ಮೇಲ್ಜಾತಿಗೆ ಸೇರಿದ ಯುವತಿಗೆ ಉಡುಗೊರೆ ನೀಡಿದ ದಲಿತ ಯುವಕ, ಸ್ನೇಹಿತನ ತಲೆ ಬೋಳಿಸಿ, ಹಿಂಸಿಸಿದ ಗ್ರಾಮಸ್ಥರು

Update: 2021-06-01 11:57 GMT
ಮೇಲ್ಜಾತಿಗೆ ಸೇರಿದ ಯುವತಿಗೆ ಉಡುಗೊರೆ ನೀಡಿದ ದಲಿತ ಯುವಕ, ಸ್ನೇಹಿತನ ತಲೆ ಬೋಳಿಸಿ, ಹಿಂಸಿಸಿದ ಗ್ರಾಮಸ್ಥರು
photo: freepressjournal
  • whatsapp icon

ಭೋಪಾಲ್: ಮೇಲ್ಜಾತಿಗೆ ಸೇರಿದ ತನ್ನ ಪ್ರಿಯತಮೆಗೆ  ಮೊಬೈಲ್ ಫೋನ್ ಉಡುಗೊರೆ ನೀಡಿದ ತಪ್ಪಿಗೆ ಮಧ್ಯ ಪ್ರದೇಶದ ಜಬಲ್ಪುರ್ ಜಿಲ್ಲೆಯ ದಮನ್ ಖಮರಿಯಾ ಗ್ರಾಮದಲ್ಲಿ ದಲಿತ ಯುವಕ ಮತ್ತಾತನ ಸ್ನೇಹಿತನ ತಲೆಯನ್ನು ಮೇಲ್ಜಾತಿಯ ಜನರು ಬೋಳಿಸಿದ್ದೇ ಅಲ್ಲದೆ ಅವರು ಪರಸ್ಪರರ ಉಗುಳು ನೆಕ್ಕುವಂತೆ ಮಾಡಿ ನಂತರ ಅವರಿಗೆ ಚಪ್ಪಲಿಯ ಹಾರ ಹಾಕಿ ಮೆರವಣಿಗೆ ನಡೆಸಿ  ಅತ್ಯಂತ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ತಿಳಿದು ಬಂದಿದೆ. ಮೇ 22ರಂದು ನಡೆದ ಈ ಘಟನೆಯ ವೀಡಿಯೋ ರವಿವಾರ ಸಂಜೆ ವೈರಲ್ ಆದ ನಂತರವಷ್ಟೇ ಹೊರಜಗತ್ತಿಗೆ ತಿಳಿದಿದೆ.

ವೀಡಿಯೋ ವೈರಲ್ ಆದ ನಂತರ ಪೊಲೀಸರು ಸಂತ್ರಸ್ತರನ್ನು ಗುರುತಿಸಿ ದೂರು ದಾಖಲಿಸುವಂತೆ ಮಾಡಿದ್ದಾರೆ. ದೂರು ನೀಡಿದರೆ ಪರಿಣಾಮ ಸರಿಯಿರುವುದಿಲ್ಲ ಎಂದು ಆರೋಪಿಗಳು ಬೆದರಿಸಿದ್ದರು ಎಂದು ಯುವಕ ಆರೋಪಿಸಿದ್ದಾನೆ.

ಸಂತ್ರಸ್ತ ಯುವಕನನ್ನು 20 ವರ್ಷದ ರಾಜಕುಮಾರ್ ಮೆಹ್ರಾ ಎಂದು ಗುರುತಿಸಲಾಗಿದೆ. ಮೇಲ್ಜಾತಿಗೆ ಸೇರಿದ 19 ವರ್ಷದ ಯುವತಿಯನ್ನು ಈತ ಪ್ರೀತಿಸುತ್ತಿದ್ದು ಆಕೆಯನ್ನು ಮನೆಯಿಂದ ಹೊರ ಹೋಗಲು ಕುಟುಂಬ ಅನುಮತಿಸದೇ ಇದ್ದುದರಿಂದ ಇಬ್ಬರೂ ಸತತ ಸಂಪರ್ಕದಲ್ಲಿರುವಂತಾಗಲು ಆತ ಆಕೆಗೆ ಮೊಬೈಲ್ ಫೋನ್ ನೀಡಿದ್ದ. ರಾಜಕುಮಾರ್ ತನ್ನ ಸ್ನೇಹಿತ ಮಹೇಂದ್ರನಿಂದ ಮೊಬೈಲ್ ಫೋನ್ ಎರವಲು ಪಡೆದು ಪ್ರಿಯತಮೆಗೆ ನೀಡಿದ್ದ.

ಮೇ 22ರಂದು ಹುಡುಗಿಯ ತಂದೆ ಆಕೆ ಫೋನ್‍ನಲ್ಲಿ ಮಾತನಾಡುತ್ತಿರುವುದನ್ನು ನೋಡಿ ಪ್ರಶ್ನಿಸಿದಾಗ ಆಕೆ ನಿಜ ಹೇಳಿದ್ದಳು. ನಂತರ ರಾಜಕುಮಾರ್ ಮತ್ತು ಮಹೇಂದ್ರನನ್ನು ಮನೆಗೆ ಕರೆಸಿದ ಯುವತಿಯ ತಂದೆ ಮತ್ತಿತರರು ಅವರ ಜತೆ ಅಮಾನವೀಯವಾಗಿ ವರ್ತಿಸಿ ನಂತರ ಊರೆಲ್ಲಾ ಮೆರವಣಿಗೆ ನಡೆಸಿದ್ದಾರೆ.

ಯುವತಿಯ ತಂದೆ ಸಹಿತ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News