ಅಸ್ಸಾಂ ವಿಧಾನ ಸಭೆಯ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲು ಅಖಿಲ್ ಗೊಗೋಯಿಗೆ ಎನ್ಐಎ ನ್ಯಾಯಾಲಯ ಅನುಮತಿ
ಗುವಾಹಟಿ, ಮೇ 12: ಅಸ್ಸಾಂ ವಿಧಾನ ಸಭೆಯ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲು ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರ ಅಖಿಲ್ ಗೊಗೋಯಿ ಅವರಿಗೆ ಎನ್ಐಎ ನ್ಯಾಯಾಲಯ ಮಂಗಳವಾರ ಅನುಮತಿ ನೀಡಿದೆ. ಇತ್ತೀಚೆಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಶಿಬಸಾಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಖಿಲ್ ಗೊಗೋಯಿ ಅವರು ಬಿಜೆಪಿಯ ಸುರಭಿ ರಾಜ್ಕೊನ್ವಾರಿ ಅವರನ್ನು ಸುಮಾರು 12 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಇದರೊಂದಿಗೆ ಜೈಲಿನಿಂದಲೇ ಚುನಾವಣೆ ಸ್ಪರ್ಧಿಸಿ ವಿಜಯಿಯಾದ ಅಸ್ಸಾಂನ ಮೊದಲ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರು.
ರಾಜ್ಯದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ ದೇಶದ್ರೋಹ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಎನ್ಐಎ ಪ್ರಕರಣ ದಾಖಲಿಸಿದ ಬಳಿಕ 46 ವರ್ಷದ ಅಖಿಲ್ ಗೊಗೋಯಿ ಅವರು 2019 ಡಿಸೆಂಬರ್ನಿಂದ ಕಾರಾಗೃಹದಲ್ಲಿ ಇದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಖಿಲ್ ಗೊಗೋಯಿ ಅವರಿಗೆ ಗುವಾಹತಿಯ ಎನ್ಐಎ ನ್ಯಾಯಾಲಯ ಅನುಮತಿ ನೀಡಿದೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ ಎಂದು ನಿಖಿಲ್ ಗೊಗೋಯಿ ಅವರ ವಕೀಲ ಸಂತನು ಬೊರ್ತಕುರ್ ತಿಳಿಸಿದ್ದಾರೆ.