ರಾಜ್ಯ ಬೊಕ್ಕಸಕ್ಕೆ ಹೊರೆಯಾಗದಿರಲಿ ಎಂದು ಕೋವಿಡ್ ಲಸಿಕೆ ಖರೀದಿಸಲು ಕೇರಳೀಯರಿಂದ ದೇಣಿಗೆ ಅಭಿಯಾನ

Update: 2021-04-23 17:38 GMT

ತಿರುವನಂತಪುರ, ಎ. 23: ರಾಜ್ಯಗಳು ಕೊರೋನ ಲಸಿಕೆಯನ್ನು ಉತ್ಪಾದಕರಿಂದ ನೇರವಾಗಿ ಖರೀದಿಸಬಹುದು ಎಂದು ಕೇಂದ್ರ ಸರಕಾರದ ಸ್ಪಷ್ಟಪಡಿಸಿದ ದಿನಗಳ ಬಳಿಕ ರಾಜ್ಯ ಸರಕಾರದ ಬೊಕ್ಕಸಕ್ಕೆ ಇದರಿಂದ ಹೊರೆ ಬೀಳದಿರಲು ಕೇರಳೀಯರು ದೇಣಿಗೆ ಅಭಿಯಾನ ಆರಂಭಿಸಿದ್ದಾರೆ. ಕೊರೋನ ಲಸಿಕೆ ಖರೀದಿಸಲು ರಾಜ್ಯ ಸರಕಾರಕ್ಕೆ ಬೆಂಬಲ ನೀಡುವ ಕ್ರಮವಾಗಿ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿ (ಸಿಎಂಡಿಆರ್ಎಫ್ಗೆ)ಗೆ ನೂರಾರು ಜನರು ದೇಣಿಗೆ ನೀಡಲು ಮುಂದೆ ಬಂದಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಈ ದೇಣಿಗೆ ಅಭಿಯಾನವನ್ನು ಕೆಲವು ಬಳಕೆದಾರರು ಬುಧವಾರ ರಾತ್ರಿ ಆರಂಭಿಸಿದರು. ಕೇರಳ ಹಾಗೂ ಇತರ ಕಡೆ ಈಗಾಗಲೇ ಲಸಿಕೆ ಹಾಕಿಸಿಕೊಂಡವರು ಕೂಡ ಸಿಎಂಡಿಆರ್ಎಫ್ಗೆ ಸ್ವಯಂಪ್ರೇರಿತವಾಗಿ ದೇಣಿಗೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲ ತಾಣದ ಬಳಕೆದಾರ ರಾವಣನ್ ಕಣ್ಣೂರು, ‘‘ಕುವೈಟ್ ಸರಕಾರ ನನಗೆ ಲಸಿಕೆಯನ್ನು ಉಚಿತವಾಗಿ ನೀಡಲಿದೆ. ನನ್ನ ಕುಟುಂಬಕ್ಕಾಗಿ ನಾನು ಸಿಎಂಡಿಆರ್ಎಫ್ಗೆ ದೇಣಿಗೆ ನೀಡಲಿದ್ದೇನೆ. ಲಸಿಕೆ ವ್ಯಾಪಾರದ ಉದ್ದೇಶಕ್ಕೆ ಇರುವುದಲ್ಲ. ನಾನು ಉಚಿತ ಲಸಿಕೆ ಪಡೆಯುವುದು ಮಾತ್ರವಲ್ಲ, ಕನಿಷ್ಟ 10 ಜನರಿಗೆ ಲಸಿಕೆ ನೀಡಲು ದೇಣಿಗೆ ನೀಡಲಿದ್ದೇನೆ’’ ಎಂದಿದ್ದಾರೆ.

ಈ ಚಿಂತನೆಗೆ ಕೇರಳ ಹಾಗೂ ಹೊರಗಿರುವ ಸಾವಿರಾರು ಸಾಮಾಜಿಕ ತಾಣ ಬಳಕೆದಾರರು ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವು ನಿಮಿಷಗಳ ಬಳಿಕ ಪೊಲೀಸ್ ಅಧಿಕಾರಿಯೊಬ್ಬರು ಸಿಎಂಡಿಆರ್ಎಫ್ಗೆ ದೇಣಿಗೆ ನೀಡಿದ್ದಾರೆ ಹಾಗೂ ಅದರ ಪ್ರಮಾಣಪತ್ರದ ಪ್ರತಿಯನ್ನು ಪೋಸ್ಟ್ ಮಾಡಿದ್ದಾರೆ.

‘‘ಆರೋಗ್ಯ ಸೇವೆ ಪ್ರತಿ ನಾಗರಿಕನ ಪ್ರಜಾಪ್ರಭುತ್ವ ಹಕ್ಕು. ಜನರಿಗೆ ಲಸಿಕೆ ಹೆಚ್ಚು ಅಗತ್ಯತೆ ಇರುವ ಸಂದರ್ಭ ರಾಜ್ಯ ಸರಕಾರ ಈ ಹೆಜ್ಜೆ ಇರಿಸಿದೆ. ನಾನು ಎರಡು ಡೋಸ್ ಲಸಿಕೆಯ ಹಣ ನೀಡುತ್ತೇನೆ’’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News