ಸೌದಿ ಅರೇಬಿಯ: ಮೂವರು ಸೈನಿಕರಿಗೆ ಮರಣ ದಂಡನೆ

Update: 2021-04-10 17:10 GMT

ರಿಯಾದ್ (ಸೌದಿ ಅರೇಬಿಯ), ಎ. 10: ‘ದೇಶದ್ರೋಹಗೈದ’ ಹಾಗೂ ‘ಶತ್ರುವಿನೊಂದಿಗೆ ಸಹಕರಿಸಿದ’ ಆರೋಪದಲ್ಲಿ ಮೂವರು ಸೈನಿಕರಿಗೆ ಮರಣ ದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ಸೌದಿ ಅರೇಬಿಯ ಹೇಳಿದೆ.

‘‘ಈ ಮೂವರು ಸೈನಿಕರ ನ್ಯಾಯೋಚಿತ ವಿಚಾರಣೆ ನಡೆಸಿದ ಬಳಿಕ, ವಿಶೇಷ ನ್ಯಾಯಾಲಯವೊಂದು ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು’’ ಎಂದು ಸೌದಿ ಅರೇಬಿಯದ ರಕ್ಷಣಾ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.

ಮರಣ ದಂಡನೆಗೆ ಗುರಿಯಾದವರು ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಸೈನಿಕರು ಎಂದು ಸರಕಾರಿ ಒಡೆತನದ ಸೌದಿ ಪ್ರೆಸ್ ಏಜನ್ಸಿ ತಿಳಿಸಿದೆ. ಆದರೆ, ಸೌದಿ ಅರೇಬಿಯದ ವೈರಿಗಳಿಗೆ ಅವರು ಹೇಗೆ ನೆರವು ನೀಡಿದರು ಎನ್ನುವುದನ್ನು ಅದು ತಿಳಿಸಿಲ್ಲ.

ಯೆಮನ್ ಗಡಿಗೆ ಹತ್ತಿರದಲ್ಲಿರುವ ಸೇನೆಯ ದಕ್ಷಿಣ ಕಮಾಂಡ್‌ನಲ್ಲಿ ಅವರ ಮರಣ ದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಯಿತು ಎಂದು ಸಚಿವಾಲಯ ತಿಳಿಸಿದೆ.

ಅಧಿಕಾರದ ಮೇಲಿನ ತನ್ನ ನಿಯಂತ್ರಣವನ್ನು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಬಿಗಿಗೊಳಿಸುತ್ತಿರುವಂತೆಯೇ, ಸೈನಿಕರಿಗೆ ಮರಣ ದಂಡನೆ ಜಾರಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News