ಪುರುಷ ನರ್ಸ್‌ನಿಂದ ಅತ್ಯಾಚಾರ: ಕೋವಿಡ್ ರೋಗಿ ಮೃತ್ಯು
ಭೋಪಾಲ್, ಮೇ 14: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಪುರುಷ ನರ್ಸ್‌ನಿಂದ ಅತ್ಯಾಚಾರಕ್ಕೆ ಒಳಗಾದ 43 ವರ್ಷದ ಮಹಿಳಾ ರೋಗಿ, ಘಟನೆ ನಡೆದು 24 ಗಂಟೆಗಳಲ್ಲೇ ಮೃತಪಟ್ಟಿರುವ ಆಘಾತಕಾರಿ ಪ್ರಕರಣ ವರದಿಯಾಗಿದೆ.
ಒಂದು ತಿಂಗಳ ಹಿಂದೆಯೇ ಈ ಘಟನೆ ನಡೆದಿದ್ದರೂ, ಶಂಕಿತ ಆರೋಪಿಯನ್ನು ಬಂಧಿಸಿದ ಬಳಿಕವಷ್ಟೇ ಈ ಪ್ರಕರಣವನ್ನು ಬಹಿರಂಗಪಡಿಸಲಾಗಿದೆ. ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಮಹಿಳೆಯನ್ನು ಭೋಪಾಲ್ ಸ್ಮಾರಕ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಎಪ್ರಿಲ್ 6ರಂದು ದಾಖಲಿಸಲಾಗಿತ್ತು. ಪುರುಷ ನರ್ಸ್ ತನ್ನ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ವೈದ್ಯರಿಗೆ ದೂರು ನೀಡಿದ ರೋಗಿ ಆತನನ್ನು ಗುರುತಿಸಿದ್ದಳು. ತಕ್ಷಣ ಆಕೆಯ ಆರೋಗ್ಯ ಸ್ಥಿತಿ ಉಲ್ಬಣಿಸಿದ್ದರಿಂದ ವೆಂಟಿಲೇಟರ್ ಬೆಂಬಲ ವ್ಯವಸ್ಥೆಗೆ ಸ್ಥಳಾಂತರಿಸಲಾಯಿತು. ಅದೇ ದಿನ ರಾತ್ರಿ ಆಕೆ ಕೊನೆಯುಸಿರೆಳೆದಳು ಎಂದು ಪೊಲೀಸರು ವಿವರ ನೀಡಿದ್ದಾರೆ.
ನಿಶತ್‌ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಸಂತೋಷ್ ಅಹಿರ್‌ವಾರ್ (40) ಎಂಬಾತನನ್ನು ಬಂಧಿಸಲಾಗಿದೆ. ವಿಚಾರಣೆಯನ್ನು ಕಾಯ್ದಿರಿಸಿ ಭೋಪಾಲ್ ಕೇಂದ್ರೀಯ ಕಾರಾಗೃಹದಲ್ಲಿ ಆತನನ್ನು ಬಂಧನದಲ್ಲಿ ಇಡಲಾಗಿದೆ. ತನ್ನ ಗುರುತನ್ನು ಬಹಿರಂಗಪಡಿಸದಂತೆ ಸಂತ್ರಸ್ತೆ ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಹಸ್ಯವಾಗಿ ಇಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಇರ್ಷಾದ್ ವಾಲಿ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆಯೂ 24 ವರ್ಷ ವಯಸ್ಸಿನ ನರ್ಸ್ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪಿಯನ್ನು ಈ ಮೊದಲು ಪಾನಮತ್ತನಾಗಿ ಕರ್ತವ್ಯ ನಿಭಾಯಿಸಿದ ಕಾರಣಕ್ಕೆ ಸೇವೆಯಿಂದ ಅಮಾನತು ಮಾಡಲಾಗಿತ್ತು. ಮೃತ ಮಹಿಳೆ 1984ರ ಭೋಪಾಲ್ ಅನಿಲ ದುರಂತದ ಸಂತ್ರಸ್ತೆ. ಈ ಹಿನ್ನೆಲೆಯಲ್ಲಿ ಭೋಪಾಲ್ ಅನಿಲ ದುರಂತ ಸಂತ್ರಸ್ತರ ಸಂಘಟನೆ ಅಧಿಕಾರಿಗಳಿಗೆ ಪತ್ರ ಬರೆದು ಬಿಎಂಎಚ್‌ಆರ್ ಕೋವಿಡ್-19 ವಾರ್ಡ್‌ಗಳ ದಯನೀಯ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದೆ.