ಈ ರಾಜ್ಯದಲ್ಲಿ ಚುನಾವಣೆ ಘೋಷಣೆ ಬಳಿಕ ಕೊರೋನ ಪ್ರಕರಣ 75 ಪಟ್ಟು ಹೆಚ್ಚಳ
ಕೊಲ್ಕತ್ತಾ, ಎ.28: ಪಶ್ಚಿಮ ಬಂಗಾಳದಲ್ಲಿ ಫೆಬ್ರವರಿ 26ರಂದು ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ದೈನಿಕ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 75 ಪಟ್ಟು ಹೆಚ್ಚಳವಾಗಿದೆ. ಮಾಸ್ಕ್ ಧರಿಸದೇ ರಾಜಕೀಯ ರ‍್ಯಾಲಿಗಳನ್ನು ಆಯೋಜಿಸಿರುವುದು ಮತ್ತು ಕೋವಿಡ್-19 ಶಿಷ್ಟಾಚಾರಗಳನ್ನು ಗಾಳಿಗೆ ತೂರಿರುವುದು ಈ ಭಾರೀ ಏರಿಕೆಗೆ ಕಾರಣ ಎನ್ನುವುದು ತಜ್ಞರ ಅಭಿಮತ.
ಫೆಬ್ರವರಿ 26ರಂದು ರಾಜ್ಯದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 216. ಮಂಗಳವಾರ ಪಶ್ಚಿಮ ಬಂಗಾಳದಲ್ಲಿ 16,403 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಪ್ರಕರಣಗಳ ಧನಾತ್ಮಕತೆ ದರ ಕೂಡಾ ಶೇಕಡ 1ರಿಂದ ಶೇಕಡ 30ಕ್ಕೆ ಏರಿದೆ. ಅಂದರೆ ಕೊರೋನ ವೈರಸ್ ಪರೀಕ್ಷೆಗೆ ಒಳಪಟ್ಟ ಪ್ರತೀ ಮೂರು ಮಂದಿಯ ಪೈಕಿ ಒಬ್ಬರಿಗೆ ಕೊರೋನ ಪಾಸಿಟಿವ್ ಇರುವುದು ಪತ್ತೆಯಾಗುತ್ತಿದೆ.
ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ ಮಂಗಳವಾರ ಒಂದು ಲಕ್ಷದ ಗಡಿ ದಾಟಿದ್ದು, ಫೆಬ್ರವರಿ 26ರಂದು ಇದು 3,343 ಆಗಿತ್ತು. ಮಂಗಳವಾರ ರಾಜ್ಯದಿಂದ 73 ಸಾವಿನ ಪ್ರಕರಣಗಳು ವರದಿಯಾಗಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 11,082ಕ್ಕೇರಿದೆ.
"ರಾಜ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಎಲ್ಲ ಸುರಕ್ಷಾ ಶಿಷ್ಟಾಚಾರಗಳನ್ನು ಗಾಳಿಗೆ ತೂರಿದ ಪರಿಣಾಮವಾಗಿ ರಾಜ್ಯದಲ್ಲಿ ವೈರಸ್ ವೇಗವಾಗಿ ಹರಡಲು ಕಾರಣವಾಯಿತು. ಭಾರತದ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಮುಕ್ತಾಯಗೊಳಿಸಬೇಕಿತ್ತು. ಚುನಾವಣಾ ಪ್ರಕ್ರಿಯೆ ದೀರ್ಘವಾದಷ್ಟೂ ಸೋಂಕು ಹರಡುವ ಸಾಧ್ಯತೆಯೂ ಅಧಿಕ. ಈ ಸಂಘರ್ಷದಿಂದ ಪಾರಾಗಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕಿದೆ" ಎಂದು ಆರೋಗ್ಯ ಸೇವಾ ವೈದ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಮನಸ್ ಗುಮ್ಟಾ ಹೇಳಿದ್ದಾರೆ.
ದೇಶದಲ್ಲಿ ಎರಡನೇ ಅಲೆಯ ಸ್ಫೋಟಕ್ಕೆ ಭಾರತದ ಚುನಾವಣಾ ಆಯೋಗ ನೇರ ಹೊಣೆ ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ಛೀಮಾರಿ ಹಾಕಿತ್ತು. ಪ್ರಚಾರದ ವೇಳೆ ಕೋವಿಡ್-19 ಸುರಕ್ಷಾ ಕ್ರಮಗಳನ್ನು ಜಾರಿಗೊಳಿಸದ ಚುನಾವಣಾ ಆಯೋಗದ ವಿರುದ್ಧ ಕೊಲ್ಕತ್ತಾ ಹೈಕೋರ್ಟ್ ಕೂಡಾ ಅಸಮಾಧಾನ ವ್ಯಕ್ತಪಡಿಸಿತ್ತು.