ಸತ್ಯದ ಮೇಲೆ ಕತ್ತಲೆ ಹೇರಿದ ತಂತ್ರಜ್ಞಾನ
ಭಾಗ- 10
ಇಸ್ರೇಲ್ ಸರಕಾರ ಹೇಳುವಂತೆ ‘ಯುದ್ಧ’ದಲ್ಲಿ ಫೆಲೆಸ್ತೀನಿ ಉಗ್ರವಾದಿಗಳು ಇಸ್ರೇಲ್ ಕಡೆಗೆ 4,300 ರಾಕೆಟ್‌ಗಳನ್ನು ಎಸೆದಿದ್ದು, ಒಬ್ಬ ಯೋಧ ಮತ್ತು ಇಬ್ಬರು ಮಕ್ಕಳ ಸಹಿತ 12 ಮಂದಿ ಸತ್ತಿದ್ದಾರೆ. ಸತ್ತ ಇಬ್ಬರು ಮಕ್ಕಳಲ್ಲಿ ಒಬ್ಬ 5 ವರ್ಷದ ಹುಡುಗ, ಇನ್ನೊಬ್ಬಳು 16 ವರ್ಷದ ಹುಡುಗಿ. (ಒಂದು ಕಡೆಯ ಮಾಹಿತಿ ಎಷ್ಟೊಂದು ಕರಾರುವಾಕ್ಕಾಗಿ ಜಗತ್ತಿಗೆ ತಲುಪಿದೆ!) ಎಷ್ಟು ಬಲಿಷ್ಠವಿರಬಹುದು, ಆ ರಾಕೆಟ್‌ಗಳು! ಅತ್ತ ಇಸ್ರೇಲ್ ಪಡೆಗಳು ಕೇವಲ ‘ಆತ್ಮರಕ್ಷಣೆ’ಗಾಗಿ ಫೆಲೆಸ್ತೀನ್ ಮೇಲೆ ನಡಿಸಿದ ದಾಳಿಯಲ್ಲಿ 70 ಮಕ್ಕಳು ಮತ್ತು 40 ಮಹಿಳೆಯರ ಸಹಿತ ಸುಮಾರು 250 ಮಂದಿ ಸತ್ತಿದ್ದು 1,900 ಮಂದಿ ಗಾಯಗೊಂಡಿದ್ದಾರೆ. 16,800 ಮನೆಗಳು ಧ್ವಂಸಗೊಂಡಿವೆ ಮತ್ತು 58,000 ಮಂದಿ ನಿರಾಶ್ರಿತರಾಗಿದ್ದಾರೆ. ಗಾಝಾದಲ್ಲಿ ಜಲಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಸಂಪೂರ್ಣ ನಾಶವಾಗಿದೆ. ಎಷ್ಟು ನಾಜೂಕಿನದ್ದಿರಬಹುದು ಆ ‘ಆತ್ಮರಕ್ಷಣೆ’! ಇನ್ನು ಫೆಲೆಸ್ತೀನ್‌ನಲ್ಲಿ ಸತ್ತವರ ಪೈಕಿ 160 ಮಂದಿ ಹಮಾಸ್‌ನ ಶಸ್ತ್ರಸಜ್ಜಿತ ಯೋಧರೆಂದು ಇಸ್ರೇಲ್ ಹೇಳಿದ್ದು ಜಗತ್ತಿಗೆ ತಲುಪಿದೆ. ದಿಗ್ಬಂಧಿತ ಪ್ರದೇಶದಲ್ಲಿ ಸತ್ತವರ ಪೈಕಿ ಯಾರು ಎಂಥವರೆಂದು ಅಷ್ಟೊಂದು ನಿಖರವಾಗಿ ಗುರುತು ಪತ್ತೆ ಹಚ್ಚಲು ಇಸ್ರೇಲ್ ತನ್ನ ಪ್ರಚಾರ ತಂತ್ರದ ಹೊರತಾಗಿ ಬೇರಾವ ತಂತ್ರಜ್ಞಾನ ಬಳಸಿತ್ತು? ಈ ಕೆಲಸವೂ ‘ಡೋಮ್ ಆಫ್ ರಾಕ್’ ಮೂಲಕ ನಡೆದಿತ್ತೇ? ಎಂದು ಜಾಗತಿಕ ವಿದ್ಯಮಾನಗಳ ವೀಕ್ಷಕರು ಪ್ರಶ್ನಿಸುತ್ತಿದ್ದಾರೆ.
ಮಾಧ್ಯಮ ಮತ್ತು ಪ್ರಚಾರ ಜಾಲಗಳ ಪಾತ್ರ ಗಂಭೀರ ಚರ್ಚೆಗೆ ಯೋಗ್ಯವೆನಿಸುವುದು ಈ ಹಿನ್ನೆಲೆಯಲ್ಲಿ.
► ಫೆಲೆಸ್ತೀನಿಗಳಿಗೆ ಏಕಪಕ್ಷೀಯ ಮಾಧ್ಯಮಗಳ ಸವಾಲು
ಪ್ರಚಾರ ತಂತ್ರಗಳ ಮತ್ತು ಪ್ರಚಾರ ಸಾಧನಗಳ ಮೇಲೆ ಹತೋಟಿ ಉಳ್ಳವರು ಎಂತೆಂತಹ ಅಸಾಧ್ಯಗಳನ್ನು ಸಾಧಿಸಬಲ್ಲರು? ಇದಕ್ಕುತ್ತರವಾಗಿ, ತಲೆಕೆಡಿಸುವ ಒಂದು ಉದಾಹರಣೆ ಇಲ್ಲಿದೆ:
2021 ಮೇ ತಿಂಗಳಲ್ಲಿ ಇಸ್ರೇಲ್ ಸೇನೆ ಮತ್ತು ಯಾವ ಸೇನೆಯೂ ಇಲ್ಲದ ಫೆಲೆಸ್ತೀನ್ ನಾಗರಿಕರ ನಡುವೆ ನಡೆದ 11 ದಿನಗಳ ‘ಯುದ್ಧ’ದ ನಡುವೆ ಆಧುನಿಕ ತಂತ್ರಜ್ಞಾನದ ಒಂದು ಹೊಸ ಸಾಮರ್ಥ್ಯ, ಪ್ರಚಾರ ತಂತ್ರದ ಒಂದು ಹೊಸ ಉಪಾಯ ಮತ್ತು ಮಾಹಿತಿಯುಗದಲ್ಲಿನ ಮಾನವರು, ಮಾಹಿತಿ ರಂಗದಲ್ಲಿ ಎದುರಿಸುವ ಇತಿಮಿತಿಗಳನ್ನು ತಿಳಿಸುವ ಹೊಸ ಬೆಳವಣಿಗೆಯೊಂದು ಕಂಡು ಬಂತು. ಮಾಹಿತಿ ಕ್ಷೇತ್ರದಲ್ಲಿ ಮೆರೆಯುತ್ತಿರುವ ಆಘಾತಕಾರಿ ಮಟ್ಟದ ಏಕಸ್ವಾಮ್ಯ ಮತ್ತು ಅಪಾಯಕಾರಿ ‘ಮೀಸಲಾತಿ’ಗಳು ಇದರಿಂದ ಅನಾವರಣಗೊಂಡವು. ಆ ನಿರ್ದಿಷ್ಟ ಬೆಳವಣಿಗೆಯನ್ನು ಪ್ರಸ್ತಾಪಿಸುವ ಮುನ್ನ ಅದರ ಹಿನ್ನೆಲೆಯನ್ನೊಮ್ಮೆ ನೋಡೋಣ:
‘ಯುದ್ಧ’ ಆರಂಭವಾದೊಡನೆ ಇಸ್ರೇಲ್ ಸರಕಾರವು ಫೆಲೆಸ್ತೀನ್‌ನ ಭಯೋತ್ಪಾದಕರು ನಮ್ಮ ಮೇಲೆ ರಾಕೆಟ್‌ಗಳ ಮಳೆ ಸುರಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ದೇಶದ ಎಲ್ಲ ನಾಗರಿಕರ ಜೀವಗಳು ಅಪಾಯದಲ್ಲಿವೆ ಎಂದು ಜಗತ್ತಿನ ಮುಂದೆ ಎದೆ ಬಡಿದುಕೊಂಡು ರೋದಿಸತೊಡಗಿತು. ಹಿಂದಿನಿಂದಲೇ ಇಸ್ರೇಲ್ ವಾತ್ಸಲ್ಯದಿಂದ ನರಳುತ್ತಿದ್ದ ಮಾಧ್ಯಮಗಳು ಆ ರೋದನಕ್ಕೆ ತಮ್ಮ ಕಣ್ಣೀರನ್ನೂ ಬೆರೆಸಿ ಜಗತ್ತಿಗೆ ಉಣಬಡಿಸಿದವು. ಅದರ ಪರಿಣಾಮವಾಗಿ, ಇಸ್ರೇಲ್ ಸರಕಾರ ಮತ್ತು ಅದರ ನಾಗರಿಕರ ಪರವಾಗಿ ಜಗತ್ತಿನೆಲ್ಲೆಡೆ ಅನುಕಂಪ ಮತ್ತು ಸಹತಾಪದ ಪ್ರವಾಹವೇ ಹರಿಯಿತು. ನಮ್ಮಲ್ಲೇ, ಕೋವಿಡ್ ಸಾಂಕ್ರಾಮಿಕದಿಂದ ಸುತ್ತಮುತ್ತಲ ಜನ ಸಾಯುತ್ತಿದ್ದಾಗ ಗಾಢನಿದ್ದೆಯಲ್ಲಿದ್ದ ಕೆಲವರು ಕಣ್ಣುಜ್ಜುತ್ತಾ ಎದ್ದು ನಿಂತು ನಾವು ನಿಮ್ಮ ಜೊತೆ ನಿಂತಿದ್ದೇವೆ ಎಂದು ಇಸ್ರೇಲಿಗೆ ಸಂದೇಶ ಕಳಿಸತೊಡಗಿದರು. ಗೋಮಲ ಮತ್ತು ಗೋಮೂತ್ರವನ್ನು ವೈಭವೀಕರಿಸುವವರೆಂದು ಭಾರತೀಯರನ್ನು ಲೇವಡಿ ಮಾಡುವುದರಲ್ಲಿ ನಿರತರಾಗಿದ್ದ ಇಸ್ರೇಲಿನ ನೆಟ್ಟಿಗರು ಇವರ ನಿದ್ದೆಗಣ್ಣಿನ ಸಂದೇಶಗಳನ್ನು, ಮೂಗುಮುಚ್ಚಿ ಕೊಂಡು ಓದಿದರೂ, ಗಣನೆಗೇನೂ ತೆಗೆದುಕೊಳ್ಳಲಿಲ್ಲ ಎಂಬುದು ಬೇರೆ ವಿಚಾರ.
ಘರ್ಷಣೆಯ ಅವಧಿಯುದ್ದಕ್ಕೂ ಜಗತ್ತಿನ ಬಲಿಷ್ಠ ಪ್ರಚಾರ ಜಾಲಗಳು ಮಧ್ಯ ಪ್ರಾಚ್ಯದಲ್ಲಿರುವ ಇಸ್ರೇಲ್ ಎಂಬ ಏಕಮಾತ್ರ ಪ್ರಜಾಸತ್ತಾತ್ಮಕ ದೇಶ, ಹಮಾಸ್ ಭಯೋತ್ಪಾದಕರು ಗಾಝಾದಲ್ಲಿ ಅವಿತಿರುವ ಉಗ್ರವಾದಿಗಳು, ಉಗ್ರವಾದಿಗಳ ಕಡೆಯಿಂದ 4 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳ ಎಸೆತ ಮುಂತಾದ ಮಂತ್ರಗಳನ್ನು ಸಹಸ್ರನಾಮವೋ ಎಂಬಂತೆ ಕಣ್ಣು ಮುಚ್ಚಿ ಜಪಿಸುತ್ತಲೇ ಇದ್ದವು. ಸರಿ. ಫೆಲೆಸ್ತೀನ್ ಭಯೋತ್ಪಾದಕರು ಇಸ್ರೇಲ್ ನಾಗರಿಕರ ವಿರುದ್ಧ ಆ ಮಟ್ಟದ ಅನಾಗರಿಕ ಕ್ರೌರ್ಯ ಮೆರೆಯುತ್ತಿರುವಾಗ ‘‘ತಂತ್ರಜ್ಞಾನದಲ್ಲಿ ಜಗತ್ತಿಗೆ ಗುರುವಾಗಿರುವ’’ ಬಡಪಾಯಿ ಇಸ್ರೇಲ್ ಏನು ಮಾಡುತ್ತಿತ್ತು? ಎಂದು ಕೇಳಿದರೆ, ಅದಕ್ಕೊಂದೇ ಉತ್ತರ: ‘‘ಡೋಮ್ ಆಫ್ ರಾಕ್ ಎಂಬ ತಾಂತ್ರಿಕ ಅದ್ಭುತ. ಇಸ್ರೇಲ್ ತನ್ನ ತಂತ್ರಜ್ಞಾನ ಬಲದಿಂದ ರೂಪಿಸಿಕೊಂಡಿರುವ, ಎಲ್ಲ ಮಿಸೈಲ್ ಹಾಗೂ ರಾಕೆಟ್‌ಗಳನ್ನು ದೂರದಿಂದಲೇ ಗುರುತಿಸಿ, ಬಾನಿನಲ್ಲೇ ನಾಶ ಮಾಡಿ ಬಿಡುವ ಜಗತ್ತಿಗೆಲ್ಲಾ ಆದರ್ಶಪ್ರಾಯವಾದ ರಕ್ಷಣಾ ವ್ಯವಸ್ಥೆ.’’
ಕರೆನ್ಸಿ ನೋಟಿನೊಳಗೆ ನ್ಯಾನೋ ಚಿಪ್ ತುರುಕುವ ಮಾಧ್ಯಮಗಳ ಓದುಗರು ಮತ್ತು ವೀಕ್ಷಕರಿಗೆಲ್ಲಾ ಕಂಠಪಾಠವಾಗಿರುವ ಪದಗಳು ಇವು. ‘‘ಡೋಮ್ ಆಫ್ ರಾಕ್ ಅನ್ನು ವೈಭವೀಕರಿಸುತ್ತಾ ಮಾಧ್ಯಮಗಳು, ಅದು ಹಮಾಸ್‌ನ ರಾಕೆಟ್‌ಗಳ ವಿಧ್ವಂಸದಿಂದ ಇಸ್ರೇಲ್ ನಾಗರಿಕರನ್ನು ರಕ್ಷಿಸಿದ್ದು ಮಾತ್ರವಲ್ಲ, ಹಮಾಸ್‌ನವರ ತಾಂತ್ರಿಕ ಅಜ್ಞಾನದಿಂದಾಗಿ ಅವರು ಎಸೆದ ಮಿಸೈಲ್‌ಗಳು ದಿಕ್ಕು ತಪ್ಪಿ ಸ್ವತಃ ಫೆಲೆಸ್ತೀನ್ ಜನರ ಮೇಲೆ ಬೀಳಲಿದ್ದಾಗ ಅವುಗಳನ್ನು ಗಾಳಿಯಲ್ಲೇ ತಡೆದು ನಿಷ್ಕ್ರಿಯಗೊಳಿಸುವ ಮೂಲಕ ಸಾವಿರಾರು ಫೆಲೆಸ್ತೀನಿಗಳ ಜೀವವನ್ನೂ ಉಳಿಸಿತು’’. ಆದರೆ ವಾಸ್ತವ ಏನು? ಅದನ್ನು ಜಗತ್ತಿಗೆ ತಿಳಿಸುವುದಕ್ಕೆ ಆಕ್ರಮಿತ ಪ್ರದೇಶಗಳಲ್ಲಿ ಎಷ್ಟು ಮಾಧ್ಯಮಗಳಿವೆ? ಎಷ್ಟು ಪತ್ರಕರ್ತರಿದ್ದಾರೆ?
► ಭೂಮಿಯ ಚಿತ್ರದಲ್ಲಿ ಫೆಲೆಸ್ತೀನ್ ಪ್ರದೇಶವನ್ನು ಅದೃಶ್ಯಗೊಳಿಸಿದ ‘ಗೂಗ್ಲ್ ಅರ್ಥ್’
ಇಸ್ರೇಲ್ ಆಕ್ರಮಿತ ಪ್ರದೇಶಗಳಿಗೆ ಪ್ರವೇಶಿಸ ಬಯಸುವ ಮಾನವಹಕ್ಕು ಸಂಘಟನೆಗಳ, ಪರಿಹಾರ ಸಂಸ್ಥೆಗಳ ಮತ್ತು ಮಾಧ್ಯಮ ಜಾಲಗಳ ಮೇಲೆ ಮಾತ್ರವಲ್ಲ ವ್ಯಕ್ತಿಗತ ವರದಿಗಾರರ ಮೇಲೂ ಕಟ್ಟು ನಿಟ್ಟಿನ ನಿರ್ಬಂಧಗಳಿವೆ. ಪ್ರಸ್ತುತ ಕೆಟಗರಿಗಳಿಗೆ ಸೇರಿದವರು ಯಾರಾದರೂ ಪ್ರಯಾಸ ಪಟ್ಟು ಅಲ್ಲಿಗೆ ತಲುಪಿದರೂ, ಸಾಮಾನ್ಯ ದಿನಗಳಲ್ಲಿ ಅವರು ಬೇಹುಗಾರಿಕೆಗೆ ತುತ್ತಾಗಿರುತ್ತಾರೆ. ಅವರ ಚಲನವಲನದ ಮೇಲೆ ನಿಗಾ ಇಡಲಾಗುತ್ತದೆ. ಆಕ್ರಮಿತ ಪ್ರದೇಶಗಳ ನಾಗರಿಕರು ನಿತ್ಯ ಎದುರಿಸುವಂತಹ ಅರಕ್ಷಿತ, ಅಶುದ್ಧ ಮತ್ತು ಅನಾರೋಗ್ಯಕರ ವಾತಾವರಣದಲ್ಲಿ ಅವರು ಬದುಕಬೇಕಾಗುತ್ತದೆ. ಅವರಿಗೆ ವಿದ್ಯುತ್ ಮತ್ತು ಇಂಟರ್‌ನೆಟ್ ಸವಲತ್ತುಗಳನ್ನು ನಿರಾಕರಿಸುವ ಮೂಲಕ ಅವರ ಕಾರ್ಯಕ್ಷಮತೆಯನ್ನು ತೀವ್ರವಾಗಿ ಬಾಧಿಸಲಾಗುತ್ತದೆ. ಇನ್ನು ಯಾವುದೇ ಸ್ವರೂಪದ ಉದ್ವಿಗ್ನತೆ ತಲೆದೋರಿದೊಡನೆ ಅವರನ್ನೆಲ್ಲ ಗುಡಿಸಿ ಅಲ್ಲಿಂದ ಹೊರಗೆಸೆಯಲಾಗುತ್ತದೆ.
ಇಂತಹ ಸನ್ನಿವೇಶದಲ್ಲಿ ಸಂಪೂರ್ಣವಾಗಿ ಇಸ್ರೇಲ್ ಪಕ್ಷಪಾತಿ ಮೂಲಗಳನ್ನು ಅವಲಂಬಿಸದೆ ಆಕ್ರಮಿತ ಪ್ರದೇಶಗಳ ಸ್ಥಿತಿಗತಿಗಳನ್ನು ಅರಿಯ ಬಯಸುವವರು ಏನು ಮಾಡಬೇಕು ? ಇಸ್ರೇಲ್‌ನ ಹತ್ತಾರು ಫೈಟರ್ ಜೆಟ್‌ಗಳು ಎಸೆದ ಮಾರಕ ಬಾಂಬುಗಳು ಯಾವೆಲ್ಲಾ ಸ್ಥಳಗಳ ಮೇಲೆ ಬಿದ್ದಿವೆ ? ಅಲ್ಲಿ ಯಾವ ಪ್ರಮಾಣದ ವಿಧ್ವಂಸ ನಡೆದಿದೆ? ಇದನ್ನೆಲ್ಲಾ ತಿಳಿಯಲು ಮತ್ತು ಅಲ್ಲಿಯ ನಾಶನಷ್ಟಗಳ ಚಿತ್ರಗಳನ್ನು ಪಡೆಯಲು ಪ್ರಾಮಾಣಿಕ ಪತ್ರಕರ್ತರು ಮತ್ತು ಮಾಧ್ಯಮಗಳ ಬಳಿ ಉಳಿಯುವುದು ಎರಡೇ ದಾರಿಗಳು: 1. ಆಕ್ರಮಿತ ಪ್ರದೇಶಗಳಲ್ಲಿ ಉಳಿದಿರುವ ವರದಿಗಾರರು, ಸಾಮಾಜಿಕ ಕಾರ್ಯಕರ್ತರು ಅಥವಾ ನಿವಾಸಿಗಳು ತಮ್ಮ ಸೀಮಿತ ಸಂಪನ್ಮೂಲಗಳನ್ನು ಬಳಸಿ ಕಳಿಸುವ ಮಾಹಿತಿ ಮತ್ತು ಚಿತ್ರಗಳನ್ನು ಅವಲಂಬಿಸಬೇಕು. 2. ವಿವಿಧ ಇಂಟರ್‌ನೆಟ್ ಜಾಲಗಳು ಉಪಗ್ರಹಗಳ ಮೂಲಕ ಪಡೆದು ಒದಗಿಸುವ, ಭೂಮಿಯ ವಿವಿಧ ಭಾಗಗಳ ಸಾಟಲ್ಲೈಟ್ ಇಮೇಜ್‌ಗಳನ್ನು ನೋಡಿ ನೆಲ ಮಟ್ಟದ ಸ್ಥಿತಿಗತಿಗಳನ್ನು ಅರಿಯಬೇಕು. ಈ ಪೈಕಿ ಮೊದಲ ಮೂಲದ ಇತಿಮಿತಿಗಳು ಮೊದಲೇ ಎಲ್ಲರಿಗೆ ತಿಳಿದಿವೆ. ಇದೀಗ, ಈವರೆಗೆ ಸ್ವತಂತ್ರ ಎಂದು ನಂಬಲಾಗಿದ್ದ ಎರಡನೆಯ ಮೂಲದ ಇತಿಮಿತಿಗಳು ಕೂಡಾ ಈ ಬಾರಿಯ 11 ದಿನಗಳ ‘ಯುದ್ಧ’ದ ವೇಳೆ ಜಗತ್ತಿನ ಮುಂದೆ ಪ್ರಕಟವಾಗಿವೆ. ಮೇ 17 ರಂದು ಬಿಬಿಸಿಯವರು ಈ ಕುರಿತು ಮೊದಲಬಾರಿಗೆ ದೊಡ್ಡ ಚರ್ಚೆಯೊಂದಕ್ಕೆ ಚಾಲನೆ ಕೊಟ್ಟರು. ‘‘ಸಾಟಲ್ಲೈಟ್ ಇಮೇಜುಗಳಿಗಾಗಿ ಇಂದು ಜಗತ್ತು ಅತ್ಯಧಿಕವಾಗಿ ಅವಲಂಬಿಸುವ ವೇದಿಕೆ ಗೂಗ್ಲ್ ಅರ್ಥ್‌ನಲ್ಲಿ, ಜಗತ್ತಿನಲ್ಲೇ ಅತ್ಯಧಿಕ ಜನಸಂದಣಿ ಇರುವ ಗಾಝಾದ ಚಿತ್ರಗಳು ಇತ್ತೀಚೆಗೆ ಅಷ್ಟೊಂದು ಅಸ್ಪಷ್ಟವಾಗಿರುವುದೇಕೆ?’’ ಎಂದು ಬಿಬಿಸಿಯಲ್ಲಿ ಪ್ರಶ್ನಿಸಲಾಯಿತು.
ಬಿಬಿಸಿಯವರ ಪ್ರಕಾರ ಸಾಟಲ್ಲೈಟ್ ಕಂಪೆನಿಗಳು ಒದಗಿಸುವ ಚಿತ್ರಗಳಲ್ಲಿ ಪ್ರಸ್ತುತ ಪ್ರದೇಶ ಬಹಳ ಸ್ಪಷ್ಟವಾಗಿ ಕಾಣುತ್ತದೆ ಮತ್ತು ಆ ಚಿತ್ರಗಳ ರೆಸೊಲ್ಯೂಶನ್ ಮಟ್ಟ ಕೂಡಾ ಬಹಳ ಶ್ರೇಷ್ಠವಾಗಿದೆ. ಗೂಗ್ಲ್ ಅರ್ಥ್‌ನವರು ಒದಗಿಸುವ ಮ್ಯಾಪ್‌ನಲ್ಲಿ ಭೂಮಿಯೆಲ್ಲವೂ ಅಸ್ಪಷ್ಟವಾಗಿಲ್ಲ. ಕೇವಲ ಇಸ್ರೇಲ್ ಮತ್ತು ಫೆಲೆಸ್ತೀನ್‌ನ ಭಾಗಗಳ ಸ್ಪಷ್ಟತೆಯ ಮಟ್ಟವನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ಅವರ ಚಿತ್ರಗಳ ಮಟ್ಟ ಎಷ್ಟು ಕಳಪೆಯಾಗಿದೆಯೆಂದರೆ ಅಲ್ಲಿನ ವ್ಯಕ್ತಿಗಳನ್ನು ಗುರುತಿಸುವುದಂತಿರಲಿ, ಕಾರುಗಳನ್ನು ಕಾರುಗಳೆಂದು ಗುರುತಿಸುವುದಕ್ಕೂ ಸಾಧ್ಯವಿರಲಿಲ್ಲ. ಈ ಮೂಲಕ ಗೂಗ್ಲ್‌ನವರು, ಗಾಝಾ ಮತ್ತಿತರ ಇಸ್ರೇಲ್ ಆಕ್ರಮಿತ ಪ್ರದೇಶಗಳಲ್ಲಿ ಬಾಂಬುಗಳ ಮಳೆ ಸುರಿಸಿದ ಪರಿಣಾಮವಾಗಿ ಉಂಟಾಗಿರುವ ನಾಶ ನಷ್ಟದ ದೃಶ್ಯಗಳನ್ನು ಹತ್ತಿರದಿಂದ ಕಾಣುವುದನ್ನು ಅಥವಾ ಅವುಗಳ ಫೋಟೊ ತೆಗೆಯುವುದನ್ನು ಅಸಾಧ್ಯವಾಗಿಸಿ ಬಿಟ್ಟರು. ಈ ರೀತಿ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಣ ಘರ್ಷಣೆಯ ಕುರಿತು ಇಸ್ರೇಲ್ ಸರಕಾರವು ಜಗತ್ತಿನ ಮುಂದಿಟ್ಟ ಏಕಪಕ್ಷೀಯ ಚಿತ್ರಣ ಮಾತ್ರ ಜಗತ್ತಿಗೆ ಲಭ್ಯವಾಯಿತು. ಇಸ್ರೇಲ್‌ನೊಳಗೆ ಆಗಿರುವ ಹಾನಿಗಳ ಚಿತ್ರ ಮಾತ್ರ ಚಲಾವಣೆಗೆ ಬಂತು. ಮೇ 15ರ ತನಕ ಅಲ್ ಜಝೀರಾ ಮತ್ತು ಎಸೋಸಿಯೇಟೆಡ್ ಪ್ರೆಸ್ ಮತ್ತು ಇತರ ಅನೇಕ ವಾರ್ತಾ ಸಂಸ್ಥೆಗಳು ಗಾಝಾ ಪ್ರದೇಶದಲ್ಲಿ ಸಕ್ರಿಯವಾಗಿದ್ದುದರಿಂದ ಆ ಸಂಸ್ಥೆಗಳ ಮೂಲಕ, ಗಾಝಾದಲ್ಲಿ ಧ್ವಂಸವಾಗಿರುವ ಮನೆ, ಶಾಲೆ, ಆಸ್ಪತ್ರೆಗಳ, ಸತ್ತು ಬಿದ್ದಿರುವ ಮಾನವರ, ಅನಾಥರಾಗಿರುವ ಮುಗ್ಧ ಮಕ್ಕಳ ಮತ್ತು ನಿರಾಶ್ರಿತರಾಗಿ ಬೀದಿಗೆ ಬಿದ್ದಿರುವ ಸಹಸ್ರಾರು ಮಂದಿಯ ಮನಕಲಕುವ ಚಿತ್ರಗಳು ಜಗತ್ತಿಗೆ ದೊರೆಯುತ್ತಿದ್ದವು. ಮೇ 15ರಂದು ಇಸ್ರೇಲ್ ಯುದ್ಧ ವಿಮಾನಗಳು ಗಾಝಾದಲ್ಲಿ ಪ್ರಸ್ತುತ ಮಾಧ್ಯಮಗಳ ಕಚೇರಿಗಳು ಮತ್ತು ಸ್ಟುಡಿಯೋಗಳಿದ್ದ ಕಟ್ಟಡ ಸಂಕೀರ್ಣದ ಮೇಲೆ ಬಾಂಬ್ ಸುರಿಸಿ ಅದನ್ನು ನೆಲಸಮ ಮಾಡಿ ಬಿಟ್ಟವು. ಇದರೊಂದಿಗೆ ಗಾಝಾ ಕುರಿತು ಜಗತ್ತಿಗೆ ಲಭ್ಯವಿದ್ದ ಅಧಿಕೃತ ಮಾಹಿತಿಯ ಹಲವು ದೊಡ್ಡ ಮೂಲಗಳು ನಿರ್ನಾಮವಾದವು. ಆ ಬಳಿಕ ಉಳಿದದ್ದು ಸಾಟಲ್ಲೈಟ್‌ಚಿತ್ರಗಳ ದಾರಿ. ಗೂಗ್ಲ್ ನವರು ಅದನ್ನು ಕೂಡಾ ಅಸ್ಪಷ್ಟಗೊಳಿುವ ಮೂಲಕ ಅಲಭ್ಯಗೊಳಿಸಿಬಿಟ್ಟರು.
(ಮುಂದುವರಿಯುವುದು)