ನಮ್ಮೊಳಗಿನ ರೂಪಕ ಲೇಖಕ-ಯೋಗಪ್ಪನವರ್

Update: 2021-05-08 06:31 GMT

ಕುತೂಹಲಕರ ಸಂಗತಿ ಎಂದರೆ, ಲಂಕೇಶರಲ್ಲಿ ಬೋದಿಲೇರ್, ಕಾಫ್ಕಾ, ಕಾಮು, ಸೇಡ್, ದಾಸ್ತೋವಸ್ಕಿಯವರಲ್ಲಿದ್ದ ವಿಕ್ಷಿಪ್ತ ಗುಣವಿತ್ತು. ಸಿಟ್ಟು ಸೆಡವಿತ್ತು. ಚಡಪಡಿಕೆಯಿತ್ತು. ಅಸಹನೆ ಅಪಾರವಾಗಿತ್ತು. ಹಾಗೆಯೇ ಬದುಕಿನ ಸಂಕೀರ್ಣ ಪದರುಗಳನ್ನು ಪದಗಳನ್ನಾಗಿಸುವ ಕಲೆ ಗೊತ್ತಿತ್ತು. ಕತ್ತಲೆ-ಬೆಳಕನ್ನು ಹೊಸ ನೋಟದಿಂದ ಅನಾವರಣಗೊಳಿಸುವ ಅರಿವಿತ್ತು. ಅವರ ಬರಹ-ನಿಲುವು-ಚಿಂತನೆ ಜನಮೆಚ್ಚುಗೆಯನ್ನು ಗಳಿಸಿತ್ತು. ಆದರೆ ಯೋಗಪ್ಪನವರ್, ಈ ಎಲ್ಲ ಗುಣ-ಸ್ವಭಾವಗಳಿಂದ ಹೊರತಾಗಿದ್ದರು. ನಡೆ-ನುಡಿಯಲ್ಲಿ ಹಳ್ಳಿಯ ಅಮಾಯಕನಂತಿ ದ್ದರು. ವಾಸ್ತವದಲ್ಲಿ ವ್ಯವಸ್ಥೆಗೆ ಒಗ್ಗುವ ಸರಕಾರಿ ಅಧಿಕಾರಿಯಾಗಿ ದ್ದರು. ಆದರೆ ಇಬ್ಬರಲ್ಲೂ ಒಂದು ಸಮಾನವಾದ ಅಂಶವಿತ್ತು- ಹಳ್ಳಿ, ಹಸಿವು, ಅವಮಾನಗಳನ್ನು ಅನುಭವಿಸಿದ್ದರು. ಅದನ್ನು ದ್ರವ್ಯವಾಗಿ ಬರವಣಿಗೆಯಲ್ಲಿ ಬಳಸುವಲ್ಲಿ ಗೆದ್ದಿದ್ದರು. ಅದನ್ನೇ ಬಳಸಿ, ಲಂಕೇಶರಿಗಿಂತ ಭಿನ್ನವಾಗಿಯೇ ರೂಪಕ ಲೇಖಕರನ್ನು ಕಟ್ಟಿ ಕೊಟ್ಟಿದ್ದರು.

‘‘ಬದುಕಿನ ಕೊಡಲಿಗೆ ಕುತ್ತಿಗೆ ಕೊಟ್ಟು ತಮ್ಮ ನೋವನ್ನು ಬಸಿದು ಬರವಣಿಗೆಗೆ ಇಳಿಸಿದ ಈ ಲೇಖಕರ ಸರಣಿ, ಸಾಹಿತ್ಯವನ್ನು ಇಷ್ಟಪಡುವವರಿಗೆ, ಸತ್ಯವನ್ನು ಮುಟ್ಟಲು ಬಯಸುವವರಿಗೆ ಇಷ್ಟವಾಗುತ್ತದೆ’’ ಎಂದು ಪಿ.ಲಂಕೇಶರು, ಪತ್ರಿಕೆಯಲ್ಲಿ, ಸೆಷ್ಟಂಬರ್ 1998ರಲ್ಲಿ ‘ರೂಪಕ ಲೇಖಕರು’ ಎಂಬ ಹೊಸ ಅಂಕಣ ಆರಂಭಿಸುವಾಗ ಬರೆದಿದ್ದರು.

ಇದು, ಪತ್ರಿಕೆಯ ಓದುಗರನ್ನು ಹೊಸ ಅಂಕಣದತ್ತ ಸೆಳೆಯಲು ಬೇಕಾದ ಬರಹದಂತೆ ಕಂಡರೂ; ಅವರ ಆಪ್ತವಲಯದಲ್ಲಿದ್ದ ಯೋಗಪ್ಪನವರ್‌ರಂತಹ ಶುದ್ಧ ಸಾಹಿತ್ಯಜೀವಿಗಳನ್ನು ಬರವಣಿಗೆಯ ಹೊಸಖುಷಿಗೆ ಒಗ್ಗಿಸಲು, ಪ್ರೇರೇಪಿಸಲು ಬಳಸುವ ಅಸ್ತ್ರದಂತೆಯೂ ಕಾಣುತ್ತಿತ್ತು. ಅವರು ಅಂದುಕೊಂಡಂತೆಯೇ ಆಗುತ್ತಿತ್ತು. ಎಸ್.ಎಫ್. ಯೋಗಪ್ಪನವರ್ ಇಂಗ್ಲಿಷ್ ಎಂ.ಎ. ಮಾಡಿದ್ದರು. ಪಾಶ್ಚಾತ್ಯ ಲೇಖಕರನ್ನು ಮತ್ತವರ ಕೃತಿಗಳನ್ನು ಕರುಳಿಗಿಳಿಸಿಕೊಂಡಿದ್ದರು. ಆ ಬರಹಗಳ ಇತಿ-ಮಿತಿಗಳನ್ನು ಬಗೆದು ತೋರಬಲ್ಲವರಾಗಿದ್ದರು. ಚರ್ಚೆಗಿಳಿದರೆ ತರ್ಕಬದ್ಧವಾಗಿ ಬಿಡಿಸಿಡಬಲ್ಲಷ್ಟು ಸಮರ್ಥರಿದ್ದರು. ಅದರಲ್ಲೂ, ಅಂತಹ ವಿಷಯಗಳನ್ನು ಲಂಕೇಶರಂತಹ ದೈತ್ಯ ಪ್ರತಿಭೆಯೊಂದಿಗೆ ಚರ್ಚಿಸುವ ಅವಕಾಶ ಸಿಕ್ಕಾಗ ವಿಧೇಯ ವಿದ್ಯಾರ್ಥಿ ಯಾಗುತ್ತಿದ್ದರು. ಮನ ತಣಿಯುವಷ್ಟು ತುಂಬಿಕೊಂಡು ತಣ್ಣಗೆ ತೆರಳುತ್ತಿದ್ದರು. ಅವರ ಆ ಮುಗ್ಧತೆ, ಸರಳತೆ ಮತ್ತು ಮಥಿಸಿದ್ದನ್ನು ಮಂಡಿಸುವ ರೀತಿ ಲಂಕೇಶರಿಗೆ ಇಷ್ಟವಾಗಿತ್ತು. ‘ದುಷ್ಟಕೂಟ’ದ ಸದಸ್ಯರಲ್ಲಿ ಒಬ್ಬರನ್ನಾಗಿಸಿತ್ತು. ‘ರೂಪಕ ಲೇಖಕರು’ ಅಂಕಣದ ಮೊದಲ ಮೂರ್ನಾಲ್ಕು ಕಂತು ಬರೆದ ಲಂಕೇಶರು, ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದರು. ನನ್ನನ್ನು ಕರೆದು ‘‘ಮುಂದಿನವಾರದಿಂದ ಯೋಗಪ್ಪನವರ್ ಬರೆಯುತ್ತಾರೆ, ಮಾತಾಡು’’ ಎಂದರು. ಈ ಮುಂಚೆ, 1993ರಲ್ಲಿಯೂ ಹೀಗೆಯೇ ‘ಚಂಚಲೆ’ ಅಂಕಣ ಆರಂಭಿಸಿ, ಅದನ್ನು ಎನ್.ಎಸ್.ಶಂಕರ್ ಮುಂದುವರಿಸುವಂತೆ ಮಾದರಿ ರಚಿಸಿಕೊಟ್ಟಿದ್ದರು. ಆ ಅಡಿಪಾಯದ ಮೇಲೆ ಶಂಕರ್, ಚಂಚಲೆಯರೊಂದಿಗಿನ ಸಂಸಾರವನ್ನು ಸೊಗಸಾಗಿಯೇ ಸಂಭಾಳಿಸಿದ್ದರು. ಅದನ್ನೇ ಮತ್ತೆ ಮೇಸ್ಟ್ರು ಇಲ್ಲೂ ಜಾರಿಗೆ ತಂದಿದ್ದರು. ಯೋಗಪ್ಪನವರ್ ಆ ಹೊಸ ಅಂಕಣಕ್ಕೆ ಹೊಸ ನೀರು ಹರಿಸಿ, ಬೆರಗಿನ ಬೆಳೆ ತೆಗೆಯುತ್ತಾರೆಂಬ ವಿಶ್ವಾಸ ಲಂಕೇಶರಿಗಿತ್ತು. ಅದಾಗಲೇ ಹೊರಬಂದಿದ್ದ ಒಂದು ಕಥಾಸಂಕಲನ ಮತ್ತು ಕಾದಂಬರಿ ಸಾಬೀತುಪಡಿಸಿತ್ತು. ಜೊತೆಗೆ ಅವರೊಂದಿಗಿನ ಮಾತುಕತೆ ಅದನ್ನು ಗಟ್ಟಿಗೊಳಿಸಿತ್ತು. ಅದಕ್ಕೂ ಮುಂಚೆ, 1997ರ ಸೆಪ್ಟಂಬರ್‌ನಲ್ಲಿ ಬಿಡುಗಡೆಯಾದ ‘ಟೈಟಾನಿಕ್’ ಎಂಬ ಹಾಲಿವುಡ್ ಚಿತ್ರದ ಬಗೆಗಿನ ಯೋಗಪ್ಪನವರ್ ಬರವಣಿಗೆ, ಅವರೇ ಬೇರೆ ಎನ್ನುವುದನ್ನು ನಾಡಿಗೆ ಪರಿಚಯಿಸಿತ್ತು. ಲಂಕೇಶರಂತೆಯೇ ತುಂಡು ತುಂಡು ವಾಕ್ಯ ರಚಿಸಿ, ಹಲವು ಅರ್ಥ ಹೊಮ್ಮಿಸಿ, ಓದುಗರನ್ನು ಹೊಸಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಯಶಸ್ವಿಯಾಗಿದ್ದರು. ಆದರೂ ಲಂಕೇಶರ ನಿಖರತೆ, ಸಾಂದ್ರತೆ, ಸಂಕ್ಷಿಪ್ತತೆ ಸಾಧ್ಯವೇ ಎಂಬ ಆತಂಕದಲ್ಲಿದ್ದರು. ಜೊತೆಗೆ ‘ರೂಪಕ ಲೇಖಕರು’ ಅಂಕಣವನ್ನು ಯೋಗಪ್ಪನವರ್ ಮುಂದುವರಿಸುತ್ತಾರೆಂದಾಗ, ಹಲವರು ಹುಬ್ಬೇರಿಸಿದ್ದರು.

ಕುತೂಹಲಕರ ಸಂಗತಿ ಎಂದರೆ, ಲಂಕೇಶರಲ್ಲಿ ಬೋದಿಲೇರ್, ಕಾಫ್ಕಾ, ಕಾಮು, ಸೇಡ್, ದಾಸ್ತೋವಸ್ಕಿಯವರಲ್ಲಿದ್ದ ವಿಕ್ಷಿಪ್ತ ಗುಣವಿತ್ತು. ಸಿಟ್ಟು ಸೆಡವಿತ್ತು. ಚಡಪಡಿಕೆಯಿತ್ತು. ಅಸಹನೆ ಅಪಾರವಾಗಿತ್ತು. ಹಾಗೆಯೇ ಬದುಕಿನ ಸಂಕೀರ್ಣ ಪದರುಗಳನ್ನು ಪದಗಳನ್ನಾಗಿಸುವ ಕಲೆ ಗೊತ್ತಿತ್ತು. ಕತ್ತಲೆ-ಬೆಳಕನ್ನು ಹೊಸ ನೋಟದಿಂದ ಅನಾವರಣಗೊಳಿಸುವ ಅರಿವಿತ್ತು. ಅವರ ಬರಹ-ನಿಲುವು-ಚಿಂತನೆ ಜನಮೆಚ್ಚುಗೆಯನ್ನು ಗಳಿಸಿತ್ತು. ಆದರೆ ಯೋಗಪ್ಪನವರ್, ಈ ಎಲ್ಲ ಗುಣ-ಸ್ವಭಾವಗಳಿಂದ ಹೊರತಾಗಿದ್ದರು. ನಡೆ-ನುಡಿಯಲ್ಲಿ ಹಳ್ಳಿಯ ಅಮಾಯಕನಂತಿ ದ್ದರು. ವಾಸ್ತವದಲ್ಲಿ ವ್ಯವಸ್ಥೆಗೆ ಒಗ್ಗುವ ಸರಕಾರಿ ಅಧಿಕಾರಿಯಾಗಿ ದ್ದರು. ಆದರೆ ಇಬ್ಬರಲ್ಲೂ ಒಂದು ಸಮಾನವಾದ ಅಂಶವಿತ್ತು- ಹಳ್ಳಿ, ಹಸಿವು, ಅವಮಾನಗಳನ್ನು ಅನುಭವಿಸಿದ್ದರು. ಅದನ್ನು ದ್ರವ್ಯವಾಗಿ ಬರವಣಿಗೆಯಲ್ಲಿ ಬಳಸುವಲ್ಲಿ ಗೆದ್ದಿದ್ದರು. ಅದನ್ನೇ ಬಳಸಿ, ಲಂಕೇಶರಿಗಿಂತ ಭಿನ್ನವಾಗಿಯೇ ರೂಪಕ ಲೇಖಕರನ್ನು ಕಟ್ಟಿ ಕೊಟ್ಟಿದ್ದರು. ಹಾಗೆಯೇ ‘ರೂಪಕ ಲೇಖಕರು’ ಸರಣಿ ಬರೆಯುವಾಗ ಯೋಗಪ್ಪನವರ್ ಪ್ರತಿವಾರ, ಅದಕ್ಕಾಗಿ ಹಾಕುತ್ತಿದ್ದ ಶ್ರಮ, ನಡೆಸುತ್ತಿದ್ದ ತಯಾರಿ, ಬರಹಕ್ಕಿಳಿಸುವ ಬಗೆ ಕುತೂಹಲ ಕೆರಳಿಸುತ್ತಿತ್ತು. ಬ್ರಿಗೇಡ್ ರೋಡಿನ ಮೂಲೆಯಲ್ಲಿದ್ದ ಮೂರ್ತಿಯ ಸೆಲೆಕ್ಟ್ ಬುಕ್‌ಶಾಪ್‌ಗೆ ಹೋಗಿ ದಿನಗಟ್ಟಲೆ ಹಳೆ ಪುಸ್ತಕಗಳ ರಾಶಿಯಲ್ಲಿ ಕಳೆದುಹೋಗುತ್ತಿದ್ದರು. ಅಪರೂಪದ ಮಾಹಿತಿಗಳನ್ನು ಹೆಕ್ಕಿ ತೆಗೆಯುತ್ತಿದ್ದರು. ಲೇಖನದ ಜೊತೆಗೆ ರೂಪಕ ಲೇಖಕರ ಚಿತ್ರ, ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಆಗ ಅದು ಪತ್ರಿಕೆಯ 2ನೇ ಪುಟದಲ್ಲಿ ಪ್ರಕಟವಾಗುತ್ತಿತ್ತು. ಕೆಲವು ಸಲ ಗ್ಲೇಜ್ಡ್ ಪೇಪರ್ ಬಳಸುತ್ತಿದ್ದೆವು. ಕಲಾವಿದ ಹಾದಿಮನಿ ಆ ಪುಟವನ್ನು ತನ್ನದೇ ಕತೆ ಎಂಬಂತೆ ತಲ್ಲೀನತೆಯಿಂದ ರೂಪಿಸುತ್ತಿದ್ದರು. ಒಮ್ಮೆ ಮಾರ್ಕ್ವಿಸ್ ದೇ ಸೇಡ್ ಬಗ್ಗೆ ಬರೆಯುವಾಗ, ಕವರ್ ಪೇಜ್ ಹರಿದುಹೋಗಿದ್ದ, ‘ ಛಿ ಇಟಞಟ್ಝಛಿಠಿಛಿ ಚ್ಟಟ್ಠಿಜಿ ಛಿ ಖಛಿೞಪುಸ್ತಕ ತಂದು ಕೊಟ್ಟಿದ್ದರು. ಅದರ ಮುಖಪುಟದಲ್ಲಿ ಇಟ್ಟಿಗೆಗಳಿಂದ ಕಟ್ಟಿದ ಸೇಡ್ ತಲೆಯ ಚಿತ್ರವಿತ್ತು. ಉದುರಿಬಿದ್ದ ಇಟ್ಟಿಗೆಯ ಜೊತೆ ಹರಿದ ಹಾಳೆಯೂ ಸೇರಿ ಸೇಡ್‌ನನ್ನು ಭಿನ್ನ ಬಗೆಯಲ್ಲಿ ಬಿಂಬಿಸುತ್ತಿತ್ತು. ಅದನ್ನು ತೆಗೆದುಕೊಂಡು ಹೋಗಿ ಲಂಕೇಶರಿಗೆ ಕೊಟ್ಟರೆ, ಕುಣಿದಾಡುವುದೊಂದೇ ಬಾಕಿ. ಅಕಸ್ಮಾತ್ ಲಂಕೇಶರು ಬದುಕಿದ್ದಾಗಲೇ ‘ರೂಪಕ ಲೇಖಕರು’ ಪುಸ್ತಕ ರೂಪ ತಾಳಿದ್ದರೆ, ಚೆಂದದ ಮುನ್ನುಡಿ ಬರೆದು, ಪುಸ್ತಕದ ಪೂರ್ತಿ ಕ್ರೆಡಿಟ್ಟನ್ನು ಯೋಗಪ್ಪನವರ್ ಖಾತೆಗೆ ಜಮೆ ಮಾಡುತ್ತಿದ್ದರು.

ಲಂಕೇಶರು ತೀರಿಹೋದ ಬಳಿಕ ಪತ್ರಿಕೆಯಲ್ಲಿದ್ದವರೆಲ್ಲ ಒಂದೊಂದು ದಿಕ್ಕಾದರು. ಹೈದರಾಬಾದ್-ಕರ್ನಾಟಕ ಭಾಗದಿಂದ ಪತ್ರಿಕೆಗೆ ವರದಿ ಮಾಡುತ್ತಿದ್ದ ಪತ್ರಕರ್ತ ಜಾತಿಯ ಕಾರಣಕ್ಕೆ ಪತ್ರಿಕೆಯ ಆಯಕಟ್ಟಿನ ಸ್ಥಾನಕ್ಕೇರಿದರು. ಈತನ ಪುಸಲಾವಣೆಗೊಳಗಾದ ಮತ್ತೊಬ್ಬ ಪತ್ರಕರ್ತ, ಮಂತ್ರಿಗಳ ಆಪ್ತ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಯೋಗಪ್ಪನವರ್ ಅವರನ್ನು ಭ್ರಷ್ಟ ಅಧಿಕಾರಿಯನ್ನಾಗಿ ಚಿತ್ರಿಸಿ, ಕಪ್ಪುಬಿಳುಪಿನ ಪತ್ರಿಕೆಯಲ್ಲಿ ಒಂದು ಪುಟದ ಸುದ್ದಿ ಮಾಡಿದರು. ಅಸಲಿಗೆ ಆ ಹೈಕದ ಆಸಾಮಿ ಬೆಂಗಳೂರಿಗೆ ಬಂದು ನೆಲೆಯಾಗುತ್ತೇನೆಂದಾಗ, ಅನ್ನ-ಆಶ್ರಯ ನೀಡಿದ್ದು ಇದೇ ಯೋಗಪ್ಪನವರ್. ಅವರ ಮನೆಯಲ್ಲಿದ್ದುಕೊಂಡೇ ಬಲಿತ ಆತ, ಲಂಕೇಶರ ನಿಧನಾನಂತರ ಯೋಗಪ್ಪನವರ್ ಅವರ ವ್ಯಕ್ತಿತ್ವಹರಣಕ್ಕೆ ಹವಣಿಸಿದ್ದರು.

ಆಶ್ಚರ್ಯಕರ ಸಂಗತಿ ಎಂದರೆ, ಲಂಕೇಶರಿಲ್ಲದ, ಅವರ ಸಾಹಿತ್ಯ ಸಹವಾಸವಿಲ್ಲದ ಆ ದುರ್ದಿನಗಳಲ್ಲಿ ಭ್ರಷ್ಟನೆಂಬ ಹಣೆಪಟ್ಟಿ ಅವರನ್ನು ಅಲುಗಾಡಿಸಲೂ ಸಾಧ್ಯವಾಗಿರಲಿಲ್ಲ. ಕಾರಣ, ರೂಪಕ ಲೇಖಕರಲ್ಲಿ ಅದಕ್ಕಿಂತ ಮೀರಿದ ಮುಖಗಳನ್ನು, ಮುಖವಾಡಗಳನ್ನು, ಅಸಹ್ಯವನ್ನು ಅರಗಿಸಿಕೊಂಡು ಅಕ್ಷರಕ್ಕಿಳಿಸಿ ಹಗುರವಾಗಿದ್ದರು. ಹಾಗಾಗಿ ಅವರ ವ್ಯಕ್ತಿತ್ವಹರಣಕ್ಕೆ ಹವಣಿಸಿದ್ದವರನ್ನು ಹುಳಗಳಿಗೆ ಸಮೀಕರಿಸಿ ಸುಮ್ಮನಾಗಿದ್ದರು. ಆ ಸಂದರ್ಭದಲ್ಲಿ ಸಂಪರ್ಕಿಸಿದರೆ, ನಮ್ಮನ್ನೇ ಸಮಾಧಾನಿಸುತ್ತಿದ್ದರು. ‘‘ಎಲ್ಲಾದ್ರೂ ಸೇರೋಣ್ರಿ’’ ಎನ್ನುತ್ತಿದ್ದರು. ಒಂದೆರಡು ಸಲ, ನಾನು, ನಟರಾಜ್ ಹುಳಿಯಾರ್ ಮತ್ತು ಯೋಗಪ್ಪನವರ್- ಮೂವರು ಕೆಎಸ್‌ಸಿಎ ಕ್ಲಬ್‌ನಲ್ಲಿ ಕೂತು ಕಳೆದ ಕಾಲವನ್ನು ಜಗಿದಾಗ, ‘‘ಈಗ ಒಂಚೂರು ಹಗುರಾತ್ ನೋಡ್ರಿ’’ ಎನ್ನುತ್ತಿದ್ದರು.

ಕೆಎಎಸ್ ಅಧಿಕಾರಿಯಾದ ಯೋಗಪ್ಪನವರ್, ವಿಧಾನಸೌಧ, ಪಕ್ಷರಾಜಕಾರಣ ಹಾಗೂ ಭ್ರಷ್ಟಾಚಾರಗಳ ವಿಷವರ್ತುಲವನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದರು. ಆ ವ್ಯವಸ್ಥೆಗೆ ಒಗ್ಗಿಕೊಂಡಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಪರಿಚಿತರಿಗೆ ಕೈಲಾದ ಸಹಾಯವನ್ನು ಮಾಡಿದ್ದರು. ಅದರ ನಡುವೆಯೂ ಸೂಕ್ಷ್ಮ ಸಂವೇದನಾಶೀಲತೆಯನ್ನು ಕಾಪಿಟ್ಟುಕೊಂಡಿದ್ದರು. ಉತ್ತರ ಕರ್ನಾಟಕದ ಕಡೆಯ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದ, ದಕ್ಷತೆ-ಪ್ರಾಮಾಣಿಕತೆಯಿಂದ ಅವರ ಮನ ಗೆದ್ದಿದ್ದ ಯೋಗಪ್ಪನವರ್, ಬಸವರಾಜ ಪಾಟೀಲ್ ಅನ್ವರಿ, ಸಿ.ಎಂ.ಉದಾಸಿ, ಎ.ಬಿ.ಮಾಲಕರೆಡ್ಡಿಯವರಿಗೆ ಆಪ್ತರಾಗಿದ್ದರು. ಅವರು ಮಂತ್ರಿಗಳಾದಾಗ, ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಶೋಕ್ ಪಟ್ಟಣ್ಣವರ್ ಅವರ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿದ್ದರು. ಇತ್ತೀಚೆಗೆ ಮುರುಗೇಶ್ ನಿರಾಣಿ ಮಂತ್ರಿಯಾದಾಗ, ಅವರೇ ಕರೆದಿದ್ದರೂ, ವಯಸ್ಸು ಮತ್ತು ದೇಹದ ನೆಪವೊಡ್ಡಿ ನೋಡೋಣ ಎಂದಿದ್ದರು. ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡುತ್ತಿದ್ದ, ಕಿರಿಯರನ್ನು ಪ್ರೀತಿಯಿಂದ ಕಾಣುತ್ತಿದ್ದ ಯೋಗಪ್ಪನವರ್, ಪತ್ರಿಕೆಯಲ್ಲಿದ್ದ ಈ.ಚಂದ್ರ ತಾಳೀಕಟ್ಟೆ, ಸತೀಶ್, ಹಾದಿಮನಿಯವರನ್ನು ಇಷ್ಟಪಡುತ್ತಿದ್ದರು. ಲಂಕೇಶರ ನಿಧನಾನಂತರ ಕೆಲಸವಿಲ್ಲದೆ ಕೂತಾಗ, ‘‘ಸಂಕೋಚ ಬ್ಯಾಡ್ರಿ, ನಾನ್ ನಿಮ್ಮ ಬ್ರದರ್ ಅಂತ್ ತಿಳಕೊಳ್ರಿ, ಏನಾದ್ರು ತೊಂದ್ರೆ ಇದ್ರೆ ಕೇಳ್ರಲಾ’’ ಎಂದಿದ್ದರು. ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡುವಾಗ, ‘‘ಆರಾಮಿದಿರಿ, ಹೊಸದಾಗಿ ಏನ್ ಬರದ್ರಿ, ಎಲ್ಲರೂ ಒಂದ್ ಕಡೆ ಸೇರೋಣ್ರಿ’’ ಎನ್ನುತ್ತಿದ್ದರು. ಬೋದಿಲೇರನ ಗದ್ಯ ಕವಿತೆಗಳ ಮಾಯಾಕನ್ನಡಿ ಕೃತಿ ಕುರಿತು ಪುಟ್ಟ ಟಿಪ್ಪಣಿ ಬರೆದಾಗ, ‘‘ಏನಾದ್ರು ದೊಡ್ಡದು ಬರೀರಲಾ’’ ಎಂದಿದ್ದರು. ‘ನಮ್ಮ ಅರಸು’ ಕೃತಿಯನ್ನು ಕಳುಹಿಸಿಕೊಟ್ಟಾಗ, ಅದಕ್ಕೆ ಎಚ್.ಎಸ್.ರಾಘವೇಂದ್ರರಾವ್ ಸುದೀರ್ಘವಾಗಿ ಪ್ರಜಾವಾಣಿಯಲ್ಲಿ ಬರೆದಾಗ, ‘‘ಅವರು ಹಂಗೆ ಸುಮ್‌ಸುಮ್ನೆ ಬರೆಯೋ ಪೈಕಿಯಲ್ರಿ.. ಚಲೋ ಬರ್ದರ್ರಿ..’’ ಎಂದು ಸುಮಾರು ಹೊತ್ತು ಮಾತನಾಡಿದ್ದರು. ಇಷ್ಟೆಲ್ಲದರ ನಡುವೆಯೂ ಅವರಿಷ್ಟದ ಓದುವ ಸುಖದಿಂದ ವಂಚಿತರಾಗಿರಲಿಲ್ಲ. ಹೊಸ ಬರಹಗಾರರಾದ ಕನಕರಾಜ್, ವಿ. ಎಂ. ಮಂಜುನಾಥ್, ಕಾರ್ಪೆಂಟರ್, ವೀರಣ್ಣ ಮಡಿವಾಳರ, ಗೊರವರ್‌ಗಳ ಬರಹಗಳನ್ನು ಆಸಕ್ತಿಯಿಂದ ಓದುತ್ತಿದ್ದರು. ಪ್ರತಿಕ್ರಿಯಿಸುತ್ತಿದ್ದರು. ಹಾಗೆಯೇ ಅವರಿಷ್ಟಪಡುವ ಲೇಖಕರಾದ ಚಾರ್ಲ್ಸ್ ಬೋದಿಲೇರ್‌ನ ಐವತ್ತು ಗದ್ಯ ಕವಿತೆಗಳನ್ನು ‘ಮಾಯಾ ಕನ್ನಡಿ’ ಹಾಗೂ ಜೆ. ಡಿ. ಸಾಲಿಂಜರ್‌ನ ‘ದಿ ಕ್ಯಾಚರ್ ಇನ್ ದಿ ರೈ’ ಕೃತಿಯನ್ನು ‘ಹದಿಹರೆಯದ ಒಬ್ಬಂಟಿ ಪಯಣ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದರು. ‘ಒಂದು ಶಹರದ ಸುತ್ತ’ ಎಂಬ ವಿಭಿನ್ನ ರೀತಿಯ ನಾಟಕವನ್ನು ಬರೆದು, ಅದನ್ನು ಯುವ ತಲೆಮಾರಿನ ವಿ.ಎಂ.ಮಂಜುನಾಥ್ ರಂಗರೂಪಕ್ಕೆ ತಂದಾಗ, ಅದರ ಮಿತಿ-ಸಾಧ್ಯತೆಗಳನ್ನು ಕಂಡು ಚರ್ಚಿಸಿದ್ದರು. ‘ಆರಾಮಕುರ್ಚಿ ಮತ್ತು ಇತರ ಕತೆಗಳು’, ‘ಮ್ಯೂಟೇಷನ್’ ಎಂಬ ಎರಡು ಕಥಾ ಸಂಕಲನಗಳು; ‘ದೇವರ ಹೆಸರಲ್ಲಿ ಪ್ರಮಾಣ ಮಾಡಿ’, ‘ಶೋಧ’ ಎಂಬ ಎರಡು ಕಾದಂಬರಿಗಳನ್ನು ಹೊರತಂದಿದ್ದರು. ಕೊನೆಯ ಕೃತಿ ಎಂಬಂತೆ, ಮತ್ತೆ ಲಂಕೇಶರತ್ತ ನೋಡಿದ್ದರು. ಅವರ ನೀಲುಗಳನ್ನು ಮತ್ತೊಮ್ಮೆ ನಿಕಷಕ್ಕೆ ಒಡ್ಡಿ, ಮತ್ತೊಂದು ಬಗೆಯಲ್ಲಿ- ‘ನೀಲು ಮಾತು ಮೀರಿದ ಮಿಂಚು’ ಬಸಿದಿಟ್ಟಿದ್ದರು. ಬರೆದದ್ದು ಏಳೇ ಕೃತಿಗಳಾದರೂ, ಬಡವರಿಗೆ ಮಕ್ಕಳು ಹೆಚ್ಚು ಎಂದು ಗೇಲಿ ಮಾಡಿಕೊಳ್ಳುತ್ತಿದ್ದರು. ತಮ್ಮ ಕೃತಿಗಳ ಕುರಿತು ಗಂಭೀರ ಚರ್ಚೆಗಳಾಗದ್ದನ್ನು ಕಂಡು ನಕ್ಕು ಸುಮ್ಮನಾಗುತ್ತಿದ್ದರು. ಎಂದಿನಂತೆ ಓದು-ಬರಹ-ಪುಸ್ತಕಗಳ ಪುಟ್ಟಲೋಕದಲ್ಲಿ ಕಳೆದುಹೋಗುತ್ತಿದ್ದರು.

ಹಾಗಂತ ಅದಷ್ಟೇ ಅವರ ಬದುಕಾಗಿರಲಿಲ್ಲ. ಉಂಡುಟ್ಟು, ಓಡಾಡಿ, ಎಲ್ಲರಂತಿದ್ದರು. ಒಬ್ಬ ಉತ್ತಮ ನಾಗರಿಕನಾಗಿ ಮಾಡಬೇಕಾದ ಕರ್ತವ್ಯಗಳನ್ನು ಮಾಡಿ ಮುಗಿಸಿದ್ದರು. ವಯಸ್ಸು 72 ಆಗಿದ್ದರೂ, ಆರೋಗ್ಯವಾಗಿದ್ದರು. ಅದು ಹೇಗೋ ಕೊರೋನ ಸೋಂಕು ತಗಲಿ ನಮ್ಮನ್ನಗಲಿ ಹೋಗಿಯೇಬಿಟ್ಟರು.

ಅವರ ಜೀವನಪ್ರೀತಿ, ಸಾಹಿತ್ಯ ತಿಳಿವಳಿಕೆ, ವೈಚಾರಿಕ ಚಿಂತನೆ, ಸಾಮಾಜಿಕ ಬದ್ಧತೆ, ನಿಷ್ಕಳಂಕ ನಗು, ಅವ್ವನ ಅಂತಃಕರಣ.. ನೆನಪಿನಲ್ಲಿ ಉಳಿಯುವಂತಹದ್ದು. ಹಾಗಾಗಿ ಅವರು ನಮ್ಮಳಗೆ ನೆಲೆ ನಿಂತ ನಾಟಿ ರೂಪಕ ಲೇಖಕರು.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News