ಶಿಲೀಂಧ್ರಗಳು ಸಂಪೂರ್ಣವಾಗಿ ನಾಶವಾದರೆ....?

Update: 2021-05-22 19:30 GMT

ಬೆಳಗ್ಗೆ ದಿನಪತ್ರಿಕೆಯನ್ನು ಹಿಡಿದು ಕುಳಿತ ಅನು ಜೋರಾಗಿ ಅದರಲ್ಲಿನ ಸುದ್ದಿಯನ್ನು ಓದತೊಡಗಿದಳು. ಬ್ಲಾಕ್ ಫಂಗಸ್ ಹಾವಳಿಯ ಬಗ್ಗೆ ಬಂದ ವರದಿ ಅವಳನ್ನು ಚಕಿತಗೊಳಿಸಿತು. ಪತ್ರಿಕೆ ಹಿಡಿದುಕೊಂಡೇ ತನ್ನ ತಂದೆಯ ಕೋಣೆಗೆ ಹೋದಳು. ಪುಸ್ತಕ ಜೋಡಿಸಿಡುವಲ್ಲಿ ವ್ಯಸ್ತರಾಗಿದ್ದ ತಂದೆ ಇವಳ ಬರುವಿಕೆಯಿಂದ ಸ್ವಲ್ಪಗಲಿಬಿಲಿಗೊಂಡರು. ಇವಳು ಮತ್ತಾವುದೋ ಪ್ರಶ್ನೆಯನ್ನು ಹೊತ್ತು ತಂದಿದ್ದಾಳೆ ಎಂಬುದು ಖಾತ್ರಿಯಾಯಿತು. ಅವರ ಊಹೆ ನಿಜವಾಗಿತ್ತು. ‘‘ಪಪ್ಪಾ, ಬ್ಲಾಕ್ ಫಂಗಸ್ ಅಂದ್ರೆ ಏನಪ್ಪಾ?, ಇದರಿಂದ ಆಗುವ ತೊಂದರೆಗಳ ಬಗ್ಗೆ ಒಂದಿಷ್ಟು ಹೇಳಪ್ಪಾ’’ ಎಂದು ಅಲವತ್ತುಕೊಂಡಳು. ನೋಡಮ್ಮ, ನಾನೀಗ ಪುಸ್ತಕ ಜೋಡಿಸುವ ಕೆಲಸದಲ್ಲಿದ್ದೇನೆ. ನಂತರ ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ. ಅಲ್ಲಿವರೆಗೂ ನ್ಯೂಸ್ ಪೇಪರ್‌ನಲ್ಲಿನ ವಿಷಯಗಳನ್ನು ಓದುತ್ತಾ ಇರು ಎಂದು ಹೇಳಿ ಕಳಿಸಿದರು. ಒಂದು ಗಂಟೆಯ ಬಳಿಕ ತಮ್ಮ ಕೆಲಸ ಮುಗಿಸಿಕೊಂಡು ಹಾಲ್‌ಗೆ ಮರಳಿದರು. ತಂದೆಯ ಬರುವಿಕೆಯನ್ನೇ ಕಾಯುತ್ತಾ ಕುಳಿತಿದ್ದ ಅನು ಮತ್ತದೇ ಪ್ರಶ್ನೆಯನ್ನು ಕೇಳಿದಳು. ಅವಳ ವಿಷಯಾಸಕ್ತಿ ಗಮನಿಸಿದ ತಂದೆ ಉತ್ತರಿಸಲು ಸಿದ್ಧರಾದರು. ‘ಬ್ಲಾಕ್ ಫಂಗಸ್’ ಎಂಬುದು ಒಂದು ವಿಧವಾದ ಫಂಗಸ್. ಕನ್ನಡದಲ್ಲಿ ಇದನ್ನು ‘ಕಪ್ಪು ಶಿಲೀಂಧ್ರ’ ಎನ್ನುತ್ತಾರೆ. ವೈದ್ಯಕೀಯ ಪರಿಭಾಷೆಯಲ್ಲಿ ‘ಮ್ಯೂಕರ್ ಮೈಕೋಸಿಸ್’ ಎಂದು ಕರೆಯಲ್ಪಡುವ ಈ ಕಾಯಿಲೆ ಸದ್ಯಕ್ಕೆ ಮಾರಣಾಂತಿಕ ಎಂದು ಬಿಂಬಿತವಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ, ಕೋವಿಡ್ ವೈರಸ್‌ಗೆ ತುತ್ತಾದ ಡಯಾಬಿಟಿಕ್ ರೋಗಿಗಳಿಗೆ ಈ ರೋಗ ಹೆಚ್ಚು ಬಾಧಿಸುತ್ತಿದೆ ಎನ್ನಲಾಗುತ್ತಿದೆ. ಆದಾಗ್ಯೂ ಬ್ಲಾಕ್ ಫಂಗಸ್ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಹಾಗೂ ಅನ್ವಯಿಕಗಳ ಅವಶ್ಯಕತೆ ಇದೆ.

ಕೇವಲ ಬ್ಲಾಕ್ ಫಂಗಸ್‌ನ ಬಗ್ಗೆ ತಿಳಿಯುವುದರ ಬದಲು ಫಂಗಸ್‌ಗಳ ಬಗ್ಗೆ ತಿಳಿದುಕೊಂಡರೆ ಇನ್ನೂ ಉತ್ತಮ. ಸಸ್ಯ ಸಾಮ್ರಾಜ್ಯದಲ್ಲಿ ಮೊನೆರಾ ಸಾಮ್ರಾಜ್ಯಕ್ಕೆ ಸೇರಿದ ಶಿಲೀಂಧ್ರಗಳು ಶೈವಲಗಳಿಗೆ ಹತ್ತಿರವಾದವುಗಳು. ಇವುಗಳ ಜೀವಕೋಶದಲ್ಲಿ ಕ್ಲೋರೋಫಿಲ್ ಇಲ್ಲದಿರುವುದರಿಂದ ಇವು ದ್ಯುತಿಸಂಶ್ಲೇಷಣೆ ಮಾಡಲಾರವು. ಹಾಗಾಗಿ ಇವು ಪರ ಪೋಷಿತ ಜೀವಿಗಳು. ಕೊಳೆತಿನಿ ಅಥವಾ ಪರಾವಲಂಬಿಗಳಾಗಿ ತಮ್ಮ ಜೀವನ ನಡೆಸುತ್ತಿವೆ. ಯೀಸ್ಟ್‌ನಂತಹ ಕೆಲವು ಶಿಲೀಂಧ್ರಗಳು ಏಕಕೋಶೀಯಗಳಾಗಿವೆ. ಹಸಿ ಕೊಬ್ಬರಿ, ಬ್ರೆಡ್ಡು, ರೊಟ್ಟಿ, ಉಪ್ಪಿನಕಾಯಿ, ತರಕಾರಿ, ಹಣ್ಣುಗಳಂತಹ ಕೆಲವು ವಸ್ತುಗಳ ಮೇಲೆ ಬೂಸ್ಟ್ ಬೆಳೆದಿರುವುದನ್ನು ನೀವು ಗಮನಿಸಿರಬಹುದು. ಅವೇ ಶಿಲೀಂಧ್ರಗಳು. ಅಲ್ಲದೇ ಮಳೆಗಾಲದಲ್ಲಿ ಕಸಕಡ್ಡಿ ರಾಶಿಗಳ ಮೇಲೆ ಬೆಳೆಯುವ ಅಣಬೆ, ಟೋಡ್‌ಸ್ಪೂಲ್, ಪಫ್‌ಬಾಲ್ ಇವುಗಳೂ ಶಿಲೀಂಧ್ರಗಳೇ ಆಗಿವೆ. ಇವು ಸತ್ತ ಅಥವಾ ಕೊಳೆಯುತ್ತಿರುವ ಪದಾರ್ಥಗಳನ್ನು ವಿಘಟಿಸಿ ಅದರ ಸಾರವನ್ನು ಹೀರಿ ಬೆಳೆಯುತ್ತವೆ. ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಿಲೀಂಧ್ರಗಳಿಗೆ ಮಹತ್ವದ ಸ್ಥಾನ ಇದೆ. ಪರಿಸರ ವ್ಯವಸ್ಥೆಯಲ್ಲಿ ಶಿಲೀಂಧ್ರಗಳು ಡೀಕಾಂಪೋಸರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ತಂದೆ ಶಿಲೀಂಧ್ರಗಳ ಬಗ್ಗೆ ವಿವರಿಸುತ್ತಿದ್ದರು.

ಅವರ ವಿವರಣೆಗೆ ಬ್ರೆಕ್ ಹಾಕಿದ ಅನು ‘‘ಪಪ್ಪಾ ಶಿಲೀಂಧ್ರಗಳು ಸಂಪೂರ್ಣವಾಗಿ ನಾಶವಾದರೆ ಏನಾಗುತ್ತಿತ್ತು?’’ ಎಂದು ಪ್ರಶ್ನಿಸಿದಳು. ‘‘ಮಗಳೇ, ಶಿಲೀಂಧ್ರಗಳಿಂದ ನಮಗೆ ತುಂಬಾ ಉಪಯೋಗವಿದೆ. ಅವುಗಳಿಲ್ಲದೆ ಹುದುಗುವಿಕೆ ಪ್ರಕ್ರಿಯೆ ಪೂರ್ಣವಾಗಲಾರದು. ಹಾಗಾಗಿ ಶಿಲೀಂಧ್ರಗಳು ಇಲ್ಲದಿದ್ದರೆ ಇಡ್ಲಿ, ದೋಸೆ, ಬ್ರೆಡ್ ಮುಂತಾದ ಆಹಾರ ಪದಾರ್ಥಗಳನ್ನು ತಯಾರಿಸಲು ಆಗುತ್ತಿರಲಿಲ್ಲ. ಯೀಸ್ಟ್‌ನಂತಹ ಶಿಲೀಂಧ್ರಗಳು ಹುದುಗುವಿಕೆಗೆ ಸಹಾಯ ಮಾಡುತ್ತವೆ. ಅಷ್ಟೇ ಅಲ್ಲ ಬಿಯರ್ ತಯಾರಿಸಲೂ ಆಗುತ್ತಿರಲಿಲ್ಲ. ಶಿಲೀಂಧ್ರಗಳನ್ನು ಪ್ರಾಣಿಗಳಲ್ಲಿ ರೋಗಕಾರಕಗಳಾಗಿ, ಹಾನಿಕಾರಕ ಕೀಟಗಳ ಸಂಖ್ಯೆ ನಿಯಂತ್ರಿಸಲು ಬಳಸಲಾಗುತ್ತದೆ. ಶಿಲೀಂಧ್ರಗಳು ಇಲ್ಲದಿದ್ದರೆ ಸಸ್ಯ ಹಾಗೂ ಪ್ರಾಣಿಗಳಿಗೆ ತಗಲುವ ಅನೇಕ ಸೋಂಕು ರೋಗಗಳಿಗೆ ಔಷಧಿ ಕಂಡುಹಿಡಿಯಲು ಆಗುತ್ತಿರಲಿಲ್ಲ. ಹೊಸ ಹೊಸ ತಳಿಗಳ ಉತ್ಪಾದನೆಯಲ್ಲಿ ಶಿಲೀಂಧ್ರಗಳ ಪಾತ್ರ ಬಹು ದೊಡ್ಡದು. ಮೂಲ ವ್ಯವಸ್ಥೆಯಲ್ಲಿ ಶಿಲೀಂಧ್ರಗಳ ಪಾಲು ಇಲ್ಲದಿದ್ದರೆ 80-90ರಷ್ಟು ಮರಗಳು ಮತ್ತು ಹುಲ್ಲುಗಳು ಬದುಕುಳಿಯುವುದಿಲ್ಲ. ಮೈಕೋರೈಜರ್‌ನಂತಹ ಶಿಲೀಂಧ್ರಗಳು ಮಣ್ಣಿಗೆ ಸೇರ್ಪಡೆಯಾಗದೇ ಹೋದರೆ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತದೆ.

ಮಾನವನ ಆಹಾರದಲ್ಲಿ ಶಿಲೀಂಧ್ರಗಳ ಪಾತ್ರ ಮಹತ್ವದ್ದು. ಅಣಬೆ ಒಂದು ಶಿಲೀಂಧ್ರವಾಗಿದ್ದು, ಅದನ್ನು ಆಹಾರವಾಗಿ ಬಳಸುತ್ತೇವೆ. ಮೊರೆಲ್ಸ್, ಶಿಟಾಕ್ ಅಣಬೆಗಳು, ಚಾಂಟೆರೆಲ್ಲೆಸ್ ಮತ್ತು ಟ್ರಫಲ್ಸ್‌ಗಳನ್ನು ಆಹಾರಕ್ಕಾಗಿ ಬಳಸಲಾಗುತ್ತದೆ ಎಂದು ತಂದೆ ಹೇಳುತ್ತಲೇ ಇದ್ದರು. ‘‘ಪಪ್ಪಾ, ಮಳೆಗಾಲದಲ್ಲಿ ಹೊಲಗಳಲ್ಲಿ ಅಣಬೆಗಳು ಯಥೇಚ್ಛವಾಗಿ ದೊರೆಯುತ್ತವೆ. ಅವುಗಳನ್ನು ಕಿತ್ತು ತಂದು ಪಲ್ಯ, ಸಾರು ಮಾಡಿಕೊಂಡು ಉಣ್ಣುತ್ತೇವೆ. ಅಲ್ವೇನಪ್ಪ’’ ಎಂದು ಮಧ್ಯೆ ಬಾಯಿ ಹಾಕಿ ತನ್ನ ಪೂರ್ವಜ್ಞಾನಕ್ಕೆ ಹೊಸ ಜ್ಞಾನ ಸೇರಿಸಿಕೊಳ್ಳುವ ತವಕದಲ್ಲಿದ್ದಳು. ಹೌದಮ್ಮ, ಮಳೆಗಾಲದಲ್ಲಿ ಹೊಲಗಳಲ್ಲಿ ಅಣಬೆಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತವೆ. ಅವು ತುಂಬಾ ಫ್ರೆಶ್ ಆಗಿರುತ್ತವೆ. ಅಣಬೆ ಊಟ ತುಂಬಾ ರುಚಿಕರ ಮತ್ತು ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಬಟನ್ ಅಣಬೆ ಮತ್ತು ಪೋರ್ಟೋಬೆಲ್ಲೊ ಅಣಬೆಗಳನ್ನು ಸಲಾಡ್ ಮತ್ತು ಸೂಪ್ ತಯಾರಿಕೆಯಲ್ಲಿ ಬಳಸುತ್ತಾರೆ. ಅಲ್ಲದೆ ಅಣಬೆಗಳನ್ನು ನೇರಳಾತೀತ ಬೆಳಕಿಗೆ ಒಡ್ಡಿದಾಗ ಅವುಗಳಲ್ಲಿ ವಿಟಮಿನ್ ಡಿ-2 ಪ್ರಮಾಣ ಹೆಚ್ಚಾಗುತ್ತದೆ ಎಂಬುದನ್ನು ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಅಧ್ಯಯನ ಮಾಡಿದೆ. ಆದರೆ ಎಲ್ಲಾ ಅಣಬೆಗಳನ್ನು ಆಹಾರಕ್ಕಾಗಿ ಬಳಸುವುದಿಲ್ಲ. ಹುಚ್ಚಣಬೆ ಎಂದು ಕರೆಯಲ್ಪಡುವ ಕೆಲವು ಅಣಬೆಗಳು ವಿಷಕಾರಿ. ಅವುಗಳನ್ನು ತಿನ್ನುವುದಿಲ್ಲ. ಇನ್ನು ಮಳೆಗಾಲದ ದಿನಗಳಲ್ಲಿ ತಿಪ್ಪೆಗಳು, ಕಸದ ತೊಟ್ಟಿಗಳ ಬಳಿ ನಾಯಿಕೊಡೆಗಳು ಬೆಳೆದಿರುವುದನ್ನು ನೀನು ನೋಡಿರಬಹುದು. ಅವು ಸಹ ಶಿಲೀಂಧ್ರಗಳೇ ಆಗಿವೆ. ಆದರೆ ಅವುಗಳನ್ನು ಆಹಾರವಾಗಿ ಬಳಸುವುದಿಲ್ಲ.

ಶಿಲೀಂಧ್ರಗಳು ಇಲ್ಲದೆ ಕೆಲವು ಪಾನೀಯಗಳನ್ನು ಕುಡಿಯಲಾಗುವುದಿಲ್ಲ. ಕೃತಕವಾಗಿ ತಯಾರಿಸುವ ಸಿಟ್ರಾ, ಲಿಮ್ಕಾದಂತಹ ಕೆಲವು ಪಾನೀಯಗಳ ತಯಾರಿಕೆಯಲ್ಲಿ ಶಿಲೀಂಧ್ರಗಳನ್ನು ಬಳಸಲಾಗುತ್ತದೆ. ಸಿಟ್ರಿಕ್, ಮಾಲಿಕ್ ಮತ್ತು ಲ್ಯಾಕ್ಟಿಕ್ ಆಮ್ಲಗಳ ತಯಾರಿಕೆಗೆ ಶಿಲೀಂಧ್ರಗಳನ್ನು ಬಳಸುತ್ತಾರೆ. ಕೈಗಾರಿಕಾ ಕಿಣ್ವಗಳಾದ ಲಿಪೇಸ್, ಸೆಲ್ಯುಲೇಸ್ ಮತ್ತು ಅಮೈಲೇಸ್‌ಗಳ ಉತ್ಪಾದನೆಯಲ್ಲಿ ಶಿಲೀಂಧ್ರಗಳನ್ನು ಬಳಸುತ್ತಾರೆ. ಲಿಪೇಸ್‌ನ್ನು ಲಾಂಡ್ರಿ ಡಿಟರ್ಜಂಟ್‌ಗಳಲ್ಲಿ ಬಳಸುತ್ತಾರೆ. ಶಿಲೀಂಧ್ರಗಳು ಇಲ್ಲದೆ ಇದ್ದರೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಸೃಷ್ಟಿಸಲು ಆಗುತ್ತಿರಲಿಲ್ಲ. ಪೆನ್ಸಿಲಿನ್ ಮತ್ತು ಸೆಫಲೋಸ್ಪೊರಿನ್‌ಗಳಂತಹ ಪ್ರತಿಜೀವಕಗಳು ಶಿಲೀಂಧ್ರಗಳಿಂದಲೇ ತಯಾರಾಗಿದ್ದು ಎಂಬುದನ್ನು ಮರೆಯುವಂತಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಶಿಲೀಂಧ್ರಗಳ ಬಳಕೆ ಸಾಕಷ್ಟು ಪ್ರಮಾಣದಲ್ಲಿ ಇದೆ. ಗ್ಯಾನೋಡರ್ಮ ಲುಸಿಡಮ್, ಅಗರಿಕಸ್ ಸಬ್ರೂಫೆಸ್ಸೆನ್ಸ್ ಮತ್ತು ಕಾರ್ಡಿಸೆಪ್ಸ್ ಸಿನೆನ್ಸಿಸ್ ಮುಂತಾದ ಅಣಬೆಗಳನ್ನು ಚೀನೀ ಸಾಂಪ್ರದಾಯಿಕ ಔಷಧದಲ್ಲಿ ಚಿಕಿತ್ಸಕವಾಗಿ ಬಳಸಲಾಗುತ್ತದೆ. ಶಿಟಾಕ್ ಮಶ್ರುಂ ಲೆಂಟಿನಾನ್ ಎಂಬ ಶಿಲೀಂಧ್ರವು ಕ್ಲಿನಿಕಲ್ ಔಷಧದ ಮೂಲವಾಗಿದೆ. ಜಪಾನ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಲೆಂಟಿನಾನ್ ಬಳಸಲು ಅನುಮತಿ ನೀಡಲಾಗಿದೆ. ಅಲ್ಲದೆ ಕೃಷಿ ಸಂಬಂಧಿತ ಕೆಲವು ಪೆಸ್ಟಿಸೈಡ್ಸ್ ತಯಾರಿಕೆಯಲ್ಲಿ ಶಿಲೀಂಧ್ರಗಳನ್ನು ಬಳಸುತ್ತಾರೆ. ಪರಿಸರ ವ್ಯವಸ್ಥೆಯಲ್ಲಿ ಶಿಲೀಂಧ್ರಗಳ ಪಾತ್ರ ಮಹತ್ವದ್ದು. ಶಿಲೀಂಧ್ರಗಳು ಇಲ್ಲದೆ ಇದ್ದರೆ ಎಲ್ಲೆಲ್ಲೂ ಕಸ, ಪ್ರಾಣಿ ಮತ್ತು ಸಸ್ಯಗಳ ತ್ಯಾಜ್ಯ ತುಂಬಿರುತ್ತಿತ್ತು. ಸತ್ತ ಪ್ರಾಣಿಗಳ ದೇಹಗಳು ಕೊಳೆಯದೆ ಹಾಗೇ ಇರುತ್ತಿದ್ದವು. ಆದರೆ ಶಿಲೀಂಧ್ರಗಳು ಎಲೆಗಳ ಕಸ ಕಡ್ಡಿ, ಪ್ರಾಣಿಗಳ ಸೆಗಣಿ, ನೆಲಕ್ಕೆ ಬಿದ್ದ ಸಸ್ಯದ ಒಣ ಭಾಗಗಳು, ಸತ್ತ ಪ್ರಾಣಿಗಳ ದೇಹಗಳು ಕೊಳೆಯಲು ಸಹಾಯ ಮಾಡುತ್ತವೆ. ಇವುಗಳನ್ನು ಸಾವಯವ ಪದಾರ್ಥಗಳನ್ನಾಗಿ ಮರುಬಳಕೆಗೆ ಪೂರಕವಾಗುವಂತೆ ಮಾಡುವಲ್ಲಿ ಶಿಲೀಂಧ್ರಗಳ ಪಾತ್ರ ಬಹುದೊಡ್ಡದು. ಹಾಗಾಗಿ ಶಿಲೀಂಧ್ರಗಳನ್ನು ಪರಿಸರದ ಆರೋಗ್ಯ ಕಾರ್ಯಕರ್ತರು ಅಥವಾ ಪರಿಸರದ ವಾರಿಯರ್ಸ್‌ ಎಂದರೆ ತಪ್ಪಲ್ಲ.

ಒಟ್ಟಾರೆ ಮಾನವನ ದೈನಂದಿನ ಜೀವನದಲ್ಲಿ ಶಿಲೀಂಧ್ರಗಳು ಬಹುಮುಖ್ಯ ಪಾತ್ರ ವಹಿಸಿವೆ ಎಂದರೆ ತಪ್ಪಲ್ಲ. ಶಿಲೀಂಧ್ರಗಳು ಆಹಾರವಾಗಿ, ಪಾನೀಯವಾಗಿ, ಔಷಧವಾಗಿ, ಪ್ರತಿಜೀವಕಗಳಾಗಿ, ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ವಿಭಜಕಗಳಾಗಿ ಸಹಾಯ ಮಾಡುತ್ತವೆ. ಒಂದು ವೇಳೆ ಶಿಲೀಂಧ್ರಗಳು ಇಲ್ಲವಾದರೆ ಈ ಎಲ್ಲಾ ಪ್ರಕ್ರಿಯೆಗಳು ನಿಂತು ಹೋಗುತ್ತವೆ. ಅಂದಹಾಗೆ ಶಿಲೀಂಧ್ರಗಳಿಂದ ಬರೀ ಉಪಯೋಗಗಳಷ್ಟೇ ಅಲ್ಲ, ತೊಂದರೆಗಳೂ ಇವೆ ಎಂದರು ತಂದೆ.

‘‘ಏನು! ಶಿಲೀಂಧ್ರಗಳಿಂದ ತೊಂದರೆಯಾ?’’ ಎಂದು ಬಾಯಿ ಮತ್ತು ಕಣ್ಣನ್ನು ದೊಡ್ಡದು ಮಾಡಿ ಪ್ರಶ್ನಿಸಿದಳು ಅನು. ಹೌದಮ್ಮ, ಶಿಲೀಂಧ್ರಗಳಿಂದಲೂ ತೊಂದರೆಯಿದೆ. ನೀನು ಬೆಳಗ್ಗೆ ಪತ್ರಿಕೆಯಲ್ಲಿ ಓದಿದ ಬ್ಲಾಕ್ ಫಂಗಸ್ ಒಂದು ಶಿಲೀಂಧ್ರವಲ್ಲವೇ? ಇದು ಸದ್ಯಕ್ಕೆ ಗಂಭೀರ ಕಾಯಿಲೆ ಎಂಬಂತೆ ಬಿಂಬಿಸಲಾಗಿದೆ. ಇದಕ್ಕೆ ಅಂಪೋಟೆರಿಸಿನ್-ಬಿ ಎಂಬ ಔಷಧಿಯೂ ಇದೆ. ಆದರೆ ಅದರ ಬೆಲೆ ಸ್ವಲ್ಪ ದುಬಾರಿ. ಈಗಿನ ಮಾಫಿಯಾ ಜಗತ್ತಿನಲ್ಲಿ ಅದರ ಬೆಲೆ ನಾಲ್ಕರಷ್ಟಾದರೂ ಆಶ್ಚರ್ಯಪಡಬೇಕಿಲ್ಲ. ಕಜ್ಜಿ, ತುರಿಕೆ, ಗಜಕರ್ಣ, ಹುಳುಕಡ್ಡಿಯಂತಹ ಕೆಲ ಚರ್ಮ ಕಾಯಿಲೆಗಳು ಶಿಲೀಂಧ್ರ ಸೊಂಕಿನಿಂದ ಉಂಟಾಗುತ್ತಿವೆ. ಇದಕ್ಕೆ ಔಷಧಿಯೂ ಲಭ್ಯ ಇದೆ. ಕೃಷಿ ಬೆಳೆಗಳಿಗೂ ಕೆಲವು ಶಿಲೀಂಧ್ರ ಸೋಂಕು ಉಂಟಾಗಿ ಬೆಳೆಗಳು ಹಾನಿಯಾಗುತ್ತವೆ. ಇದಕ್ಕೂ ಔಷಧ ಲಭ್ಯವಿದೆ. ಶಿಲೀಂಧ್ರಗಳಿಂದ ತೊಂದರೆಯ ಪ್ರಮಾಣಕ್ಕಿಂತ ಬಳಕೆಯ ಪ್ರಮಾಣ ಹೆಚ್ಚಿದೆ. ಹಾಗಾಗಿ ಯಾವುದೇ ಭಯ ಪಡುವ ಅಗತ್ಯವಿಲ್ಲ ಎನ್ನುತ್ತಾ ತಂದೆ ತಮ್ಮ ಸುದೀರ್ಘ ವಿಷಯಕ್ಕೆ ವಿರಾಮ ನೀಡಿದರು.

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News