ಕೋಟಿ ರೂ. ಪಾವತಿಸಿ ಮರಣ ದಂಡನೆಗೆ ಗುರಿಯಾಗಿದ್ದ ಕೃಷ್ಣನ್ ಜೀವ ಉಳಿಸಿದ ಯೂಸುಫ್ ಅಲಿ

Update: 2021-06-03 10:51 GMT
ಕೃಷ್ಣನ್ (Photo:khaleej times) / ಯೂಸುಫ್ ಅಲಿ

ಅಬುಧಾಬಿ: ಅಜಾಗರೂಕತೆಯಿಂದ ಕಾರು ಚಲಾಯಿಸಿ ಸುಡಾನ್ ದೇಶದ ಬಾಲಕನ ಸಾವಿಗೆ ಕಾರಣವಾಗಿದ್ದಕ್ಕೆ ಸಂಯುಕ್ತ ಅರಬ್ ಸಂಸ್ಥಾನದಲ್ಲಿ  ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದ 45 ವರ್ಷದ ಕೇರಳ ಮೂಲದ ವ್ಯಕ್ತಿ ಕೃಷ್ಣನ್ ಎಂಬವರ ಪಾಲಿಗೆ ಖ್ಯಾತ ಉದ್ಯಮಿ ಹಾಗೂ ದಾನಿ ಎಂ.ಎ. ಯೂಸುಫ್ ಅಲಿ ಅವರು ಆಪತ್ಬಾಂಧವರಾಗಿದ್ದಾರೆ. ಯೂಸುಫ್ ಅಲಿ ಅವರು ಸುಮಾರು ರೂ. 1 ಕೋಟಿ ಬ್ಲಡ್ ಮನಿ (ಪರಿಹಾರ ಹಣ) ಒದಗಿಸಿ ಕೃಷ್ಣನ್ ಅವರನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಿದ್ದಾರೆ.

ಸೆಪ್ಟೆಂಬರ್ 2012ರಲ್ಲಿ ಅಪಘಾತ ಸಂಭವಿಸಿತ್ತು. ಕೃಷ್ಣನ್ ಅವರು ಅಜಾಗರೂಕತೆಯಿಂದ ಕಾರು ಚಲಾಯಿಸಿದ ಕಾರಣ ಅವರ ಕಾರು ಮಕ್ಕಳ ಗುಂಪೊಂದರ ಮೇಲೆ ಹರಿದು ಒಬ್ಬ ಬಾಲಕ ಮೃತಪಟ್ಟಿದ್ದ.

ಘಟನೆ ನಂತರ ಕೃಷ್ಣನ್ ಅವರ ಕುಟುಂಬ ಅವರನ್ನು ಬಿಡುಗಡೆಗೊಳಿಸಲು ಸರ್ವಪ್ರಯತ್ನ ಪಟ್ಟಿದ್ದರೂ ವಿಫಲವಾಗಿತ್ತು. ಮೇಲಾಗಿ ಸಂತ್ರಸ್ತ ಬಾಲಕನ ಕುಟುಂಬ ಸುಡಾನ್ ದೇಶಕ್ಕೆ ಮರಳಿದ್ದರಿಂದ ಯಾವುದೇ ರಾಜಿ ಪಂಚಾತಿಕೆ ಹಾಗೂ ಕ್ಷಮಾದಾನಕ್ಕೂ ಅವಕಾಶವಿರಲಿಲ್ಲ.

ಕೊನೆಯ ಪ್ರಯತ್ನ ಎಂಬಂತೆ ಕೃಷ್ಣನ್ ಅವರ ಕುಟುಂಬ ಲುಲು ಗ್ರೂಪ್ ಅಧ್ಯಕ್ಷ ಯೂಸುಫ್ ಅಲಿ ಅವರನ್ನು ಸಂಪರ್ಕಿಸಿತ್ತು. ಯೂಸುಫ್ ಅಲಿ ಅವರು ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರನ್ನು ಸಂಪರ್ಕಿಸಿದ್ದರು. ಕೊನೆಗೆ ಈ ವರ್ಷದ ಜನವರಿಯಲ್ಲಿ ಸುಡಾನ್ ಬಾಲಕನ ಕುಟುಂಬ ಕೃಷ್ಣನ್ ಅವರಿಗೆ ಕ್ಷಮೆ ನೀಡಲು ಒಪ್ಪಿತ್ತು. ನಂತರ ಯೂಸುಫ್ ಅಲಿ ಅವರು ಆ ಕುಟುಂಬಕ್ಕೆ ಕೃಷ್ಣನ್ ಅವರ ಬಿಡುಗಡೆಗೆ ಪ್ರತಿಯಾಗಿ 5,00,000 ದಿರ್ಹಂ (ಅಂದಾಜು ರೂ.1 ಕೋಟಿ) ಪಾವತಿಸಿದ್ದರು.

ಇದೀಗ ಕೃಷ್ಣನ್ ಅವರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಅತ್ತ ಯೂಸುಫ್ ಅಲಿ ಅವರು ಇದೆಲ್ಲವೂ ದೇವರ ಹಾಗೂ ಯುಎಇ ಆಡಳಿತಗಾರರ ದಯೆ ಎಂದಿದ್ದಾರಲ್ಲದೆ ಕೃಷ್ಣನ್ ಅವರ ಮುಂದಿನ ಜೀವನ ಸುಖಕರವಾಗಲಿ ಎಂದು ಹಾರೈಸಿದ್ದಾರೆ.

ಬಿಡುಗಡೆಯ ಎಲ್ಲಾ ಕಾನೂನು ಪ್ರಕ್ರಿಯೆಗಳು ಗುರುವಾರ ಪೂರ್ಣಗೊಂಡಿದ್ದು ಕೃಷ್ಣನ್ ಅವರು ಸದ್ಯದಲ್ಲಿಯೇ ಕೇರಳದ ತಮ್ಮ ಊರಿಗೆ ಮರಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News