ಮೋದಿಯವರ ಹಿಂದುತ್ವ ತರ್ಕಹೀನತೆ ಕೋವಿಡ್ ವಿರುದ್ಧದ ಭಾರತದ ಹೋರಾಟವನ್ನು ಇನ್ನಷ್ಟು ಕಠಿಣವಾಗಿಸುತ್ತಿದೆ

Update: 2021-05-23 12:00 GMT

ಕೋವಿಡ್-19 ಸಾಂಕ್ರಾಮಿಕ ಕಾಲದಲ್ಲಿ ನಾವು ನಮ್ಮ ನಿರೋಧಕತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎನ್ನುವುದರ ಕುರಿತು ಆಯುಷ್ ಸಚಿವಾಲಯವು ಈ ತಿಂಗಳ ಆರಂಭದಲ್ಲಿ ಕೆಲವೊಂದು ಸಲಹೆಗಳನ್ನು ಹೊರಡಿಸಿತ್ತು. ಬೆಳಿಗ್ಗೆ ಮತ್ತು ಸಂಜೆ ಮೂಗಿನ ಹೊಳ್ಳೆಗಳಲ್ಲಿ ಎಳ್ಳಿನೆಣ್ಣೆ/ತೆಂಗಿನೆಣ್ಣೆ/ಆಕಳ ತುಪ್ಪವನ್ನು ಸವರಿಕೊಳ್ಳುವುದು ಸೇರಿದಂತೆ ಹಲವಾರು ಶಿಫಾರಸುಗಳನ್ನು ಸಚಿವಾಲಯವು ಮಾಡಿತ್ತು.
 
ಆದರೆ ಇದು ನಿಮಗೆ ಇಷ್ಟವಿಲ್ಲದ್ದರೆ ಅದಕ್ಕೆ ಪರ್ಯಾಯವನ್ನೂ ಸಚಿವಾಲಯವು ಸೂಚಿಸಿತ್ತು. ಒಂದು ಟೇಬಲ್ ಸ್ಪೂನ್ ಎಳ್ಳಿನೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಬಾಯಿಯೊಳಗೆ ಹಾಕಿಕೊಂಡು 2-3 ನಿಮಿಷಗಳ ಕಾಲ ಮುಕ್ಕಳಿಸುವಂತೆ ಮತ್ತು ಬಳಿಕ ಅದನ್ನು ಉಗಿದು ಬೆಚ್ಚಗಿನ ನೀರಿನಿಂದ ಬಾಯಿಯನ್ನು ತೊಳೆದುಕೊಳ್ಳುವಂತೆ ಅದು ತಿಳಿಸಿತ್ತು.

ಮಾರಣಾಂತಿಕ ಕೋವಿಡ್ ಸಾಂಕ್ರಾಮಿಕವನ್ನು ದೂರವಿಡಲು ಚ್ಯವನಪ್ರಾಶ ಸೇವನೆ,ಮೂಲಿಕೆಗಳ ಕಷಾಯದ ಸೇವನೆ,ಬಿಸಿ ಆವಿಯನ್ನು ಒಳಗೆಳೆದುಕೊಳ್ಳುವುದು ಇತ್ಯಾದಿ ಕ್ರಮಗಳನ್ನೂ ಸಚಿವಾಲಯವು ಶಿಫಾರಸು ಮಾಡಿತ್ತು. ಆಯುಷ್ ಸಚಿವಾಲಯವು ಪ್ರಕಟಿಸಿದ್ದ ಜಾಹೀರಾತುಗಳು ತಾನು ಶಿಫಾರಸು ಮಾಡಿರುವ ಕ್ರಮಗಳನ್ನು ಅನುಸರಿಸಿದರೆ ದೇಶಭಕ್ತ ಕೋವಿಡ್ಗೆ ತುತ್ತಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವುದರಿಂದ ಅದೇಕೋ ಕೊಂಚ ದೂರವೇ ಉಳಿದಿದ್ದವಾದರೂ,ಈ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸಿದರೆ ಸಾಂಕ್ರಾಮಿಕಕ್ಕೆ ತುತ್ತಾಗುವ ಸಾಧ್ಯತೆ ತೀರ ಕಡಿಮೆ ಎಂಬ ಅರ್ಥವನ್ನು ಧ್ವನಿಸಿದ್ದವು. 21ನೇ ಶತಮಾನದ ಈ ಅತ್ಯಂತ ಮಾರಣಾಂತಿಕ ಸಾಂಕ್ರಾಮಿಕಕ್ಕೆ ಯಾವುದೇ ಆಧಾರಗಳಿಲ್ಲದ ಚಿಕಿತ್ಸಾಕ್ರಮಗಳನ್ನು ಸೂಚಿಸುವುದರಲ್ಲಿ ಬಿಜೆಪಿಯ ನಾಯಕರು ಮತ್ತು ಪ್ರಚಾರಕರೂ ಹಿಂದುಳಿದಿರಲಿಲ್ಲ.
 
ನನ್ನ ಕರ್ನಾಟಕ ರಾಜ್ಯದಲ್ಲಿ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ವಿಜಯ ಸಂಕೇಶ್ವರ ಅವರು ಆಮ್ಲಜನಕಕ್ಕೆ ಪರ್ಯಾಯವಾಗಿ ಲಿಂಬೆರಸವನ್ನು ಮೂಗಿನ ಹೊಳ್ಳೆಗಳಲ್ಲಿ ಬಿಟ್ಟುಕೊಳ್ಳುವಂತೆ ಶಿಫಾರಸು ಮಾಡಿದ್ದರು. ಅದು ಆಮ್ಲಜನಕದ ಮಟ್ಟವನ್ನು ಶೇ.80ರಷ್ಟು ಹೆಚ್ಚಿಸುತ್ತದೆ ಮತ್ತು ಈ ಮನೆಮದ್ದು ತನ್ನ ಬಂಧುಗಳು ಮತ್ತು ಸಹೋದ್ಯೋಗಿಗಳು ಸೇರಿದಂತೆ 200 ಜನರಲ್ಲಿ ಪರಿಣಾಮಕಾರಿಯಾಗಿದೆ ಎಂದು ಸಂಕೇಶ್ವರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು. ಅವರ ಸಲಹೆಯನ್ನು ಅನುಸರಿಸಿದ ಹಲವರು ಪ್ರಾಣ ಕಳೆದುಕೊಂಡಿದ್ದನ್ನೂ ಈ ಮಾಧ್ಯಮಗಳು ವರದಿ ಮಾಡಿದ್ದವು.
ಕರ್ನಾಟಕದ ಪ್ರಭಾವಿ ಬಿಜೆಪಿ ನಾಯಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕೊರೋನವೈರಸ್ನ ವಿರುದ್ಧ ಹೋರಾಡಲು ಬಿಸಿ ಆವಿಯನ್ನು ಉಸಿರಾಡಿಸುವಂತೆ ಶಿಫಾರಸು ಮಾಡಿದ್ದರು. ಪೊಲೀಸರು ತಮ್ಮ ರಾಜಕೀಯ ಧಣಿಗಳ ಸಲಹೆಗಳನ್ನು ಪಾಲಿಸುವ ಭರದಲ್ಲಿ ಮಾಸ್ಕ್ಗಳನ್ನು ಧರಿಸದೆ ಅಪಾಯಕಾರಿ ರೀತಿಯಲ್ಲಿ ಒತ್ತೊತ್ತಾಗಿ ಕುಳಿತುಕೊಂಡು ಆವಿಯನ್ನು ಒಳಗೆಳೆದುಕೊಳ್ಳುತ್ತಿದ್ದ ಚಿತ್ರಗಳನ್ನು ಅವರು ಪೋಸ್ಟ್ ಮಾಡಿದ್ದರು.

ತನ್ಮಧ್ಯೆ ಬಿಜೆಪಿ ಆಡಳಿತದ ಇನ್ನೊಂದು ರಾಜ್ಯ ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಅವರು ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪ್ರಾಚೀನ ಹೋಮಹವನಗಳು ಪರಿಣಾಮಕಾರಿಯಾಗಿವೆ ಎಂಬ ಆಣಿಮುತ್ತನ್ನು ಉದುರಿಸಿದ್ದರು. ಅವರ ಈ ಸಲಹೆಯನ್ನು ಸಂಘ ಪರಿವಾರದ ಹಲವರು ಗಂಭೀರವಾಗಿ ಪರಿಗಣಿಸಿದ್ದು,ಅಲ್ಲಿಯ ಮನೆಮನೆಗಳಲ್ಲಿಯೂ ಹೋಮಹವನಗಳು ನಡೆದಿದ್ದವು. ಕಪ್ಪು ಟೊಪ್ಪಿಗೆ ಮತ್ತು ಖಾಕಿ ಚಡ್ಡಿ ಧರಿಸಿದ್ದ ಸ್ವಯಂಸೇವಕರು ಪ್ರತಿಮನೆಗೂ ಭೇಟಿ ನೀಡಿ ಬೇವಿನೆಲೆ ಮತ್ತು ಕಟ್ಟಿಗೆಯನ್ನು ಬಳಸಿ ಹವನಗಳನ್ನು ನಡೆಸುವ ಬಗ್ಗೆ ಮಾರ್ಗದರ್ಶನ ನೀಡಿದ್ದರು.

ಇನ್ನೊಂದು ಅದ್ಭುತ ಹೇಳಿಕೆಯಲ್ಲಿ ಮಹಾತ್ಮಾ ಗಾಂಧಿಯವರ ಹಂತಕ ನಿಜವಾದ ದೇಶಪ್ರೇಮಿಯೆಂದು ಭಾವಿಸಿರುವ ಭೋಪಾಳದ ವಿವಾದಾಸ್ಪದ ಬಿಜೆಪಿ ಸಂಸದೆ ತಾನು ಪ್ರತಿ ದಿನ ಗೋಮೂತ್ರವನ್ನು ಸೇವಿಸುತ್ತಿರುವುದರಿಂದ ತನಗೆ ಕೊರೋನವೈರಸ್ ಕಾಡಿಲ್ಲ ಎಂದಿದ್ದರು. ದೀರ್ಘ ಕಾಲದಿಂದ ಬಿಜೆಪಿಯ ಆಡಳಿತವಿರುವ ಗುಜರಾತಿನಲ್ಲಿ ಸಾಧುಗಳ ಗುಂಪೊಂದು ಕೊರೋನವೈರಸ್ ಸೋಂಕಿನಿಂದ ದೂರವಿರಲು ಆಕಳ ಸೆಗಣಿಯನ್ನು ನಿಯಮಿತವಾಗಿ ತಮ್ಮ ಮೈಗೆ ಬಳಿದುಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
 
ಆಡಳಿತ ಪಕ್ಷದ ನಾಯಕರು ಶಿಫಾರಸು ಮಾಡಿದ್ದ ಎಳ್ಳಷ್ಟೂ ಪ್ರಯೋಜನವಿಲ್ಲದ ಈ ಕ್ರಮಗಳಲ್ಲಿ ಸರಕಾರಿ ಸಂತ ರಾಮದೇವ್ ಅವರು ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದ ‘ಕೊರೊನಿಲ್ ’ಕೂಡ ಸೇರಿತ್ತು. ಇಬ್ಬರು ಹಿರಿಯ ಕೇಂದ್ರ ಸಚಿವರ ಉಪಸ್ಥಿತಿಯಲ್ಲಿ ಅದನ್ನು ಬಿಡುಗಡೆಗೊಳಿಸಿದ್ದ ರಾಮದೇವ್,ಕೊರೊನಿಲ್ ಕೊರೋನವೈರಸ್ ಅನ್ನು ಏಳು ದಿನಗಳಲ್ಲಿ ಗುಣಪಡಿಸುವ,ಶೇ.100ರಷ್ಟು ಖಾತರಿಯಿರುವ ಔಷಧಿಯಾಗಿದೆ ಎಂಬ ಆಧಾರರಹಿತ ಹೇಳಿಕೆಯನ್ನು ನೀಡಿದ್ದರು. ಈ ಪವಾಡ ಸದೃಶ ಔಷಧಿಯು ಅಗತ್ಯವಿರುವ ವೈಜ್ಞಾನಿಕ ದೃಢೀಕರಣವನ್ನು ಪಡೆದಿದೆ ಎಂದು ಹೇಳಿದ್ದ ರಾಮದೇವರ ಪತಂಜಲಿ ರೀಸರ್ಚ್ ಇನ್ಸ್ಟಿಟ್ಯೂಟ್ನ ಮುಖ್ಯಸ್ಥ ಅನುರಾಗ ವರ್ಷ್ನಿ,ಈ ಔಷಧಿಯನ್ನು ಸೇವಿಸಿದ ಕೋವಿಡ್ ರೋಗಿಗಳು ಏಳು ದಿನಗಳಲ್ಲಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ,ಆದರೆ ಪ್ಲೇಸ್ಬೋ ಚಿಕಿತ್ಸೆ ಪಡೆದವರಲ್ಲಿ ಕೇವಲ ಶೇ.60ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ. ಹೀಗಾಗಿ ಕೊರೊನಿಲ್ ಹೆಚ್ಚು ಪರಿಣಾಮಕಾರಿ ಔಷಧಿಯಾಗಿದೆ ಎಂದು ಹೇಳಿದ್ದರು. ಆದರೆ ಕೊರೊನಿಲ್ನ ಪರಿಣಾಮಕಾರಿತ್ವಕ್ಕೆ ಯಾವುದೇ ವೈಜ್ಞಾನಿಕ ಪುರಾವೆಯಿರಲಿಲ್ಲ ಮತ್ತು ವಿಶ್ವ ಆರೊಗ್ಯ ಸಂಸ್ಥೆಯು ಅದನ್ನು ಅಲ್ಲಗಳೆದಿದ್ದು ಹಾಗೂ ಕೊರೊನಿಲ್ ಅನ್ನು ಕೊರೋನವೈರಸ್ಗೆ ಔಷಧಿಯಾಗಿ ಮಾರಾಟ ಮಾಡುವುದನ್ನು ಆಯುಷ್ ಸಚಿವಾಲಯವು ನಿಷೇಧಿಸಿದ್ದು ಬೇರೆ ಕಥೆ ಬಿಡಿ.

ವೈದ್ಯಕೀಯ ಬಹುತ್ವ
 
ನಾನು ಇನ್ನಷ್ಟು ಮುಂದುವರಿಯುವ ಮುನ್ನ ವೈದ್ಯಕೀಯ ಬಹುತ್ವದಲ್ಲಿ ನನಗೆ ನಂಬಿಕೆಯಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಆಧುನಿಕ ಪಾಶ್ಚಾತ್ಯ ವೈದ್ಯ ಪದ್ಧತಿಯು ಮನುಕುಲಕ್ಕೆ ಗೊತ್ತಿರುವ ಎಲ್ಲ ರೋಗರುಜಿನಗಳಿಗೆ ಚಿಕಿತ್ಸೆಯನ್ನು ಹೊಂದಿದೆ ಎನ್ನುವುದನ್ನು ನಾನು ನಂಬುವುದಿಲ್ಲ. ಆಯುರ್ವೇದ,ಯೋಗ ಮತ್ತು ಹೋಮಿಯೊಪತಿಗಳಂತಹ ಪ್ರಾಚೀನ ವೈದ್ಯಪದ್ಧತಿಗಳಲ್ಲಿ ದೀರ್ಘಕಾಲಿಕ ಅಸ್ತಮಾ, ದೀರ್ಘಕಾಲಿಕ ಬೆನ್ನುನೋವು ಮತ್ತು ಅಲರ್ಜಿಗಳಂತಹ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆಗಳಿವೆ ಎಂದು ನಾನು ನನ್ನ ವೈಯಕ್ತಿಕ ಅನುಭವದಿಂದ ಹೇಳಬಲ್ಲೆ.

ಆದರೆ ಕೋವಿಡ್-19 21ನೇ ಶತಮಾನದ ವಿಶಿಷ್ಟ ವೈರಸ್ ಆಗಿದ್ದು,ಇದು ಆಯುರ್ವೇದ,ಯೋಗ,ಯುನಾನಿ,ಸಿದ್ಧ ಮತ್ತು ಹೋಮಿಯೊಪತಿ ವೈದ್ಯ ಪದ್ಧತಿಗಳನ್ನು ಆವಿಷ್ಕರಿಸಿದವರಿಗೆ ಮತ್ತು ಅಭಿವೃದ್ಧಿಗೊಳಿಸಿದವರಿಗೆ ಗೊತ್ತಿರಲಿಲ್ಲ. ಈ ವೈರಸ್ ಇನ್ನೂ ಒಂದು ವರ್ಷದಷ್ಟೇ ಹಳೆಯದಾಗಿದೆ. ಬೇವಿನ ಎಲೆಗಳನ್ನು ಸುಡುವುದರಿಂದ,ಗೋಮೂತ್ರ ಸೇವಿಸುವುದರಿಂದ,ಮೂಲಿಕೆಯಿಂದ ತಯಾರಾದ ಮಾತ್ರೆಯನ್ನು ನುಂಗುವುದರಿಂದ,ಆಕಳ ಸೆಗಣಿಯನ್ನು ಮೈಗೆ ಬಳಿದುಕೊಳ್ಳುವುದರಿಂದ ಅಥವಾ ಮೂಗಿನ ಹೊಳ್ಳೆಗಳಲ್ಲಿ ತೆಂಗಿನೆಣ್ಣೆ ಅಥವಾ ತುಪ್ಪವನ್ನು ಬಿಟ್ಟುಕೊಳ್ಳುವುದರಿಂದ ಕೋವಿಡ್ ಸಾಂಕ್ರಾಮಿಕವನ್ನು ತಡೆಯಬಹುದು ಅಥವಾ ಕೋವಿಡ್ ರೋಗಿಗಳು ಶೀಘ್ರ ಚೇತರಿಸಿಕೊಳ್ಳುವಂತೆ ಮಾಡಬಹುದು ಎನ್ನುವುದಕ್ಕೆ ಯಾವುದೇ ಸಾಕ್ಷಗಳಿಲ್ಲ.

ಇನ್ನೊಂದೆಡೆ ಕೋವಿಡ್ ಅನ್ನು ದೂರವಿಡುವಲ್ಲಿ ಎರಡು ಮುನ್ನೆಚ್ಚರಿಕೆ ಕ್ರಮಗಳು ಹೆಚ್ಚು ನೆರವಾಗುತ್ತವೆ ಎನ್ನಲು ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ. ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಲಸಿಕೆಯನ್ನು ಹಾಕಿಸಿಕೊಳ್ಳುವುದು ಈ ಕ್ರಮಗಳಾಗಿವೆ. ಆದರೆ ಬೃಹತ್ ರಾಜಕೀಯ ಮತ್ತು ಧಾರ್ಮಿಕ ಸಮಾವೇಶಗಳಿಗೆ ಅವಕಾಶ ನೀಡುವ ಮೂಲಕ,ಅವುಗಳನ್ನು ಉತ್ತೇಜಿಸುವ ಮೂಲಕ ಮತ್ತು ಹಲವಾರು ತಜ್ಞರು ತಿಂಗಳುಗಳಿಂದ ಎಚ್ಚರಿಕೆ ನೀಡುತ್ತಿದ್ದರೂ ದೇಶಿಯ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಪೂರ್ವನಿಯಾಮಕ ಕ್ರಮಗಳನ್ನು ಕೈಗೊಳ್ಳದೆ ಭಾರತದಲ್ಲಿ ಹೊಸ ಲಸಿಕೆಗಳ ಬಳಕೆಗೆ ಅನುಮತಿಯನ್ನೂ ನೀಡದೆ ಇವೆರಡು ವಿಷಯಗಳಲ್ಲಿ ನಮ್ಮ ‘ಹೆಮ್ಮೆಯ ಹಿಂದು ಸರಕಾರ’ವು ದಯನೀಯ ವೈಫಲ್ಯವನ್ನು ಕಂಡಿದೆ.
  
ನಾನು ಜನಿಸಿದ್ದು ವಿಜ್ಞಾನಿಗಳ ಕುಟುಂಬದಲ್ಲಿ. ವಿಜ್ಞಾನಿಗಳಾಗಿದ್ದ ನನ್ನ ಅಜ್ಜ ಮತ್ತು ತಂದೆ ‘ಅರ್ಥಹೀನ ’ ಮತ್ತು ‘ಮೂಢನಂಬಿಕೆ ’ಎಂಬ ಈ ಎರಡು ಶಬ್ದಗಳನ್ನು ಮಾತ್ರ ತಮ್ಮ ನಿಂದನೆಯಲ್ಲಿ ಬಳಸುತ್ತಿದ್ದರು. ನನ್ನ ಅಜ್ಜ ಮತ್ತು ತಂದೆ ಈಗಿಲ್ಲ,ಆದರೆ ಕೋವಿಡ್ ಎದುರಿಸುವ ಹೆಸರಿನಲ್ಲಿ ಆಡಳಿತ ಪಕ್ಷದ ರಾಜಕಾರಣಿಗಳು ಉತ್ತೇಜಿಸುತ್ತಿರುವ ಸುಳ್ಳುಗಳ ಬಗ್ಗೆ ನಮ್ಮ ಗೌರವಾನ್ವಿತ ವಿಜ್ಞಾನಿಗಳ ಭಾವನೆಗಳೇನಿರಬಹುದು ಎಂದು ನಾನು ಅಚ್ಚರಿ ಪಡುತ್ತಿದ್ದೇನೆ.
 
ನಿಜ ಹೇಳಬೇಕೆಂದರೆ ಈ ಎಲ್ಲ ಸುಳ್ಳುಗಳು,ಮೂಢನಂಬಿಕೆಗಳು ಮತ್ತು ಅರ್ಥಹೀನ ಮಾತುಗಳು ಕೆಲವೇ ಕೇಂದ್ರ ಸಚಿವರಿಗೆ ಅಥವಾ ರಾಜ್ಯಮಟ್ಟದ ರಾಜಕಾರಣಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಂಘ ಪರಿವಾರದ ಸದಸ್ಯರು ಇವುಗಳನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ ಮತ್ತು ಇದರಲ್ಲಿ ಖುದ್ದು ಪ್ರಧಾನ ಮಂತ್ರಿಯೂ ಸೇರಿದ್ದಾರೆ. ಕಳೆದ ವರ್ಷದ ಮಾರ್ಚ್ನಲ್ಲಿ ಸಾಂಕ್ರಾಮಿಕವು ಮೊದಲ ಬಾರಿ ಭಾರತದಲ್ಲಿ ಕಾಣಿಸಿಕೊಂಡಾಗ ಸರಿಯಾಗಿ ಸಂಜೆ ಐದು ಗಂಟೆಗೆ ಸರಿಯಾಗಿ ಐದು ನಿಮಿಷಗಳ ಕಾಲ ತಟ್ಟೆ-ಲೋಟಗಳನ್ನು ಬಡಿಯುವಂತೆ ಅವರು ನಮಗೆ ಸೂಚಿಸಿದ್ದನ್ನು ನೆನಪಿಸಿಕೊಳ್ಳಿ. ಅದರ ಮುಂದಿನ ತಿಂಗಳು ಅವರು ಮಾಡಿದ್ದೇನು? ಕೊರೋನವೈರಸ್ ಬಿಕ್ಕಟ್ಟಿನ ಗಂಭೀರತೆ ಸ್ಪಷ್ಟವಾಗಿದ್ದ ಆ ಸಂದರ್ಭದಲ್ಲಿ ಸರಿಯಾಗಿ ರಾತ್ರಿ ಒಂಭತ್ತು ಗಂಟೆಯಿಂದ ನಿಖರವಾಗಿ ಒಂಭತ್ತು ನಿಮಿಷಗಳ ಕಾಲ ದೀಪಗಳನ್ನು, ಮೋಂಬತ್ತಿಗಳನ್ನು ಬೆಳಗಿಸುವಂತೆ ಅಥವಾ ಟಾರ್ಚ್ಗಳನ್ನು ಉರಿಸುವಂತೆ ಅವರು ನಮಗೆ ಸೂಚಿಸಿದ್ದರು. ಉತ್ತರ ಅಮೆರಿಕ ಮತ್ತು ಯುರೋಪ್ಗಳಲ್ಲಿ ಸಾಂಕ್ರಾಮಿಕವು ತೀವ್ರವಾಗಿ ಹರಡುತ್ತಿದ್ದಾಗ ಅದನ್ನು ದೂರವಿಡಲು ಇದು ಹೇಗೆ ನೆರವಾಗುತ್ತಿತ್ತು ಎನ್ನುವುದು ಬಹುಶಃ ಪ್ರಧಾನಿಯವರ ಜ್ಯೋತಿಷಿ ಅಥವಾ ಸಂಖ್ಯಾಶಾಸ್ತ್ರಜ್ಞರಿಗೇ ಗೊತ್ತಿದ್ದಿರಬಹುದು.

ಅತ್ಯಂತ ನೆಚ್ಚಿನ ಸಂತ
  
ಸಂಘ ಪರಿವಾರಕ್ಕೆ ನಂಬಿಕೆ ಮತ್ತು ಧರ್ಮಾಂಧತೆ ಇವು ತಾರ್ಕಿಕತೆ ಮತ್ತು ವಿಜ್ಞಾನಕ್ಕಿಂತ ಹೆಚ್ಚಿನ ಆದ್ಯತೆಯ ವಿಷಯಗಳಾಗಿವೆ. ತನ್ನ ಹೆಜ್ಜೆಗಳಲ್ಲಿ ಮೋದಿ ತಾನು ಬೆಳೆದುಬಂದಿರುವ ಸೈದ್ಧಾಂತಿಕ ಪಾಲನೆಯ ಸಂಕುಚಿತ ಮನಃಸ್ಥಿತಿಯನ್ನೇ ಪ್ರತಿಬಿಂಬಿಸುತ್ತಿದ್ದಾರೆ. ಅವರು ಮೊದಲ ಸಲ ಪ್ರಧಾನಿಯಾಗಿದ್ದಾಗ ರಾಮದೇವ್ ಅವರನ್ನು ಯದ್ವಾತದ್ವಾ ಹೊಗಳಿದ್ದರು. ರಾಮದೇವ್ ಸರಕಾರದ ಅತ್ಯಂತ ಮೆಚ್ಚಿನ ಸಂತನಾಗಿ ಹೊರಹೊಮ್ಮಿರುವುದು ಆಕಸ್ಮಿಕವಲ್ಲ. ಮೋದಿಯವರು ಆಗಾಗ್ಗೆ ತಥಾಕಥಿತ ದೇವಮಾನವರ ಒಡನಾಟದಲ್ಲಿರುವುದು, ಶಿಕ್ಷಣ,ಆರೋಗ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಪ್ರಮುಖ ಸಚಿವಾಲಯಗಳಿಗೆ ಆರೆಸ್ಸೆಸ್ ಪ್ರಭೃತಿಗಳನ್ನು ನೇಮಿಸುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ.

ಕುಂಭ ಮೇಳವನ್ನು ನಡೆಸಿದ್ದು ಹಿಂದುತ್ವ ತರ್ಕಹೀನತೆಯ ಅತ್ಯಂತ ಪ್ರಖರ ಉದಾಹರಣೆಯಾಗಿದೆ. ಜ್ಯೋತಿಷಿಗಳ ಸಲಹೆಯಂತೆ ಒಂದು ವರ್ಷ ಹಿಂದೂಡಲಾಗಿದ್ದ ಮೇಳವು ಸಾಂಕ್ರಾಮಿಕದ ನಡುವೆಯೇ ಭರ್ಜರಿಯಾಗಿ ನಡೆದಿತ್ತು,ಏಕೆಂದರೆ ಅದನ್ನು ಸಾಮಾಜಿಕ ಮತ್ತು ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಳ್ಳಲು ಆರೆಸ್ಸೆಸ್ ಮತ್ತು ಬಿಜೆಪಿ ಬಯಸಿದ್ದವು.

ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ತಿವ್ರವಾಗಿ ಹರಡುತ್ತಿರುವುದಕ್ಕೂ ಕೇಂದ್ರ ಹಾಗೂ ಬಿಜೆಪಿ ರಾಜ್ಯ ಸರಕಾರಗಳು ಕುಂಭಮೇಳಕ್ಕೆ ನೀಡಿದ್ದ ಭಾರೀ ಬೆಂಬಲಕ್ಕೂ ನೇರ ನಂಟು ಇರುವುದನ್ನು ನಾವು ಕಾಣಬಹುದು. ಇನ್ನೊಂದೆಡೆ ಅಸಂಖ್ಯಾತ ಶವಗಳನ್ನು ನದಿಗಳಲ್ಲಿ ಎಸೆಯಲಾಗುತ್ತಿದೆ ಅಥವಾ ನದಿದಂಡೆಗಳ ಮರಳಿನಲ್ಲಿ ದಫನ ಮಾಡಲಾಗುತ್ತಿದೆ. ಪ್ರಧಾನಿಯಿಂದ ಹಿಡಿದು (ಆರೆಸ್ಸೆಸ್ ಮುಖ್ಯಸ್ಥರೂ ಇದಕ್ಕೆ ಹೊರತಲ್ಲ) ಅವರ ಕೆಳಗಿನ ಶ್ರೇಣಿಗಳಲ್ಲಿ ಈ ದುರಂತವನ್ನು ತಡೆಯಬಲ್ಲ ಹಲವಾರು ಶಕ್ತಿಶಾಲಿ ಮತ್ತು ಪ್ರಭಾವಿ ನಾಯಕರಿದ್ದರು. ಆದರೆ ಅವರು ಅದನ್ನು ಮಾಡಲಿಲ್ಲ,ಏಕೆಂದರೆ ಅವರಿಗೆ ತಾರ್ಕಿಕತೆ ಮತ್ತು ವಿಜ್ಞಾನಕ್ಕಿಂತ ನಂಬಿಕೆ ಮತ್ತು ಧರ್ಮಾಂಧತೆ ಹೆಚ್ಚು ಮುಖ್ಯವಾಗಿದ್ದವು.

ಕೃಪೆ: scroll.in

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News