ಕುಂಭಮೇಳ ಮತ್ತು ನಿಝಾಮುದ್ದೀನ್‌ ಮರ್ಕಝ್‌ ಅನ್ನು ಹೋಲಿಕೆ ಮಾಡುವಂತಿಲ್ಲ: ಉತ್ತರಾಖಂಡ ಸಿಎಂ

Update: 2021-04-14 18:03 GMT

ಡೆಹ್ರಾಡೂನ್,ಎ.14: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ದಿಲ್ಲಿಯ ನಿಝಾಮುದ್ದೀನ್ ಮುರ್ಕಝ್‌ನಲ್ಲಿ ನಡೆದ ತಬ್ಲಿಗಿ ಜಮಾಅತ್ ಸಮಾವೇಶದ ಜೊತೆ ಹೋಲಿಸಬಾರದು ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ ಸಿಂಗ್‌ ರಾವತ್‌ ಮಂಗಳವಾರ ಹೇಳಿದ್ದಾರೆ.

‘‘ಮರ್ಕಝ್‌ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಕಟ್ಟಡವೊಂದರ ಒಳಗೆ ಸಮಾವೇಶಗೊಂಡಿದ್ದರು. ಆದರೆ ಕುಂಭಮೇಳ ತೆರೆದ ಪ್ರದೇಶದಲ್ಲಿ ನಡೆಯುತ್ತಿದೆ’’ ಎಂದವರು ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ‘‘ಗಂಗಾ ನದಿ ಸಮೀಪ ಕುಂಭಮೇಳ ನಡೆಯುತ್ತಿದೆ. ಗಂಗಾ ಮಾತೆಯ ಆಶೀರ್ವಾದಿಂದಾಗಿ ಕೊರೋನ ವೈರಸ್ ಹರಡಲಾರದು. ಇಲ್ಲಿ ಹೋಲಿಕೆಯ ಪ್ರಶ್ನೆಯೇ ಉದ್ಭವಿಸಲಾರದು’’ ಎಂದರು.

ತದನಂತರ ಕುಂಭಮೇಳವನ್ನು ಸಮರ್ಥಿಸಿಕೊಂಡು ರಾವತ್ ಇನ್ನೊಂದು ಹೇಳಿಕೆ ನೀಡಿದ ರಾವತ್, ಭಕ್ತಾದಿಗಳು ವಿವಿಧ ಸ್ನಾನಘಟ್ಟಗಳಲ್ಲಿ ಹಂಚಿಹೋಗುತ್ತಾರೆ ಹಾಗೂ ಅವರು ವಿಭಿನ್ನ ಸಮಯಗಳಲ್ಲಿ ತೀರ್ಥಸ್ನಾನ ಮಾಡುತ್ತಾರೆ. ಹೀಗಾಗಿ ಕೊರೋನ ವೈರಸ್ ಹರಡಲಾರದು ಎಂದರು. ಆದರೆ ತನ್ನ ಈ ವಾದವನ್ನು ಸಮರ್ಥಿಸುವಂತಹ ಯಾವುದೇ ವಿವರಣೆಯನ್ನು ಅವರು ನೀಡಲಿಲ್ಲ.

ಕುಂಭಮೇಳದಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಅಥವಾ ಕುಂಭಮೇಳದಂತಹ ಬೃಹತ್ ಕಾರ್ಯಕ್ರಮದಲ್ಲಿ ನಿರ್ಬಂಧಗಳನ್ನು ಹೇರುವುದು ತುಂಬಾ ಕಷ್ಟಕರವೆಂದು ಅಧಿಕಾರಿಗಳು ಹೇಳಿದ್ದಾರೆಂಬ ವರದಿಗಳಿಗೆ ಪ್ರತಿಕ್ರಿಯಿಸಲು ರಾವತ್ ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News