ಯುಎಇ, ಸೌದಿ, ಅಮೆರಿಕ ಸಹಿತ ಹಲವು ದೇಶಗಳಲ್ಲಿ ಭಾರತೀಯ ವಿಮಾನಗಳಿಗೆ ನಿಷೇಧ ವಿಸ್ತರಣೆ?

Update: 2021-04-24 16:41 GMT

ದುಬೈ, ಎ.24: ಭಾರತದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ದಿನಂಪ್ರತಿ ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೌದಿ, ಯುಎಇ, ಕುವೈತ್, ಅಮೆರಿಕ, ಆಸ್ಟ್ರೇಲಿಯ, ಬ್ರಿಟನ್, ಕೆನಡ ಸೇರಿದಂತೆ ಹಲವಾರು ದೇಶಗಳು ಭಾರತದ ವಿಮಾನಗಳ ಹಾರಾಟವನ್ನು ಈಗಾಗಲೇ ನಿಷೇಧಿಸಿದ್ದು, ಅದು ಮೇ ತಿಂಗಳಲ್ಲೂ ಮುಂದುವರಿಯುವ ಸಾಧ್ಯತೆಯಿದೆಯೆಂದು ಕೆಲವು ವರದಿಗಳು ತಿಳಿಸಿವೆ.

ಎಪ್ರಿಲ್ 24ರಿಂದ ಭಾರತದಿಂದ ಆಗಮಿಸುವ ಎಲ್ಲಾ ನೇರ ವಾಣಿಜ್ಯ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಅಮಾನತಿನಲ್ಲಿರಿಸಿರುವುದಾಗಿ ಕುವೈತ್ನ ನಾಗರಿಕ ವಾಯು ಯಾನದ ಮಹಾನಿರ್ದೇಶನಾಲಯ ಶನಿವಾರ ತಿಳಿಸಿದೆ. ಇದಕ್ಕೂ ಮೊದಲು ಯುಎಇ ಕೂಡಾ ಭಾರತದಿಂದ ಆಗಮಿಸುವ ಎಲ್ಲಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು 10 ದಿನಗಳ ಕಾಲ ಅಮಾನತಿನಲ್ಲಿರಿಸಿದ್ದು, ಆ ಅವಧಿಯನ್ನು ವಿಸ್ತರಿಸಬಹುದಾಗಿದೆ ಎಂದು ಪ್ರಕಟಿಸಿತ್ತು.
  
ಈ ಮಧ್ಯೆ ಬ್ರಿಟನ್, ಕೆನಡ, ಹಾಂಕಾಂಗ್, ನ್ಯೂಝಿಲ್ಯಾಂಡ್, ಯುಎಇ, ಇಂಡೋನೇಶ್ಯ, ಕುವೈತ್ ಹಾಗೂ ಆಸ್ಟ್ರೇಲಿಯಗಳು ಕೂಡಾ ಭಾರತದ ವಿಮಾನಗಳ ಹಾರಾಟ ನಿಷೇಧಿಸಿವೆ. ಇತ್ತ ಫ್ರಾನ್ಸ್ ಎಲ್ಲಾ ಭಾರತೀಯ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.

ಭಾರತ ಹಾಗೂ ಪಾಕಿಸ್ತಾನ ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರು ಹಿನ್ನೆಲೆಯಲ್ಲಿ ಆ ದೇಶಗಳಿಂದ ಆಗಮಿಸುವ ಎಲ್ಲಾ ವಿಮಾನಗಳಿಗೆ ಮುಂದಿನ 30 ದಿನಗಳ ಕಾಲ ನಿಷೇಧ ಹೇರಿರುವುದಾಗಿ ಕೆನಡ ಗುರುವಾರ ಪ್ರಕಟಿಸಿತ್ತು. ಈಗಾಗಲೇ ಬ್ರಿಟನ್ ಎಪ್ರಿಲ್ 23ರಂದು ಬ್ರಿಟನ್ ಭಾರತವನ್ನು ಪ್ರಯಾಣಿಕ ಕೆಂಪುಪಟ್ಟಿಗೆ ಸೇರ್ಪಡೆಗೊಳಿಸಿದು, ಪ್ರಯಾಣ ನಿಷೇಧವನ್ನು ಹೇರಿದೆ. ಅಮೆರಿಕವು ಭಾರತಕ್ಕೆ ಪ್ರಯಾಣಿಸುವುದನ್ನು ತಪ್ಪಿಸಿಕೊಳ್ಳುವಂತೆ ಅಮೆರಿಕವು ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ. ಆದಾಗ್ಯೂ ಆರಾದರೂ ಭಾರತಕ್ಕೆ ಪ್ರಯಾಣಿಸಬೇಕಿದ್ದಲ್ಲಿ ಆತ ಅಥವಾ ಆಕೆ ಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಪಡೆದುಕೊಂಡಿರಬೇಕು ಅದು ಸಲಹೆ ನೀಡಿದೆ.

ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ವಿಧಿಸಿರುವ ನಿಷೇಧವನ್ನು ಮೇ 17ರಂದು ತೆಗೆದುಹಾಕಲಾಗುವುದೆಂದು ಸೌದಿ ಆರೇಬಿಯ ಶನಿವಾರ ಪ್ರಕಟಿಸಿದೆ. ಆದರೆ ಭಾರತ ಸೇರಿದಂತೆ ಪ್ರಯಾಣ ನಿಷೇಧ ಪಟ್ಟಿಯಲ್ಲಿರುವ ದೇಶಗಳಿಗೆ ಈ ಆದೇಶ ಅನ್ವಯ ವಾಗುವುದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

ಭಾರತ,ಅರ್ಜೆಂಟೀನ, ಯುಎಇ, ಫ್ರಾನ್ಸ್, ಜರ್ಮನಿ, ಅಮೆರಿಕ, ಇಂಡೋನೇಶ್ಯ, ಜಪಾನ್, ಐರ್ಲ್ಯಾಂಡ್, ಇಟಲಿ, ಪಾಕಿಸ್ತಾನ, ಬ್ರೆಝಿಲ್, ಪೋರ್ಚುಗಲ್, ಬ್ರಿಟನ್, ಟರ್ಕಿ, ದಕ್ಷಿಣ ಆಫ್ರಿಕ, ಸ್ವೀಡನ್,ಸ್ವಿಝರ್ಲ್ಯಾಂಡ್, ಲೆಬನಾನ್ ಹಾಗೂ ಈಜಿಪ್ಟ್ ಪ್ರಯಾಣ ನಿಷೇಧದ ಪಟ್ಟಿಯಲ್ಲಿರುವ ದೇಶಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News