ಇಸ್ರೇಲ್ ಯುದ್ಧಾಪರಾಧಗಳು: ಅಂತರ್‌ರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಿಂದ ತನಿಖೆ

Update: 2021-07-07 06:11 GMT

ಭಾಗ-6

ಇಸ್ರೇಲ್ ಸರಕಾರವು ಫೆಲೆಸ್ತೀನ್ ಜನತೆಯ ವಿರುದ್ಧ ಎಸಗುತ್ತಿರುವ ದೌರ್ಜನ್ಯಗಳು ಮತ್ತು ತನ್ನ ಜನಾಂಗವಾದಿ ಅಜೆಂಡಾದ ಅನುಷ್ಠಾನಕ್ಕಾಗಿ ಅದು ಸತತ ಹಲವು ಬಾರಿ ನಡೆಸಿರುವ ಯುದ್ಧಾಪರಾಧಗಳ ವಿಷಯದಲ್ಲಿ ವಿಶ್ವಸಂಸ್ಥೆಯು ಅಂತರ್‌ರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ಮೂಲಕ ಅಧಿಕೃತ ತನಿಖೆ ನಡೆಸಬೇಕೆಂಬ ಬೇಡಿಕೆ ಬಹುಕಾಲದಿಂದ ಕೇಳಿ ಬರುತ್ತಿತ್ತು. ಜಗತ್ತಿನ ಹಲವು ಸರಕಾರಗಳು, ಅನೇಕ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಮತ್ತು ಮಾನವಹಕ್ಕು ಸಂಘಟನೆಗಳು ಈ ವಿಷಯದಲ್ಲಿ ವಿಶ್ವಸಂಸ್ಥೆಯ ಮೇಲೆ ಸತತ ಒತ್ತಡ ಹೇರುತ್ತಾ ಬಂದಿದ್ದವು. ಆದರೆ ಅದೇ ವೇಳೆ ಈ ಬೇಡಿಕೆಯನ್ನು ಸ್ವೀಕರಿಸಬಾರದು ಎಂದು ಇಸ್ರೇಲ್ ಮತ್ತು ಅಮೆರಿಕ ಪಟ್ಟು ಹಿಡಿದಿದ್ದವು.

 ನಿಜವಾಗಿ ಇಸ್ರೇಲ್‌ನ ಯುದ್ಧಾಪರಾಧಗಳ ಕುರಿತು ತನಿಖೆಯ ಅಗತ್ಯವಿದೆ ಎಂಬುದನ್ನು ಇಂಟರ್‌ನ್ಯಾಶನಲ್ ಕ್ರಿಮಿನಲ್ ಕೋರ್ಟ್ ಮುಖ್ಯಸ್ಥೆ ಫಾತೂ ಬೆನ್ಸೋದಾ 2019 ಡಿಸೆಂಬರ್‌ನಲ್ಲೇ ತಾತ್ವಿಕವಾಗಿ ಒಪ್ಪಿದ್ದರು. ಆದರೆ ಹಲವು ತಾಂತ್ರಿಕ ಅಡೆತಡೆಗಳ ಹಾಗೂ ಕೆಲವು ದೇಶಗಳ ಪ್ರತಿಕೂಲ ಒತ್ತಡದಿಂದಾಗಿ ಆ ಪ್ರಕ್ರಿಯೆ ಆರಂಭವಾಗಿರಲಿಲ್ಲ. ಕೊನೆಗೂ ಈ ವರ್ಷ ಮಾರ್ಚ್ ತಿಂಗಳ ಆರಂಭದಲ್ಲಿ ಐಸಿಸಿ, ತನಿಖೆಯ ಪ್ರಕ್ರಿಯೆಯನ್ನು ಆರಂಭಿಸಿತು. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಇಸ್ರೇಲ್ ಮತ್ತು ಫೆಲೆಸ್ತೀನ್ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿತು. ಫೆಲೆಸ್ತೀನ್‌ನ ಸಂಘಟನೆಗಳ ಮೇಲಿರುವ ಯುದ್ಧಾಪರಾಧದ ಆರೋಪಗಳೂ ತನಿಖೆಯ ವ್ಯಾಪ್ತಿಯಲ್ಲಿ ಬರಲಿವೆ. ಈ ರೀತಿ, ಪ್ರಭಾವಿ ಶಕ್ತಿಗಳ ವಿರೋಧವನ್ನು ಪ್ರತಿರೋಧಿಸಿ ಈ ಪ್ರಕ್ರಿಯೆಯನ್ನು ಆರಂಭಿಸುವಂತೆ ಐಸಿಸಿಯ ಮೇಲೆ ಒತ್ತಡ ಹೇರುವ ಕೆಲಸವನ್ನು ಯಾವುದೇ ಸರಕಾರಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಜಾಗತಿಕ ಮಟ್ಟದಲ್ಲಿ ಸಕ್ರಿಯವಾಗಿರುವ ಕೆಲವು ಫೆಲೆಸ್ತೀನ್ ಪರ ಸ್ವಯಂ ಸೇವಕ ಸಂಸ್ಥೆಗಳು ಮಾಡಿದ್ದವು. ಆ ಪೈಕಿ ಮುಂಚೂಣಿಯಲ್ಲಿದ್ದ ಸಂಘಟನೆ ಸಾಕ್ಷಾತ್ ಇಸ್ರೇಲ್ ಮೂಲದ ಬಿ.ಡಿ.ಎಸ್. (BDS). ಈ ಸಂಘಟನೆಯಲ್ಲಿ ಇಸ್ರೇಲ್‌ನ ಯಹೂದಿ ನಾಗರಿಕರು ಮತ್ತವರ ಸಂಘಟನೆಗಳಿಗೂ ಗಣ್ಯ ಪ್ರಾತಿನಿಧ್ಯವಿದೆ.

ಕಳೆದ ವರ್ಷ ಸೆಪ್ಟಂಬರ್ 22 ರಿಂದ 28 ತನಕ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ (UN) ಜನರಲ್ ಎಸ್ಸೆಂಬ್ಲಿಯ (UNGA) ಮಹಾ ಅಧಿವೇಶನವನ್ನು ಆಯೋಜಿಸಲಾಗಿತ್ತು. ಈ ಸಂದರ್ಭವನ್ನು ಇಸ್ರೇಲ್‌ನ ದೌರ್ಜನ್ಯಗಳ ಹಾಗೂ ಯುದ್ಧಾಪರಾಧಗಳ ವಿರುದ್ಧ ಜಾಗತಿಕ ಜನಾಭಿಪ್ರಾಯ ರೂಪಿಸುವುದಕ್ಕಾಗಿ ಬಳಸಿಕೊಂಡ ಬಿ.ಡಿ.ಎಸ್., ಪ್ರಸ್ತುತ 7 ದಿನಗಳ ಅವಧಿಯನ್ನು ‘ಇಸ್ರೇಲ್ ವಿರೋಧಿ ಜಾಗೃತಿ ಸಪ್ತಾಹ’ವಾಗಿ ಆಚರಿಸಿತು. ಇಸ್ರೇಲ್, ಫೆಲೆಸ್ತೀನ್ ಮಾತ್ರವಲ್ಲದೆ ಜಗತ್ತಿನ ಹಲವೆಡೆಯ ಸಾಮಾಜಿಕ ಮತ್ತು ಮಾನವ ಹಕ್ಕು ಸಂಘಟನೆಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲುಗೊಂಡವು.

ಪ್ರಸ್ತುತ ಅಭಿಯಾನದ ಭಾಗವಾಗಿ, ವಿಶ್ವಸಂಸ್ಥೆಯ ಜನರಲ್ ಎಸ್ಸೆಂಬ್ಲಿಯ ಅಧಿವೇಶನ ಆರಂಭವಾಗುವ ದಿನವೇ ಎಸ್ಸೆಂಬ್ಲಿ ಮತ್ತದರ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನುದ್ದೇಶಿಸಿ ಒಂದು ಮನವಿ ಪತ್ರವನ್ನು ಸಲ್ಲಿಸಲಾಯಿತು. ಅದು ಜಗತ್ತಿನ ಹೆಚ್ಚಿನೆಲ್ಲ ದೇಶ ಮತ್ತು ಜನವಿಭಾಗಗಳನ್ನು ಪ್ರತಿನಿಧಿಸುವ 452 ಪ್ರಮುಖ ಸಂಘಟನೆಗಳ ಕಡೆಯಿಂದ ಸಲ್ಲಿಸಲಾದ ಮನವಿಯಾಗಿತ್ತು. ಈ ಪೈಕಿ ಒಂದೊಂದು ಸಂಘಟನೆಯೂ ಹಲವು ಎನ್.ಜಿ.ಒ, ಒಕ್ಕೂಟ ಇತ್ಯಾದಿಗಳನ್ನು ಪ್ರತಿನಿಧಿಸುತ್ತಿತ್ತು. ವಿಶೇಷವೇನೆಂದರೆ ಮನವಿಗೆ ಸಹಿ ಮಾಡಿದವರಲ್ಲಿ ಅಮೆರಿಕದ ‘ಜೀವಿಶ್ ವಾಯ್ಸಿ ಫಾರ್ ಪೀಸ್’ ನಂತಹ ಹಲವು ಜನಪ್ರಿಯ ಯಹೂದಿ ಸಂಘಟನೆಗಳೂ ಸೇರಿದ್ದವು !

ಮನವಿಯಲ್ಲಿ ಇಸ್ರೇಲ್ ಸರಕಾರದ ನೀತಿಯನ್ನು ನೇರವಾಗಿ, ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸಲಾಗಿದ್ದ ವರ್ಣಭೇದದ ನೀತಿಗೆ ಹೋಲಿಸಲಾಗಿತ್ತು. ಈ ಹಿಂದೆ ದಕ್ಷಿಣ ಆಫ್ರಿಕಾದ ಸರಕಾರವು ವರ್ಣಭೇದ ಅಥವಾ ಜನಾಂಗವಾದದ ನೀತಿಯನ್ನು ಅನುಸರಿಸುತ್ತಿದೆಯೇ ಎಂಬ ಕುರಿತು ವಿಶ್ವಸಂಸ್ಥೆಯು ತನಿಖೆ ನಡೆಸಿತ್ತು. ಅದು ಅಂತಹ ನೀತಿಯನ್ನು ಅನುಸರಿಸುತ್ತಿರುವುದು ಖಚಿತವಾದಾಗ ಅದರ ವಿರುದ್ಧ ನಿರ್ಬಂಧಗಳನ್ನು ಹೇರಿತ್ತು. ಇದೀಗ ಇಸ್ರೇಲ್ ಸರಕಾರವು ಅನುಸರಿಸುತ್ತಿರುವ ಜನಾಂಗವಾದಿ ಧೋರಣೆಯ ವಿಷಯದಲ್ಲೂ ವಿಶ್ವಸಂಸ್ಥೆಯು ಅಧಿಕೃತ ತನಿಖೆ ನಡೆಸಿ, ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಮನವಿಯ ಸಾರಾಂಶವಾಗಿತ್ತು.

ಈ ಬಗೆಯ ಜಾಗತಿಕ ಒತ್ತಡಗಳ ಫಲವಾಗಿ ತನಿಖೆ ಆರಂಭವಾಗಿದ್ದರೂ ಇದನ್ನು ಈಗಲೂ ಪ್ರತಿರೋಧಿಸುತ್ತಿರುವ ಇಸ್ರೇಲ್ ಸರಕಾರವು, ಐಸಿಸಿ ತನಿಖೆಯ ಪ್ರಕ್ರಿಯೆಯಲ್ಲಿ ತಾನು ಯಾವುದೇ ಸಹಕಾರ ನೀಡುವುದಿಲ್ಲ ಎಂದು ಘೋಷಿಸಿದೆ!

► ಇಸ್ರೇಲ್ ಸರಕಾರವನ್ನು ಭಯೋತ್ಪಾದಕ ಎಂದು ಕರೆದ ಮಾಜಿ ಪೈಲಟ್

ಇಸ್ರೇಲ್ ಸರಕಾರದ ಜನಾಂಗವಾದಿ ದಮನ ನೀತಿಯ ಬಗ್ಗೆ ಸ್ವತಃ ಇಸ್ರೇಲ್‌ನ ಭದ್ರತಾ ಪಡೆಗಳ ಕೆಲವು ವಲಯಗಳಲ್ಲಿ ಅಸಮಾಧಾನವಿದೆ. ಒಂದು ಕಾಲದಲ್ಲಿ ಇಸ್ರೇಲ್ ವಾಯು

ಸೇನೆಯಲ್ಲಿ ಪೈಲಟ್ ಆಗಿದ್ದ ಯೊನಾಥನ್ ಶಾಪಿರ ಅವರ ಹೇಳಿಕೆ ಗಮನಿಸಿ:

‘‘ಇಸ್ರೇಲ್‌ನ ವಾಯುಪಡೆ ಮತ್ತು ಮಿಲಿಟರಿಯವರು ಫೆಲೆಸ್ತೀನ್‌ನ ಲಕ್ಷಾಂತರ ನಾಗರಿಕರನ್ನು ಭಯಗ್ರಸ್ತರಾಗಿಸುವ ಮೂಲಕ ಯುದ್ಧಾಪರಾಧ ಮಾಡುತ್ತಿದ್ದಾರೆ ಎಂಬುದು ಎರಡನೆಯ ‘ಇಂತಿಫಾದ’ ( ಫೆಲೆಸ್ತೀನಿಗಳ ‘ಬಂಡಾಯ’ - 2000 ದಿಂದ 2005) ದ ವೇಳೆ ನನಗೆ ಮನವರಿಕೆಯಾಯಿತು. ಆಗ ನಾನು ವಾಯು ಪಡೆಯನ್ನು ತೊರೆಯಲು ನಿರ್ಧರಿಸಿದೆ. ಜೊತೆಗೆ ಈ ಅಪರಾಧದಲ್ಲಿ ಭಾಗವಹಿಸಲು ನಿರಾಕರಿಸುವಂತೆ ಇತರ ಪೈಲಟ್‌ಗಳ ಮನವೊಲಿಸುವ ಒಂದು ಬಹಿರಂಗ ಅಭಿಯಾನವನ್ನೂ ಆರಂಭಿಸಿದೆ’’

ಕಳೆದ ವಾರ ವಾರ್ತಾ ಏಜನ್ಸಿ ‘ಅನದೊಲು’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಹೇಳಿದರು.

ಅವರು ತಮ್ಮ ನಿರ್ಧಾರ ಪ್ರಕಟಿಸಿದೊಡನೆ ಅವರನ್ನು ಅವರ ಹುದ್ದೆಯಿಂದ ಪದಚ್ಯುತಗೊಳಿಸಲಾಗಿತ್ತು. ಆ ಬಳಿಕ ಅನೇಕ ಪೈಲಟ್‌ಗಳು ಅವರ ಅಭಿಯಾನಕ್ಕೆ ಬೆಂಬಲ ಘೋಷಿಸಿದ್ದು ಅದರ ಪರಿಣಾಮವಾಗಿ 2003 ರಿಂದೀಚೆಗೆ ಇಸ್ರೇಲ್ ವಾಯುಸೇನೆಯು ಅಂತಹ 27 ಪೈಲಟ್‌ಗಳನ್ನು ಪದಚ್ಯುತಗೊಳಿಸಿದೆ.

ಮುಂದಿನ ದಿನಗಳಲ್ಲಿ ಶಾಪಿರ, ಫೆಲೆಸ್ತೀನ್ ನಾಗರಿಕರ ಮಾನವೀಯ ಹಕ್ಕುಗಳ ರಕ್ಷಣೆಗಾಗಿ ಮತ್ತು ಇಸ್ರೇಲ್ ಸರಕಾರದ ಯುದ್ಧಾಪರಾಧಗಳನ್ನು ಬಯಲಿಗೆಳೆಯುವುದಕ್ಕಾಗಿ ನಡೆದ ಹಲವು ಅಂತರ್‌ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪಾಲುಗೊಂಡರು. ಇದರ ಫಲಶ್ರುತಿಯಾಗಿ ಅವರು ಇಸ್ರೇಲ್ ಸರಕಾರದ ಕಡೆಯಿಂದ ತೀವ್ರ ಮಟ್ಟದ ಬೇಹುಗಾರಿಕೆ ಮತ್ತು ಕಿರುಕುಳಗಳನ್ನು ಎದುರಿಸಬೇಕಾಯಿತು. ನೌಕರಿಗೆ ಸೇರಿದ ಎಲ್ಲ ಸಂಸ್ಥೆಗಳಲ್ಲಿ ಅಲ್ಪಕಾಲದಲ್ಲೇ ನೌಕರಿ ಕಳೆದುಕೊಳ್ಳಬೇಕಾಯಿತು. ಕೊನೆಗೆ ಕಿರುಕುಳ ತಾಳಲಾಗದೆ ಅವರು ಇಸ್ರೇಲ್ ತೊರೆದು ನಾರ್ವೆಗೆ ವಲಸೆಹೋಗಬೇಕಾಯಿತು. ಈಗ ಅವರು ಅಲ್ಲಿ ಸಕ್ರಿಯರಾಗಿದ್ದಾರೆ.

‘‘ನಾನು ದೇಶಸೇವೆಯ ಉತ್ಸಾಹದೊಂದಿಗೆ ವಾಯುಪಡೆಯನ್ನು ಸೇರಿದ್ದೆ. ಆದರೆ ಕ್ರಮೇಣ ನನಗೆ ನಾನೊಂದು ಭಯೋತ್ಪಾದಕ ಸಂಘಟನೆಗೆ ಸೇರಿದ್ದೇನೆ ಎಂದು ಅನಿಸತೊಡಗಿತು. ಭಯೋತ್ಪಾದಕ ಸಂಘಟನೆಯೊಳಗೆ ನಿಮಗೆ ನಿಮ್ಮದಾದ ಧ್ವನಿಯೇ ಇರುವುದಿಲ್ಲ. ಇಸ್ರೇಲ್ ಸರಕಾರ ಮತ್ತು ಅದರ ಪಡೆಗಳ ಕಮಾಂಡರ್‌ಗಳನ್ನೂ ನಾನು ಭಯೋತ್ಪಾದಕರೆಂದೇ ಪರಿಗಣಿಸುತ್ತೇನೆ’’ ಎಂದು ಶಾಪಿರ ತಮ್ಮ ಸಂದರ್ಶನದಲ್ಲಿ ಹೇಳಿದರು.

► ಯಾರು ಈ ಯಹೂದಿಗಳು?

 ಕಟ್ಟು ನಿಟ್ಟಿನ ಏಕದೇವತ್ವವನ್ನು ಪ್ರತಿಪಾದಿಸಿದ್ದ ಪ್ರವಾದಿ ಇಬ್ರಾಹೀಮ್ (ಅಬ್ರಹಾಮ್) ಕ್ರಿ.ಪೂ. 2150 ರಿಂದ 1975 ವರೆಗೆ ಬದುಕಿದ್ದವರು. ಅವರ ವಿಶೇಷತೆ ಏನೆಂದರೆ ಯಹೂದಿ, ಕ್ರೈಸ್ತ ಮತ್ತು ಇಸ್ಲಾಮ್ ಎಂಬ ಜಗತ್ತಿನ ಮೂರು ಪ್ರಮುಖ ಧರ್ಮಗಳ ಅನುಯಾಯಿಗಳು ಅವರನ್ನು ತಮ್ಮ ಸಮುದಾಯಗಳ ಪಿತಾಮಹನೆಂದು ಅಂಗೀಕರಿಸುತ್ತಾರೆ. ಇಬ್ರಾಹೀಮ್ ಅವರ ಕಿರಿಯ ಪುತ್ರ ಇಸ್ ಹಾಕ್ ಮತ್ತು ಇಸ್ ಹಾಕ್ ರ ಪುತ್ರ ಯಾಕೂಬ್. (ಅವರ ಇನ್ನೊಂದು ಹೆಸರು ಇಸ್ರಾಈಲ್). ಯಾಕೂಬ್ ಅಥವಾ ಇಸ್ರಾಈಲರ 12 ಮಂದಿ ಪುತ್ರರ ವಂಶಸ್ಥರೇ ಯಹೂದಿಗಳು. ಅವರನ್ನು ಕುರ್‌ಆನ್‌ನಲ್ಲಿ ‘ಬನೀ ಇಸ್ರಾಈಲ್’ ಅಥವಾ ಇಸ್ರಾಈಲರ ಸಂತತಿಗಳೆಂದೂ ಕರೆಯಲಾಗಿದೆ.

ಕುರ್‌ಆನ್‌ನಲ್ಲಿ 40ಕ್ಕೂ ಹೆಚ್ಚು ಬಾರಿ ಯಹೂದಿಗಳ ಪ್ರಸ್ತಾಪವಿದೆ. ‘ಬನೀ ಇಸ್ರಾಈಲ್’ ಎಂಬೊಂದು ಪ್ರತ್ಯೇಕ ಅಧ್ಯಾಯವೇ (ಅಧ್ಯಾಯ 17) ಕುರ್‌ಆನ್‌ನಲ್ಲಿದೆ. ಅವರ ಇತಿಹಾಸದ ಉಜ್ವಲ ಮತ್ತು ಕರಾಳ ಭಾಗಗಳ ದಾಖಲೆ ಇದೆ. ಈಜಿಪ್ಟ್‌ನ ಬಲಿಷ್ಠ ಫ್ಯಾರೋಗಳ ಸಾಮ್ರಾಜ್ಯದ ವಿರುದ್ಧ ಹೋರಾಡಿ ಅವರ ದಾಸ್ಯದಲ್ಲಿದ್ದ ಯಹೂದಿಗಳನ್ನು ದಾಸ್ಯದಿಂದ ವಿಮೋಚಿಸಿದ ಪ್ರವಾದಿ ಮೂಸಾ (Moses) ರ ವಿವರವಾದ ವೃತ್ತಾಂತ ಕುರ್‌ಆನ್‌ನಲ್ಲಿದೆ.

‘‘ಇಸ್ರಾಈಲರ ಸಂತತಿಗಳೇ, ನಾನು ನಿಮಗೆ ನೀಡಿದ ಅನುಗ್ರಹವನ್ನು ಮತ್ತು ಜಗತ್ತಿನ ಎಲ್ಲರೆದುರು ನಿಮಗೆ ಶ್ರೇಷ್ಠತೆ ನೀಡಿದ್ದನ್ನು ಸ್ಮರಿಸಿರಿ’’ (2:122) ಎಂದು ಕುರ್‌ಆನ್‌ನಲ್ಲಿ ಅವರಿಗೆ ನೆನಪಿಸಲಾಗಿದೆ.

ಅವರು ನಂಬುವ ತೌರಾತ್ (Torah) ಅಥವಾ ಹಳೆಯ ಒಡಂಬಡಿಕೆ ಗ್ರಂಥವು ಮೂಲತಃ ದೇವರ ಕಡೆಯಿಂದ ಬಂದ ಮಾರ್ಗದರ್ಶಿ ಗ್ರಂಥವಾಗಿತ್ತು ಎಂದು ಕುರ್‌ಆನ್ ಪ್ರತಿಪಾದಿಸುತ್ತದೆ.

ಮುಸ್ಲಿಮರ ದೃಷ್ಟಿಯಲ್ಲಿ ಜುಡಾಯಿಸಮ್ (ಯಹೂದಿ ಧರ್ಮ), ಕ್ರೈಸ್ತ ಧರ್ಮ ಮತ್ತು ಇಸ್ಲಾಮ್ ಧರ್ಮ ಇವೆಲ್ಲವೂ ಮೂಲತಃ ಏಕದೇವತ್ವದ ಪ್ರತಿಪಾದಕರಾಗಿದ್ದ ಪ್ರವಾದಿ ಇಬ್ರಾಹೀಮ್ (ಅಬ್ರಹಾಮ್) ರ ಪರಂಪರೆಯ ಶಾಖೆಗಳಾಗಿವೆ.

ಫೆಲೆಸ್ತೀನಿಗಳನ್ನು ಬೆಂಬಲಿಸಲು ಗೂಗ್ಲ್ ನನ ಯಹೂದಿ ಉದ್ಯೋಗಿಗಳ ಆಗ್ರಹ

ಗೂಗ್ಲ್ ಕಂಪೆನಿಯು ಫೆಲೆಸ್ತೀನ್‌ನ ನಾಗರಿಕರಿಗೆ ಬೆಂಬಲ ನೀಡಬೇಕು ಎಂದು ಕಂಪೆನಿಯ ಯಹೂದಿ ಉದ್ಯೋಗಿಗಳ ಸಂಘಟನೆಯೊಂದು ಆಗ್ರಹಿಸಿದೆ.

ಕಳೆದ ವಾರ ಫೆಲೆಸ್ತೀನ್‌ನ ವಸತಿ ಪ್ರದೇಶಗಳ ಮೇಲೆ ಇಸ್ರೇಲ್ ಸರಕಾರವು ಸೇನಾ ದಾಳಿ ಆರಂಭಿಸಿದ ಹಿನ್ನೆಲೆಯಲ್ಲಿ ಗೂಗ್ಲ್ ಉದ್ಯೋಗಿಗಳು ಕಂಪೆನಿಯ ಸಿ.ಈ.ಒ ಸುಂದರ್ ಪಿಚೈ ಅವರಿಗೆ ಬರೆದ ಖಾಸಗಿ ಪತ್ರದಲ್ಲಿ ಇಸ್ರೇಲ್ ಸರಕಾರವು ತನ್ನ ಭದ್ರತಾ ಪಡೆಗಳ ಮತ್ತು ಗುಂಪು ಹಿಂಸೆಯ ಮೂಲಕ ಫೆಲೆಸ್ತೀನ್ ನಾಗರಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಕಂಪೆನಿಯು ಸ್ಪಷ್ಟವಾಗಿ ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.

250 ಮಂದಿ ಪ್ರಸ್ತುತ ಪತ್ರಕ್ಕೆ ಸಹಿ ಮಾಡಿದ್ದು ನಾವು ಯಹೂದಿಗಳು. ಇಸ್ರೇಲ್ ಪರ ಹಾಗೂ ಝಿಯೋನಿಸ್ಟರ ಪರ ಚಟುವಟಿಕೆಗಳಿಗೆ ಕಂಪೆನಿಯು ಬೆಂಬಲ ನೀಡಬೇಕು ಎಂದು ಆಗ್ರಹಿಸುವವರ ವಿಚಾರವನ್ನು ನಾವು ಒಪ್ಪುವುದಿಲ್ಲ. ಇಸ್ರೇಲ್ ಸರಕಾರ ಮತ್ತು ಯಹೂದಿ ಸಮುದಾಯ ಇವೆರಡೂ ಒಂದೇ ಎಂದು ಬಿಂಬಿಸುವುದನ್ನು ನಾವು ವಿರೋಧಿಸುತ್ತೇವೆ. ಝಿಯೋನಿಝಮ್ ಅನ್ನು ವಿರೋಧಿಸುವುದೆಂದರೆ ಯಹೂದಿಗಳನ್ನು ವಿರೋಧಿಸುವುದೆಂದು ಅರ್ಥವಲ್ಲ ಎಂದು ನಾವು ಒತ್ತಿ ಹೇಳ ಬಯಸುತ್ತೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.

‘‘ಶಕ್ತಿಶಾಲಿ ವಸಾಹತು ಶಾಹಿ ಪಡೆಗಳು ನಡೆಸು ತ್ತಿರುವ ಹಿಂಸಾಚಾರಗಳಿಂದಾಗಿ ಫೆಲೆಸ್ತೀನ್ ಜನತೆ ತೀವ್ರ ಸಂಕಟ ಅನುಭವಿಸುತ್ತಿದ್ದಾರೆ. ಈ ವಿಷಯದಲ್ಲಿ ಫೆಲೆಸ್ತೀನ್‌ನಲ್ಲಿರುವ ಗೂಗ್ಲ್ ಬಳಕೆದಾರರ ಮನವಿಗಳಿಗೆ ಮತ್ತು ಅವರ ಧ್ವನಿಗೆ ಕಂಪೆನಿಯು ಪ್ರಚಾರ ಕೊಡಬೇಕು. ಸಂತ್ರಸ್ತರಿಗೆ ಪರಿಹಾರ ಒದಗಿಸುವ ವಿಷಯದಲ್ಲಿ ಇಸ್ರೇಲ್ ಸರಕಾರಕ್ಕೆ ನೀಡುವಷ್ಟೇ ಧನ ಸಹಾಯವನ್ನು ಫೆಲೆಸ್ತೀನ್‌ನವರ ನೇತೃತ್ವದ ಮಾನವ ಹಕ್ಕು ಮತ್ತು ಪರಿಹಾರ ಸಂಸ್ಥೆಗಳಿಗೆ ಒದಗಿಸಬೇಕು. ಮಾನವ ಹಕ್ಕುಗಳ ವಿಷಯದಲ್ಲಿ ವಿಶ್ವ ಸಂಸ್ಥೆಯು ಮಾನ್ಯ ಮಾಡಿರುವ ನಿಯಮಗಳನ್ನು ಇಸ್ರೇಲ್ ಸರಕಾರವು ಸತತವಾಗಿ ಉಲ್ಲಂಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಗೂಗ್ಲ್ ಕಂಪೆನಿಯು ಇಸ್ರೇಲ್ ಸರಕಾರದ ಜೊತೆ ಶಾಮೀಲಾಗಿರುವ ಇಸ್ರೇಲ್ ಸೇನೆ ಸಹಿತ ಎಲ್ಲ ಕಂಪೆನಿಗಳ ಜೊತೆಗಿನ ತನ್ನ ಸಂಬಂಧ ಮತ್ತು ಒಪ್ಪಂದಗಳನ್ನು ಮರು ಪರಿಶೀಲಿಸಬೇಕು’’ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

► ಯಹೂದಿಗಳು ಎಲ್ಲಿದ್ದಾರೆ? ಎಷ್ಟಿದ್ದಾರೆ?

ಇಸ್ರೇಲ್‌ನ ಸೆಂಟ್ರಲ್ ಬ್ಯುರೋ ಆಫ್ ಸ್ಟಾಟಿಸ್ಟಿಕ್ಸ್ ಪ್ರಕಾರ ಜಗತ್ತಿನಲ್ಲಿಂದು ಒಟ್ಟು ಸುಮಾರು 1.47 ಕೋಟಿ ಯಹೂದಿಗಳಿದ್ದಾರೆ. ಅವರಲ್ಲಿ 67 ಲಕ್ಷ ಮಂದಿ ಇಸ್ರೇಲ್‌ನಲ್ಲಿದ್ದಾರೆ. ಇಸ್ರೇಲ್ ಬಿಟ್ಟರೆ ಅತ್ಯಧಿಕ ಸಂಖ್ಯೆಯಲ್ಲಿ ಯಹೂದಿಗಳು ಇರುವ ದೇಶ ಅಮೆರಿಕ. ಅಲ್ಲಿ 57 ಲಕ್ಷ ಯಹೂದಿಗಳಿದ್ದಾರೆ. 4.5 ಲಕ್ಷ ಯಹೂದಿಗಳು ಫ್ರಾನ್ಸ್‌ನಲ್ಲಿದ್ದಾರೆ. ಹಾಗೆಯೇ, ಕೆನಡಾದಲ್ಲಿ 3.29 ಲಕ್ಷ, ಬ್ರಿಟನ್‌ನಲ್ಲಿ 2.92 ಲಕ್ಷ, ಅರ್ಜೆಂಟೈನಾದಲ್ಲಿ 1.8 ಲಕ್ಷ ಮತ್ತು ರಶ್ಯದಲ್ಲಿ 1.65 ಲಕ್ಷ ಯಹೂದಿಗಳು ವಾಸಿಸುತ್ತಿದ್ದಾರೆ.

► ಫೆಲೆಸ್ತೀನಿಗಳು ಎಲ್ಲಿದ್ದಾರೆ? ಎಷ್ಟಿದ್ದಾರೆ?

 ಫೆಲೆಸ್ತೀನ್‌ನ ಸೆಂಟ್ರಲ್ ಬ್ಯುರೋ ಆಫ್ ಸ್ಟಾಟಿಸ್ಟಿಕ್ಸ್ ಪ್ರಕಾರ ಜಗತ್ತಿನಲ್ಲಿ ಒಟ್ಟು 1.3 ಕೋಟಿ ಫೆಲೆಸ್ತೀನಿಗಳಿದ್ದಾರೆ. ಅವರಲ್ಲಿನ ಅರ್ಧದಷ್ಟು ಮಂದಿ ಐತಿಹಾಸಿಕ ಫೆಲೆಸ್ತೀನ್‌ನಲ್ಲಿದ್ದಾರೆ. ಅಂದರೆ 30 ಲಕ್ಷ ಮಂದಿ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಮ್‌ನಲ್ಲಿ, ಹಾಗೂ 20 ಲಕ್ಷ ಮಂದಿ ಗಾಝಾದಲ್ಲಿದ್ದಾರೆ. 19 ಲಕ್ಷ ಫೆಲೆಸ್ತೀನಿಗಳು ಇಸ್ರೇಲ್‌ನ ಪ್ರಜೆಗಳಾಗಿದ್ದಾರೆ. 56 ಲಕ್ಷ ಮಂದಿ ವಿವಿಧ ಅರಬ್ ದೇಶಗಳಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. 7 ಲಕ್ಷ ಫೆಲೆಸ್ತೀನಿಗಳು ನಿರಾಶ್ರಿತರಾಗಿ ಜಗತ್ತಿನ ಇತರ ಭಾಗಗಳಲ್ಲಿ ಚದುರಿ ಹೋಗಿದ್ದಾರೆ.

(ಮುಂದುವರಿಯುವುದು)

Writer - ಎ.ಎಸ್. ಪುತ್ತಿಗೆ

contributor

Editor - ಎ.ಎಸ್. ಪುತ್ತಿಗೆ

contributor

Similar News