ಹರ್ಯಾಣ: ಪ್ರತಿಭಟನಾ ನಿರತ ರೈತರ ಮೇಲೆ ಲಾಠಿಜಾರ್ಚ್; ಇಬ್ಬರಿಗೆ ಗಾಯ

Update: 2021-04-04 18:23 GMT
ಸಾಂದರ್ಭಿಕ ಚಿತ್ರ

ಚಂಡೀಗಢ, ಎ.4: ಹರ್ಯಾಣದ ರೋಹ್ಟಕ್ನಲ್ಲಿ ಶನಿವಾರ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ. ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದಾಗ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯ ಸಂಸದ ಅರವಿಂದ್ ಶರ್ಮರ ತಂದೆಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ರೋಹ್ಟಕ್ನ ಖಾಸಗಿ ವಿವಿಯಲ್ಲಿ ಶನಿವಾರ ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರನ್ನು ಅಡ್ಡಗಟ್ಟಲು ಪ್ರತಿಭಟನಾ ನಿರತರು ಪ್ರಯತ್ನಿಸಿದಾಗ ಘರ್ಷಣೆ ಆರಂಭವಾಗಿದೆ. ಮುಖ್ಯಮಂತ್ರಿ ಆಗಮಿಸಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಸ್ಥಳದತ್ತ ಪ್ರತಿಭಟನಾ ನಿರತರು ಮುಂದುವರಿಯಲು ಯತ್ನಿಸಿದಾಗ ಪೊಲೀಸರು ತಡೆದರು. ಆಗ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲೆಸೆದಿದ್ದು ಪೊಲೀಸರು ಲಾಠಿಚಾರ್ಜ್ ನಡೆಸಿ ಅವರನ್ನು ಚದುರಿಸಿದರು. 

ಘರ್ಷಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಹಾಗೂ ಹಿರಿಯ ರೈತರೊಬ್ಬರು ಗಾಯಗೊಂಡಿದ್ದಾರೆ . ಬಳಿಕ ಸ್ಥಳದಲ್ಲಿ ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಮತ್ತೊಂದು ಸ್ಥಳದಲ್ಲಿ ಲ್ಯಾಂಡ್ ಆಗಿದೆ. ನಂತರ ಪೊಲೀಸರ ಲಾಠಿಚಾರ್ಜ್ ಖಂಡಿಸಿ ರೈತರು ಜಿಂದ್-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು. ಸರಕಾರ ರೈತ ಮುಖಂಡರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News