ವಿರಾಟ್ ಕೊಹ್ಲಿ ದಾಖಲೆ ಮುರಿದ ಲೋಕೇಶ್ ರಾಹುಲ್

Update: 2021-04-21 12:12 GMT
photo: bcci 

ಚೆನ್ನೈ: ಪಂಜಾಬ್ ಕಿಂಗ್ಸ್ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್ ಬುಧವಾರ ತಮ್ಮ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡರು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬುಧವಾರ ನಡೆದ ಐಪಿಎಲ್ ನ 14ನೇ ಪಂದ್ಯದಲ್ಲಿ ಟಿ-20 ಕ್ರಿಕೆಟ್ ನಲ್ಲಿ 5,000 ರನ್ ಪೂರೈಸಿದ ಸಾಧನೆ ಮಾಡಿದರು.

ಈ ಪಂದ್ಯಕ್ಕಿಂತ ಮೊದಲು ಈ ಮೈಲುಗಲ್ಲು ತಲುಪಲು ರಾಹುಲ್ ಗೆ ಒಂದು ರನ್ ಬೇಕಾಗಿತ್ತು. ಪಂಜಾಬ್ ತಂಡ ಎಂಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದು, ಆಫ್ ಸ್ಪಿನ್ನರ್ ಅಭಿಷೇಕ್ ಶರ್ಮಾ ಅವರು ಎಸೆದ ಪಂದ್ಯದ ಮೊದಲ ಎಸೆತದಲ್ಲೇ ಒಂದು ರನ್ ಗಳಿಸಿದ ರಾಹುಲ್ ಈ ಸಾಧನೆ ಮಾಡಿದರು.

ರಾಹುಲ್ ಪಂಜಾಬ್ ಕಿಂಗ್ಸ್ ನ ಸಹ ಆಟಗಾರ ಕ್ರಿಸ್ ಗೇಲ್ ಬಳಿಕ ಅತ್ಯಂತ ವೇಗವಾಗಿ 5,000 ರನ್ ಗಳಿಸಿದ 2ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಕ್ರಿಸ್ ಗೇಲ್ 132ನೇ ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದರೆ, ರಾಹುಲ್ 143ನೇ ಇನಿಂಗ್ಸ್ ನಲ್ಲಿ ಈ ಮೈಲುಗಲ್ಲು ತಲುಪಿದರು. 144 ಇನಿಂಗ್ಸ್ ಗಳಲ್ಲಿ 5,000 ಟಿ-20 ರನ್ ಗಳಿಸಿದ್ದ ಆಸ್ಟ್ರೇಲಿಯದ ಶಾನ್ ಮಾರ್ಷ್ ದಾಖಲೆಯನ್ನು ರಾಹುಲ್ ಹಿಂದಿಕ್ಕಿದರು.

ರಾಹುಲ್ ಅವರು ಅತ್ಯಂತ ವೇಗವಾಗಿ 5,000 ರನ್ ಕ್ಲಬ್ ಗೆ ಪ್ರವೇಶಿಸಿದ ಭಾರತದ ಬ್ಯಾಟ್ಸ್  ಮನ್ ಎನಿಸಿಕೊಂಡರು. ಈ ಮೂಲಕ ದೀರ್ಘ ಸಮಯದಿಂದ ವಿರಾಟ್ ಕೊಹ್ಲಿ (167 ಇನಿಂಗ್ಸ್ )ಹಾಗೂ ಸುರೇಶ್ ರೈನಾ (173) ಹೆಸರಲ್ಲಿದ್ದ ದಾಖಲೆಯನ್ನು ಮುರಿದರು.

ಆದರೆ ರಾಹುಲ್ ಪಂದ್ಯದ ನಾಲ್ಕನೇ ಓವರ್ ನಲ್ಲಿ 6 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಭುವನೇಶ್ವರ ಕುಮಾರ್ ಗೆ ವಿಕೆಟ್ ಒಪ್ಪಿಸಿದರು.  ಪಂಜಾಬ್ ನಾಯಕ ರಾಹುಲ್ ಈ ವರ್ಷದ ಟೂರ್ನಿಯಲ್ಲಿ ಎರಡನೇ ಬಾರಿ ಬ್ಯಾಟಿಂಗ್ ವೈಫಲ್ಯಕ್ಕೊಳಗಾದರು.

4 ಪಂದ್ಯಗಳಲ್ಲಿ ಒಟ್ಟು 161 ರನ್ ಗಳಿಸಿರುವ ರಾಹುಲ್ ಟೂರ್ನಿಯಲ್ಲೀಗ ಗರಿಷ್ಟ ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೆ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News