ಫೆಲೆಸ್ತೀನ್: ಮಿತ್ರರಿಂದಲೇ ಪದೇ ಪದೇ ಬೆನ್ನಿಗೆ ಇರಿಸಿಕೊಂಡ ಅನುಭವ
► ಭಾಗ-13
ಕಳೆದ ವರ್ಷ ಯುಎಇ ಮತ್ತು ಬಹರೈನ್ ದೇಶಗಳು ಅಮೆರಿಕದ ಮಧ್ಯಸ್ಥಿಕೆಯಲ್ಲಿ, ಇಸ್ರೇಲ್‌ಗೆ ಅಧಿಕೃತ ಮಾನ್ಯತೆ ನೀಡುವ ಒಪ್ಪಂದಕ್ಕೆ ಸಹಿ ಹಾಕಿದವು. ಈ ಕೃತ್ಯವನ್ನು ತಮಗೆ ತಮ್ಮವರು ಮಾಡಿದ ಮಹಾದ್ರೋಹ ಎಂದು ಕರೆಯುವ ಫೆಲೆಸ್ತೀನ್ ಜನತೆ, ಪ್ರಸ್ತುತ ದೇಶಗಳು ಇಂತಹ ದ್ರೋಹಕ್ಕಾಗಿ ಸೆಪ್ಟಂಬರ್ 15ರ ದಿನವನ್ನು ಆರಿಸಿಕೊಂಡದ್ದನ್ನು ತಮ್ಮ ಭಾವನೆಗಳ ಜೊತೆ ನಡೆಸಲಾದ ಕ್ರೂರ ಚೆಲ್ಲಾಟ ಎಂದು ಪರಿಗಣಿಸುತ್ತಾರೆ. ಏಕೆಂದರೆ ಪ್ರತಿವರ್ಷ ಸೆಪ್ಟಂಬರ್ ಮೂರನೆಯ ವಾರವು ಫೆಲೆಸ್ತೀನ್ ಜನತೆಗೆ ಅವರ ವಿಮೋಚನಾ ಹೋರಾಟದ ಚರಿತ್ರೆಯ ಕೆಲವು ಅತ್ಯಂತ ಕರಾಳ ಅಧ್ಯಾಯಗಳನ್ನು ನೆನಪಿಸುತ್ತದೆ.
1982ರಲ್ಲಿ ಲೆಬನಾನ್ ಮೇಲೆ ದಾಳಿ ಮಾಡಿದ ಇಸ್ರೇಲ್ ಸೇನೆ ಅಲ್ಲಿನ ರಾಜಧಾನಿ ಬೈರೂತ್‌ನಲ್ಲಿದ್ದ ಶತೀಲಾ ಮತ್ತು ಸಾಬ್ರಾ ಎಂಬ ಫೆಲೆಸ್ತೀನ್ ನಿರಾಶ್ರಿತರ ಶಿಬಿರಗಳಿಗೆ ಮುತ್ತಿಗೆ ಹಾಕಿತು. ಸೆಪ್ಟಂಬರ್ 16 ರಂದು, ಈ ರೀತಿ ಇಸ್ರೇಲ್ ಪಡೆಗಳಿಂದ ಸುತ್ತುವರಿಯಲ್ಪಟ್ಟ ಶಿಬಿರಗಳಿಗೆ ನುಗ್ಗಿದ ಫೆಲಾಂಜಿ ಎಂಬ ಅಲ್ಲಿನ ಕ್ರೈಸ್ತ ಉಗ್ರವಾದಿ ಗುಂಪೊಂದು ಶಿಬಿರಾರ್ಥಿಗಳ ಸಾಮೂಹಿಕ ಹತ್ಯೆ ಆರಂಭಿಸಿತ್ತು. ಇಸ್ರೇಲ್ ಪಡೆಗಳ ಮೇಲ್ನೋಟದಲ್ಲಿ ಸತತ ಎರಡು ದಿನ ಮುಂದುವರಿದ ಈ ಹತ್ಯಾಕಾಂಡದಲ್ಲಿ ಮಕ್ಕಳು, ಮಹಿಳೆಯರ ಸಹಿತ ಸುಮಾರು 3,500 ನಿರಾಶ್ರಿತ ನಾಗರಿಕರು ಹತರಾಗಿದ್ದರು. 2020 ರಲ್ಲಿ ಯುಎಇ ಮತ್ತು ಬಹರೈನ್‌ಗಳು ಇಸ್ರೇಲ್ ಜೊತೆ ಸ್ನೇಹದ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಾಗ ಫೆಲೆಸ್ತೀನ್ ಜನತೆ ಪ್ರಸ್ತುತ ದುರಂತದ 38ನೇ ವಾರ್ಷಿಕ ಶೋಕಾಚರಣೆ ನಡೆಸುತ್ತಿದ್ದರು. ಮಾತ್ರವಲ್ಲ, ಅವರು ಅದೇ ವಾರ ತಮ್ಮ ಚರಿತ್ರೆಯ ಇನ್ನೊಂದು ದೊಡ್ಡ ದುರಂತವನ್ನು ಸ್ಮರಿಸುತ್ತಾ ಅದರ 50ನೇ ವಾರ್ಷಿಕ ಶೋಕಾಚರಣೆಯಲ್ಲೂ ನಿರತರಾಗಿದ್ದರು. ಐದು ದಶಕಗಳ ಹಿಂದೆ, 1970ರಲ್ಲಿ ಸೆಪ್ಟಂಬರ್ 17 ರಂದು ಜೋರ್ಡನ್ ರಾಜಧಾನಿ ಅಮ್ಮಾನ್‌ನಲ್ಲಿ ಫೆಲೆಸ್ತೀನ್ ಮೂಲದ ಸುಮಾರು 15,000 ನಾಗರಿಕರು ಮತ್ತು ಸಶಸ್ತ್ರ ಹೋರಾಟಗಾರರ ಸಾಮೂಹಿಕ ಹತ್ಯಾಕಾಂಡ ನಡೆದಿತ್ತು.
► ದ್ರೋಹಗಳ ಸರಮಾಲೆ
1967ರ ‘ಆರು ದಿನಗಳ ಯುದ್ಧ’ ಮುಗಿದಾಗ, ಮಧ್ಯ ಪ್ರಾಚ್ಯದ ಭೂಪಟ ಮಾತ್ರವಲ್ಲ ಅಲ್ಲಿಯ ಶಕ್ತಿ ಸಮತೋಲನವೆಲ್ಲಾ ಬದಲಾಗಿ ಬಿಟ್ಟಿತ್ತು. ಆ ಯುದ್ಧದಲ್ಲಿ ಪುಟಾಣಿ ಇಸ್ರೇಲ್‌ಗೆಏಕಕಾಲದಲ್ಲಿ ಮತ್ತು ತೀರಾ ಸಣ್ಣ ಅವಧಿಯಲ್ಲಿ ತನ್ನ ಅಕ್ಕಪಕ್ಕದ ಹಲವು ರಾಷ್ಟ್ರಗಳನ್ನು ಅಷ್ಟೊಂದು ಹೀನಾಯವಾಗಿ ಸೋಲಿಸಲು ಹೇಗೆ ತಾನೇ ಸಾಧ್ಯವಾಯಿತು ಎಂಬ ಪ್ರಶ್ನೆ ಲಕ್ಷಾಂತರ ವೀಕ್ಷಕರನ್ನು ಕಾಡಿತ್ತು. ಈ ಕುರಿತಂತೆ ಮುಂದಿನ ದಿನಗಳಲ್ಲಿ ಅನಾವರಣಗೊಂಡ ವಾಸ್ತವಗಳು ನಿಜಕ್ಕೂ ಆಘಾತಕಾರಿಯಾಗಿದ್ದವು. ಸಾರಾಂಶವನ್ನು ಮಾತ್ರ ಹೇಳಬೇಕೆಂದರೆ, ಆ ಯುದ್ಧದಲ್ಲಿ ಇಸ್ರೇಲ್‌ನ ವಿಜಯವನ್ನು ಖಚಿತಗೊಳಿಸಲು ಬೇಕಾದ ಎಲ್ಲ ಏರ್ಪಾಡುಗಳನ್ನು ಅದರ ವಿರುದ್ಧ ಯುದ್ಧಕ್ಕಿಳಿದ ಅರಬ್ ದೇಶಗಳೇ ಮಾಡಿದ್ದವು! ಕೆಲವು ಉದಾಹರಣೆಗಳು ಮಾತ್ರ ಇಲ್ಲಿವೆ:
► ಮೊರೊಕ್ಕೋ ಮಾಡಿದ ದ್ರೋಹ
1965ರ ಸೆಪ್ಟಂಬರ್‌ನಲ್ಲಿ ಅರಬ್ ದೇಶಗಳ ಒಕ್ಕೂಟ ‘ಅರಬ್ ಲೀಗ್’ನ ನೇತೃತ್ವದಲ್ಲಿ ಮೊರೊಕ್ಕೋ ದೇಶದ ಹೊಟೇಲ್ ಕಾಸಾ ಬ್ಲಾನ್ಕಾದಲ್ಲಿ 12 ಅರಬ್ ದೇಶಗಳ ಮುಖ್ಯಸ್ಥರ ಒಂದು ಶೃಂಗ ಸಭೆ ನಡೆದಿತ್ತು. ಪಿಎಲ್‌ಒ ಪ್ರತಿನಿಧಿಯನ್ನೂ ಈ ಶೃಂಗ ಸಭೆಗೆ ಆಮಂತ್ರಿಸಲಾಗಿತ್ತು. ನಾಲ್ಕು ದಿನಗಳ ಈ ಸಭೆಯಲ್ಲಿ ಫೆಲೆಸ್ತೀನ್‌ನ ವಿಮೋಚನೆಗಾಗಿ ದೊಡ್ಡ ಮಟ್ಟದ ಒಂದು ಸಂಯುಕ್ತ ಸೈನಿಕ ಕಾರ್ಯಾಚರಣೆಯ ಅಗತ್ಯದ ಬಗ್ಗೆ ಚರ್ಚಿಸಲಾಗಿತ್ತು. ಭೂಸೇನೆ, ವಾಯುಸೇನೆ, ನೌಕಾಪಡೆ, ಬೇಹುಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರತಿಯೊಂದು ಸದಸ್ಯ ದೇಶದ ಸಾಮರ್ಥ್ಯ ಎಷ್ಟು ಮತ್ತು ಯೋಜಿತ ಕಾರ್ಯಾಚರಣೆಯಲ್ಲಿ ಯಾರು ಯಾವ ಪಾತ್ರ ವಹಿಸಬೇಕು ಇತ್ಯಾದಿ ವಿಷಯಗಳ ಕುರಿತು ವಿಚಾರ ವಿನಿಮಯ ನಡೆದಿತ್ತು. ಆಯಾ ದೇಶದ ಮುಖ್ಯಸ್ಥರು ಮಾತ್ರ ಹಾಜರಿದ್ದರಿಂದ ಪರಸ್ಪರ ನಂಬಿಕೆಯ ವಾತಾವರಣದಲ್ಲಿ ಸಾಕಷ್ಟು ಮಹತ್ವದ ಸೂಕ್ಷ್ಮ ಹಾಗೂ ವ್ಯೆಹಾತ್ಮಕ ಮಾಹಿತಿಗಳ ವಿನಿಮಯ ನಡೆಯಿತು. ಕೆಲವು ವಿಷಯಗಳಲ್ಲಿ ಜಗಳಗಳೂ ನಡೆದವು. ಆದರೆ ಈ ಸಭೆ ಗುಪ್ತವಾಗಿದೆ ಎಂದು ನಂಬಿದ್ದವರು ಭ್ರಮೆಯಲ್ಲಿದ್ದರು.
ಮುಂದೆ ಇಸ್ರೇಲ್‌ನ ಗುಪ್ತಚರ ವಿಭಾಗದ ಮುಖ್ಯಸ್ಥ ಮತ್ತು ಮೇಜರ್ ಜನರಲ್ ಸ್ಥಾನದಲ್ಲಿದ್ದ ಶ್ಲೋಮೋ ಗಾಝಿಟ್ ಅವರು ಬಹಿರಂಗ ಪಡಿಸಿದ ಪ್ರಕಾರ, ಈ ಶೃಂಗ ಸಭೆಯ ಪ್ರಾಯೋಜಕರಾಗಿದ್ದ ಮೊರೊಕ್ಕೋ ದೊರೆ ಕಿಂಗ್ ಹುಸೈನ್ (ದ್ವಿತೀಯ) ಅವರು ಇಸ್ರೇಲ್ ಜೊತೆ ಒಂದು ಗುಪ್ತ ಒಪ್ಪಂದ ನಡೆಸಿದ್ದರು. ಅದರ ಪ್ರಕಾರ ಪ್ರಸ್ತುತ ಸಭೆ ನಡೆಯಲಿದ್ದ ಕಾಸಾ ಬ್ಲಾನ್ಕಾ ಹೊಟೇಲ್‌ನ ನಿರ್ದಿಷ್ಟ ಅಂತಸ್ತನ್ನು ಇಸ್ರೇಲ್‌ನ ಬೇಹುಗಾರಿಕಾ ಸಂಸ್ಥೆಗಳಾದ ಶಿನ್ ಬೆಟ್ ಮತ್ತು ಮೋಸ್ಸಾದ್‌ನ ಅಧಿಕಾರಿಗಳಿಗೆ ಬಿಟ್ಟುಕೊಡಲಾಗಿತ್ತು. ಅವರು ಅಲ್ಲಿ ನಡೆಯುವ ಎಲ್ಲ ಸಂಭಾಷಣೆಗಳನ್ನು ರೆಕಾರ್ಡ್ ಮಾಡುವ ಗುಪ್ತ ಏರ್ಪಾಟನ್ನು ಮಾಡಿದ್ದರು. ಅಲ್ಲಿ ಪ್ರಕಟವಾದ ಎಲ್ಲ ಮಾಹಿತಿಗಳು ಇಸ್ರೇಲ್‌ಗೆ ಯಥಾವತ್ತಾಗಿ ತಲುಪಿದವು. 1967ರ ಯುದ್ಧದಲ್ಲಿ ಇಸ್ರೇಲ್‌ಗೆ ಅಷ್ಟೊಂದು ಪ್ರಾಬಲ್ಯ ಒದಗಿಸುವಲ್ಲಿ ಅತಿ ದೊಡ್ಡ ಪಾತ್ರ ಈ ವಿದ್ರೋಹದ್ದಾಗಿತ್ತು. ಈ ಗುಟ್ಟನ್ನು ಮುಂದೆ ಕಿಂಗ್ ಹುಸೈನ್‌ರ ಕೆಲವು ಮಾಜಿ ಆಪ್ತರು ಕೂಡಾ ಖಚಿತ ಪಡಿಸಿದರು. ಅದೇ ವರ್ಷ ಕಿಂಗ್ ಹುಸೈನ್‌ರ ವಿರೋಧಿ, ಎಡಪಂಥೀಯ ನಾಯಕ ಮೆಹದಿ ಬಿನ್ ಬರ್ಕಾ ನಿಗೂಢವಾಗಿ ಮತ್ತು ಶಾಶ್ವತವಾಗಿ ಕಾಣೆಯಾದದ್ದು, ಇಸ್ರೇಲ್ ಕಡೆಯಿಂದ ಕಿಂಗ್ ಹುಸೈನ್‌ರಿಗೆ ದಕ್ಕಿದ ಹಲವು ಪಾರಿತೋಶಕಗಳಲ್ಲಿ ಒಂದೆಂದು ನಂಬಲಾಗುತ್ತದೆ.
ನಿರಾಶೆಗೊಳಿಸಿದ ಜಮಾಲ್ ಅಬ್ದುನ್ನಾಸಿರ್
1956 ರಿಂದ 1970 ರತನಕ ಈಜಿಪ್ಟ್ ಅಧ್ಯಕ್ಷರಾಗಿದ್ದ ಜಮಾಲ್ ಅಬ್ದುನ್ನಾಸಿರ್ ಆಧುನಿಕ ಅರಬ್ ಜಗತ್ತು ಕಂಡ ಅತ್ಯಂತ ಜನಪ್ರಿಯ ನಾಯಕರಲ್ಲೊಬ್ಬರು. ಈಜಿಪ್ಟ್ ನಲ್ಲಿದ್ದ ರಾಜಾಳ್ವಿಕೆಯನ್ನು ಕಿತ್ತೊಗೆಯುವಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದರು. ಅವರ ವರ್ಚಸ್ಸು ಎಷ್ಟಿತ್ತೆಂದರೆ ಎರಡೆರಡು ಬಾರಿ ಯುದ್ಧದಲ್ಲಿ ಸೋಲನುಭವಿಸಿದ ಬಳಿಕವೂ ಅರೇಬಿಯಾದ ಯಾವುದೇ ಭಾಗದಲ್ಲಿ ಅವರಿಗೆ ಉತ್ಸಾಹ ಭರಿತ ಸ್ವಾಗತ ಕಾದಿತ್ತು. ಆಕರ್ಷಕ ವ್ಯಕ್ತಿತ್ವದ ನಾಸಿರ್ ಹಲವು ವರ್ಷಗಳ ಕಾಲ ಫೆಲೆಸ್ತೀನ್ ಪರವಾಗಿ ಮತ್ತು ಇಸ್ರೇಲ್ ವಿರುದ್ಧ ನೀಡಿದ್ದ ಭಾರೀ ಆವೇಶದ, ಕುದಿಯುವ ಹೇಳಿಕೆಗಳು, ಜನರನ್ನು ಭಾವುಕರಾಗಿಸಿ ಅವರಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದವು. ಅರಬ್ ಜಗತ್ತು ಅವರಲ್ಲೊಬ್ಬ ವಿಮೋಚಕನನ್ನು ಗುರುತಿಸಿತ್ತು. ಫೆಲೆಸ್ತೀನ್‌ನ ಜನರಂತೂ ಒಂದು ಹಂತದಲ್ಲಿ ನಾಸಿರ್‌ರ ಹೆಸರು ಕೇಳಿದರೆ ಉನ್ಮಾದಿತರಾಗುತ್ತಿದ್ದರು. ಅವರು ಅಧ್ಯಕ್ಷರಾಗುವ ಮುನ್ನ ಬರೆದ ‘ಫಿಲಾಸಫಿ ಆಫ್ ರೆವೆಲ್ಯೂಶನ್’ ಪುಸ್ತಕದಲ್ಲಿ ಸ್ವತಃ ತಿಳಿಸಿರುವಂತೆ ಮೊದಲು 5.5 ಕೋಟಿ ಈಜಿಪ್ಷಿಯನ್ನರ ನಾಯಕನಾಗುವುದು, ಮುಂದೆ 22.4 ಕೋಟಿ ಆಫ್ರಿಕನ್ನರ ಮತ್ತು ಆಬಳಿಕ ಜಗತ್ತಿನ ಉಳಿದೆಲ್ಲ 42 ಕೋಟಿ ಮುಸ್ಲಿಮರ ನಾಯಕನಾಗುವುದು ಅವರ ಗುರಿಯಾಗಿತ್ತು. ವ್ಯಕ್ತಿಗತ ಮಹತ್ವಾಕಾಂಕ್ಷೆಗಳ ಮುಂದೆ, ಭಾಷಣಗಳಲ್ಲಿ ಹೇಳಿದ್ದ ಸಮಾಜವಾದ, ಆಧುನೀಕರಣ, ಅರಬ್ ರಾಷ್ಟ್ರೀಯವಾದ ಮತ್ತಿತರ ತತ್ವಾದರ್ಶಗಳೆಲ್ಲಾ ಕೇವಲ ಚಪ್ಪಾಳೆಗಿಟ್ಟಿಸುವ ಮತ್ತು ಹೆಚ್ಚೆಚ್ಚು ಅಧಿಕಾರ ಗಳಿಸುವ, ಕಾಲಡಿಯ ಮೆಟ್ಟಲುಗಳು ಮಾತ್ರವಾಗಿದ್ದವು ಎಂಬುದು ನಿಧಾನವಾಗಿ ಬಯಲುಗೊಳ್ಳುತ್ತಾ ಬಂತು.
67ರ ಯುದ್ಧದ ವೇಳೆ ಈಜಿಪ್ಟ್ ಸೇನೆಯ ಮಹಾ ದಂಡನಾಯಕರಾಗಿದ್ದ ಜನರಲ್ ಫೌಝಿ (Fawzi ) ತಿಳಿಸಿದಂತೆ, ಯುದ್ಧದ ಮೊದಲೂ ಆನಂತರವೂ ನಾಸಿರ್ ಬೇರೆಲ್ಲಕ್ಕಿಂತ ಹೆಚ್ಚಾಗಿ ಅರಬ್ ಜಗತ್ತಿನಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಚಿಂತೆಯಲ್ಲಿದ್ದರು.
ಅವರು ಪದೇ ಪದೇ ಪ್ರದರ್ಶಿಸುತ್ತಿದ್ದ ಈಜಿಪ್ಟ್‌ನ ಮಿಲಿಟರಿ ಸಾಮರ್ಥ್ಯದ ಉದ್ದೇಶ ಅರಬ್ ಆಡಳಿತಗಾರರು ಮತ್ತು ಜನತೆಯ ಮೇಲೆ ಪ್ರಭಾವ ಬೀರುವುದಷ್ಟೇ ಆಗಿತ್ತು. ಅದೇ ಅವಧಿಯಲ್ಲಿ ಈಜಿಪ್ಟ್ ವಾಯುಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಸುದ್ಕಿ ಮಹಮೂದ್ ಅವರು ಕೆಲವು ವರ್ಷಗಳ ಬಳಿಕ ಬಿಚ್ಚಿಟ್ಟ ಮಾಹಿತಿ ಅರಬ್ ಜಗತ್ತನ್ನು ನಡುಗಿಸಿ ಬಿಟ್ಟಿತು: ನಮ್ಮ ಮೇಲೆ ಆಕ್ರಮಣಕ್ಕೆ ಇಸ್ರೇಲ್ ಸಿದ್ಧವಾಗುತ್ತಿದೆ ಎಂಬ ಖಚಿತ ಮಾಹಿತಿ ನಮಗಿತ್ತು. ಅದಕ್ಕೆ ಮುನ್ನವೇ ಇಸ್ರೇಲ್ ಮೇಲೆ ಮುಗಿ ಬೀಳಲು ನಮ್ಮ ಯುದ್ಧ ವಿಮಾನಗಳು ಸಜ್ಜಾಗಿ ದ್ದವು. ಈ ವೇಳೆ, ‘‘ಆ ಕಡೆಯಿಂದ ಆಕ್ರಮಣ ಆರಂಭವಾಗದೆ ನಮ್ಮ ಕಡೆಯಿಂದ ದಾಳಿ ಬೇಡ’’ ಎಂಬ ಆದೇಶ ನಾಸಿರ್ ಅವರಿಂದ ಬಂತು. ‘‘ನಾವು ಈ ರೀತಿ ಕಾದು ಕುಳಿತರೆ ನಮ್ಮ ವಾಯುಸೇನೆ ಮಾತ್ರವಲ್ಲ ನಮ್ಮ ಒಟ್ಟು ಸೈನಿಕ ಸಾಮರ್ಥ್ಯವೇ ಉಡುಗಿ ಹೋದೀತು’’ ಎಂದು ನಾನು ಎಷ್ಟು ಎಚ್ಚರಿಸಿದರೂ ಕೇಳುವವರಿರಲಿಲ್ಲ. ಮರುದಿನ ಇಸ್ರೇಲ್ ನಡೆಸಿದ ವ್ಯಾಪಕ ವಾಯುದಾಳಿಯಲ್ಲಿ ಕೆಲವೇ ಗಂಟೆಗಳ ಅವಧಿಯಲ್ಲಿ ನಮ್ಮ ವಾಯು ನೆಲೆಗಳಲ್ಲಿದ್ದ 298 ವಿಮಾನಗಳು ಧ್ವಂಸಗೊಂಡಿದ್ದವು.’’
ಇನ್ನಷ್ಟು ಕುತೂಹಲದ ಸಂಗತಿ ಏನೆಂದರೆ ನಿಖರವಾಗಿ ಇಸ್ರೇಲ್ ವಿಮಾನ ದಾಳಿ ಆರಂಭವಾಗುವ ಕೆಲವು ನಿಮಿಷಗಳ ಮುನ್ನ, ವಿಮಾನಗಳನ್ನು ದೂರದಿಂದ ಗುರುತಿಸಿ ಪ್ರತಿಕ್ರಮಗಳನ್ನು ಎಸಗುವುದಕ್ಕೆ ನೆರವಾಗುವ ಈಜಿಪ್ಟ್‌ನ ರಾಡಾರ್ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿತ್ತು. ಇದಕ್ಕೆ ನೀಡಲಾದ ಔಪಚಾರಿಕ ವಿವರಣೆ ಏನೆಂದರೆ, ಅದೇ ವೇಳೆ ಈಜಿಪ್ಟ್‌ನ ಯುದ್ಧ ಸಚಿವರು ಮತ್ತು ಕೆಲವು ಪ್ರಮುಖ ಸೇನಾಧಿಕಾರಿಗಳು, ಸಿನಾಯ್ ಪ್ರದೇಶದಲ್ಲಿ ನಿಯುಕ್ತ ಪಡೆಗಳ ವೈಮಾನಿಕ ಸಮೀಕ್ಷೆಗೆ ಹೋಗಿದ್ದರು. ತಮ್ಮ ರಾಡಾರ್ ಗಳಲ್ಲಿ ಈ ವಿಮಾನಗಳನ್ನು ನೋಡಿ ಶತ್ರುಗಳ ವಿಮಾನಗಳೆಂಬ ತಪ್ಪು ತಿಳುವಳಿಕೆಯಿಂದ ಈಜಿಪ್ಟ್ ಪಡೆಗಳೇ ಅವುಗಳನ್ನು ಹೊಡೆದುರುಳಿಸುವ ಸಾಧ್ಯತೆ ಇತ್ತು. ಅದನ್ನು ತಪ್ಪಿಸಲು ರಾಡಾರ್ ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಹೇಗಿದೆ, ಸಬೂಬು? ಇಂತಹ ಇನ್ನೂ ಅನೇಕ ನಿಗೂಢ ವೈಚಿತ್ರಗಳು ಕ್ರಮೇಣ ಮುಂದೆ ಬಂದವು. ನಾಸಿರ್‌ರಂತಹ ಸಮರ್ಥ ನಾಯಕನ ಉಪಸ್ಥಿತಿಯಲ್ಲಿ ತಲೆದೋರಿದ ಈ ಬಗೆಯ ಆತ್ಮ ಘಾತಕ ನಿರ್ಧಾರ ಹಾಗೂ ಬೆಳವಣಿಗೆಗಳ ಹಿಂದೆ ಯಾವೆಲ್ಲ ಆಮಿಷ ಅಥವಾ ನಿರ್ಬಂಧಗಳಿದ್ದುವು ಎಂಬ ಬಗ್ಗೆ ಹಲವಾರು ವಾದಗಳು, ವಿವಾದಗಳು, ಊಹೆಗಳು ಇತ್ಯಾದಿಗಳೆಲ್ಲ ಇವೆ. ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವೆ ಶೀತಲ ಸಮರ ಕಾವೇರಿದ್ದ ಆ ದಿನಗಳಲ್ಲಿ ಎಷ್ಟೋ ಮಹಾ ನಾಯಕರ ಮಹಾ ನಿರ್ಣಯಗಳೆಲ್ಲ ತತ್ವಾದರ್ಶಗಳು ಅಥವಾ ತಮ್ಮ ಜನರ ಹಿತಾಸಕ್ತಿಗಿಂತ ಹೆಚ್ಚಾಗಿ, ಸ್ವಾರ್ಥ, ಭ್ರಷ್ಟಾಚಾರ, ಬ್ಲಾಕ್‌ಮೇಲ್ ಇತ್ಯಾದಿಗಳಿಂದ ಮತ್ತು ಶೀತಲ ಸಮರದ ಯಾವುದಾದರೊಂದು ಅಥವಾ ಕೆಲವೊಮ್ಮೆ ಎರಡೂ ಪಕ್ಷಗಳಿಂದ ಪ್ರಭಾವಿತವಾಗಿರುತ್ತಿದ್ದವು ಎಂಬುದು ಮಾತ್ರ ಖಚಿತವಾಗಿತ್ತು.
ಮಧ್ಯಪ್ರಾಚ್ಯದ ವಿವಿಧ ಗಡಿಗೆರೆಗಳನ್ನು ಮಾತ್ರವಲ್ಲದೆ ಎಷ್ಟೋ ಸರಕಾರ, ಪಕ್ಷ, ಆಂದೋಲನ ಮತ್ತು ವ್ಯಕ್ತಿಗಳ ವರ್ಚಸ್ಸನ್ನು 67ರ ಯುದ್ಧವು ಧೂಳೀಪಟ ಗೊಳಿಸಿತ್ತು. ಆವರೆಗೆ ಇಸ್ರೇಲ್ ಕೈಯಿಂದ ಫೆಲೆಸ್ತೀನ್ ಅನ್ನು ಕಿತ್ತುಕೊಳ್ಳುವ ಮಾತುಗಳನ್ನಾಡುತ್ತಿದ್ದ ನಾಸಿರ್‌ರಂತಹ ನಾಯಕರೆಲ್ಲ, ತಮ್ಮಿಂದ ಇಸ್ರೇಲ್ ಕಬಳಿಸಿಕೊಂಡ ಸ್ವತಃ ತಮ್ಮ ಪ್ರದೇಶಗಳನ್ನು ಬಿಡಿಸಿಕೊಳ್ಳುವ ಚಿಂತೆಯಲ್ಲಿ ಮಗ್ನರಾಗಿ ಬಿಟ್ಟರು. ಆಕ್ರಮಿತ ಪ್ರದೇಶಗಳ ಸುತ್ತ ಮುತ್ತ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಹಲವು ಘರ್ಷಣೆಗಳು ನಡೆದವು. ಈ ಉದ್ವಿಗ್ನತೆಯನ್ನು ಶಮನ ಮಾಡುವ ಹೆಸರಲ್ಲಿ 1970ರ ಜೂನ್ ತಿಂಗಳಲ್ಲಿ ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್, ರೋಜರ್ ವಿಲಿಯಮ್ಸ್ ಅವರು ಮುಂದಿಟ್ಟ ಯುದ್ಧ ವಿರಾಮ ಪ್ರಸ್ತಾವಕ್ಕೆ ಆ ವರ್ಷ ಆಗಸ್ಟ್ ತಿಂಗಳಲ್ಲಿ ನಾಸಿರ್ ತಮ್ಮ ನಿಶ್ಶರ್ತ ಒಪ್ಪಿಗೆ ನೀಡಿದರು. ಆಗ ‘‘ಫೆಲೆಸ್ತೀನ್ ಜನತೆಯೇ? ಅಂತಹದೇನಾದರೂ ಈ ಲೋಕದಲ್ಲಿ ಇದೆಯೇ?’’ ಎಂದು ಒಂದು ಹಂತದಲ್ಲಿ ಪ್ರಶ್ನಿಸಿದ್ದ ಗೋಲ್ಡಾ ಮೀರ್, ಇಸ್ರೇಲ್ ನ ಪ್ರಧಾನಿಯಾಗಿದ್ದರು. ಈ ರೀತಿ, ರೋಜರ್ಸ್ ಯೋಜನೆಗೆ ಸಮ್ಮತಿ ಮತ್ತು ಆ ಮೂಲಕ ಇಸ್ರೇಲ್‌ಗೆ ಹಾಗೂ 67ರ ಪೂರ್ವದ ಇಸ್ರೇಲ್ ಗಡಿಗಳಿಗೆ ಪರೋಕ್ಷ ಮಾನ್ಯತೆ ನೀಡಿದ್ದು, ನಾಸಿರ್‌ರ ಬದುಕಿನ ಕೊನೆಯ ದೊಡ್ಡ ಎಡವಟ್ಟಾಗಿತ್ತು. ಮುಂದಿನ ವರ್ಷ ಅವರು ಈ ಲೋಕವನ್ನೇ ಬಿಟ್ಟು ಹೋದರು.
ಅವರ ವ್ಯಕ್ತಿತ್ವ ಮತ್ತು ಅದ್ಭುತ ಸಾಮರ್ಥ್ಯಗಳು ಅರಬ್ ವಲಯಗಳಲ್ಲಿ ಮತ್ತು ಅವರನ್ನು ಬಲ್ಲ ಎಲ್ಲ ವಲಯಗಳಲ್ಲಿ ಇಂದು ಕೂಡಾ ಚರ್ಚೆಯಲ್ಲಿವೆ.
(ಮುಂದುವರಿಯುದು)