ಮೊಮ್ಮಗನಿಗೆ ಕೊರೋನ ವೈರಸ್ ಹರಡುವ ಭಯದಿಂದ ಆತ್ಮಹತ್ಯೆಗೆ ಶರಣಾದ ಹಿರಿಯ ದಂಪತಿ
Update: 2021-05-03 13:47 GMT
ಜೈಪುರ: ಕೊರೋನ ವೈರಸ್ ಸೋಂಕು ತಮ್ಮ ಮೊಮ್ಮಗನಿಗೆ ಹರಡುತ್ತದೆ ಎಂಬ ಭಯದಲ್ಲಿ ಕೊರೋನ ಪೀಡಿತ ವಯೋವೃದ್ಧ ದಂಪತಿ ಚಲಿಸುವ ರೈಲಿನ ಮುಂದೆ ಹಾರಿ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಹೀರಲಾಲ್ ಬೈರ್ವಾ (75) ಹಾಗೂ ಅವರ ಪತ್ನಿ ಶಾಂತಿಬಾಯಿ (70) ಅವರು ತಮ್ಮ 18 ವರ್ಷದ ಮೊಮ್ಮಗ ಮತ್ತು ಸೊಸೆಯೊಂದಿಗೆ ನಗರದ ಪುರೋಹಿತ್ ಜಿ ಕಿ ತಪ್ರಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ವಯಸ್ಸಾದ ದಂಪತಿಗಳ ಮಗ ಎಂಟು ವರ್ಷಗಳ ಹಿಂದೆ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ದಂಪತಿಗೆ ಎ. 29 ರಂದು ಕೊರೋನ ಸೋಂಕು ದೃಢಪಟ್ಟಿತ್ತು. ಅಂದಿನಿಂದ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು ಎಂದು ರೈಲ್ವೆ ಕಾಲೋನಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಮೇಶ್ ಚಂದ್ ಶರ್ಮಾ ತಿಳಿಸಿದ್ದಾರೆ. ರವಿವಾರ ಬೆಳಿಗ್ಗೆ ಚಂಬಲ್ ಓವರ್‌ಬ್ರಿಡ್ಜ್ ಬಳಿ ದಿಲ್ಲಿ ಮುಂಬೈ ಅಪ್ ಲೈನ್ ಟ್ರ್ಯಾಕ್‌ನಲ್ಲಿ ದಂಪತಿ ರೈಲಿನ ಮುಂದೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.