ಭೂಮಿಯ ಕಕ್ಷೆ ಬದಲಾದರೆ?

Update: 2021-03-27 19:30 GMT

ತಾಯಿಯೊಂದಿಗೆ ಸಮುದ್ರದ ದಂಡೆಗೆ ಹೋಗಿದ್ದ ಶ್ರೀಕರ, ಕಡಲಕಿನಾರೆಯ ಸೊಬಗನ್ನು ಕಣ್ತುಂಬಿಕೊಂಡಿದ್ದ. ಸಮುದ್ರದ ಅಲೆಗಳಲ್ಲಿ ಆಟವಾಡುತ್ತಾ ಈಜಾಡುತ್ತಿದ್ದ. ‘‘ಅಮ್ಮ ಈ ಸಮುದ್ರದ ದಂಡೆ ಎಷ್ಟೊಂದು ಸುಂದರವಾಗಿದೆ ಅಲ್ವಾ. ರಜೆಯಲ್ಲಿ ಮಜಾ ಮಾಡಲು ಇದೊಂದು ಅತ್ಯದ್ಭುತ ಸ್ಥಳ. ಪ್ರತಿವರ್ಷ ನನ್ನನ್ನು ಇಲ್ಲಿಗೆ ಕರ್ಕೊಂಡು ಬರ್ತೀಯಾ ಅಮ್ಮಾ?’’ ಎಂದು ಗೋಗರೆದ. ಮಗನ ಮಾತಿಗೆ ನಗುತ್ತಾ ‘‘ಶ್ರೀಕರ ರಜೆಗೆ ನಾವು ಇಲ್ಲಿಗೆ ಬಂದರೆ ಉಳಿದ ಸ್ಥಳಗಳನ್ನು ನೋಡಲಾರೆವು. ಹಾಗಾಗಿ ಪ್ರತಿ ರಜೆಯಲ್ಲೂ ನಾವು ಬೇರೆ ಬೇರೆ ಸ್ಥಳಗಳಿಗೆ ಹೋಗೋಣ’’ ಎಂದರು ಅಮ್ಮ.

‘‘ಅಮ್ಮಾ ಭೂಮಿಯ ಮೇಲೆ ಇದಕ್ಕಿಂತ ಸುಂದರವಾದ ತಾಣಗಳಿವೆಯೇ’’ ಎಂದು ತನ್ನ ಮನದಲ್ಲಿ ಮೂಡಿದ ಪ್ರಶ್ನೆಯನ್ನು ಕೇಳಿದ. ‘‘ಹೌದು ಪುಟ್ಟ. ನಾವು ವಾಸಿಸುವ ಭೂಗ್ರಹ ಅತ್ಯದ್ಭುತ ಸ್ಥಳ. ಅನೇಕ ವಿಸ್ಮಯಗಳನ್ನು ಒಳಗೊಂಡ ಚಾರಿತ್ರಿಕ ತಾಣ. ಚರಿತ್ರೆಯ ಮೆಟ್ಟಿಲುಗಳಿಂದ ಆಧುನಿಕ ಸ್ಕೈಸ್ಕ್ರೇಪರ್‌ವರೆಗೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಭೂಮಿಯ ಮೇಲಿನ ಚಿತ್ರವಿಚಿತ್ರಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದೊಂದು ಉದ್ಗ್ರಂಥವಾಗುತ್ತದೆ. ನಾವು ಒಂದು ದಿನ ಇಲ್ಲಿರುತ್ತೇವೆ. ನಾಳೆ ಪುನಃ ಕೆಲಸದ ನಿಮಿತ್ತ ಬೇರೆ ಕಡೆ ಚಲಿಸುತ್ತೇವೆ. ಹಾಗೆಯೇ ಪ್ರತಿದಿನ ನಾವು ಅನೇಕ ಚಲನೆಗಳ ಬಗ್ಗೆ ಮಾತನಾಡುತ್ತೇವೆ ಮತ್ತು ನೋಡುತ್ತೇವೆ. ಆದರೆ ನಾವು ನೆಲೆನಿಂತ ನೆಲದ ಚಲನೆಯನ್ನು ನೆಲೆನಿಂತಲ್ಲೇ ಇನ್ನೂ ನೋಡಲು ಸಾಧ್ಯವಾಗುತ್ತಿಲ್ಲ. ನಮ್ಮ ಗ್ರಹ ನಿರಂತರವಾಗಿ ತನ್ನ ಸುತ್ತ ಸುತ್ತುತ್ತ, ಸೂರ್ಯನ ಸುತ್ತ ಸುತ್ತುತ್ತಲೇ ಇದೆ. ಆದರೆ ಬಹುತೇಕವಾಗಿ ಈ ಸುತ್ತುವಿಕೆ ನಮ್ಮ ಗಮನಕ್ಕೆ ಬರುವುದೇ ಇಲ್ಲ’’ ಎಂದು ತಮ್ಮ ಪಾಠ ಶುರುಮಾಡಿದರು. ‘‘ಅಮ್ಮ ಒಂದುವೇಳೆ ಭೂಮಿಯ ಕಕ್ಷೆ ಬದಲಾದರೆ ಏನಾಗುತ್ತೇ’’ ಎಂದು ಶ್ರೀಕರ ಪ್ರಶ್ನಿಸಿದ. ಈ ಪ್ರಶ್ನೆ ನಿಮ್ಮದೂ ಆಗಿದ್ದರೆ ಶ್ರೀಕರನ ತಾಯಿಯ ಉತ್ತರಕ್ಕಾಗಿ ಮುಂದೆ ಓದಿ.

ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲು ಕಕ್ಷೆ ಎಂದರೇನು? ಎಂದು ತಿಳಿಯುವುದು ಅವಶ್ಯಕ. ಸೌರವ್ಯೆಹದ ಪ್ರತಿಯೊಂದು ಗ್ರಹವೂ ಸಹ ಸೂರ್ಯನ ಸುತ್ತ ಸುತ್ತುತ್ತವೆ. ಇದಕ್ಕೆ ಕಾರಣ ಸೂರ್ಯನ ಗುರುತ್ವ. ಇದುವರೆಗೂ ಸೂರ್ಯನ ಗುರುತ್ವದ ಹಿಡಿತದಿಂದ ಯಾವ ಗ್ರಹವೂ ಸಹ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಿಲ್ಲ. ಒಂದು ವೇಳೆ ಹೋದರೆ ಅದು ಈ ಸೌರವ್ಯೆಹದ ಗ್ರಹ ಎಂದು ಪರಿಗಣಿತವಲ್ಲ. ಪ್ರತಿಗ್ರಹವೂ ಒಂದು ನಿರ್ದಿಷ್ಟ ಮಾರ್ಗ(ಹಾದಿ)ದಲ್ಲಿ ಸೂರ್ಯನನ್ನು ಸುತ್ತುತ್ತವೆ. ಈ ಮಾರ್ಗವನ್ನೇ ಕಕ್ಷೆ ಅಥವಾ ಪಥ ಎಂದು ಕರೆಯುತ್ತಾರೆ. ಪ್ರತಿಯೊಂದು ಗ್ರಹವೂ ನಿಯಮಿತವಾಗಿ ಅದೇ ಮಾರ್ಗದಲ್ಲಿ ಪುನಾವರ್ತಿತವಾಗಿ ಚಲಿಸುತ್ತಲೇ ಇರುತ್ತದೆ. ಸೂರ್ಯನಿಗೆ ಗ್ರಹಗಳಿರುವಂತೆ ಕೆಲವು ಗ್ರಹಗಳಿಗೆ ಸ್ವಾಭಾವಿಕ ಉಪಗ್ರಹಗಳಿವೆ. ಇವುಗಳು ಸಹ ತಮ್ಮ ಗ್ರಹವನ್ನು ನಿರ್ದಿಷ್ಟ ಕಕ್ಷೆಯಲ್ಲಿ ಸುತ್ತುತ್ತವೆ. ಕಕ್ಷೆಯ ಆಕಾರ ವಿಭಿನ್ನವಾಗಿರುತ್ತದೆ. ಕೆಲವು ವೃತ್ತಾಕಾರ, ಕೆಲವು ದೀರ್ಘವೃತ್ತಾಕಾರ, ಇನ್ನು ಕೆಲವು ಅಂಡಾಕಾರದ ಪಥ ಹೊಂದಿವೆ. ನಮ್ಮ ಭೂಮಿಯ ಕಕ್ಷೆಯು ಅಂಡಾಕಾರ ಅಥವಾ ದೀರ್ಘವೃತ್ತಾಕಾರವಾಗಿದೆ. ಭೂಮಿಯ ಕಕ್ಷೆಯ ಉದ್ದ 93,98,66,400 ಕಿ.ಮೀ. ಅಂದರೆ ಭೂಮಿ ಸೂರ್ಯನ ಸುತ್ತ ಸುತ್ತುವ ದಾರಿಯ ಉದ್ದ 93,98,66,400 ಕಿ.ಮೀ. ಆಗಿದೆ. ಇಷ್ಟು ದೂರವನ್ನು ಕ್ರಮಿಸಲು ಭೂಮಿ ತೆಗೆದುಕೊಳ್ಳುವ ಅವಧಿ 365 ದಿನ ಅಥವಾ 1 ವರ್ಷ. ಭೂಮಿ ತನ್ನ ಕಕ್ಷೆಯಲ್ಲಿ ಸುತ್ತುವಾಗ ಜನವರಿ 3ರಂದು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿ (14,70,97,800 ಕಿ.ಮೀ.) ಹಾಗೂ ಜುಲೈ 4ರಂದು ಅತ್ಯಂತ ದೂರದಲ್ಲಿ (15,20,98,200 ಕಿ.ಮೀ.) ಚಲಿಸುತ್ತದೆ.

ಈಗ ನಾವು ನಮ್ಮ ಮುಖ್ಯ ಪ್ರಶ್ನೆಗೆ ಬರೋಣ. ಅನೇಕ ವಿಸ್ಮಯಗಳ ಆಗರವಾದ ಭೂಮಿ ತನ್ನ ಕಕ್ಷೆ ಬದಲಿಸಿದರೆ ಏನಾಗುತ್ತೇ? ಎಂಬುದರ ಕುರಿತು ಒಂದಿಷ್ಟು ಚರ್ಚಿಸೋಣ. ಭೂಮಿ ತನ್ನ ಸುತ್ತಲೂ ಸುತ್ತುವುದನ್ನು ಭ್ರಮಣೆ ಎನ್ನುತ್ತೇವೆ. ಭೂಮಿ ಸೆಕೆಂಡಿಗೆ 18.5 ಮೈಲು (29.8 ಕಿ.ಮೀ.) ವೇಗದಲ್ಲಿ ತನ್ನ ಸುತ್ತ ಸುತ್ತುತ್ತದೆ. ಅಂತೆಯೇ ಭೂಮಿ ಸೂರ್ಯನ ಗುರುತ್ವದಿಂದ ನಿರ್ದಿಷ್ಟ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುತ್ತದೆ. ಹೀಗೆ ಸುತ್ತುವಾಗ ಭೂಮಿ ಮತ್ತು ಸೂರ್ಯನ ನಡುವೆ ಒಂದು ರೀತಿಯ ಸಮತೋಲನ ಸ್ಥಿತಿ ಇರುತ್ತದೆ. ಇಂತಹ ಸಮತೋಲನ ಸ್ಥಿತಿ ಬದಲಾಗಬೇಕಾದರೆ ಭಾರೀ ಪ್ರಮಾಣದ ಶಕ್ತಿ ಬೇಕಾಗುತ್ತದೆ. ಅಂದರೆ ಅನ್ಯ ಆಕಾಶಕಾಯವೊಂದು ಭೂಮಿಗೆ ಢಿಕ್ಕಿ ಹೊಡೆಯಬೇಕು ಅಥವಾ ಭಾರೀ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಬೇಕು. ಆಗ ಮಾತ್ರ ಇವೆರಡರ ನಡುವಿನ ಸಮತೋಲನ ತಪ್ಪಿ ಭೂಮಿಯ ಕಕ್ಷೆ ಬದಲಾಗುತ್ತದೆ. ಇದರ ಪರಿಣಾಮ ಸಾಮೂಹಿಕ ದುರಂತ ಎಂದು ಹೇಳಲಾಗುತ್ತದೆ.

ಮೇಲಕ್ಕೆ ಎಸೆದ ಚಂಡು ಮರಳಿ ಭೂಮಿಗೆ ಬರುವಂತೆ, ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟ ಭೂಮಿಯ ಕಕ್ಷೆ ತಪ್ಪಿದರೆ ಅದು ಸೂರ್ಯನೆಡೆಗೆ ಚಲಿಸುತ್ತದೆ. ಆಗ ಆಗುವ ಅಪಾಯಗಳನ್ನು ಊಹಿಸುವುದು ಸ್ವಲ್ಪ ಕಷ್ಟ. ಭೂಮಿಯ ಕಕ್ಷೆ ಬದಲಾದರೆ ನಮ್ಮ ಭೂಮಿಯ ಸಮತೋಲನ ತಪ್ಪಿ, ಸೂರ್ಯನಿಗೆ ಅಪ್ಪಳಿಸುತ್ತದೆ. ಆಗ ಬೆಂಕಿಗೆ ಬಿದ್ದ ಪತಂಗದಂತೆ ನಮ್ಮ ಭೂಮಿ ಸೂರ್ಯನ ಅಗಾಧ ಶಾಖದಲ್ಲಿ ಸುಟ್ಟು ಭಸ್ಮವಾಗುತ್ತದೆ. ಈ ಪ್ರಕ್ರಿಯೆ ಒಮ್ಮೆಲೇ ಸಂಭವಿಸುವುದಿಲ್ಲ. ಭೂಮಿ ಸಮತೋಲನ ತಪ್ಪಿಸೂರ್ಯನ ಅಂಗಳಕ್ಕೆ ಬೀಳಲು ಸುಮಾರು 65 ದಿನಗಳನ್ನು ತೆಗೆದುಕೊಳ್ಳುತ್ತದೆ. 41ನೇ ದಿನಕ್ಕೆ ಶುಕ್ರನ ಕಕ್ಷೆ ದಾಟುತ್ತೇವೆ ಮತ್ತು 57ನೇ ದಿನಕ್ಕೆ ಬುಧನ ಕಕ್ಷೆಯನ್ನು ದಾಟುತ್ತೇವೆ. ದಿನಗಳು ಉರುಳಿದಂತೆ ಭೂಮಿ ಸೂರ್ಯನಿಗೆ ಹತ್ತಿರವಾಗುತ್ತದೆ ಮತ್ತು ಹೆಚ್ಚು ಹೆಚ್ಚು ಬಿಸಿಯಾಗತೊಡಗುತ್ತದೆ. ಭೂಮಿಯ ಮೇಲಿನ ಸರಾಸರಿ ತಾಪಮಾನ 500 ಸೆಲ್ಸಿಯಸ್. ಭೂಮಿ ಸೂರ್ಯನೆಡೆಗೆ ಚಲಿಸುತ್ತಿದ್ದಂತೆ ತಾಪಮಾನದಲ್ಲಿ ಏರಿಕೆಯಾಗುತ್ತಲೇ ಇರುತ್ತದೆ. ಅದು ಬುಧನ ಬಳಿ ಬರುತ್ತಿರುವ ವೇಳೆಗೆ 30,000 ಸೆಲ್ಸಿಯಸ್‌ಗೂ ಹೆಚ್ಚು ಉಷ್ಣತೆ ಪಡೆದಿರುತ್ತದೆ. ಈ ಹಂತದ ತಾಪಮಾನದಲ್ಲಿ ಭೂಮಿಯ ಮೇಲಿನ ಯಾವುದೇ ಜೀವಿ, ಮಾನವನಿರ್ಮಿತ ಯಾವುದೇ ವಸ್ತು ಉಳಿಯಲಾರದು ಅಲ್ಲವೇ? ಅಂತರ್ಜಲ ಸೇರಿದಂತೆ ಭೂಮೇಲ್ಮೈ ಮೇಲಿನ ಎಲ್ಲಾ ನೀರೂ ಆವಿಯಾಗಿ ಹೋಗುತ್ತದೆ. ಗಿಡಮರ ಯಾವುದೂ ಬದುಕಲು ಸಾಧ್ಯವಿಲ್ಲ.

ಸಹಜವಾಗಿ ಸದ್ಯಕ್ಕಂತೂ ಭೂಮಿಯ ಕಕ್ಷೆ ಬದಲಾಗುವುದಿಲ್ಲ. ಆದರೆ ಭವಿಷ್ಯದ ಜಾಡು ಹಿಡಿದು ಹೊರಟರೆ, ಭೂಮಿ ಮತ್ತು ಸೂರ್ಯನ ಅಂತರವನ್ನು ದೂರಮಾಡಲು ಸಾಧ್ಯವಿಲ್ಲ. ಏಕೆಂದರೆ ಸೂರ್ಯನಿಗೂ ಸಾವು ಸಮೀಪಿಸುವ ವೇಳೆ ಕೆಂಪು ದೈತ್ಯವಾಗಿ ಹೊಮ್ಮುತ್ತದೆ. ಕ್ರಮೇಣವಾಗಿ ಬುಧ ಮತ್ತು ಶುಕ್ರನ ಕಕ್ಷೆಗಳನ್ನು ದಾಟಿ ಭೂಮಿಯ ಕಕ್ಷೆಗೂ ಆಗಮಿಸುತ್ತದೆ ಎಂಬ ವಾದವಿದೆ. ಆಗ ಏನಾಗುತ್ತೆ ಎಂಬುದಕ್ಕೆ ಉತ್ತರವೂ ಇದೇ ಆಗಿದೆ. ಭೂಮಿ ಮತ್ತು ಸೂರ್ಯ ಪರಸ್ಪರ ಸಮೀಪಿಸಿದಾಗ ಸೌರ ವಿಕಿರಣದ ಪ್ರಮಾಣ ಹೆಚ್ಚುತ್ತದೆ. ಆಗ ಎಲ್ಲವೂ ಭಸ್ಮ. ಭವಿಷ್ಯದ ವಿದ್ಯಮಾನ ನೋಡಲು ನಾವು ಇರುವುದಿಲ್ಲವಾದರೂ ಏನಾಗುತ್ತೆ ಎಂಬುದನ್ನು ತಿಳಿಯಲಾರದೂ ಇದನ್ನು ಗ್ರಹಿಸುವುದು ಅಗತ್ಯ. ಅಲ್ಲವೇ? ಎನ್ನುತ್ತಾ ಶ್ರೀಕರನ ತಾಯಿ ತಮ್ಮ ಪಾಠ ಮುಗಿಸಿದರು. ಸುಮಾರು 65 ದಶಲಕ್ಷ ವರ್ಷಗಳ ಹಿಂದೆ ಯುಕಾಟಾನ್ ಪರ್ಯಾಯ ದ್ವೀಪ(ಉತ್ತರ ಅಮೆರಿಕ)ದ ಬಳಿ ಭೂಮಿಗೆ ಕ್ಷುದ್ರಗ್ರಹವೊಂದು ಅಪ್ಪಳಿಸಿತ್ತು. ಅದು ಹೈಡ್ರೋಜನ್ ಬಾಂಬ್‌ಗಿಂತ 5,00,000 ಪಟ್ಟು ಅಥವಾ 50 ಮೆಗಾವ್ಯಾಟ್‌ನಷ್ಟಿತ್ತು ಎಂದು ಅಂದಾಜಿಸಲಾಗಿದೆ. ಅದರ ಸ್ಫೋಟದಿಂದ 10-15 ಕಿ.ಮೀ. ಅಗಲದ ಕುಳಿಯೊಂದು ನಿರ್ಮಾಣವಾಗಿದೆ ಎಂಬುದಕ್ಕೆ ಈಗಲೂ ಪುರಾವೆ ಇದೆ. ಕ್ಷುದ್ರಗ್ರಹ ಅಪ್ಪಳಿಸಿದ್ದರಿಂದಲೇ ಡೈನೋಸಾರ್‌ಗಳು ಸೇರಿದಂತೆ ಅಪಾರ ಜೀವಿಗಳು ನಾಶವಾದವು ಎಂಬುದನ್ನು ಗಮನಿಸಬಹುದು. ಆಗ ಭೂಮಿಯ ಕಕ್ಷೆಯಲ್ಲಿ ಒಂಚೂರು ಬದಲಾವಣೆಯಾದರೂ ಅದು ಸಾಗರದ ಒಂದು ಅಣುವಿನಷ್ಟು ಮಾತ್ರ ಎಂಬುದೂ ಸತ್ಯ. ಆ ಘಟನೆಯಿಂದ ಪುನಃ ಚೇತರಿಸಿಕೊಂಡು ಜೀವನ ನಡೆಸುತ್ತಿದ್ದೇವೆ.

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News