗೆ ತಿಳಿಸಲಾಯಿತು ಎಂದು ಕ್ಯಾಲಮಾರ್ಡ್ ‘ಗಾರ್ಡಿಯನ್’ ಪತ್ರಿಕೆಗೆ ತಿಳಿಸಿದರು. ಈ ಬಗ್ಗೆ ನನಗೆ ವಿಶ್ವಸಂಸ್ಥೆಯ ಸಹೋದ್ಯೋಗಿಯೊಬ್ಬರು ಮಾಹಿತಿ ನೀಡಿದರು ಎಂದರು.

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಕಟು ಟೀಕಾಕಾರರಾಗಿದ್ದ ಖಶೋಗಿಯನ್ನು ಟರ್ಕಿ ದೇಶದ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಸೌದಿ ಅರೇಬಿಯದ ಗುಪ್ತಚರ ಏಜಂಟರ ತಂಡವೊಂದು 2018 ಅಕ್ಟೋಬರ್ 2ರಂದು ಬರ್ಬರವಾಗಿ ಕೊಂದಿತ್ತು.

ಈ ಹತ್ಯೆಯನ್ನು ಸೌದಿ ಅರೇಬಿಯ ಆರಂಭದಲ್ಲಿ ನಿರಾಕರಿಸಿತಾದರೂ ಬಲವಾದ ಪುರಾವೆಗಳು ಹೊರಹೊಮ್ಮಿದ ಬಳಿಕ ಒಪ್ಪಿಕೊಂಡಿತು. ಆದರೆ, ಅವರ ಮೃತದೇಹ ಇನ್ನೂ ಸಿಕ್ಕಿಲ್ಲ.

ಹತ್ಯೆಗೆ ಪ್ರಬಲ ಪುರಾವೆ ಇದೆ ಎಂದಿದ್ದ ತನಿಖಾ ವರದಿ

ಜಮಾಲ್ ಖಶೋಗಿ ಹತ್ಯೆಯ ಬಗ್ಗೆ ಆ್ಯಗ್ನೆಸ್ ಕ್ಯಾಲಮಾರ್ಡ್ ನೇತೃತ್ವದಲ್ಲಿ ವಿಶ್ವಸಂಸ್ಥೆ ತನಿಖೆ ನಡೆಸಿತು. 2019ರಲ್ಲಿ ತನಿಖಾ ವರದಿಯನ್ನು ಬಿಡುಗಡೆಗೊಳಿಸಿದ ಕ್ಯಾಲಮಾರ್ಡ್, ಖಶೋಗಿ ಹತ್ಯೆಗೆ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ಆ ದೇಶದ ಹಿರಿಯ ಅಧಿಕಾರಿಗಳು ಜವಾಬ್ದಾರರು ಎನ್ನುವುದನ್ನು ತೋರಿಸುವ ವಿಶ್ವಾಸಾರ್ಹ ಪುರಾವೆಯಿದೆ ಎಂದು ಹೇಳಿದ್ದರು.

ಯುವರಾಜ ಮುಹಮ್ಮದ್‌ರ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕು ಹಾಗೂ ಅವರ ಅಂತರ್‌ರಾಷ್ಟ್ರೀಯ ಕಾರ್ಯಕ್ರಮಗಳನ್ನು ನಿಷೇಧಿಸಬೇಕು ಎಂಬ ಶಿಫಾರಸುಗಳನ್ನೂ ಅವರು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News