ದೇಶದಲ್ಲಿ 12 ವಾರ ಬಳಿಕ ಇಳಿಕೆ ಹಾದಿಯಲ್ಲಿ ಕೋವಿಡ್ ಸಾವು

Update: 2021-05-31 04:34 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕಿನ ಎರಡನೇ ಅಲೆ ಆರಂಭವಾದ ಬಳಿಕ ಸತತ 12 ವಾರಗಳ ಕಾಲ ಏರಿಕೆ ಕಂಡಿದ್ದ ಕೋವಿಡ್ ಸಾವಿನಸಂಖ್ಯೆ ಇದೀಗ ಇಳಿಯಲಾರಂಭಿಸಿದೆ.

ರವಿವಾರ ಕೊನೆಗೊಂಡ ವಾರದಲ್ಲಿ ದೇಶವ್ಯಾಪಿ ಕೋವಿಡ್ ಸಾವಿನ ಪ್ರಮಾಣ ಹಿಂದಿನ ವಾರಕ್ಕಿಂತ ಶೇಕಡ 17ರಷ್ಟು ಕಡಿಮೆಯಾಗಿದೆ. ಹನ್ನೆರಡು ವಾರ ಬಳಿಕ ಮೊದಲನೇ ಬಾರಿಗೆ ಸಾಪ್ತಾಹಿಕ ಸರಾಸರಿ ಇಳಿಕೆಯಾಗಿದ್ದು, 34 ದಿನಗಳ ಬಳಿಕ ದೇಶದಲ್ಲಿ ಸಾವಿನ ಸಂಖ್ಯೆ 3000ಕ್ಕಿಂತ ಕೆಳಗಿಳಿದಿದೆ.

ಕೆಲ ಈಶಾನ್ಯ ರಾಜ್ಯಗಳು ಮತ್ತು ಲಡಾಖ್ ಹೊರತುಪಡಿಸಿ ದೇಶದ ಎಲ್ಲೆಡೆ ಕೋವಿಡ್-19ನ ಎರಡನೇ ಅಲೆಯ ಪ್ರಭಾವ ಕಡಿಮೆಯಾಗುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ ಸತತ ಮೂರನೇ ವಾರ ಇಳಿಕೆ ಪ್ರವೃತ್ತಿ ತೋರಿದ್ದು, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಹಾಗೂ ಅಸ್ಸಾಂನಲ್ಲಿ ಮಾತ್ರ ಕಳೆದ ವಾರ ಏರಿಕೆ ಪ್ರವೃತ್ತಿ ಕಂಡುಬಂದಿತ್ತು.

ಮೇ 24-30ರ ಅವಧಿಯಲ್ಲಿ ಒಟ್ಟು 12.95 ಲಕ್ಷ ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದು ಹಿಂದಿನ ವಾರ ದಾಖಲಾದ ಪ್ರಕರಣಗಳಿಗಿಂತ ಶೇಕಡ 27ರಷ್ಟು ಕಡಿಮೆ. ಅಂತೆಯೇ ಸಾವಿನ ಸಂಖ್ಯೆ ಕೂಡಾ ಕಳೆದ ವಾರ ಇಳಿಕೆಯಾಗಿದೆ. ಮೇ 24-30ರ ಅವಧಿಯಲ್ಲಿ 24,372 ಮಂದಿ ಸೋಂಕಿತರು ಮೃತಪಟ್ಟಿದ್ದರೆ, ಹಿಂದಿನ ವಾರ ಈ ಸಂಖ್ಯೆ 29,331 ಆಗಿತ್ತು.

ಈ ಹಿಂದೆ ಮಾರ್ಚ್ 1-7ರ ಅವಧಿಯಲ್ಲಿ ಮಾತ್ರ ಸಾಪ್ತಾಹಿಕ ಸಾವಿನ ಸಂಖ್ಯೆ ಇಳಿಕೆಯಾಗಿತ್ತು. ಮೇ ತಿಂಗಳಲ್ಲಿ ಇದುವರೆಗೆ ದೇಶದಲ್ಲಿ 1.15 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅಂತೆಯೇ ಎ 26ರ ಬಳಿಕ ಇದೇ ಮೊದಲ ಬಾರಿಗೆ ದೈನಿಕ ಸಾವಿನ ಸಂಖ್ಯೆ 3000ಕ್ಕಿಂತ ಕೆಳಗಿಳಿದಿದೆ. ದೇಶದಲ್ಲಿ ರವಿವಾರ 2722 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶ ತಿಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News