ಧರ್ಮ,ಜಾತಿ ಮೀರಿ ನಿರ್ಗತಿಕರ ಹಸಿವು ನೀಗಿಸುತ್ತಿರುವ ಐವರು ಸ್ನೇಹಿತರು
ಮೈಸೂರು: ಕೊರೋನ ಸಂದರ್ಭದಲ್ಲೂ ತಮ್ಮ ಕೆಟ್ಟ ಮನಸ್ಸಿನಿಂದ ಕೋಮು ದಳ್ಳುರಿ ಬಿತ್ತುವ ಕೆಲಸ ಮಾಡುತ್ತಿರುವ ಕೆಲವರು ನಾಚುವಂತೆ ಜಾತಿ, ಧರ್ಮ, ಮತ ಭೆೇದ ಬಿಟ್ಟು ಮಾನವಕುಲ ಒಂದೇ ಎಂದು ಭಾವಿಸಿ ಆಹಾರವಿಲ್ಲದೆ ಬದುಕು ದೂಡುತ್ತಿರುವ ನಿರ್ಗತಿಕರ ಹೊಟ್ಟೆ ತುಂಬಿಸುವ ಕೆಲಸವನ್ನು ಕೆಲವು ಐವರು ಸ್ನೇಹಿತರು ದಿನನಿತ್ಯ ಮಾಡುತ್ತಿರುವುದು ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದೆ.
ದೊಡ್ಡ ಸ್ಥಾನದಲ್ಲಿರುವ ಕೆಲವು ಮಂದಿ ಮಾನವೀಯ ಗುಣಗಳನ್ನೇ ಮರೆತು ಬೆಂದ ಮನೆಯಲ್ಲಿಗಳ ಇರಿಯುವ ಕೆಲಸವನ್ನು ಮಾಡುತ್ತಿದ್ದರೆ, ನಾವೆಲ್ಲರೂ ಒಂದೇ ಎಂದು ಭಾವಿಸುವ ಮಂದಿ ತಾವು ತಿನ್ನುವ ಅನ್ನವನ್ನು ಇತರರಿಗೂ ಹಂಚಿ ತಮ್ಮ ದೊಡ್ಡತನವನ್ನು ಮರೆಯುತ್ತಿದ್ದಾರೆ. ಮೈಸೂರು ನಗರದಲ್ಲಿ ವಾಸ ಮಾಡುತ್ತಿರುವ ನಯಾಜ್, ಅರ್ಷದ್, ವಾಜಿದ್, ಕೌಶಿಫ್ ಮತ್ತು ಸೈಯದ್ ಪಾಷಾ ಎಂಬ ಐವರು ಸ್ನೇಹಿತರು ಈ ಸಂಕಷ್ಟದ ಕಾಲದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರು ಕಳೆದ ಒಂದು ವಾರದಿಂದ ನಿರಾಶ್ರಿತರು ಮತ್ತು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಆಹಾರ ವಿತರಿಸುತ್ತಿದ್ದಾರೆ.
ಕೊರೋನ ಅಟ್ಟಹಾಸದಿಂದ ಜನಜೀವನ ಅತಂತ್ರಗೊಂಡಿದೆ. ಕುಡಿಯಲು ನೀರು ಆಹಾರವಿಲ್ಲದೇ ನಿರ್ಗತಿಕರ ಬದುಕು ಅಯೋಮಯವಾಗಿದೆ. ಯಾವ ಸೌಕರ್ಯವೂ ಇಲ್ಲದೇ ಬೀದಿ ಬದಿಯಲ್ಲಿ ದಿನದೂಡುತ್ತಿರುವ ರಕ್ಷಣೆಗೆ ಧಾವಿಸಬೇಕಾದ ಸರಕಾರ ನಿರ್ಗತಿಕರನ್ನು ಮರೆತಿದೆ. ಆದರೆ ಸಾಂಸ್ಕೃತಿಕ ನಗರಿಯ ಈ ಸ್ನೇಹಿತರು ನಿರ್ಗತಿರಿಕರ ಹಸಿವು ನೀಗಿಸಲು ಪಣತೊಟ್ಟಿದ್ದಾರೆ.
ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಾದ ಬಳಿಕ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಕೆ.ಆರ್.ಆಸ್ಪತ್ರೆ ಮುಂಭಾಗದ ಬಸ್ ನಿಲ್ದಾಣಗಲ್ಲಿ ಸುಮಾರು 500ಕ್ಕೂ ಹೆಚ್ಚು ನಿರ್ಗತಿಕರು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಕೊರೋನ ಸೋಂಕಿನ ಭಯಕ್ಕಿಂತ ಹಸಿವಿನ ಭಯವೇ ಹೆಚ್ಚಿನದು.
ಆದರೆ ಈ ಐವರು ಸ್ನೇಹಿತರು ಯಾವ ಜಾತಿ ಧರ್ಮವನ್ನು ನೋಡದೆ ಲಾಕ್‌ಡೌನ್ ಜಾರಿಯಾದ ಬಳಿಕ ಒಂದು ದಿನವೂ ತಪ್ಪದಂತೆ ನಿರ್ಗತಿಕರಿಗೆ ಆಹಾರ ಪೂರೈಸುತ್ತಿದ್ದಾರೆ. ಬೆಳಗ್ಗೆ ತಿಂಡಿ ಮಧ್ಯಾಹ್ನ, ರಾತ್ರಿ ಊಟ ನೀಡುತ್ತಾ ನಿರಾಶ್ರಿತರ ಹಸಿವು ನೀಗಿಸುವ ಮಾನವೀಯ ಕಾರ್ಯದಲ್ಲಿ ನಿರತರಾಗಿದ್ದಾರೆ.
‘ಬೀದಿಬದಿಯಲ್ಲಿ ಜೀವನ ಕಳೆಯುತ್ತಿರುವ ನಿರಾಶ್ರಿತರ ರಕ್ಷಣೆಗೆ ಮುಂದಾಗಬೇಕು’
ಲಾಕ್‌ಡೌನ್ ವೇಳೆ ಬೀದಿಬದಿಯಲ್ಲಿ ಜೀವನ ಕಳೆಯುತ್ತಿರುವ ನಿರಾಶ್ರಿತರ ರಕ್ಷಣೆಗೆ ಮುಂದಾಗಬೇಕೆಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಮುಖ್ಯಸ್ಥ ನ್ಯಾಯಾಧೀಶ ಅರವಿಂದ್ ಕುಮಾರ್ ಅವರಿಗೆ ವಕೀಲ ಎನ್.ಪುನೀತ್ ಮನವಿ ಮಾಡಿದ್ದಾರೆ.
ಈಗಾಗಲೇ ಇರುವ ನಿರಾಶ್ರಿತರ ಕೇಂದ್ರದ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಆಯಾ ವ್ಯಾಪ್ತಿಯ ಸ್ಥಳಗಳ ಪರಿಶೀಲನೆ ಮಾಡಿ ಎಲ್ಲಿ ನಿರಾಶ್ರಿತರ ಕಂಡು ಬರುತ್ತಾರೋ ಅಂತಹವರನ್ನು ಕೇಂದ್ರಕ್ಕೆ ಸೇರಿಸಿಕೊಳ್ಳುವಂತೆ ಹಾಗೂ ನಿರಾಶ್ರಿತರ ಕೇಂದ್ರದಲ್ಲಿ ಉತ್ತಮ ಸುಸಜ್ಜಿತ ಆರೋಗ್ಯ ಉಡುಪು ಮತ್ತು ಆಹಾರವನ್ನು ಒದಗಿಸುವ ಎಲ್ಲ ಸೌಕರ್ಯವನ್ನು ದೊರಕಿಸುವಂತೆ ಸರಕಾರಕ್ಕೆ ಸೂಕ್ತ ಸೂಚನೆ ನೀಡಬೇಕೆಂದು ಪುನೀತ್ ಮನವಿ ಮಾಡಿದ್ದಾರೆ.