ಪತ್ನಿಯ ಹತ್ಯೆ ಮಾಡಿ ಮೃತದೇಹವನ್ನು ರಸ್ತೆಯಲ್ಲಿ ಎಳೆದೊಯ್ದ ದುಷ್ಕರ್ಮಿ: ಗಾಯಾಳು ಮಗು ಮೃತ್ಯು

Update: 2021-06-03 03:50 GMT

ಕೋಟಾ, ಜೂ.3: ಪತ್ನಿಯ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಮೃತದೇಹವನ್ನು ರಸ್ತೆಯಲ್ಲಿ ಸುಮಾರು 70-80 ಮೀಟರ್ ಎಳೆದುಕೊಂಡು ಹೋದ ಪೈಶಾಚಿಕ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಿಂದ ವರದಿಯಾಗಿದೆ. ಮಹಿಳೆಯ ಜತೆಗಿದ್ದ ಹಸುಗೂಸು ಕೂಡಾ ತಂದೆಯ ಕ್ರೌರ್ಯದಿಂದ ತೀವ್ರವಾಗಿ ಗಾಯಗೊಂಡಿದ್ದು, ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಆರೋಪಿಯನ್ನು ಸುನೀಲ್ ವಾಲ್ಮೀಕಿ (40) ಅಲಿಯಾಸ್ ಪಿಂಟೂ ಎಂದು ಗುರುತಿಸಲಾಗಿದೆ. ಆರೋಪಿ ರಾಂಪುರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ಡಿವೈಎಸ್ಪಿ ಹೇಳಿಕೆ ನೀಡಿದ್ದಾರೆ. ಆದರೆ ಶರಣಾಗಲು ಠಾಣೆಯತ್ತ ಹೋಗುತ್ತಿದ್ದ ಆರೋಪಿ ಪಲಾಯನ ಮಾಡಿದ್ದಾನೆ ಎಂದು ಠಾಣಾಧಿಕಾರಿ ಹಂಸರಾಜ್ ಮೀನಾ ಸ್ಪಷ್ಟಪಡಿಸಿದ್ದಾರೆ.

ಪತ್ನಿ ಸೀಮಾಳನ್ನು ಮಂಗಳವಾರ ಮಧ್ಯಾಹ್ನ ಆಕೆಯ ಸಹೋದರನ ಮನೆಯಿಂದ ಆರೋಪಿ ಕರೆದುಕೊಂಡುಬಂದಿದ್ದ ಎನ್ನಲಾಗಿದೆ. ದಂಪತಿಯ ಒಂಭತ್ತು ವರ್ಷದ ಮಗ ಅಜ್ಜಿ ಮನೆಯಲ್ಲಿ ಉಳಿದಿದ್ದ. ಸಂಜೆ ಪತಿ-ಪತ್ನಿ ನಡುವೆ ಜಗಳವಾಗಿದ್ದು, ಆರೋಪಿ ಕೊಡಲಿಯಿಂದ ಪತ್ನಿ ಮೇಲೆ ಹಲ್ಲೆ ಮಾಡಿದ. ಬಳಿಕ ರಸ್ತೆಯಲ್ಲಿ 70-80 ಕಿಲೋಮೀಟರ್ ದೂರವರೆಗೆ ಪತ್ನಿಯ ಮೃತದೇಹವನ್ನು ಎಳೆದಾಡಿಕೊಂಡು ಬಂದಿದ್ದನ್ನು ನೋಡಿ ಜನ ಭೀತಿಗೊಂಡರು ಎಂದು ಠಾಣಾಧಿಕಾರಿ ವಿವರಿಸಿದ್ದಾರೆ.

ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಪುಟ್ಟ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಬುಧವಾರ ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ. ಕೂಲಿ ಕಾರ್ಮಿಕನಾಗಿದ್ದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 15 ವರ್ಷ ಹಿಂದೆ ಸೀಮಾಳನ್ನು ವಿವಾಹವಾಗಿದ್ದ ಈತನಿಗೆ ಇಬ್ಬರು ಗಂಡುಮಕ್ಕಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News