‘ಅವ್ರು ಸಾಯಿರಿ ಎಂದರೆ, ಇವ್ರು ಹೇಳದೇ ನಮ್ಮನ್ನು ಕೊಲ್ಲುತ್ತಿದ್ದಾರೆ’
ಬೆಂಗಳೂರು: ಕೊರೋನ ಮಹಾಮಾರಿಯ ಎರಡನೇ ಅಲೆ ದಿನದಿಂದ ದಿನಕ್ಕೆ ಮಿತಿ ಮೀರುತ್ತಿರುವುದರ ಜೊತೆಗೆ ಸಾವಿನ ಸರಣಿಯ ಆತಂಕವೂ ಮುಂದುವರಿದಿದೆ. ಸೋಂಕು ತಡೆಗಟ್ಟಲು ರಾಜ್ಯ ಸರಕಾರ ಹೇರಿರುವ ‘ಕೊರೋನ ಕರ್ಫ್ಯೂ’ ಬೀದಿಬದಿ ವ್ಯಾಪಾರದಲ್ಲಿ ತೊಡಗಿರುವ ಬೆಂಗಳೂರು ನಗರದಲ್ಲಿನ 2 ಲಕ್ಷಕ್ಕೂ ಅಧಿಕ ಮಂದಿಯ ದಿನದ ಅನ್ನವನ್ನೇ ಕಸಿದುಕೊಂಡಿದೆ.
‘ಆಹಾರ ಸಚಿವ ಉಮೇಶ್ ಕತ್ತಿ ಪಡಿತರ ಅಕ್ಕಿ ಕೇಳಿದರೆ ನೀನು ಸಾಯೋದೇ ಒಳ್ಳೆಯದು ಎಂದು ಹೇಳಿದರು. ಆದರೆ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮನ್ನು ಸಾಯಿರಿ ಎಂದು ಹೇಳದೆ ಲಾಕ್‌ಡೌನ್ ಹೆಸರಿನಲ್ಲಿ ನಮ್ಮ ವ್ಯಾಪಾರವನ್ನು ಬಂದ್ ಮಾಡಿಸಿ ಅನ್ನ-ನೀರಿಲ್ಲದೆ ಪ್ರತಿಕ್ಷಣ ಕೊಲ್ಲುತ್ತಿದ್ದಾರೆ’ ಎಂದು ಬೀದಿಬದಿ ವ್ಯಾಪಾರಿಯೊಬ್ಬರ ಕಣ್ಣೀರಿನ ನುಡಿ. ‘ಮನೆಯಿಂದ ಹೊರಗೆ ಬರದಿದ್ದರೆ ನಮ್ಮ ಜೀವನ ನಡೆಯುವುದಿಲ್ಲ, ಜೀವನಕ್ಕಾಗಿ ಹೊರ ಬಂದರೆ ಜೀವಕ್ಕೆ ಭರವಸೆಯೇ ಇಲ್ಲ’ ಎಂದು ಗಾಂಧಿ ಬಝಾರ್‌ನ ಹೂವಿನ ವ್ಯಾಪಾರಿ ವನಜಾಕ್ಷಿಯವರ ಅಳಲಾಗಿದೆ.
‘ಬೀದಿ ಬದಿ ವ್ಯಾಪಾರಿಗಳು ಯಾರೂ ಶ್ರೀಮಂತರಲ್ಲ, ಸಾಲ ಮಾಡಿಯೇ ಹೂವು, ಹಣ್ಣು, ತರಕಾರಿ ಸೇರಿ ಸಣ್ಣ-ಪುಟ್ಟ ವಸ್ತುಗಳನ್ನು ಅಂದೇ ಖರೀದಿಸಿ ತಂದು ಮಾರಾಟ ಮಾಡಿ ಜೀವನ ನಡೆಸುತ್ತಾರೆ. ವ್ಯಾಪಾರ ಮಾಡದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಕನಿಷ್ಠ ಮಾನವೀಯತೆ ಇದ್ದರೆ ದುಡಿದು ತಿನ್ನುವ ಜನರಿಗೆ ತಮ್ಮ ವ್ಯಾಪಾರ ಮಾಡಿಕೊಂಡು ತಿನ್ನಲು ಅವಕಾಶ ಕೊಡಬೇಕು. ಇಲ್ಲ ನಮಗೆ ಪರಿಹಾರದ ಪ್ಯಾಕೇಜ್ ಆದರೂ ಕೊಡಬೇಕು’ ಎಂದು ಶಿವಾಜಿನಗರದ ಹಣ್ಣಿನ ವ್ಯಾಪಾರಿ ಝಮೀರ್ ಅವರು ಆಗ್ರಹಿಸಿದ್ದಾರೆ.
ಮೇಲಿನ ಮೂರು ಮಂದಿಯ ಕಣ್ಣೀರಿನ ಹಿಂದಿನ ಬದುಕಿನ ವಾಸ್ತವತೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಂಗಳೂರು ನಗರದಲ್ಲಿನ ಬೀದಿಬದಿ ವ್ಯಾಪಾರಿಗಳ ಸಂಕಷ್ಟ, ಕೊರೋನ ಸೋಂಕಿಗಿಂತಲೂ ಭೀಕರ ಎನಿಸದೆ ಇರದು. ಸರಕಾರ ಯಾವುದೇ ಮುನ್ಸೂಚನೆ ಇಲ್ಲದೆ, ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ, ಕೊರೋನ ಕರ್ಫ್ಯೂ ಸಂದರ್ಭದಲ್ಲಿ ಅವರಿಗೆ ಪ್ಯಾಕೇಜ್ ಸೇರಿ ಯಾವೊಂದು ನೆರವನ್ನು ಪ್ರಕಟಿಸದೆ ಏಕಾಏಕಿಯಾಗಿ ಲಾಕ್‌ಡೌನ್ ಜಾರಿ ಮಾಡಿರುವುದು ಬೀದಿ ಬದಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ದೂಡಿದೆ.
‘ಮೂರ್ನಾಲ್ಕು ತಲೆಮಾರಿನಿಂದಲೂ ಗಾಂಧಿ ಬಝಾರ್ ವಿದ್ಯಾರ್ಥಿ ಭವನದ ಮುಂದೆ ಹೂವು ಮಾರಿ ಜೀವನ ನಡೆಸುತ್ತಿದ್ದೇವೆ. ಕೊರೋನ ಭಯ ಮತ್ತು ಸರಕಾರದ ನಡೆಯನ್ನು ನೋಡಿದರೆ ನಾವು ಬದುಕುವುದು ಅನುಮಾನ. ವ್ಯಾಪಾರ ಇಲ್ಲದೆ ಇದ್ದರೆ ಹೊಟ್ಟೆ ತುಂಬುವುದಿಲ್ಲ. ಮನೆಯಿಂದ ಹೊರಗೆ ಬಂದರೆ ಕೊರೋನ ಅಂಟಿಕೊಳ್ಳುವ ಭಯ. ಇಲ್ಲಿನ ಆಸ್ಪತ್ರೆಗಳನ್ನು ನೋಡಿದರೆ ಜೀವ ಹೋಗುವುದೇ ಗ್ಯಾರಂಟಿ. ಹೀಗಾದರೆ ನಾವು, ನಮ್ಮ ಮಕ್ಕಳಿಗೆ ಯಾರು ದಿಕ್ಕು?’ ಎಂದು ವನಜಾಕ್ಷಿ ಆಳಲಾಗಿದೆ.
‘ಕೊರೋನ ಕಾರಣ ಮೊದಲೇ ಬೀದಿ ಬದಿ ವ್ಯಾಪಾರ ಕಡಿಮೆಯಾಗಿತ್ತು. ಇದೀಗ ಲಾಕ್‌ಡೌನ್ ಬೇರೆ. ಹಣ್ಣು, ತರಕಾರಿ, ಹೂವು ಅಂದು ಖರೀದಿ ಮಾಡಿ ಅಂದೇ ಮಾರಾಟ ಮಾಡಬೇಕು. ನಾಲ್ಕೈದು ಸಾವಿರ ರೂ.ಸಾಲ ಬಂಡವಾಳ ಹಾಕಿ ಈ ಕಷ್ಟಕಾಲದಲ್ಲಿ ವ್ಯಾಪಾರ ಮಾಡಿ ಅದರಲ್ಲಿ ಲಾಭ ತೆಗೆಯುವುದಕ್ಕಿಂತ ನಷ್ಟವೇ ಹೆಚ್ಚು. ಹೀಗಿರುವಾಗ ಸರಕಾರ ಕೇವಲ ನಾಲ್ಕೇ ನಾಲ್ಕು ಗಂಟೆ ಅವಕಾಶ ನೀಡಿದರೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಕರ್ಫ್ಯೂ ಇನ್ನೂ ಎಷ್ಟು ದಿನ ಎಂಬುದು ಗೊತ್ತಿಲ್ಲ. ಇದು ಇನ್ನೂ ಎರಡು ತಿಂಗಳಾದರೆ ನಾವು ಹೊಟ್ಟೆಗೆ ಏನು ತಿನ್ನುವುದು. ಸರಕಾರ ಬೀದಿಬದಿ ವ್ಯಾಪಾರಿಗಳ ನೆರವಿಗೆ ಧಾವಿಸಬೇಕು’ ಎಂದು ಹಣ್ಣಿನ ವ್ಯಾಪಾರಿ ಝಮೀರ್‌ರ ಒತ್ತಾಯವಾಗಿದೆ.
ವ್ಯಾಪಾರದ ಅವಧಿ ವಿಸ್ತರಿಸಲು ಸಿಎಂಗೆ ಮನವಿ: ‘ಉತ್ಪಾದನೆ ವಲಯ, ನಿರ್ಮಾಣ, ಕೃಷಿಗೆ ವಿನಾಯಿತಿ ನೀಡಿರುವ ರೀತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೂ ಮಾರ್ಗಸೂಚಿ ಪಾಲಿಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಅಥವಾ ಕನಿಷ್ಠ ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರೆಗೆ ಅವಧಿಯನ್ನು ವಿಸ್ತರಿಸಬೇಕು. ಪೊಲೀಸರ ದೌರ್ಜನ್ಯ ತಡೆಗಟ್ಟಬೇಕು. ಮನೆ ಬಾಡಿಗೆಗೆ ಮತ್ತು ಖಾಸಗಿ ಫೈನಾನ್ಸ್ ಕಂಪೆನಿಗಳ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಆದೇಶ ನೀಡಬೇಕು. ಬಡ್ಡಿಯನ್ನು ಮನ್ನಾ ಮಾಡಬೇಕು.
ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಡಿ ನೀಡಿರುವ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಪ್ರತಿಯೊಬ್ಬ ಬೀದಿ ವ್ಯಾಪಾರಿಗೆ ಮೇ ಮತ್ತು ಜೂನ್ ತಿಂಗಳಿಗೆ 15 ಸಾವಿರ ರೂ.ಆರ್ಥಿಕ ನೆರವು ನೀಡಬೇಕು. ಕೇರಳ ಮಾದರಿಯಲ್ಲಿ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಅಕ್ಕಿ, ಬೇಳೆ ಕಾಳುಗಳು, ಅಡುಗೆ ಎಣ್ಣೆ ಜೊತೆಗೆ ಕಡಿತವಾದ ಅಕ್ಕಿ ಪ್ರಮಾಣ ಹೆಚ್ಚಿಸಬೇಕು. ಬೀದಿ ವ್ಯಾಪಾರಿಗಳಿಗೆ ಇಎಸ್‌ಐ ಸ್ವರೂಪದ ಸರಕಾರಿ ಆರೋಗ್ಯ ವಿಮೆ ನೀಡಬೇಕು. ನಗರದ ಕೊಳೆಗೇರಿ, ವಲಸೆ ಕಾರ್ಮಿಕರಿರುವ ಪ್ರದೇಶದಲ್ಲಿ ಸಾಮೂಹಿಕ ಅಡುಗೆ ಮನೆ ಸ್ಥಾಪಿಸಿ ನಗರದ ನಿರಾಶ್ರಿತರಿಗೆ ತಾಜಾ ಆಹಾರ ನೀಡಲು ಗುತ್ತಿಗೆ ನೀಡಬೇಕು’ ಎಂದು ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಪಿ.ಪಿ.ಅಪ್ಪಣ್ಣ, ಮುಖ್ಯಮಂತ್ರಿ ಯಡಿಯೂರಪ್ಪಅವರಿಗೆ ಮನವಿ ಮಾಡಿದ್ದಾರೆ.
4 ಗಂಟೆ ಅವಕಾಶ, ವ್ಯಾಪಾರ ಹೇಗೇ?
ಬೆಳಗ್ಗೆ 6ಗಂಟೆಯವರೆಗೆ ಕರ್ಫ್ಯೂ, 6ರಿಂದ 10 ಗಂಟೆಯ ವರೆಗಷ್ಟೇ ವ್ಯಾಪಾರಕ್ಕೆ ಅವಕಾಶ. ಬೀದಿ ಬದಿ ವ್ಯಾಪಾರಿಗಳು ಹೂವು, ಹಣ್ಣು, ಸೊಪ್ಪು, ತರಕಾರಿಗಳನ್ನು ಕೆ.ಆರ್.ಮಾರುಕಟ್ಟೆ, ಯಶವಂತಪುರ, ದಾಸನಪುರ, ಯಲಹಂಕ ಸೇರಿ ವಿವಿಧ ಮಾರುಕಟ್ಟೆಗಳಿಗೆ ತೆರಳಿ ತಂದು ಜೋಡಿಸಿಕೊಳ್ಳುವ ಹೊತ್ತಿಗೆ 8ಗಂಟೆಯಾಗುತ್ತದೆ. 9:30ಕ್ಕೆ ಪೊಲೀಸರು ಕೈಯಲ್ಲಿ ದೊಣ್ಣೆ ಹಿಡಿದು ‘ವ್ಯಾಪಾರ ಬಂದ್ ಮಾಡ್ತೀಯೋ.. ಎತ್ತಾಕ್ಕೊಂಡು ಹೋಗ್ಲೋ..’ ಎಂದರೆ ನಾವು ಹೊಟ್ಟೆಗೇನು ತಿನ್ನಬೇಕು ಎಂಬುದು ಹೂವಿನ ವ್ಯಾಪಾರಿ ವನಜಾಕ್ಷಿ ಅವರ ಪ್ರಶ್ನೆಯಾಗಿದೆ.
ಹಣ್ಣು-ತರಕಾರಿ ಅಭಾವ
ಅಗತ್ಯ ವಸ್ತುಗಳ ಖರೀದಿಗೆ ನಾಲ್ಕು ಗಂಟೆ ಅವಕಾಶ ನೀಡಿದೆ. ಆದರೆ, ಹಾಲಿನ ಮಾರಾಟ ಕೇಂದ್ರಗಳಿಗೆ ಬೆಳಗ್ಗೆ 6ರಿಂದ ರಾತ್ರಿ 8ಗಂಟೆ ವರೆಗೆ ಅವಕಾಶ ನೀಡಲಾಗಿದೆ. ಸಾಕಷ್ಟು ಹಣ್ಣು, ಸೊಪ್ಪು, ತರಕಾರಿ ಲಭ್ಯವಿದ್ದರೂ ದಲ್ಲಾಳಿಗಳು ಮಾರಾಟ ಕಷ್ಟಸಾಧ್ಯ ಎಂದು ರೈತರಿಂದ ಖರೀದಿಸುತ್ತಿಲ್ಲ. ಹೀಗಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಹೂವು, ಸೊಪ್ಪು, ಹಣ್ಣು, ತರಕಾರಿ ಅಭಾವ ಸೃಷ್ಟಿಯಾಗುತ್ತಿದೆ. ಈ ನಡುವೆ ಮಾರುಕಟ್ಟೆಗಳಲ್ಲಿ ಹಣ್ಣು, ದಿನಸಿ ಖರೀದಿ ಸಂದರ್ಭದಲ್ಲಿ ಮಾಸ್ಕ್ ಧಾರಣೆ, ಅಂತರ ಕಾಯ್ದುಕೊಳ್ಳುವುದನ್ನು ವ್ಯಾಪಾರಿಗಳು ಮತ್ತು ಗ್ರಾಹಕರು ಮರೆಯುತ್ತಿದ್ದು ಸೋಂಕು ಮತ್ತಷ್ಟು ಹರಡುವ ಭೀತಿಯೂ ಆವರಿಸಿದೆ.