ರಿಯಾದ್: ಅಬ್ದುಲ್ ಲತೀಫ್ ಇದ್ರೀಸ್ ನಿಧನ

Update: 2021-05-14 05:42 GMT

ರಿಯಾದ್, ಮೇ 14: ಮಂಗಳೂರು ಮೂಲದ ಹಾಲಿ ಸೌದಿ ಅರೇಬಿಯಾದ ರಿಯಾದ್ ನಲ್ಲಿದ್ದ ಅಬ್ದುಲ್ ಲತೀಫ್ ಇದ್ರೀಸ್ ಅವರು ಗುರುವಾರ ಅಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.  ಅವರಿಗೆ 54 ವರ್ಷ ವಯಸಾಗಿತ್ತು. ಮಸ್ಕತ್ ನ ಮಜ್ದಾ ಹಾಗು ಸೌದಿಯ ರಿಯಾದ್ ನಲ್ಲಿರುವ ಅರ್ನಾನ್ ಸಂಸ್ಥೆಗಳಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಅವರು ಸೇವೆ ಸಲ್ಲಿಸಿದ್ದರು. 

ಮಂಗಳೂರು ವಿವಿಯಿಂದ ಚಿನ್ನದ ಪದಕದೊಂದಿಗೆ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದ ಬಹುಮುಖ ಪ್ರತಿಭೆಯ ಅಬ್ದುಲ್ ಲತೀಫ್ ಅವರು ತಮ್ಮ ಸಮಾಜಮುಖಿ ಚಟುವಟಿಕೆಗಳಿಂದ ಅಪಾರ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಒಳ್ಳೆಯ ವಾಗ್ಮಿ ಹಾಗು ನಿರೂಪಕರಾಗಿದ್ದ ಅಬ್ದುಲ್ ಲತೀಫ್ ಅವರು ಜಮೀಯ್ಯತುಲ್ ಫಲಾಹ್ ಮತ್ತು ಹಿದಾಯ ಫೌಂಡೇಶನ್ ಸಹಿತ ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಸಂಸ್ಥೆಗಳಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಗಮನ ಸೆಳೆದಿದ್ದರು. ಸರಳ ಸಜ್ಜನ ವ್ಯಕ್ತಿತ್ವದ ಲತೀಫ್ ಅವರು ಸದಾ ಯುವಜನರಿಗೆ ಯಶಸ್ವೀ ವೃತ್ತಿಪರರಾಗಲು ಮಾರ್ಗದರ್ಶನ ನೀಡುತ್ತಿದ್ದರು. ಅವರ ಸಲಹೆ ಸೂಚನೆ ಪಡೆದ ನೂರಾರು ಯುವಜನರು ವೈದ್ಯರು, ಇಂಜಿನಿಯರ್ ಗಳು, ಉದ್ಯಮಿಗಳಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ.

ಮೃತರು ತಂದೆ ಹಸನ್ ಇದ್ರೀಸ್, ಪತ್ನಿ, ಮೂವರು ಗಂಡು ಮಕ್ಕಳು, ಓರ್ವ ಪುತ್ರಿ ಹಾಗು ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News