ಭೂಮಿಗೆ ಇನ್ನೊಂದು ಚಂದ್ರನಿರುತ್ತಿದ್ದರೆ?...

Update: 2021-04-10 19:30 GMT

ಕಗ್ಗತ್ತಲ ಅಮವಾಸ್ಯೆಯ ರಾತ್ರಿ. ಅಂಗಡಿಯಿಂದ ಮನೆಗೆ ನಡೆದು ಹೊರಟಿದ್ದ ಹರ್ಷ. ಇನ್ನೇನು ಮನೆ ಸಮೀಪಿಸಿತು ಎನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ಕರೆಂಟ್ ಹೋಯಿತು. ತಕ್ಷಣ ರಸ್ತೆ ಹಾಗೂ ವಾತಾವರಣದಲ್ಲೆಲ್ಲಾ ಕತ್ತಲೆ ಆವರಿಸಿತು. ಎಲ್ಲೆಲ್ಲೂ ಕತ್ತಲೇ ಕತ್ತಲು. ಕತ್ತಲೆ ಕಂಡು ಬೆಚ್ಚಿದ ಹರ್ಷ ಅಪ್ಪಾ... ಎಂದು ಚಿಟ್ಟನೇ ಚೀರಿದ. ಹರ್ಷ ಚೀರಿದ ಧ್ವನಿ ಕೇಳಿದ ತಂದೆ ಕೈಯಲ್ಲಿ ಟಾರ್ಚ್ ಹಿಡಿದು ಹೊರಗೆ ಬಂದರು. ‘‘ಯಾಕೋ! ಹೆದರಿದೆಯಾ?’’ ಎಂದರು. ‘‘ಹೌದಪ್ಪ... ಕರೆಂಟು ಹೋಯಿತಲ್ಲಾ, ಒಮ್ಮೆಲೆ ಕತ್ತಲೆಯಾಗಿಬಿಟ್ಟಿತು. ಹಾಗಾಗಿ ಹೆದರಿಕೆಯಾಗಿ ಕೂಗಿಕೊಂಡೆ’’ ಎಂದ ಹರ್ಷ. ತಂದೆ ನಡುಗುತ್ತಿರುವ ಅವನ ಕೈಗಳನ್ನು ಹಿಡಿದು ಒಳ ಕರೆದುಕೊಂಡು ಹೋದರು. ಕತ್ತಲೆಗೆ ಹಾಗೆಲ್ಲಾ ಹೆದರಬಾರದು ಮಗನೆ. ಸ್ವಲ್ಪಸಮಯ ನಿಂತಿದ್ದರೆ ಕತ್ತಲೆಯಲ್ಲೂ ಸ್ವಲ್ಪಬೆಳಕು ಮೂಡಿ ದಾರಿ ಕಾಣುತ್ತಿತ್ತು ಎಂದು ಹೆದರಿದ ಮಗನನ್ನು ಸಂತೈಸಿದರು. ‘‘ಅಪ್ಪಾಇಂದೇಕೆ ಇಷ್ಟು ಕತ್ತಲಿದೆ? ಅಂದು ನಾವು ಊರಿಂದ ಬರುವಾಗಲೂ ಕರೆಂಟು ಹೋಗಿತ್ತು. ಆದರೂ ಎಷ್ಟೊಂದು ಬೆಳಕಿತ್ತು ಅಲ್ವಾ?.’’ ‘‘ಹೌದಪ್ಪ ಅಂದು ಹುಣ್ಣಿಮೆ ಇತ್ತು. ಹಾಗಾಗಿ ಚಂದ್ರನ ಬೆಳಕಿತ್ತು. ಇಂದು ಅಮವಾಸ್ಯೆ ಆಗಿರುವುದರಿಂದ ಚಂದ್ರನ ಬೆಳಕಿಲ್ಲ. ಹಾಗಾಗಿ ಕತ್ತಲು ಇದೆ’’ ಎಂದರು ತಂದೆ. ‘‘ಏನೇ ಆಗಲಿ, ಭೂಮಿಗೆ ಇನ್ನೊಂದು ಚಂದ್ರ ಇರಬೇಕಿತ್ತು ಅಲ್ಲವೇ ಅಪ್ಪಾ’’ ಎಂದಳು ಮಗಳು ವರ್ಷ. ಹೌದು ಭೂಮಿಗೆ ಇನ್ನೊಂದು ಚಂದ್ರ ಇದ್ದಿದ್ರೆ ಏನಾಗುತ್ತಿತ್ತು? ಒಂದಿಷ್ಟು ತಿಳಿಯುವ. ಭೂಮಿ ಎರಡು ಚಂದ್ರರನ್ನು ಹೊಂದಿದ್ದರೆ ಏನಾಗುತ್ತಿತ್ತು ಎಂಬ ನಿರೀಕ್ಷೆ ನಮ್ಮೆಲ್ಲರದು. ಏಕೆಂದರೆ ಈಗಿರುವ ಚಂದ್ರ ಅಮವಾಸ್ಯೆಯಂದು ಮರೆಯಾದರೆ ಬೆಳಕು ನೀಡಲು ಇನ್ನೊಂದು ಚಂದ್ರನಿರುತ್ತಾನೆ ಎಂಬ ಆಸೆ ನಮ್ಮದು.

ಚಂದ್ರ ಭೂಮಿಯ ಸ್ವಾಭಾವಿಕ ಉಪಗ್ರಹ ಎಂಬುದು ಎಲ್ಲರಿಗೂ ಗೊತ್ತು. ಭೂಮಿಯಂತೆ ಕೆಲವು ಗ್ರಹಗಳಿಗೂ ಸ್ವಾಭಾವಿಕ ಉಪಗ್ರಹಗಳಿವೆ. ನಮ್ಮ ಸೌರವ್ಯೆಹ ವ್ಯವಸ್ಥೆಯಲ್ಲಿ ಎರಡು ನೂರಕ್ಕೂ ಅಧಿಕ ಸ್ವಾಭಾವಿಕ ಉಪಗ್ರಹಗಳಿವೆ. ಬುಧ ಮತ್ತು ಶುಕ್ರ ಗ್ರಹಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಗ್ರಹಗಳಿಗೂ ಸ್ವಾಭಾವಿಕ ಉಪಗ್ರಹಗಳಿವೆ. ಭೂಮಿಗೆ ಇನ್ನೊಂದು ಚಂದ್ರ ಇದ್ದಿದ್ದರೆ ಸಮುದ್ರದ ಅಲೆಗಳ ಉಬ್ಬರವಿಳಿತ ಇನ್ನಷ್ಟು ಹೆಚ್ಚುತ್ತಿತ್ತು. ಈಗಿರುವ ಚಂದ್ರನ ಗುರುತ್ವ ಬಲಕ್ಕೆ ಹುಣ್ಣಿಮೆಯ ದಿನದಂದು ದೊಡ್ಡದಾದ ಅಲೆಗಳು ಉಂಟಾಗುತ್ತವೆ. ಇನ್ನೊಂದು ಚಂದ್ರನಿದ್ದರೆ ಅಲೆಗಳ ಪ್ರಮಾಣ ಹೆಚ್ಚುತ್ತಿತ್ತು. ಅಲೆಗಳು ದೊಡ್ಡದಾದಷ್ಟು ಭೂಮಿಗೆ ಅಪಾಯ ಅಲ್ಲವೇ? ಕರಾವಳಿ ಪ್ರದೇಶಗಳು ಪದೇ ಪದೇ ಸಮುದ್ರದ ತೆರೆಗಳ ಹೊಡೆತವನ್ನು ಅನುಭವಿಸುತ್ತಿದ್ದವು. ಎರಡು ಚಂದ್ರರಿಂದ ಸಮುದ್ರದಲ್ಲಿ ನಿರಂತರ ಉಬ್ಬರವಿಳಿತಗಳು ಉಂಟಾಗುತ್ತಿದ್ದವು. ಇದರಿಂದ ಭೂಮಿಯ ಮೇಲಿನ ವಾಸಯೋಗ್ಯ ಪ್ರದೇಶ ಕಡಿಮೆಯಾಗುತ್ತಿತ್ತು.

ಭೂಮಿಗೆ ಇನ್ನೊಂದು ಚಂದ್ರನಿದ್ದರೆ ಇಬ್ಬರೂ ಪರಸ್ಪರ ಘರ್ಷಣೆಗೊಳಗಾಗುತ್ತಲೇ ಇರುತ್ತಿದ್ದರು. ಘರ್ಷಣೆ ತೀವ್ರ ಸ್ವರೂಪ ಹೊಂದಿದರೆ ಅಂದರೆ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಚಂದ್ರರ ಭಗ್ನಾವಶೇಷಗಳು ಭೂಮಿಯ ಮೇಲೆ ಬಿದ್ದು, ಭೂಮಿಯ ಮೇಲ್ಮೈ ಸ್ಥಿತಿ ಅಲ್ಲೋಲಕಲ್ಲೋಲವಾಗುತ್ತಿತ್ತು. ಕೆಲವು ವೇಳೆ ಈ ಘರ್ಷಣೆಯಿಂದ ಪರಸ್ಪರ ಎರಡೂ ಚಂದ್ರರು ಭೂಮಿಯಿಂದ ದೂರ ಸರಿಯಲೂಬಹುದಾಗಿತ್ತು. ಆಗ ಇಬ್ಬರ ಕಕ್ಷಾಪಥ ಬೇರೆ ಬೇರೆಯಾಗುತ್ತಿತ್ತು. ಎರಡು ಚಂದ್ರರನ್ನು ನೋಡುವುದು ಕಣ್ಣಿಗೆ ಹಬ್ಬ ಎನಿಸಿದರೂ ಇಬ್ಬರ ನಡುವಿನ ಪರಸ್ಪರ ಘರ್ಷಣೆಯಿಂದ ಚಲನೆಯ ವೇಗ ನಿಧಾನವಾಗುತ್ತಿತ್ತು. ಭೂಮಿಗೆ ಇಬ್ಬರು ಚಂದ್ರರಿದ್ದರೆ ಪದೇ ಪದೇ ಗ್ರಹಣಗಳು ಸಂಭವಿಸುತ್ತಿದ್ದವು. ಗ್ರಹಣಗಳು ಸಂಭವಿಸಲು ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿರಬೇಕು ಎಂಬುದು ನಮಗೀಗಲೇ ತಿಳಿದಿದೆ. ಹೀಗೆ ಮೂರೂ ಆಕಾಶಕಾಯಗಳು ಅಪರೂಪಕ್ಕೊಮ್ಮೆ ಒಂದೇ ಸರಳ ರೇಖೆಯಲ್ಲಿ ಬಂದಾಗ ಮಾತ್ರ ಗ್ರಹಣಗಳು ಸಂಭವಿಸುತ್ತವೆ. ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಅಡ್ಡ ಬಂದಾಗ ಚಂದ್ರಗ್ರಹಣವಾಗುತ್ತದೆ. ಹಾಗೆಯೇ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಅಡ್ಡ ಬಂದರೆ ಸೂರ್ಯಗ್ರಹಣವಾಗುತ್ತದೆ. ಭೂಮಿ ಮತ್ತು ಈಗಿನ ಚಂದ್ರನ ಚಲನೆಯ ಆಧಾರದ ಮೇಲೆ ಗ್ರಹಣಗಳು ಇಂತಹ ದಿನದಂದೇ ಸಂಭವಿಸುತ್ತವೆ ಎಂದು ಕರಾರುವಾಕ್ಕಾಗಿ ಲೆಕ್ಕಾಚಾರ ಹಾಕಲಾಗುತ್ತದೆ. ಆದರೆ ಭೂಮಿಗೆ ಇನ್ನೊಂದು ಚಂದ್ರನಿದ್ದರೆ ಗ್ರಹಣದ ಲೆಕ್ಕಾಚಾರ ತಪ್ಪುತ್ತಿತ್ತು. ನಮ್ಮ ಈಗಿನ ಪಂಚಾಂಗ ವ್ಯವಸ್ಥೆ ಅಂದರೆ, ಮಾಸ, ತಿಥಿ, ನಕ್ಷತ್ರ, ಇವುಗಳ ಲೆಕ್ಕಾಚಾರ ಸಂಪೂರ್ಣವಾಗಿ ತದ್ವಿರುದ್ಧವಾಗಿರುತ್ತಿತ್ತು ಅಲ್ಲವೇ?

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News