ಸೌದಿ ಅರೇಬಿಯದಿಂದ 11 ದೇಶಗಳ ಪ್ರಯಾಣಿಕರ ಮೇಲಿನ ನಿಷೇಧ ತೆರವು
Update: 2021-05-30 16:39 GMT
ರಿಯಾದ್ (ಸೌದಿ ಅರೇಬಿಯ), ಮೇ 30: ಕೊರೋನ ವೈರಸ್ ಸಾಂಕ್ರಾಮಿಕ ಹರಡುವುದನ್ನು ತಡೆಯುವುದಕ್ಕಾಗಿ 11 ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಸೌದಿ ಅರೇಬಿಯ ತೆರವುಗೊಳಿಸಿದೆ ಎಂದು ಸೌದಿ ಅರೇಬಿಯದ ಸರಕಾರಿ ಸುದ್ದಿಸಂಸ್ಥೆ ಸೌದಿ ಪ್ರೆಸ್ ಏಜನ್ಸಿ (ಎಸ್ಪಿಎ) ಶನಿವಾರ ವರದಿ ಮಾಡಿದೆ. ಆದರೆ, ವಿದೇಶಿ ಪ್ರಯಾಣಿಕರು ಕ್ವಾರಂಟೈನ್ ನಿಯಮಗಳ ಪಾಲನೆಯನ್ನು ಮುಂದುವರಿಸಬೇಕಾಗುತ್ತದೆ.
ಯುನೈಟೆಡ್ ಅರಬ್ ಎಮಿರೇಟ್ಸ್, ಜರ್ಮನಿ, ಅಮೆರಿಕ, ಐರ್ಲ್ಯಾಂಡ್, ಇಟಲಿ, ಪೋರ್ಚುಗಲ್, ಬ್ರಿಟನ್, ಸ್ವೀಡನ್, ಸ್ವಿಟ್ಸರ್ಲ್ಯಾಂಡ್, ಫ್ರಾನ್ಸ್ ಮತ್ತು ಜಪಾನ್ ದೇಶಗಳ ನಾಗರಿಕರಿಗೆ ಸೌದಿ ಅರೇಬಿಯ ಪ್ರವೇಶಿಸಲು ರವಿವಾರದಿಂದ ಅವಕಾಶ ನೀಡಲಾಗುವುದು ಎಂದು ಆಂತರಿಕ ಭದ್ರತಾ ಸಚಿವಾಲಯದ ಮೂಲವೊಂದನ್ನು ಉಲ್ಲೇಖಿಸಿ ಎಸ್ಪಿಎ ವರದಿ ಮಾಡಿದೆ.