ಖತರ್: ಹಣ ಅವ್ಯವಹಾರ ಆರೋಪದಲ್ಲಿ ಹಣಕಾಸು ಸಚಿವ ಬಂಧನ
Update: 2021-05-07 17:18 GMT
ದೋಹಾ (ಖತರ್), ಮೇ 7: ಅಧಿಕಾರ ದುರುಪಯೋಗ ಮತ್ತು ಸಾರ್ವಜನಿಕ ಹಣ ಅವ್ಯವಹಾರಗಳ ಆರೋಪದಲ್ಲಿ ಖತರ್ ಹಣಕಾಸು ಸಚಿವ ಅಲಿ ಶರೀಫ್ಅಲ್-ಇಮಾದಿಯನ್ನು ಬಂಧಿಸಲಾಗಿದೆಎಂದು ಸರಕಾರಕ ಮಾಧ್ಯಮ ವರದಿ ಮಾಡಿದೆ.
ಇಮಾದಿಯನ್ನು ಅವರ ಹುದ್ದೆಯಿಂದ ತೆರವುಗೊಳಿಸುವ ಆದೇಶವನ್ನು ದೇಶದ ದೊರೆ ಅಮೀರ್ ಶೇಖ್ತಮೀಮ್ ಬಿನ್ ಹಾಮದ್ ಅಲ್-ತಾನಿ ಹೊರಡಿಸಿದ್ದಾರೆ ಎಂದು ದೇಶದ ಅಧಿಕೃತ ಸುದ್ದಿಸಂಸ್ಥೆ ಖತರ್ ನ್ಯೂಸ್ ಏಜನ್ಸಿ ಗುರುವಾರ ವರದಿ ಮಾಡಿದೆ.
ಅದೇ ವೇಳೆ, ಹಣಕಾಸು ಸಚಿವಾಲಯದ ಹೊಣೆಯನ್ನು ವ್ಯಾಪಾರ ಮತ್ತು ಕೈಗಾರಿಕಾ ಸಚಿವ ಅಲಿ ಬಿನ್ ಅಹ್ಮದ್ಅಲ್-ಕುವರಿಗೆ ದೊರೆ ವಹಿಸಿದ್ದಾರೆ. ಅಮೀರ್ ಶೇಖ್ ತಮೀಮ್ ಆಡಳಿತದಲ್ಲಿ ಭ್ರಷ್ಟಾಚಾರದ ಆರೋಪವನ್ನು ಎದುರಿಸಿದ ಮೊದಲ ಅತ್ಯುನ್ನತ ಮಟ್ಟದ ರಾಜಕಾರಣಿ ಇಮಾದಿ ಆಗಿದ್ದಾರೆ.
ಇಮಾದಿ 2013ರಿಂದ ಖತರ್ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಆಡಳಿತಾರೂಢ ರಾಜ ವಂಶಸ್ಥರಲ್ಲದಿದ್ದರೂ, ಶ್ರೀಮಂತ ಹಾಗೂ ಪ್ರಭಾವಿ ಕುಟುಂಬದಿಂದ ಬಂದವರಾಗಿದ್ದಾರೆ.