ಇಸ್ರೇಲ್-ಗಾಝಾ ಸಂಘರ್ಷದಿಂದ ಮಧ್ಯಪ್ರಾಚ್ಯ ತಪ್ಪು ದಿಕ್ಕಿನತ್ತ: ಸೌದಿ ಅರೇಬಿಯ
Update: 2021-05-19 16:30 GMT
ಪ್ಯಾರಿಸ್ (ಫ್ರಾನ್ಸ್), ಮೇ 19: ಇಸ್ರೇಲ್-ಗಾಝಾ ಸಂಘರ್ಷವು ಈ ಇಡೀ ವಲಯವನ್ನು ತಪ್ಪು ದಿಕ್ಕಿನತ್ತ ನೂಕುತ್ತಿದೆ ಎಂದು ಸೌದಿ ಅರೇಬಿಯದ ವಿದೇಶ ಸಚಿವ ಫೈಸಲ್ ಬಿನ್ ಫರ್ಹಾನ್ ಮಂಗಳವಾರ ಹೇಳಿದ್ದಾರೆ ಹಾಗೂ ಹಿಂಸೆಯನ್ನು ಕೊನೆಗೊಳಿಸುವಂತೆ ಉಭಯ ಬಣಗಳಿಗೆ ಕರೆ ನೀಡಿದ್ದಾರೆ.
ಈ ಸಂಘರ್ಷವು ನಮ್ಮನ್ನು ತಪ್ಪು ದಿಕ್ಕಿನತ್ತ ನೂಕುತ್ತಿದೆ. ಅಂದರೆ ಈ ಮೂಲಕ ನಾವು ಶಾಶ್ವತ ಶಾಂತಿಯನ್ನು ಪಡೆಯುವ ದಾರಿಯನ್ನು ಹೆಚ್ಚೆಚ್ಚು ಕಠಿಣಗೊಳಿಸುತ್ತಿದ್ದೇವೆ ಎಂದು ಎಎಫ್ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಫರ್ಹಾನ್ ಹೇಳಿದರು.
ಈ ಸಂಘರ್ಷವು ಉಗ್ರಗಾಮಿಗಳಿಗೆ ಶಕ್ತಿ ತುಂಬುತ್ತಿದೆ ಎಂದರು.
ಇದು ನಮ್ಮ ವಲಯದಲ್ಲಿರುವ ಅತ್ಯಂತ ಅಸಹಿಷ್ಣು ಧ್ವನಿಗಳಿಗೆ ಶಕ್ತಿ ತುಂಬುತ್ತಿದೆ ಹಾಗೂ ನಿಜವಾದ ಶಾಂತಿಯನ್ನು ಕಂಡುಕೊಳ್ಳುವ ದಾರಿಯನ್ನು ಕಠಿಣಗೊಳಿಸುತ್ತಿದೆ. ಸುಡಾನ್ ಮತ್ತು ಆಫ್ರಿಕ ಕುರಿತು ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಶೃಂಗ ಸಮ್ಮೇಳನಗಳ ನೇಪಥ್ಯದಲ್ಲಿ ಮಾತನಾಡಿದ ಅವರು ಹೇಳಿದರು.