ಪಾಕಿಸ್ತಾನದಿಂದ ಆಕ್ಸಿಜನ್ ಆಮದುಗೊಳಿಸಲು ಪಂಜಾಬ್ ಖಾಸಗಿ ಸಂಸ್ಥೆಗಳಿಗೆ ಕೇಂದ್ರದ ಅನುಮತಿ ನಿರಾಕರಣೆ: ಅಮರಿಂದರ್ ಸಿಂಗ್

Update: 2021-05-06 08:06 GMT

ಹೊಸದಿಲ್ಲಿ : ಕೋವಿಡ್ ರೋಗಿಗಳಿಗೆ ಎದುರಾಗಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು  ಪಾಕಿಸ್ತಾನದಿಂದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಆಮದುಗೊಳಿಸಲು ಪಂಜಾಬ್ ರಾಜ್ಯದ ಕೆಲ ಖಾಸಗಿ ಸಂಸ್ಥೆಗಳು ಸಲ್ಲಿಸಿರುವ ಮನವಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.

ರಾಜ್ಯಕ್ಕೆ ತಕ್ಷಣ 50 ಮೆಟ್ರಿಕ್ ಟನ್ ಆಕ್ಸಿಜನ್ ಹಾಗೂ 20 ಹೆಚ್ಚುವರಿ ಟ್ಯಾಂಕರ್ ಒದಗಿಸುವಂತೆ ಅಮರಿಂದರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಕುರಿತು ಮಾಹಿತಿ ನೀಡಲು ಪಂಜಾಬ್ ರಾಜ್ಯ ಸರಕಾರ ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಮೇಲಿನ ವಿಷಯವನ್ನೂ ಉಲ್ಲೇಖಿಸಲಾಗಿದೆ.

ತಮ್ಮ ರಾಜ್ಯದಲ್ಲಿ ಸದ್ಯ 10,000ಕ್ಕೂ ಅಧಿಕ ರೋಗಿಗಳಿಗೆ ಆಕ್ಸಿಜನ್ ಅಗತ್ಯವಿರುವುದರಿಂದ ರಾಜ್ಯಕ್ಕೆ ತುರ್ತಾಗಿ ಆಕ್ಸಿಜನ್ ಪೂರೈಕೆ ಅಗತ್ಯವಾಗಿದೆ ಎಂದು ತಮ್ಮ ಪತ್ರದಲ್ಲಿ ಸಿಂಗ್ ವಿವರಿಸಿದ್ದಾರೆ.

ವಾಘಾ-ಅತ್ತರಿ ಗಡಿ ಪಂಜಾಬ್ ರಾಜ್ಯಕ್ಕೆ ಹತ್ತಿರದಲ್ಲಿರುವುದರಿಂದ ರಾಜ್ಯದ ಖಾಸಗಿ ಸಂಸ್ಥೆಗಳು  ಪಾಕಿಸ್ತಾನದಿಂದ ಆಕ್ಸಿಜನ್ ಆಮದುಗೊಳಿಸಲು  ಅನುಮತಿ ಕೋರಿದ್ದವು,  ಆದರೆ ಕೇಂದ್ರ ನಿರಾಕರಿಸಿದೆ ಎಂದು ತಿಳಿಸಿದ ಅವರು  ಪರ್ಯಾಯ ಮೂಲಗಳಿಂದ ಅಗತ್ಯ ಆಕ್ಸಿಜನ್ ಸರಬರಾಜು ಮಾಡಲಾಗುವುದು ಎಂದು ನಮಗೆ ಭರವಸೆಯನ್ನು ನೀಡಲಾಗಿದ್ದರೂ ಇಲ್ಲಿಯ ತನಕ ಅದು ಈಡೇರಿಲ್ಲ ಎಂದು  ತಿಳಿಸಿದ್ದಾರೆ.

ಪಾಕಿಸ್ತಾನದಿಂದ ಲಿಕ್ವಿಡ್ ಆಕ್ಸಿಜನ್ ಆಮದಿಗೆ ಕೇಂದ್ರ ಸರಕಾರದ ನಿರಾಕರಣೆ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ. ಪಾಕಿಸ್ತಾನದಿಂದ ಪಂಜಾಬ್ ರಾಜ್ಯಕ್ಕೆ ಆಕ್ಸಿಜನ್ ಕಾರಿಡಾರ್ ಸ್ಥಾಪಿಸುವಂತೆ ಪಂಜಾಬ್ ನಾಯಕರು ಕೋವಿಡ್ ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ಆಗ್ರಹಿಸುತ್ತಲೇ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News