ಕೊರೋನಕ್ಕಿಂತ ಭೀಕರ ‘ಕೋಲೆ ಬಸವನ ಆಡಿಸುವ ಜನರ ಹೊಟ್ಟೆ ಹಸಿವು’!

Update: 2021-05-05 06:07 GMT

ಬೆಂಗಳೂರು: ರಾಜ್ಯದಲ್ಲಿ ಕೊರೋನ ಸೋಂಕಿತರು ಆಸ್ಪತ್ರೆ, ಹಾಸಿಗೆ ವ್ಯವಸ್ಥೆ ಹಾಗೂ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪುತ್ತಿದ್ದರೆ, ಸೋಂಕು ತಡೆಗಟ್ಟಲು ರಾಜ್ಯ ಸರಕಾರ ಹೇರಿರುವ ‘ಅವೈಜ್ಞಾನಿಕ’ ಕೊರೋನ ಕರ್ಫ್ಯೂವಿನಿಂದಾಗಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ನೂರಾರು ಕುಟುಂಬಗಳ ಜನರು ಅನ್ನವಿಲ್ಲದೆ ದಿನಗಳನ್ನು ದೂಡು ತ್ತಿರುವುದು ನಿಜಕ್ಕೂ ದಾರುಣವೇ ಸರಿ.

‘ಕೋಲೆ ಬಸವ’ವನ್ನು ಹಿಡಿದು ಕೊಂಡು ಊರಿಂದ ಊರಿಗೆ ಅಲೆದು ಭಿಕ್ಷೆ ಬೇಡಿ ಅಂದಿನ ಅನ್ನವನ್ನು ಅಂದೇ ಸಂಪಾದಿಸಿ ಊಟಮಾಡುತ್ತಿದ್ದ ಅಲೆಮಾರಿ ಕೋಲೆ ಬಸವನ ಆಡಿಸುವ ಸಮುದಾಯದ ಜನರು ಹೊಟ್ಟೆಗೆ ಊಟವಿಲ್ಲದೆ ಬರೀ ನೀರು ಕುಡಿದು ಬದುಕು ದೂಡುವಂತಹ ದುಸ್ಥಿತಿ. ಈ ಸಮುದಾಯದ ವೃದ್ಧರು, ಮಹಿಳೆಯರು, ಮಕ್ಕಳ ಒಂದು ಹೊತ್ತಿನ ಅನ್ನಕ್ಕಾಗಿ ಇನ್ನಿಲ್ಲದ ಪಾಡುಪಡಬೇಕಾಗಿ ಬಂದಿರುವುದು ಕೊರೋನ ವೈರಸ್ ಸೋಂಕಿಗಿಂತಲೂ ಭೀಕರ.

ಉದ್ಯಾನಗರಿ ಬೆಂಗಳೂರಿನ ಯಲಹಂಕ ಸಮೀಪದ ಟಾಟಾನಗರ, ಕೆ.ಆರ್.ಪುರದ ಅಯ್ಯಪ್ಪನಗರ, ಲಗ್ಗೆರೆ, ಬಾಬುಸಾಬ್ ಪಾಳ್ಯ, ಹೊಸೂರು ರಸ್ತೆ, ಕೊತ್ತನೂರು ಸೇರಿದಂತೆ ನಗರದ 15ರಿಂದ 20 ಕಡೆಗಳಲ್ಲಿ 40ರಿಂದ 50 ಕುಟುಂಬಗಳ ಸುಮಾರು ನಾಲ್ಕೈದು ಸಾವಿರಕ್ಕೂ ಅಧಿಕ ಮಂದಿ ಕೋಲೆ ಬಸವನ ಸಮುದಾಯದ ಜನರು ಕರ್ಫ್ಯೂ ಹೇರಿರುವ ಹಿನ್ನೆಲೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಸಂಕಷ್ಟ ಅನುಭವಿಸುತ್ತಿದ್ದಾರೆ.

ಕೋಲೆ ಬಸವನ ಸಮುದಾಯದ ಮುಖ್ಯ ಕೆಲಸವೇ ಬಸವನನ್ನು ಸಿಂಗಾರ ಮಾಡಿ ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಅವರು ಕೊಟ್ಟ ಅನ್ನ, ಅಕ್ಕಿ, ಹಣದಿಂದ ಬದುಕು ಸಾಗಿಸುತ್ತಿದ್ದರು. ಇದೀಗ ಕೊರೋನ ಸೋಂಕಿನ ಕಾರಣಕ್ಕೆ ಜನರು ಯಾರೂ ಇವರ ಸಮೀಪಕ್ಕೂ ಸುಳಿಯುವುದಿಲ್ಲ. ಇನ್ನು ಮನೆಗಳ ಬಳಿ ಭಿಕ್ಷೆಗೆ ಹೋದರೆ ಜನ ಹಾವು ತುಳಿದವರಂತೆ ಮಾರು ದೂರ ಸರಿಯುತ್ತಾರೆ. ‘ಏಯ್ ಆಯೋಗ್ಯ ನನ್ಮಗನೇ ಹೋಗು ದೂರ, ಊರೂರು ಸುತ್ತಿ ಇಲ್ಲಿಗೂ ಬಂದು ನಮಗೂ ಏಕೆ ಕೊರೋನ ತರ್ತೀಯಾ..’ ಎಂದು ಹಿಡಿ ಶಾಪಹಾಕುತ್ತಿದ್ದಾರೆ.

ಯಲಹಂಕ ಟಾಟಾನಗರ ಬಳಿ ವಾಸ ಮಾಡುತ್ತಿರುವ ಕೋಲೆ ಬಸವನ ಸಮುದಾಯದ ಬಾಬು ಅವರನ್ನು ‘ವಾರ್ತಾಭಾರತಿ’ ಪತ್ರಿಕೆ ಮಾತನಾಡಿಸಿದರೆ, ‘ಸಾರ್ ನಮ್ಮ ಕಷ್ಟ ಏನೂ ಅಂತ ಹೇಳಲಿ. ನಿಮ್ಮ ದಮ್ಮಯ್ಯ ಅನ್ತೀವಿ.. ಒಂದು ಹೊತ್ತಿನ ಊಟ ಕೊಡಿಸಿ, ನಿಮಗೆ ಪುಣ್ಯ ಬರುತ್ತದೆ’ ಎಂದು ಅಂಗಲಾಚುತ್ತಾರೆ. ‘ಸರಕಾರ ಕರ್ಫ್ಯೂ ಹಾಕಿದ ಮೇಲೆ ನಮಗೆ ನಮ್ಮ ಮಕ್ಕಳಿಗೆ ದಿನಕ್ಕೆ ಒಂದು ಹೊತ್ತಿನ ಊಟವೂ ಕಷ್ಟ. ಅಲ್ಲದೆ ನಮ್ಮ ಜೊತೆಗಿರುವ ದನ(ಬಸವ)ಕ್ಕೂ ಹುಲ್ಲು ಸಿಗದ ಸ್ಥಿತಿ ಬಂದಿದೆ’.

‘ದನಗಳಿಗೇನೂ ಅಲ್ಲಿ-ಇಲ್ಲಿ ಹೋಗಿ ಮೇವು ತರ್ತೀವಿ. ಆದರೆ, ನಮಗೂ ನಮ್ಮ ಮಕ್ಕಳಿಗೂ ಊಟ ಎಲ್ಲಿಂದ ತರುವುದು. ನಾವು ಭಿಕ್ಷೆ ಬೇಡಿದರೆ ಜೀವನ. ಹಬ್ಬ, ಮದುವೆ, ಮುಂಜಿ ಇದ್ದರೆ ಪುಣ್ಯಾತ್ಮರು ದಾನ, ಧರ್ಮ ಮಾಡ್ತಾರೆ. ಎರಡು ಹೊತ್ತಿಗೆ ಒಂದೊತ್ತು ಆದರೂ ತಿನ್ನುತ್ತಿದ್ದೆವು. ಆದರೆ, ಇದೀಗ ಒಂದು ಹೊತ್ತಿನ ಊಟವೂ ಇಲ್ಲದೆ ಬರೀ ನೀರು ಕುಡಿದುಕೊಂಡು ಇರಬೇಕಾಗಿದೆ’ ಎಂದು ಗೋಗರೆಯುತ್ತಾರೆ.

ರಾಜ್ಯ ಸರಕಾರ ದನಗಳ ಸಂರಕ್ಷಣೆಗೆ ಕಾನೂನು ತಂದಿದೆ. ಆದರೆ, ನಿತ್ಯ ಗೋವು ನೋಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯನ್ನು ಉಳಿಸುವ ಕೋಲೆ ಬಸವನ ಆಡಿಸುವವರು ಇಂದು ಅನ್ನವಿಲ್ಲದೆ ಪರದಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಕೋಲೆ ಬಸವನ ಸಮುದಾಯದ ನಾಲ್ಕೈದು ಸಾವಿರ ಜನ ಸಂಕಷ್ಟದಲ್ಲಿದ್ದಾರೆ. ಸರಕಾರಕ್ಕೆ ಕನಿಷ್ಠ ಮಾನವೀಯತೆ ಇದ್ದರೆ ಕೂಡಲೇ ಕೋಲೆ ಬಸವನ ಸಮುದಾಯ ಜನರಿಗೆ ಅಗತ್ಯ ಆಹಾರ ಮತ್ತು ಪಡಿತರ ವ್ಯವಸ್ಥೆ ಒದಗಿಸಬೇಕು.

-ವಿ.ಮೂರ್ತಿ, ಕೋಲೆ ಬಸವನ ಸಮುದಾಯ ಪರ ಹೋರಾಟಗಾರ(ವಿಸಿಕೆ)

ಕೊರೋನ ಸೋಂಕಿನಿಂದಾಗಿ ತಮ್ಮಲ್ಲಿರುವ ಕಲೆಗಳನ್ನು ಪ್ರದರ್ಶನ ಮಾಡಿ ಜೀವನ ನಡೆಸುತ್ತಿದ್ದ ಅಲೆಮಾರಿ, ಅರೆ ಅಲೆಮಾರಿ ತಳ ಸಮುದಾಯದ ಜನರ ಪಾಡು ಹೇಳತೀರದು. ಮನೆ-ಮಠ ಇರುವವರು ಕರ್ಫ್ಯೂ ಮಾಡಿದರೆ ಮನೆಗಳಲ್ಲಿ ಇರುತ್ತಾರೆ. ಆದರೆ, ಈ ಅಲೆಮಾರಿಗಳಿಗೆ ಮನೆಯೇ ಇಲ್ಲ, ಅವರು ಎಲ್ಲಿರಬೇಕು. ಭಿಕ್ಷೆ ಬೇಡಿಯೇ ಜೀವ ಮಾಡುವವರಿಗೆ ಹೊತ್ತಿನ ಊಟವೂ ಇಲ್ಲ. ಸರಕಾರ ಕೂಡಲೇ ಅಲೆಮಾರಿ ಕುಟುಂಬಗಳಿಗೆ ತಲಾ 5 ಸಾವಿರ ರೂ.ನೆರವು, ಪಡಿತರ, ವೈದ್ಯಕೀಯ ಕಿಟ್‌ಗಳನ್ನು ಒದಗಿಸಲು ಕ್ರಮ ವಹಿಸಬೇಕು.

-ಡಾ.ಆರ್.ವಿ.ಚಂದ್ರಶೇಖರ್, ಸಹ ಪ್ರಾಧ್ಯಾಪಕ,

ತಳ ಸಮುದಾಯಗಳ ಅಧ್ಯಯನ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆ ಬೆಂಗಳೂರು

Writer - ಪ್ರಕಾಶ್ ರಾಮಜೋಗಿಹಳ್ಳಿ

contributor

Editor - ಪ್ರಕಾಶ್ ರಾಮಜೋಗಿಹಳ್ಳಿ

contributor

Similar News