ದಲಿತ ಐಐಟಿ ಆಕಾಂಕ್ಷಿಗಳಿಗೆ ‘ಸೂಪರ್ 30’ ಖ್ಯಾತಿಯ ಆನಂದ್ ಕುಮಾರ್ ರಿಂದ ಉಚಿತ ತರಬೇತಿ: ಕೇಂದ್ರದ ಅಸ್ತು
ಹೊಸದಿಲ್ಲಿ, ಎ.14: ಐಐಟಿ ಪ್ರವೇಶ ಪರೀಕ್ಷೆಗಾಗಿ ಪರಿಶಿಷ್ಟ ಜಾತಿಗಳ 400 ವಿದ್ಯಾರ್ಥಿಗಳಿಗೆ ಸೂಪರ್ 30’ ಖ್ಯಾತಿಯ ಆನಂದ್ ಕುಮಾರ್ ಅವರಿಂದ ಉಚಿತ ತರಬೇತಿಯನ್ನು ಕೊಡಿಸುವ ಪ್ರಸ್ತಾವಕ್ಕೆ ನರೇಂದ್ರ ಮೋದಿ ಸರಕಾರವು ತಾತ್ತ್ವಿಕ ಒಪ್ಪಿಗೆಯನ್ನು ನೀಡಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾದ ಎ.14ರಂದು ಪ್ರಸ್ತಾವನೆಗೆ ತಾತ್ತ್ವಿಕ ಒಪ್ಪಿಗೆ ಲಭಿಸಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿನ ಮೂಲಗಳು ತಿಳಿಸಿದವು.
ಬಿಹಾರದ ಗಣಿತಜ್ಞ ಆನಂದ್ ಕುಮಾರ್ ಅವರು ಪ್ರತಿ ವರ್ಷ ಕಡು ಬಡಕುಟುಂಬಗಳ 30 ವಿದ್ಯಾರ್ಥಿಗಳಿಗೆ ಐಐಟಿ ಪ್ರವೇಶ ಪರೀಕ್ಷೆಗಾಗಿ ಉಚಿತ ತರಬೇತಿಯನ್ನು ಒದಗಿಸುತ್ತಿದ್ದು ಅವರ ಈ ಕಾರ್ಯವು ವಿಶ್ವಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಅವರ ವಿದ್ಯಾರ್ಥಿಗಳು ಅತ್ಯಂತ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಿದ್ದಾರೆ. 2017ರಲ್ಲಿ ಅವರ ಎಲ್ಲ 30 ವಿದ್ಯಾರ್ಥಿಗಳು ಜೆಇಇ (ಅಡ್ವಾನ್ಸಡ್) ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದರೆ,2016ರಲ್ಲಿ 28 ಮತ್ತು 2018ರಲ್ಲಿ 26 ವಿದ್ಯಾರ್ಥಿಗಳು ಯಶಸ್ವಿಯಾಗಿದ್ದರು.
ಆನಂದ್ ಕುಮಾರ್ ಅವರಿಂದ ಪ್ರೇರಿತ ಪ್ರಸ್ತಾವವನ್ನು ಖ್ಯಾತ ಶಿಕ್ಷಣ ತಜ್ಞೆ ಮೋನಾ ಪುರಿ ನೇತೃತ್ವದ ದಿಲ್ಲಿಯ ಸುಮೀತ್ ಫೌಂಡೇಷನ್ ಟ್ರಸ್ಟ್ ಸಚಿವಾಲಯಕ್ಕೆ ಸಲ್ಲಿಸಿತ್ತು. ವಿವರಗಳನ್ನು ಅಂತಿಮಗೊಳಿಸಲಾಗುತ್ತಿದೆ ಮತ್ತು ಪ್ರಸ್ತಾವದ ವಿಧಿವಿಧಾನಗಳನ್ನು ಶೀಘ್ರವೇ ರೂಪಿಸಲಾಗುವದು ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.
ಎಸ್ಸಿ ಸಮುದಾಯದ ವಿದ್ಯಾರ್ಥಿಗಳು ಇತರರೊಂದಿಗೆ ಸಮಾನವಾಗಿ ಸ್ಪರ್ಧಿಸುವಂತಾಗಲು ಅವರಿಗೆ ಐಐಟಿ ತರಬೇತಿಯನ್ನು ಒದಗಿಸುವುದು ಪ್ರಸ್ತಾವದ ಪರಿಕಲ್ಪನೆಯಾಗಿದೆ ಎಂದರು. ಆ.15ಕ್ಕೆ ಮೊದಲು ಉಚಿತ ತರಬೇತಿ ಆರಂಭಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದವು.
ಅನಂದ್ ಕುಮಾರ್ ಅವರು ಸರಕಾರದೊಂದಿಗೆ ತನ್ನ ಸಹಭಾಗಿತ್ವದ ಭಾಗವಾಗಿ ಬಡಕುಟುಂಬಗಳ ಹೆಚ್ಚಿನ ಪ್ರತಿಭಾವಂತ ವಿದ್ಯಾಥಿಗಳಿಗೆ ನೆರವಾಗಲು ಗ್ರೇಟರ್ ನೊಯ್ಡಾದಲ್ಲಿ ಸನಿವಾಸ ಶಾಲೆಯೊಂದನ್ನು ಸ್ಥಾಪಿಸುವ ಸಾಧ್ಯತೆಯನ್ನೂ ಪರಿಶೀಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.