ಕೇರಳದ ಉದ್ಯೋಗ ಹಗರಣ ವಂಚನೆಗೊಳಗಾಗಿದ್ದ ನರ್ಸ್ ಗಳಿಗೆ ಕೆಲಸ ನೀಡಿದ ದುಬೈ ಆಸ್ಪತ್ರೆ ಸಮೂಹ
ದುಬೈ (ಯುಎಇ), ಮೇ 24: ಉದ್ಯೋಗ ವಂಚನೆ ಹಗರಣದ ಬಲಿಪಶುಗಳಾಗಿದ್ದ ಕೇರಳದ ಕನಿಷ್ಠ 90 ನರ್ಸ್ ಗಳಿಗೆ ಯುಎಇಯ ಪ್ರಮುಖ ವೈದ್ಯಕೀಯ ಗುಂಪೊಂದು ಕೆಲಸ ನೀಡಿದೆ.
ಕೇರಳದ ನರ್ಸ್ ಗಳು ಕಳೆದ ವರ್ಷದ ಅಕ್ಟೋಬರ್ನಿಂದ ಯುಎಇಗೆ ತಂಡಗಳಲ್ಲಿ ಆಗಮಿಸುತ್ತಿದ್ದಾರೆ. ಆದರೆ, ಅವರನ್ನು ಕೆಲಸ ನೀಡುವ ಭರವಸೆ ನೀಡಿದ್ದ ವ್ಯಕ್ತಿಗಳು ಕೆಲಸ ನೀಡದೆ ವಂಚಿಸಿದ್ದರಿಂದ ಅವರು ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.
ಪುರುಷ ಮತ್ತು ಮಹಿಳಾ ನರ್ಸ್ಗಳಿಗೆ ಯುಎಇಯ ಕೋವಿಡ್-19 ಲಸಿಕೆ ಮತ್ತು ಪರೀಕ್ಷೆ ಕೇಂದ್ರಗಳಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಲಾಗಿತ್ತು. ಅದಕ್ಕಾಗಿ ಅವರು ವಂಚಕರಿಗೆ 10,000 ದಿರ್ಹಮ್ (ಸುಮಾರು 2 ಲಕ್ಷ ರೂಪಾಯಿ) ಪಾವತಿಸಿದ್ದರು. ಆದರೆ, ಯುಎಇಗೆ ಬಂದ ಬಳಿಕ ಅವರಿಗೆ ಕೆಲಸ ನಿರಾಕರಿಸಲಾಗಿತ್ತು.
ಕಳೆದ ವಾರ ದೇಶದ ಪ್ರಮುಖ ಆಸ್ಪತ್ರೆಗಳು ಅವರಿಗೆ ಕೆಲಸ ನೀಡಲು ಮುಂದೆ ಬಂದಿದ್ದು, ಅವರ ಪೈಕಿ ಹೆಚ್ಚಿನವರ ಸಂಕಷ್ಟ ಕೊನೆಗೊಂಡಿದೆ.
41 ನರ್ಸ್ ಗಳು ಈಗಾಗಲೇ ವೈದ್ಯಕೀಯ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಆರಂಭಿಸಿದ್ದಾರೆ ಎಂದು ವಿಪಿಎಸ್ ಹೆಲ್ತ್ ಕೇರ್ ಗ್ರೂಪ್ ನ ಸ್ಥಾಪಕ, ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ. ಶಂಶೀರ್ ವಯಾಲಿಲ್ ತಿಳಿಸಿದರು. ಇನ್ನೂ 49 ಮಂದಿ ಶೀಘ್ರದಲ್ಲೇ ಕೆಲಸಕ್ಕೆ ಸೇರಿಕೊಳ್ಳಲಿದ್ದಾರೆ ಎಂದರು.
ತುಂಬಾ ಸಮಯದಿಂದ ಯುಎಇಯಲ್ಲಿ ಸಿಕ್ಕಿಹಾಕಿಕೊಂಡಿರುವ ಹಾಗೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಅರ್ಹ ನರ್ಸ್ಗಳನ್ನು ನಾವು ವಿಶೇಷವಾಗಿ ಪರಿಗಣಿಸಿದ್ದೇವೆ ಎಂದು ಅವರು ನುಡಿದರು.