ಕೋವಿಶೀಲ್ಡ್ ಲಸಿಕೆ: ರಾಜ್ಯಗಳಿಗೆ ತಲಾ ಡೋಸ್‍ಗೆ ರೂ. 400, ಖಾಸಗಿ ಆಸ್ಪತ್ರೆಗಳಿಗೆ ರೂ. 600 ದರ ನಿಗದಿ

Update: 2021-04-21 10:40 GMT
ಸಾಂದರ್ಭಿಕ ಚಿತ್ರ

ಮುಂಬೈ: ಪುಣೆಯ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ತಾನು ತಯಾರಿಸುವ ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯ ಸರಕಾರಗಳಿಗೆ ತಲಾ ಡೋಸ್‍ಗೆ ರೂ. 400ರಂತೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತಲಾ ಡೋಸ್‍ಗೆ ರೂ. 600ರಂತೆ ಮಾರಾಟ ಮಾಡಲಿದೆ ಎಂದು  ಸಂಸ್ಥೆ ಇಂದು ಹೇಳಿದೆ.

ಕೋವಿಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ  ಮೇ 1ರಿಂದ ನೀಡಲಾಗುವುದು ಎಂದು ಕೇಂದ್ರ ಸರಕಾರ ಘೋಷಿಸಿದ ಎರಡು ದಿನಗಳ ನಂತರ ಸೀರಮ್ ಇನ್‍ಸ್ಟಿಟ್ಯೂಟ್ ದರಗಳನ್ನು ನಿಗದಿ ಪಡಿಸಿದೆ. ಸರಕಾರದ ನಿರ್ಧಾರದಂತೆ ಶೇ.50ರಷ್ಟು ಲಸಿಕೆಗಳು ಮುಕ್ತ ಮಾರುಕಟ್ಟೆಯಲ್ಲಿ  ಪೂರ್ವ-ನಿಗದಿ ದರದಲ್ಲಿ ಲಭ್ಯವಾಗಲಿದ್ದು ರಾಜ್ಯ ಸರಕಾರಗಳು, ಖಾಸಗಿ ಆಸ್ಪತ್ರೆಗಳು ಹಾಗೂ  ಖಾಸಗಿಯವರು ಇವುಗಳನ್ನು  ಖರೀದಿಸಬಹುದಾಗಿದೆ.

ಸೀರಮ್ ಇನ್‍ಸ್ಟಿಟ್ಯೂಟ್ ಖಾಸಗಿ ಆಸ್ಪತ್ರೆಗಳಿಗೆ ತಲಾ ಡೋಸ್‍ಗೆ ರೂ. 600ರಂತೆ ಮಾರಾಟ ಮಾಡಲಿದೆಯಾದರೂ ಆಸ್ಪತ್ರೆಗಳು ಇದಕ್ಕಿಂತ ಎಷ್ಟು ಹೆಚ್ಚು ದರ ನಿಗದಿ ಪಡಿಸಬಹುದೆಂದು ತಿಳಿದು ಬಂದಿಲ್ಲ.

ಇಲ್ಲಿಯ ತನಕ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ಲಭ್ಯವಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ  ತಲಾ ಡೋಸ್‍ಗೆ ರೂ. 250 ಪಾವತಿಸಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News