ಜೂನ್ 16ರಿಂದ ಮರಾಠಿ ಮೀಸಲಾತಿ ಹೋರಾಟ: ಬಿಜೆಪಿ ನಾಯಕ ಸಂಭಾಜಿರಾಜೆ ಘೋಷಣೆ
ಹೊಸದಿಲ್ಲಿ, ಜೂ. 6: ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸಿ ಜೂನ್ 16ರಂದು ಮಹಾರಾಷ್ಟ್ರದ ಕೊಲ್ಲಾಪುರದಿಂದ ರಾಜ್ಯ ವ್ಯಾಪಿ ಪ್ರತಿಭಟನೆ ಆರಂಭಿಸಲಾಗುವುದು ಎಂದು ಛತ್ರಪತಿ ಶಿವಾಜಿ ಮಹಾರಾಜ ಅವರ ವಂಶಸ್ಥ ಹಾಗೂ ಬಿಜೆಪಿ ಸಂಸದ ಸಂಭಾಜಿರಾಜೆ ಛತ್ರಪತಿ ಅವರು ಹೇಳಿದ್ದಾರೆ.
ಛತ್ರಪತಿ ಶಿವಾಜಿ ಅವರ ಪಟ್ಟಾಭಿಷೇಕದ ವರ್ಷಾಚರಣೆಯ ದಿನವಾದ ರವಿವಾರ ರಾಯಗಢ ಕೋಟೆಯಲ್ಲಿ ಶಿವಾಜಿ ಮಹಾರಾಜ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಅವರು ಈ ಘೋಷಣೆ ಮಾಡಿದರು. ಮೀಸಲಾತಿ ಆಗ್ರಹಿಸಿ ನಾನು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕುರಿತ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಬಳಿಕ ಮಹಾವಿಕಾಸ ಅಘಾಡಿ (ಎಂವಿಎ) ಸರಕಾರ ಹಾಗೂ ಬಿಜೆಪಿ ರಾಜಕೀಯ ಕೆಸರೆರೆಚಾಟದಲ್ಲಿ ತೊಡಗಿದೆ ಎಂದು ಎಂದು ಸಂಭಾಜಿರಾಜೆ ಅವರು ಹೇಳಿದ್ದಾರೆ. ‘‘ಮುಂದೆ ಇರುವ ದಾರಿ ಯಾವುದು ಹಾಗೂ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಮುದಾಯಕ್ಕೆ ಮೀಸಲಾತಿ ಮರು ಸ್ಥಾಪಿಸಲು ಏನು ಮಾಡಬೇಕು ಎಂಬ ಬಗ್ಗೆ ನಮಗೆ ತಿಳಿದಿರಬೇಕು’’ ಎಂದು ಅವರು ತಿಳಿಸಿದರು.
ಸಮುದಾಯಕ್ಕೆ ನ್ಯಾಯ ಒದಗಿಸಲು ಸಾಮರ್ಥ್ಯ ಇರುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕು ಎಂದು ಅವರು ಹೇಳಿದರು.