ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಣೆ: ‘ಆಕ್ಸಿಜನ್’ ಗಾಗಿ ಅಶ್ವತ್ಥ ಮರದಡಿ ಬೀಡುಬಿಟ್ಟ ಕೋವಿಡ್ ರೋಗಿಗಳು

Update: 2021-05-03 08:55 GMT
ಸಾಂದರ್ಭಿಕ ಚಿತ್ರ

ಲಕ್ನೊ: ಆಸ್ಪತ್ರೆಯಲ್ಲಿ ತಮ್ಮನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ ಕೋವಿಡ್ ರೋಗಿಗಳ ಸಂಬಂಧಿಕರ ಗುಂಪೊಂದು ಅಶ್ವತ್ಥ  ಮರದ ಕೆಳಗೆ  ಬೀಡುಬಿಟ್ಟಿರುವ ಘಟನೆ ಉತ್ತರಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ನಡೆದಿದ್ದು, ಅಶ್ವತ್ಥ ಮರವು ಹೆಚ್ಚಿನ ಮಟ್ಟದ ಆಮ್ಲಜನಕನವನ್ನು ಹೊರಸೂಸುತ್ತದೆ ಎಂದು ಈ ಜನರು ನಂಬಿದ್ದಾರೆ ಎಂದು ವರದಿಯಾಗಿದೆ.

ಆಸ್ಪತ್ರೆಯಲ್ಲಿ ಆಮ್ಲಜನಕದ ವ್ಯವಸ್ಥೆ ಇಲ್ಲ ಎಂದು ತಿಳಿಸಲಾಗಿತ್ತು. ಕೋವಿಡ್ ನಿಂದಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಶರ್ಮಿಳಾ ಎಂಬ ಮಹಿಳೆ ಅಶ್ವತ್ಥಮರದ ಕೆಳಗೆ ಮಲಗಿದ್ದರು. ಅಶ್ವತ್ಥ  ಮರದಡಿ ಮಲಗಿದರೆ ಆಮ್ಲಜನಕ ಸಿಗುತ್ತದೆ ಯಾರೋ ಹೇಳಿದ್ದನ್ನು ನಂಬಿದ್ದ ಈ ಮಹಿಳೆಯ ಕುಟುಂಬವು ಶಹಜಹಾನ್ಪುರದ ಬಹದ್ದೂರ್ ಗಂಜ್ ಪ್ರದೇಶದ ಅಶ್ವತ್ಥ ಮರದ ಬಳಿ ಬೀಡುಬಿಟ್ಟಿದ್ದಾರೆ. ಸುಮಾರು ಆರು ಮಂದಿ ಈ ಮರದ ಕೆಳಗೆ ಆಶ್ರಯ ಪಡೆದಿದ್ದಾರೆ ಎಂದು IANS ಸುದ್ದಿಸಂಸ್ಥೆ ವರದಿ ಮಾಡಿದೆ. 

ಸುಮಾರು ಆರು ಜನರ ಗುಂಪು ರೋಗಿಗಳೊಂದಿಗೆ ತಮ್ಮ ಹಾಸಿಗೆಗಳನ್ನು ಮರದ ಕೆಳಗೆ ಇಟ್ಟು ಮಲಗಿದ್ದಾರೆ. ಇವರೊಂದಿಗೆ ನನ್ನ ಸಹೋದರಿ ಕೂಡ ಆಶ್ರಯ ಪಡೆದಿದ್ದಾರೆ ಎಂದು ರವೀಂದ್ರ ಮೌರ್ಯ ಎಂಬವರು ಹೇಳಿದ್ದಾರೆ.

ಜಿಲ್ಲಾ ಕೇಂದ್ರದಿಂದ 25 ಕಿ.ಮೀ.ದೂರದಲ್ಲಿರುವ ತಿಲ್ಹಾರ್ ಪ್ರದೇಶದಲ್ಲಿ ಓರ್ವ ಕೊರೋನ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದು, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮಲ್ಲಿ ಆಕ್ಸಿಜನ್ ಕೊರತೆ ಇಲ್ಲ  ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.

ಆಮ್ಲಜನಕದ ಕೊರತೆಯಿಂದಾಗಿ ಕೆಲವು ಜನರು ಮರದ ಕೆಳಗೆ ಠಿಕಾಣಿ ಹೂಡಿದ್ದಾರೆ ಎಂಬ ಮಾಹಿತಿ ಸಿಕ್ಕ ಕ್ಷಣ ನಾನು ಆ ಸ್ಥಳಕ್ಕೆ ತೆರಳಿದ್ದೇನೆ. ನಾನು ಮರದ ಬಳಿ ಹೋಗುವಾಗ ಎಂಟು-ಒಂಭತ್ತು ಜನರು ಹಾಸಿಗೆಗಳನ್ನು ಹರಡುತ್ತಿರುವುದನ್ನು ನೋಡಿದೆ. ಪೊಲೀಸರು ಬರುತ್ತಾರೆ, ನಮ್ಮನ್ನು ಬಂಧಿಸಿ ಜೈಲಿಗೆ ಅಟ್ಟುತ್ತಾರೆಂದು ಭಾವಿಸಿ ಕೆಲವರು ನನ್ನನ್ನು ನೋಡಿದ ತಕ್ಷಣ ಓಡಿ ಹೋದರು ಎಂದು ಟಿಲ್ಹಾರ್ ನ ಬಿಜೆಪಿ ಶಾಸಕ ರೋಶನ್ ಲಾಲ್ ವರ್ಮಾ ಹೇಳಿದ್ದಾರೆ.

ಈ ಜನರ ಗುಂಪು ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯಕೀಯ ಕಾಲೇಜಿಗೆ ಹೋಗಿದ್ದರು. ಅಲ್ಲಿ ಅವರನ್ನು ದಾಖಲಿಸಿಕೊಂಡಿರಲಿಲ್ಲ. ಆದ್ದರಿಂದಾಗಿ ಅವರು ತಮ್ಮ ಹಾಸಿಗೆಗಳನ್ನು ಅಶ್ವತ್ಥ ಮರದ ಕೆಳಗೆ ಹರಡಿಕೊಂಡಿದ್ದರು. ನಾನು ಜಿಲ್ಲಾ ಅಧಿಕಾರಿಗಳಿಗೆ ಕರೆ ಮಾಡಿ ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಹೇಳಿದ್ದೇನೆ ಎಂದು ಶಾಸಕ ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News