ಫೆಲೆಸ್ತೀನ್ ನಿರಾಶ್ರಿತರ ಸಮಸ್ಯೆ
ಭಾಗ- 2
ಇಸ್ರೇಲ್ ಎಂಬ ನೂತನ ದೇಶದ ಸ್ಥಾಪನೆಯ ಮೂಲಕ ಜಗತ್ತಿನ 150ಕ್ಕೂ ಹೆಚ್ಚಿನ ದೇಶಗಳಲ್ಲಿ ತೀರಾ ಅಭದ್ರ ಸ್ಥಿತಿಯಲ್ಲಿದ್ದ ಲಕ್ಷಾಂತರ ಯಹೂದಿಗಳಿಗೆ ಭದ್ರ ನೆಲೆ ದೊರೆಯಿತು ಎಂಬುದು ನಿಜಕ್ಕೂ ಒಂದು ನೆಮ್ಮದಿಯ ವಿಚಾರ. ಆದರೆ ಈ ಬೆಳವಣಿಗೆಯ ಇನ್ನೊಂದು ಮುಖ ಭಾರೀ ಭಯಾನಕವಾಗಿದೆ. ಒಂದು ಪಂಗಡಕ್ಕೆ ಭದ್ರ ನೆಲೆ ಒದಗಿಸುವ ಈ ಪ್ರಕ್ರಿಯೆಯ ಹಿಂದೆ ಅಡಗಿದ್ದ ನೀಚ ಸಂಚುಗಳು ಆಧುನಿಕ ಜಗತ್ತಿನ ಅತಿದೊಡ್ಡ ಪ್ರಮಾಣದ ನಿರಾಶ್ರಿತ ಬಿಕ್ಕಟ್ಟಿಗೆ ಜನ್ಮ ನೀಡಿದೆ.
150ಕ್ಕೂ ಹೆಚ್ಚಿನ ದೇಶಗಳಿಂದ ಬಂದ ವಲಸಿಗ ಯಹೂದಿಗಳಿಗೆ ಆಶ್ರಯ ನೀಡಿದ ಇಸ್ರೇಲ್‌ನ ಒಟ್ಟು ಜನಸಂಖ್ಯೆ ಕೇವಲ 90 ಲಕ್ಷದ ಆಸುಪಾಸಿನಲ್ಲಿದೆ. ಆದರೆ ಈ ದೇಶದ ಅಮಾನುಷ ಜನಾಂಗವಾದಿ ಧೋರಣೆಗಳಿಂದಾಗಿ, ಇವರ ಆಶ್ರಯಧಾಮವಾದ ಫೆಲೆಸ್ತೀನ್‌ನಲ್ಲಿ ನಿರಾಶ್ರಿತರಾದವರ ಸಂಖ್ಯೆ 1.3 ಕೋಟಿಗಿಂತ ಅಧಿಕವಿದೆ ! ಇಸ್ರೇಲ್ ಸರಕಾರವು 150ಕ್ಕೂ ಹೆಚ್ಚಿನ ದೇಶಗಳಿಂದ ವಲಸೆ ಬಂದ ಯಹೂದಿಗಳಿಗೆ ಭದ್ರ ನೆಲೆ ಒದಗಿಸುವ ತನ್ನ ಯೋಜನೆಯನ್ನು ಯಾವ ರೀತಿಯಲ್ಲಿ ಅನುಷ್ಠಾನಿಸಿತೆಂದರೆ ಪರಂಪರಾಗತವಾಗಿ ಹಲವು ತಲೆಮಾರುಗಳಿಂದ ಫೆಲೆಸ್ತೀನ್‌ನಲ್ಲಿ ನೆಲೆಸಿದ್ದ 1.3 ಕೋಟಿಗೂ ಹೆಚ್ಚಿನ ಅರಬ್ ಮೂಲನಿವಾಸಿಗಳು ತಮ್ಮದೇ ನೆಲದಿಂದ ನಿರ್ವಸಿತರಾಗಿ ಹತ್ತಾರು ದೇಶಗಳಲ್ಲಿ ದಿಕ್ಕಿಲ್ಲದೆ ಅಲೆದಾಡುವ ಅಥವಾ ನಿರಾಶ್ರಿತ ಶಿಬಿರಗಳಲ್ಲಿ ಬದುಕಬೇಕಾದ ಸ್ಥಿತಿಗೆ ತಳ್ಳಲ್ಪಟ್ಟರು. 1948ರ ಯುದ್ಧದ ಬಳಿಕ ಸುಮಾರು 9 ಲಕ್ಷ ಅರಬ್ ಫೆಲೆಸ್ತೀನಿಗಳನ್ನು ನಾಡಿನಿಂದ ಹೊರದಬ್ಬಿದ್ದ ಇಸ್ರೇಲ್ 1967ರ ಯುದ್ಧದ ಬಳಿಕ ಸುಮಾರು 3 ಲಕ್ಷ ಅರಬ್ ನಾಗರಿಕರನ್ನು ಹೊರದಬ್ಬಿತ್ತು.
ಇಂದು ಫೆಲೆಸ್ತೀನ್ ಮೂಲದ ನಿರಾಶ್ರಿತರು ಜಗತ್ತಿನ ಅತಿದೊಡ್ಡ ನಿರಾಶ್ರಿತ ಮತ್ತು ನಿರ್ವಸಿತ ಸಮುದಾಯವಾಗಿದ್ದಾರೆ. ಮಾತ್ರವಲ್ಲ 7 ದಶಕಗಳ ಅವಧಿಯಲ್ಲಿ ಅವರ ಸಮಸ್ಯೆ ಬಗೆಹರಿಯುವ ಬದಲು ಮತ್ತಷ್ಟು ಹಿಗ್ಗುತ್ತಾ, ಜಟಿಲವಾಗುತ್ತಾ ಹೋಗಿದೆ.
ಫೆಲೆಸ್ತೀನ್ ನಿರಾಶ್ರಿತರ ಒಂದು ದೊಡ್ಡ ಸಂಖ್ಯೆ ಜೋರ್ಡನ್, ಲೆಬನಾನ್, ಸಿರಿಯಾ ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯಲ್ಲಿರುವ ದೊಡ್ಡ ಗಾತ್ರದ ಸುಮಾರು 70 ರಷ್ಟು ನಿರಾಶ್ರಿತ ಶಿಬಿರಗಳಲ್ಲಿ ಬದುಕುತ್ತಿದ್ದಾರೆ. ದುಬಾರಿ ವಿಲಾಸಿ ಸವಲತ್ತುಗಳಿಂದ ಮಾತ್ರವಲ್ಲ ಬದುಕಿನ ತೀರಾ ಮೂಲಭೂತ ಸೌಲಭ್ಯಗಳಿಂದಲೂ ಅವರು ವಂಚಿತರಾಗಿದ್ದಾರೆ. ಕಾಲಕಳೆದಂತೆ, ಕಾರ್ಗತ್ತಲಿನ ಪರ್ವ ದೀರ್ಘ ವಾಗುತ್ತಾ ಹೋದಂತೆ, ತಮ್ಮ ಹಾಗೂ ತಮ್ಮ ಮಕ್ಕಳ ಭವಿಷ್ಯದ ಕುರಿತು ಅವರು ಹೆಚ್ಚೆಚ್ಚು ನಿರಾಶರಾಗುತ್ತಿದ್ದಾರೆ.
2019ರ ಮಾಹಿತಿ ಪ್ರಕಾರ ತಮ್ಮ ಹೆಸರುಗಳನ್ನು ‘‘ಫೆಲೆಸ್ತೀನ್ ನಿರಾಶ್ರಿತರು’’ ಎಂದು UNRWA ಎಂಬ ವಿಶ್ವ ಸಂಸ್ಥೆಯ ನಿರಾಶ್ರಿತ ಪರಿಹಾರ ವಿಭಾಗದಲ್ಲಿ ನೋಂದಾಯಿಸಿ ಕೊಂಡಿರುವವರ ಸಂಖ್ಯೆ 56 ಲಕ್ಷಕ್ಕಿಂತಲೂ ಅಧಿಕವಿದೆ. ನಿರಾಶ್ರಿತ ಎಂಬ ಪದದ ವ್ಯಾಖ್ಯಾನದ ಬಗ್ಗೆ ವಿಶ್ವ ಸಂಸ್ಥೆ, ಮಾನವ ಹಕ್ಕು ಸಂಸ್ಥೆಗಳು ಮತ್ತು ಜಾಗತಿಕ ಮಟ್ಟದ ವಿವಿಧ ಕಾನೂನು ಸಮಿತಿಗಳ ನಡುವೆ ಇರುವ ಭಿನ್ನತೆಯಿಂದಾಗಿ ಅನೇಕ ನೈಜ ನಿರಾಶ್ರಿತರು, ನಿರಾಶ್ರಿತರೆಂಬ ಸ್ಥಾನಮಾನದಿಂದಲೂ ವಂಚಿತರಾಗಿದ್ದಾರೆ.
► ವಲಸಿಗ ನಿವಾಸಗಳ ವಿವಾದ
ಬೇರೆ ವಿಷಯಗಳಲ್ಲಿ ಇಸ್ರೇಲ್ ಬಗ್ಗೆ ಸಹಾನುಭೂತಿ ತೋರುವವರು ಕೂಡಾ ಯಹೂದಿ ವಲಸಿಗರನ್ನು ಆಕ್ರಮಿತ ಅರಬ್ ಪ್ರದೇಶಗಳಲ್ಲಿ ವಾಸಗೊಳಿಸುವ ವಿಷಯದಲ್ಲಿ ಇಸ್ರೇಲ್ ಸರಕಾರ ತಾಳಿರುವ ಉದ್ಧಟ ಧೋರಣೆಯನ್ನು ಕಟುವಾಗಿ ಖಂಡಿಸುತ್ತಾರೆ. ಅದು ಆಕ್ರಮಿತ ಪ್ರದೇಶಗಳಲ್ಲಿ ಸ್ಥಳೀಯರ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಂಡು ಅಲ್ಲಿ ವಲಸಿಗರಿಗಾಗಿ ಮೀಸಲು ಬಡಾವಣೆಗಳನ್ನು ಕಟ್ಟುತ್ತಿದೆ. ಕಳೆದ ವರ್ಷದ ಮಾಹಿತಿ ಪ್ರಕಾರ ಆಕ್ರಮಿತ ಪಶ್ಚಿಮದಂಡೆ ಮತ್ತು ಪೂರ್ವ ಜೆರುಸಲೇಮ್‌ನಲ್ಲಿ ಬಲವಂತವಾಗಿ ಅರಬ್ ನಾಗರಿಕರ ಜಮೀನುಗಳನ್ನು ಕಿತ್ತುಕೊಂಡು ಆ ಸ್ಥಳಗಳಲ್ಲಿ ಯಹೂದಿ ವಲಸಿಗರಿಗಾಗಿ 250ಕ್ಕೂ ಹೆಚ್ಚು ಬಡಾವಣೆಗಳನ್ನು ನಿರ್ಮಿಸಿದೆ ಮತ್ತು ಅಲ್ಲಿ ಸುಮಾರು 7 ಲಕ್ಷದಷ್ಟು ವಲಸಿಗರನ್ನು ವಾಸಗೊಳಿಸಿದೆ. ಈ ರೀತಿಯ ಒಂದೊಂದು ಬಡಾವಣೆಯನ್ನು ನಿರ್ಮಿಸಿದ ಬಳಿಕವೂ ಇಸ್ರೇಲ್ ಸರಕಾರವು ಆ ಬಡಾವಣೆಗಳಿಗೆ ಭದ್ರತೆ ಒದಗಿಸುವ ಹೆಸರಲ್ಲಿ ಅದರ ಸುತ್ತ ಮುತ್ತಲ ಪ್ರದೇಶಗಳ ಹಾಗೂ ಅಲ್ಲಿನ ಅರಬ್ ನಿವಾಸಿಗಳ ಮೇಲೆ ಹಲವು ಕಠಿಣ ನಿರ್ಬಂಧಗಳನ್ನು ಹೇರುತ್ತದೆ.
► ಇಸ್ರೇಲ್ ಚಾಲಿತ ಗಡಿ ಗೊಂದಲ
ಜಗತ್ತಿನ ಎಲ್ಲ ದೇಶಗಳಿಗೆ ಒಂದು ನಿರ್ದಿಷ್ಟ ಗಡಿ ಇರುತ್ತದೆ. ಹೆಚ್ಚೆಂದರೆ ಗಡಿಯ ಕೆಲವು ಭಾಗಗಳ ಕುರಿತು ಮಾತ್ರ ವಿವಾದವಿರುತ್ತದೆ. ಇಸ್ರೇಲ್‌ಗೆ ಈ ನಿಯಮ ಅನ್ವಯಿಸುವುದಿಲ್ಲ. ಏಳು ದಶಕಗಳ ಹಿಂದೆ ಇಸ್ರೇಲ್ ಎಂಬ ದೇಶದ ಸ್ಥಾಪನೆಯಾಗಿರುವುದೇ ತೀರಾ ವಿವಾದಾಸ್ಪದ ರೀತಿಯಲ್ಲಿ, ಅನೈತಿಕವಾಗಿ ಆಕ್ರಮಿಸಿಕೊಳ್ಳಲಾದ ಅಕ್ರಮ ಗಡಿಗಳ ಒಳಗೆ. ಅಂದಿನಿಂದ ಈ ವರೆಗೂ ಅದು ತನ್ನ ಅಕ್ರಮ ಗಡಿಗಳನ್ನು ಅನೈತಿಕ ಮತ್ತು ಅಕ್ರಮ ವಿಧಾನಗಳಿಂದ ವಿಸ್ತರಿಸುತ್ತಾ ಬಂದಿದೆ. ಇದು ಏಕಕಾಲದ ಪ್ರಕ್ರಿಯೆಯೇನಲ್ಲ. ಪದೇ ಪದೇ ನಡೆಯುತ್ತಲೇ ಇರುವ ಸತತ ಪ್ರಕ್ರಿಯೆ. ಇಸ್ರೇಲ್ ಗಡಿಗಳು ಸದಾ ಚಲನಶೀಲವಾಗಿರುತ್ತವೆ. ಬದಲಾಗುತ್ತಲೇ ಇರುತ್ತವೆ. ಇಂದಿನ ಗಡಿ ನಿನ್ನೆಗಿಂತ ಮತ್ತು ನಾಳೆಯ ಗಡಿ ಇಂದಿಗಿಂತ ಭಿನ್ನವಾಗಿರುತ್ತದೆ. ಆದ್ದರಿಂದಲೇ ಇಸ್ರೇಲ್‌ನ ಗಡಿ ಯಾವುದೆಂಬುದನ್ನು ನಿರ್ದಿಷ್ಟವಾಗಿ ಹೇಳಲು ಯಾರಿಗೂ ಸಾಧ್ಯವಾಗುವುದಿಲ್ಲ. ಒಂದು ವಿಷಯ ಮಾತ್ರ ಸದಾ ನಿಜವಾಗಿರುತ್ತದೆ. ಅದೇನೆಂದರೆ, ಇಸ್ರೇಲ್ ತನ್ನದೆಂದು ಹೇಳಿಕೊಳ್ಳುವ ಗಡಿಯು ಅಂತರ್‌ರಾಷ್ಟ್ರೀಯ ಸಮುದಾಯವು ಅಂಗೀಕರಿಸುವ ಗಡಿಗಿಂತ ಸದಾ ಹಲವು ಪಟ್ಟು ದೊಡ್ಡದಾಗಿರುತ್ತದೆ.
ಮಿಲಿಟರಿ ಬಲ ಬಳಸಿ ಇನ್ನೊಬ್ಬರ ಗಡಿಯೊಳಗಿನ ಪ್ರದೇಶಗಳನ್ನು ಆಕ್ರಮಿಸಿಕೊಂಡು, ಅದನ್ನು ತನ್ನ ಇತರ ಹಿತಾಸಕ್ತಿಗಳಿಗಾಗಿ ಚೌಕಾಶಿಯ ಸಾಧನವಾಗಿ ಬಳಸುವುದು ಅದರ ಹಳೆಯ ಚಾಳಿಯಾಗಿದೆ.
ಪ್ರಥಮ ಜಾಗತಿಕ ಯುದ್ಧದ ವೇಳೆ ಎಲೈಡ್ ಫೋರ್ಸಸ್ (Allied Forces) ಗಳ ಕೈಯಲ್ಲಿ ಉಸ್ಮಾನಿಯಾ ಸಾಮ್ರಾಜ್ಯವು ಹೀನಾಯ ಸೋಲನ್ನುಂಡಿತು. ಆಗ ಹಲವು ಶತಮಾನಗಳಿಂದ ಟರ್ಕಿ ಮೂಲದ ಉಸ್ಮಾನಿಯಾ ಸಾಮ್ರಾಜ್ಯದ ಅಧೀನದಲ್ಲಿದ್ದ ಫೆಲೆಸ್ತೀನ್ ಎಂಬ ಅರಬ್ ದೇಶ ‘ಎಲೈಡ್ ಫೋರ್ಸಸ್’ಗಳ ವಶಕ್ಕೆ ಹೋಯಿತು. ಅವರು ಫೆಲೆಸ್ತೀನ್‌ನ ಉಸ್ತುವಾರಿಯನ್ನು, ತಮ್ಮ ಒಕ್ಕೂಟದ ಭಾಗವಾಗಿದ್ದ ಬ್ರಿಟನ್ ಸಾಮ್ರಾಜ್ಯಕ್ಕೆ ವಹಿಸಿಕೊಟ್ಟರು. ಆದರೆ ಅದು ಶಾಶ್ವತ ಉಸ್ತುವಾರಿಯಾಗಿರದೆ, 1948 ಮೇ ತಿಂಗಳ ತನಕ ಎಂಬ ಗಡುವಿನೊಂದಿಗೆ ನೀಡಲಾದ ಉಸ್ತುವಾರಿಯಾಗಿತ್ತು. ಪ್ರಸ್ತುತ ಗಡು ಮುಗಿಯುವ ಮುನ್ನ ಆ ನಾಡಿನ ಆಡಳಿತ ಚುಕ್ಕಾಣಿಯನ್ನು ಅದರ ಅಸಲಿ ಪ್ರಜೆಗಳಾದ ಫೆಲೆಸ್ತೀನಿಗಳಿಗೆ ವರ್ಗಾಯಿಸಬೇಕಾದುದು ಬ್ರಿಟನ್‌ನ ಕರ್ತವ್ಯವಾಗಿತ್ತು. ಆದರೆ ಅದು ಫೆಲೆಸ್ತೀನ್‌ನ ಒಂದು ಭಾಗವನ್ನು ಯಹೂದಿ ರಾಷ್ಟ್ರವೊಂದರ ಸ್ಥಾಪನೆಗಾಗಿ ಯಹೂದಿ ಸಮುದಾಯಕ್ಕೆ ಒಪ್ಪಿಸಲು ನಿರ್ಧರಿಸಿತು. 2017ರಲ್ಲಿ ಬಾಲ್ ಫೋರ್ ಪ್ರಕಟನೆೆಯ ಮೂಲಕ ತನ್ನ ನಿರ್ಧಾರವನ್ನು ಜಗತ್ತಿಗೆ ತಿಳಿಸಿತು. ಆಗ ಬ್ರಿಟನ್‌ನ ಘೋಷಿತ ಉದ್ದೇಶ ಯಹೂದಿಗಳು ಸಾಂಪ್ರದಾಯಿಕವಾಗಿ ತಮ್ಮ ಪಾವನ ಭೂಮಿ ಎಂದು ಕರೆಯುತ್ತಿದ್ದ, ಜೋರ್ಡನ್ ನದಿಯ ಪಶ್ಚಿಮಕ್ಕಿದ್ದ ಒಂದು ಸೀಮಿತ ಭೂಭಾಗವನ್ನು ಯಹೂದಿಗಳಿಗೆ ಒಪ್ಪಿಸುವುದಾಗಿತ್ತು. ‘‘ಬೇರಾವುದೇ ಸಮುದಾಯದ ಧಾರ್ಮಿಕ ಅಥವಾ ನಾಗರಿಕ ಅಧಿಕಾರಗಳಿಗೆ ಯಾವುದೇ ಕುಂದು ಬರದಂತೆ ಈ ಯೋಜನೆಯನ್ನು ಅನುಷ್ಠಾನಿಸಬೇಕು’’ ಎಂಬ ಷರತ್ತಿನೊಂದಿಗೆ ಅಂದಿನ ‘ಲೀಗ್ ಆಫ್ ನೇಶನ್ಸ್’ ಈ ಯೋಜನೆಯನ್ನು ಅನುಮೋದಿಸಿತ್ತು.
► 1948ರ ಗಡಿ
ಫೆಲೆಸ್ತೀನ್ ಮೇಲೆ ಮೂರು ದಶಕಗಳಷ್ಟು ದೀರ್ಘ ಕಾಲದ ಬ್ರಿಟಿಷ್ ಆಡಳಿತಾವಧಿಯು ಮುಗಿಯುತ್ತಾ ಬಂದಾಗ, 1947 ರಲ್ಲಿ ವಿಶ್ವ ಸಂಸ್ಥೆಯು ಒಂದು ಯೋಜನೆಯನ್ನು ರೂಪಿಸಿತು. ಈ ವಿಭಾಜಕ ಯೋಜನೆಯ ಪ್ರಕಾರ ಫೆಲೆಸ್ತೀನ್‌ನ ಒಂದು ಭಾಗವನ್ನು ಸ್ವತಂತ್ರ ಯಹೂದಿ ದೇಶವಾಗಿ ಮತ್ತು ಇನ್ನೊಂದು ಭಾಗವನ್ನು ಸ್ವತಂತ್ರ ಅರಬ್ ದೇಶವಾಗಿ ವಿಂಗಡಿಸಲು ಮತ್ತು ಜೆರುಸಲೇಮ್ ನಗರವನ್ನು ವಿಶ್ವ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಒಂದು ಅಂತರ್‌ರಾಷ್ಟ್ರೀಯ ಆಡಳಿತಮಂಡಳಿಗೆ ಒಪ್ಪಿಸುವ ನಿರ್ಧಾರ ಕೈಗೊಳ್ಳಲಾಯಿತು. ಯಹೂದಿಗಳು ಈ ಪ್ರಸ್ತಾವವನ್ನು ಸ್ವಾಗತಿಸಿದರು. ಆದರೆ ಅರಬ್ ಪಕ್ಷಗಳು ತಮ್ಮ ಜನಸಂಖ್ಯೆಯ ಅನುಪಾತಕ್ಕನುಸಾರ ತಮಗೆ ಹೆಚ್ಚಿನ ಭೂಭಾಗ ನೀಡಬೇಕೆಂದು ಆಗ್ರಹಿಸಿ ಈ ಪ್ರಸ್ತಾವವನ್ನು ತಿರಸ್ಕರಿಸಿದವು. ಪೂರ್ವ ನಿರ್ಧಾರದಂತೆ 1948 ಮೇ ತಿಂಗಳಲ್ಲಿ ಬ್ರಿಟನ್ ಫೆಲೆಸ್ತೀನ್ ಅನ್ನು ಬಿಟ್ಟುಕೊಟ್ಟಿತು. ಇದರ ಬೆನ್ನಿಗೆ ಝಿಯೋನಿಸ್ಟ್ ಯಹೂದಿ ನಾಯಕರು ತಮ್ಮ ಇಸ್ರೇಲ್ ಸರಕಾರದ ಸ್ಥಾಪನೆಯನ್ನು ಘೋಷಿಸಿದರು. ಫೆಲೆಸ್ತೀನ್‌ನ ಅರಬರು ಮತ್ತು ನೆರೆಯ ಜೋರ್ಡನ್, ಇರಾಕ್, ಸಿರಿಯಾ, ಈಜಿಪ್ಟ್ ಮತ್ತು ಲಿಬಿಯಾ ಎಂಬ ಐದು ನೆರೆಯ ಅರಬ್ ದೇಶಗಳು ಇಸ್ರೇಲ್‌ನ ಸ್ಥಾಪನೆಯನ್ನು ಮತ್ತು ಅದು ತನ್ನದೆಂದು ಘೋಷಿಸಿಕೊಂಡಿದ್ದ ಗಡಿಗಳನ್ನು ವಿರೋಧಿಸಿದವು. ಪರಿಣಾಮವಾಗಿ ಒಂದು ದೊಡ್ಡ ಪ್ರಮಾಣದ ಯುದ್ಧ ಸ್ಫೋಟಿಸಿತು. ನವಜಾತ ಇಸ್ರೇಲ್‌ನ ಸ್ವಾತಂತ್ರ ಸಮರ ಎಂದೇ ಗುರುತಿಸಲಾದ ಈ ಯುದ್ಧದಲ್ಲಿ ಇಸ್ರೇಲ್‌ಗೆ ಪಶ್ಚಿಮದ ದೇಶಗಳ, ವಿಶೇಷವಾಗಿ ಬ್ರಿಟನ್ ಮತ್ತು ಅಮೆರಿಕದ ಸಹಾನುಭೂತಿ ಮಾತ್ರವಲ್ಲದೆ ಎಲ್ಲ ಬಗೆಯ ಮಾರ್ಗದರ್ಶನ ಮತ್ತು ನೆರವೂ ಪ್ರಾಪ್ತವಾಯಿತು.
► 1949 ರ ಗಡಿ
8 ತಿಂಗಳ ಬಳಿಕ, 1949 ಜುಲೈಯಲ್ಲಿ ಯುದ್ಧ ಮುಗಿದಾಗ ಇಸ್ರೇಲ್ ಗಡಿಗಳು, ಅದು ಈ ಹಿಂದೆ ಘೋಷಿಸಿದ್ದ ವ್ಯಾಪ್ತಿಗಿಂತ ಹಲವು ಪಟ್ಟು ಹೆಚ್ಚು ವಿಸ್ತಾರವಾಗಿ ಬಿಟ್ಟಿದ್ದವು. ವಿಶ್ವ ಸಂಸ್ಥೆಯ ಯೋಜನೆಯಲ್ಲಿ ಅರಬರಿಗೆಂದು ಮೀಸಲಿಡಲಾಗಿದ್ದ ಹಲವು ಭೂಭಾಗಗಳು ಇಸ್ರೇಲ್‌ನ ವಶವಾದವು. ನಿಜವಾಗಿ ಈ ಯುದ್ಧದ ಕೊನೆಯಲ್ಲಿ ಐತಿಹಾಸಿಕ ಫೆಲೆಸ್ತೀನ್ ನ 78ಶೇ. ಭಾಗವನ್ನು ಇಸ್ರೇಲ್ ಆಕ್ರಮಿಸಿಕೊಂಡಿತ್ತು. 22ಶೇ. ಭಾಗ ಮಾತ್ರ ಅರಬಿಗಳ ವಶದಲ್ಲಿ ಉಳಿಯಿತು. ಆ 22ಶೇ. ಭಾಗ ಕೂಡಾ ಅವಿಭಕ್ತ ಭೂಭಾಗವಾಗಿರಲಿಲ್ಲ. ಗಾಝಾ ಎಂಬ ಅದರ ಒಂದು ತುಂಡು ದೇಶದ ಪೂರ್ವ ಭಾಗದಲ್ಲಿದ್ದರೆ ವೆಸ್ಟ್ ಬ್ಯಾಂಕ್ ಅಥವಾ ಪಶ್ಚಿಮ ದಂಡೆ ಎಂಬ ಇನ್ನೊಂದು ಭಾಗವು ಪಶ್ಚಿಮ ಭಾಗದಲ್ಲಿತ್ತು. ಈ ರೀತಿ ತಾನು ಜನಿಸಿದ ವರ್ಷವೇ ಇಸ್ರೇಲ್ ತನ್ನ ಘೋಷಿತ ಗಡಿಗಳನ್ನು ಗಣನೀಯವಾಗಿ ವಿಸ್ತರಿಸಿಕೊಂಡಿತು. ಆದರೆ ಆಪೈಕಿ ಹೆಚ್ಚಿನ ಭಾಗವು ಅಕ್ರಮವಾಗಿತ್ತು. ಅದರ ಬಲವಂತದ ವಿಸ್ತೃತ ಗಡಿಗೆ ಅಂತರ್‌ರಾಷ್ಟ್ರೀಯ ಮಾನ್ಯತೆ ಇರಲಿಲ್ಲ.
ಯುದ್ಧದಲ್ಲಿ ಫೆಲೆಸ್ತೀನ್‌ನ ಅರಬ್ ನಾಗರಿಕರು ಭಾರೀ ನಾಶನಷ್ಟಗಳನ್ನು ಎದುರಿಸಬೇಕಾಯಿತು. ಸುಮಾರು 600 ಅರಬ್ ಗ್ರಾಮಗಳು ಧ್ವಂಸಗೊಂಡವು. ಅವರ ಎಷ್ಟೋ ಐತಿಹಾಸಿಕ ಸ್ಮಾರಕಗಳು ನೆಲಸಮವಾದವು. ಸುಮಾರು 9 ಲಕ್ಷ ಫೆಲೆಸ್ತೀನ್ ನಾಗರಿಕರು ನಿರಾಶ್ರಿತ ಹಾಗೂ ನಿರ್ವಸಿತರಾಗಿ ಬಿಟ್ಟರು.
ವಿಪರ್ಯಾಸವೇನೆಂದರೆ, ಯುರೋಪಿನಲ್ಲಿ ಯಹೂದಿಗಳ ಬದುಕು ಅಭದ್ರವಾಗಿ ಅವರು ನಿರ್ವಸಿತರಾಗಬೇಕಾಯಿತು ಎಂದು ಹೇಳುತ್ತಾ ಅದರ ಆಧಾರದಲ್ಲೇ ಜಗತ್ತಿನ ಅನುಕಂಪ ಸಂಪಾದಿಸಿದ ಯಹೂದಿ ಸಮುದಾಯದ ಝಿಯೋನಿಸ್ಟ್ ನಾಯಕರು ತಮಗೆ ಆಶ್ರಯ ನೀಡಿದ ಫೆಲೆಸ್ತೀನ್‌ನಲ್ಲಿ ಅಲ್ಲಿನ ಮೂಲನಿವಾಸಿ ಅರಬ್ ಜನತೆಯನ್ನು ಅಲ್ಲಿಂದ ನಿರ್ವಸಿತರಾಗಿಸಿ ಹೊರದಬ್ಬುವುದನ್ನೇ ತಮ್ಮ ಪ್ರಥಮ ಧ್ಯೇಯವಾಗಿಸಿಕೊಂಡರು. ತಮಗೆ ತಾವೇ ಗುರುತಿಸಿದ್ದ ‘ಪವಿತ್ರಭೂಮಿ’ ದೊರೆತ ಬಳಿಕವೂ ತೃಪ್ತರಾಗದೆ, ಫೆಲೆಸ್ತೀನ್ ನ ಎಷ್ಟು ಭಾಗ ದೊರೆತರೂ ವಿರಮಿಸದೆ, ಉಳಿದ ಭಾಗಗಳನ್ನು ಕಬಳಿಸುವ ಮತ್ತು ಅಲ್ಲಿನ ಸಕ್ರಮ ನಿವಾಸಿಗಳನ್ನು ಹೊರದಬ್ಬುವ ಅಥವಾ ನಿರಾಶ್ರಿತ ಜೀತದಾಳುಗಳಾಗಿಸುವ ಕಾಯಕದಲ್ಲಿ ತೊಡಗಿದರು.
1967 - 6 ದಿನಗಳ ಪ್ರಳಯ - ಹೊಸ ಗಡಿ
1967 ಜೂನ್ 5 ರ ಮುಂಜಾನೆ ಇಸ್ರೇಲ್ ವಾಯುಸೇನೆ ಏಕಕಾಲದಲ್ಲಿ ತನ್ನ ನೆರೆಯ ಈಜಿಪ್ಟ್ ದೇಶದ ಸಿನಾಯ್ ಮತ್ತು ಸುಯೆಜ್ ಪ್ರಾಂತದ ಪ್ರಮುಖ ವೈಮಾನಿಕ ನೆಲೆಗಳನ್ನು ಗುರಿಯಾಗಿಟ್ಟು ಹಠಾತ್ ವಾಯು ದಾಳಿ ನಡೆಸಿತು. ಪ್ರಳಯ ಸದೃಶವಾಗಿದ್ದ ಪ್ರಸ್ತುತ ವ್ಯಾಪಕ ಕಾರ್ಯಾಚರಣೆಯ ಪರಿಣಾಮವಾಗಿ ಈಜಿಪ್ಟ್ ದೇಶದ ವಾಯುಪಡೆ ಬಹುತೇಕ 90ಶೇ. ನಿಷ್ಕ್ರಿಯವಾಗಿ ಬಿಟ್ಟಿತು. ಇದರೊಂದಿಗೆ ಇಸ್ರೇಲ್ ಸೇನೆಗೆ ಹೆಚ್ಚಿನ ಪ್ರತಿರೋಧವಿಲ್ಲದೆ ಗಾಝ ಪಟ್ಟಿ ಮತ್ತು ಪಶ್ಚಿಮ ದಂಡೆಯ ಸಹಿತ ಐತಿಹಾಸಿಕ ಫೆಲೆಸ್ತೀನ್ ಅನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು ಮಾತ್ರವಲ್ಲದೆ ಈಜಿಪ್ಟ್‌ನಅಧೀನವಿದ್ದ ಸಿನಾಯ್ ಪರ್ಯಾಯ ದ್ವೀಪವನ್ನು ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಅದರ ಒಂದು ಭಾಗವನ್ನು ಇಸ್ರೇಲ್ 1956 ರಲ್ಲೇ ಬ್ರಿಟನ್ ಹಾಗೂ ಫ್ರಾನ್ಸ್ ಗಳ ಸಹಭಾಗಿತ್ವದೊಂದಿಗೆ ನಡೆಸಲಾದ ಒಂದು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ವಶಪಡಿಸಿಕೊಂಡಿತ್ತು. (ಮುಂದೆ 1978 ರಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯೆ ನಡೆದ ಒಪ್ಪಂದವೊಂದರ ಪ್ರಕಾರ ಇಸ್ರೇಲ್ ಸರಕಾರವು ಸಿನಾಯ್ ಪ್ರಾಂತ ಸೇರಿದಂತೆ ತನ್ನ ವಶವಿದ್ದ ಈಜಿಪ್ಟ್‌ನ ಎಲ್ಲ ಭೂಭಾಗಗಳನ್ನು ಬಿಟ್ಟುಕೊಟ್ಟಿತು). ಆರು ದಿನಗಳ ಈ ಯುದ್ಧದ ಮೂಲಕ ಇಸ್ರೇಲ್ ಗೆ ಕೇವಲ ಆರೇ ದಿನಗಳಲ್ಲಿ ತನ್ನಮೂಲ ಗಡಿಯ ಗಾತ್ರವನ್ನು 350ಶೇ. ದಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು. ಜೂನ್ 5 ರಿಂದ 10 ರ ತನಕ ನಡೆದ ಈ ಯುದ್ಧಕ್ಕಾಗಿ ಇಸ್ರೇಲ್ ಭಾರೀ ಪೂರ್ವ ಸಿದ್ಧತೆ ನಡೆಸಿತ್ತು. ಅಮೆರಿಕ ಮತ್ತು ಹಲವು ಯುರೋಪಿಯನ್ ದೇಶಗಳ ನೆರವನ್ನೂ ಮೊದಲೇ ಪಡೆದಿತ್ತು. ಆದರೆ ಈಜಿಪ್ಟ್, ಜೋರ್ಡನ್ ಮತ್ತು ಸಿರಿಯಾ ಎಂಬ ಮೂರು ಅರಬ್ ದೇಶಗಳು ಅಷ್ಟು ದೊಡ್ಡ ಪ್ರಮಾಣದ ಯೋಜಿತ ದಾಳಿಯನ್ನು ನಿರೀಕ್ಷಿಸಿರಲಿಲ್ಲ. ಅದಕ್ಕೆ ಸಿದ್ಧರೂ ಆಗಿರಲಿಲ್ಲ.
ಯಾರ ಬಳಿ ಎಷ್ಟು ನೆಲವಿದೆ?
ಇಸ್ರೇಲ್ ಮತ್ತು ಫೆಲೆಸ್ತೀನ್ ಸೇರಿ ಇಸ್ರೇಲ್‌ನ ನಿಯಂತ್ರಣದಲ್ಲಿರುವ ಒಟ್ಟು ಪ್ರದೇಶದ (ಭೂಭಾಗ ಮತ್ತು ಜಲಭಾಗ ಸೇರಿ) ವಿಸ್ತೀರ್ಣ 26,790 ಚದರ ಕಿ.ಮೀ.ಗಳು. (ನಮ್ಮ ಪಕ್ಕದ ಕೇರಳ ರಾಜ್ಯದ ವಿಸ್ತೀರ್ಣಕ್ಕೆ ಹೋಲಿಸಿದರೆ ಇದು ಸುಮಾರು 65ಶೇ. ದಷ್ಟಾಗುತ್ತದೆ). ಈ ಪೈಕಿ ಇಸ್ರೇಲ್ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಗಾಝಾ, ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಮ್‌ಗಳ ಒಟ್ಟು ವಿಸ್ತೀರ್ಣ 6,020 ಚದರ ಕಿ.ಮೀ. ಅದರಲ್ಲೂ ಗಾಝಾ ಪಟ್ಟಿಯ ವಿಸ್ತೀರ್ಣ ಕೇವಲ 365 ಚದರ ಕಿ.ಮೀ. (ನಮ್ಮ ಬೆಂಗಳೂರು ನಗರದ ಅರ್ಧ ಭಾಗ). ಈ ಪೈಕಿ ಗಾಝಾ ಪಟ್ಟಿಯ ಜನಸಂಖ್ಯೆ 20 ಲಕ್ಷವಾದರೆ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಮ್‌ಗಳ ಒಟ್ಟು ಜನಸಂಖ್ಯೆ 30 ಲಕ್ಷ. ಕೇವಲ 365 ಚದರ ಕಿ.ಮೀ. ಪ್ರದೇಶದಲ್ಲಿ 20 ಲಕ್ಷ ಜನ ವಾಸಿಸುತ್ತಿದ್ದಾರೆ. ಅಲ್ಲಿನ ಜೀವನ ಮಟ್ಟ ಹೇಗಿರಬಹುದೆಂಬುದನ್ನು ಊಹಿಸಲಿಕ್ಕೂ ಕಷ್ಟವಿದೆ.
1967 ರ ಆರುದಿನಗಳ ಯುದ್ಧದ ಬಳಿಕ 1970 ರ ತನಕವೂ ಇಸ್ರೇಲ್ ಮತ್ತದರ ನೆರೆದೇಶಗಳ ನಡುವೆ ಸಣ್ಣಪುಟ್ಟ ಸಂಘರ್ಷಗಳು ನಡೆಯುತ್ತಲೇ ಇದ್ದವು.
1978 ರಲ್ಲಿ ನೆರೆಯ ಲೆಬನಾನ್ ಮೇಲೆ ದಾಳಿಗಳ ದೀರ್ಘ ಸರಣಿಯೊಂದನ್ನು ಆರಂಭಿಸಿತು. 1982ರಲ್ಲಿ ಈ ಘರ್ಷಣೆ ಕೊನೆಗೊಂಡಾಗ ಲೆಬನಾನ್‌ನಲ್ಲಿ ಇಸ್ರೇಲ್, ತನ್ನದೇ ಆದ ಭದ್ರತಾ ವಲಯವೊಂದನ್ನು ಸ್ಥಾಪಿಸಿತ್ತು.
► ನ್ಯಾಯದ ಒಡಲಿಗೆ ‘ವೀಟೋ’ ಕೊಡಲಿ
ಇಸ್ರೇಲ್ ಸರಕಾರದ ಜನಾಂಗವಾದಿ ಧೋರಣೆಗಳು ಮತ್ತು ಫೆಲೆಸ್ತೀನ್ ಮೂಲದ ನಾಗರಿಕರ ವಿಷಯದಲ್ಲಿ ಅದು ಅನುಸರಿಸುತ್ತಿರುವ ತೀವ್ರ ಪಕ್ಷಪಾತ ಮತ್ತು ಅನ್ಯಾಯದ ಧೋರಣೆಗಳನ್ನು ಜಗತ್ತಿನ ಹೆಚ್ಚಿನೆಲ್ಲ ಸಮಾಜ ಮತ್ತು ದೇಶಗಳು ಖಂಡಿಸುತ್ತಲೇ ಬಂದಿವೆ. ವಿಶ್ವ ಸಂಸ್ಥೆ ಮತ್ತು ವಿವಿಧ ಜಾಗತಿಕ ವೇದಿಕೆಗಳಲ್ಲಿ ಈ ಕುರಿತು ಚರ್ಚೆಗಳು ನಡೆದಾಗಲೆಲ್ಲಾ ಇಸ್ರೇಲ್ ವಿರುದ್ಧ ಭಾರೀ ಆಕ್ರೋಶ ಪ್ರಕಟವಾಗಿದ್ದು, ಅದನ್ನು ಸರಿದಾರಿಗೆ ತರಲು ಅಂತರ್‌ರಾಷ್ಟ್ರೀಯ ದಿಗ್ಬಂಧನ, ಮಿಲಿಟರಿ ಹಸ್ತಕ್ಷೇಪವೇ ಮುಂತಾದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ. ಆದರೆ ಜಾಗತಿಕ ಸಮುದಾಯಕ್ಕೆ ಈ ವಿಷಯದಲ್ಲಿ ಔಪಚಾರಿಕ ಖಂಡನಾ ನಿರ್ಣಯಗಳ ಆಚೆ ಯಾವುದೇ ಹೆಜ್ಜೆ ಇಡಲು ಸಾಧ್ಯವಾಗಿಲ್ಲ. ಏಕೆಂದರೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಸ್ರೇಲ್ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮಕ್ಕೆ ಚಾಲನೆ ನೀಡುವ ಪ್ರಶ್ನೆ ಬಂದಾಗಲೆಲ್ಲ ವೀಟೋ ಮೂಲಕ ಅದಕ್ಕೆ ತಡೆ ಒಡ್ಡಲಾಗಿದೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 5 ರಾಷ್ಟ್ರಗಳಿಗೆ ಶಾಶ್ವತ ಸದಸ್ಯರ ಸ್ಥಾನವಿದೆ. ಯು ಎಸ್ ಎ, ರಶ್ಯ, ಚೈನಾ, ಬ್ರಿಟನ್ ಮತ್ತು ಫ್ರಾನ್ಸ್ ಎಂಬ ಈ ಶಾಶ್ವತ ಸದಸ್ಯರ ಬಳಿ ವೀಟೋ ಎಂಬೊಂದು ವಿಶೇಷಾಧಿಕಾರವಿದೆ. ಈ ದೇಶಗಳು ಭದ್ರತಾ ಮಂಡಳಿಯಲ್ಲಿ ಬಹುಮತದೊಂದಿಗೆ ಅಂಗೀಕರಿಸಲಾದ ಯಾವುದೇ ನಿರ್ಣಯಕ್ಕೆ ತಡೆಯೊಡ್ಡಲು ತಮ್ಮ ವೀಟೋ ಅಧಿಕಾರವನ್ನು ಪ್ರಯೋಗಿಸಬಹುದು.
ಕೇವಲ ಅಮೆರಿಕ ಅಥವಾ ಯುಎಸ್‌ಎ ಎಂಬ ಒಂದೇ ಸರಕಾರ 1972 ಮತ್ತು 2018 ರ ಮಧ್ಯೆ 44 ಬಾರಿ ಈ ತನ್ನ ವಿಶೇಷಾಸ್ತ್ರವನ್ನು, ಇಸ್ರೇಲ್‌ನ ವಿರುದ್ಧದ ನಿರ್ಣಯಗಳನ್ನು ತಡೆಯಲಿಕ್ಕಾಗಿ ಮತ್ತು ಆಮೂಲಕ ನ್ಯಾಯ ಹಾಗೂ ಮಾನವೀಯ ಹಿತಾಸಕ್ತಿಗಳನ್ನು ಕೊಂದು ಇಸ್ರೇಲ್ ಹಿತಾಸಕ್ತಿಗಳನ್ನು ರಕ್ಷಿಸಲಿಕ್ಕಾಗಿ ಬಳಸಿಕೊಂಡಿದೆ.
2016 ರಲ್ಲಿ ಒಮ್ಮೆ ಮಾತ್ರ, ಈ ಕೊಳಕು ಪರಂಪರೆಗೆ ಅಪವಾದ ಸ್ವರೂಪವಾದ ಒಂದು ಘಟನೆ ನಡೆದಿತ್ತು. ಆಗ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದರು.
ಇಸ್ರೇಲ್‌ನ ಭೂಪಟ ನೋಡಿದರೆ, ಅದರ ಗಡಿಗಳ ಸುತ್ತ ಹಲವು ನೆರೆದೇಶಗಳಿವೆ. ಅದರ ಉತ್ತರಕ್ಕೆ ಲೆಬನಾನ್, ಈಶಾನ್ಯಕ್ಕೆ ಸಿರಿಯಾ, ನೈರುತ್ಯಕ್ಕೆ ಈಜಿಪ್ಟ್ ಮತ್ತು ಪಶ್ಚಿಮಕ್ಕೆ ಮೆಡಿಟರೇನಿಯನ್ ಸಮುದ್ರವಿದೆ. ಈ ಪೈಕಿ ಮೆಡಿಟರೇನಿಯನ್ ಸಮುದ್ರವೊಂದನ್ನು ಬಿಟ್ಟರೆ ಬೇರೆಲ್ಲ ನೆರೆಯವರ ಜೊತೆ ಯುದ್ಧಮಾಡಿದ ಅನುಭವ ಇಸ್ರೇಲ್‌ಗಿದೆ.
‘‘ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲ್ ನಡೆಸುತ್ತಿರುವ ಬಡಾವಣೆಗಳನ್ನು ಕಟ್ಟುವ ಚಟುವಟಿಕೆಗಳು ಅಂತರ್‌ರಾಷ್ಟ್ರೀಯ ಕಾನೂನುಗಳ ಘೋರ ಉಲ್ಲಂಘನೆಯಾಗಿದ್ದು ಅವುಗಳಿಗೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ’’ ಎಂದು ಪ್ರತಿಪಾದಿಸುವ ನಿರ್ಣಯವೊಂದನ್ನು (ಕ್ರಮ ಸಂಖ್ಯೆ - 2334) ಭದ್ರತಾ ಮಂಡಳಿಯಲ್ಲಿ ಮತಕ್ಕೆ ಹಾಕಲಾಗಿತ್ತು. ಈ ನಿರ್ಣಯಕ್ಕೆ ತಡೆ ತರಲು ಇಸ್ರೇಲ್ ಸಾಕಷ್ಟು ಶ್ರಮಿಸಿತ್ತು. ಅಮೆರಿಕ ಸರಕಾರ ಎಂದಿನಂತೆ ವೀಟೋ ಬಳಸಿ ತನ್ನ ರಕ್ಷಣೆಗೆ ನಿಲ್ಲುತ್ತದೆ ಎಂದು ನಿರೀಕ್ಷಿಸಿತ್ತು. ಆದರೆ ಅಮೆರಿಕ ಈ ವಿಷಯದಲ್ಲಿ ಮತದಾನ ನಡೆಸದಿರುವ ಮೂಲಕ, ನಿರ್ಣಯದ ಅಂಗೀಕಾರಕ್ಕೆ ದಾರಿ ಸುಗಮಗೊಳಿಸಿ ಇಸ್ರೇಲನ್ನು ನಿರಾಶೆಗೊಳಿಸಿತು. ಜಾಗತಿಕ ಸಮುದಾಯದಲ್ಲಿ ಆಶಾವಾದ ಚ�