ದೇಶದ ಹೊರಗಿರುವ ವಿದೇಶಿ ನಿವಾಸಿಗಳ ವಾಸ್ತವ್ಯ ವೀಸಾ ಅವಧಿ ವಿಸ್ತರಣೆ: ಸೌದಿ ಅರೇಬಿಯ ನಿರ್ಧಾರ

Update: 2021-06-10 04:22 GMT

ರಿಯಾದ್ (ಸೌದಿ ಅರೇಬಿಯ), ಜೂ. 9: ದೇಶದಲ್ಲಿ ವಾಸಿಸುತ್ತಿರುವ ವಿದೇಶೀಯರು ದೇಶದ ಹೊರಗೆ ಸಿಕ್ಕಿಬಿದ್ದಿದ್ದರೆ ಅವರ ವಾಸ್ತವ್ಯ ಪರ್ಮಿಟ್ (ಇಕಾಮ)ಗಳ ಅವಧಿಯನ್ನು ಜುಲೈ 31ರವರೆಗೆ ಉಚಿತವಾಗಿ ವಿಸ್ತರಿಸಲು ಸೌದಿ ಅರೇಬಿಯ ನಿರ್ಧರಿಸಿದೆ.

ಸಂದರ್ಶನ ವೀಸಾಗಳು ಹಾಗೂ ನಿರ್ಗಮನ ಮತ್ತು ಮರುಪ್ರವೇಶ ವೀಸಾಗಳಿಗೂ ಈ ನಿರ್ಧಾರ ಅನ್ವಯಿಸುತ್ತದೆ.

ಕೋವಿಡ್-19 ಸಾಂಕ್ರಾಮಿಕ ಒಡ್ಡಿರುವ ಸವಾಲುಗಳು ಮತ್ತು ಸಂಕಷ್ಟಗಳನ್ನು ನಿಭಾಯಿಸುವ ಸೌದಿ ಅರೇಬಿಯ ಸರಕಾರದ ಪ್ರಯತ್ನಗಳ ಭಾಗವಾಗಿ ದೇಶದ ಹಣಕಾಸು ಸಚಿವಾಲಯವು ಈ ವಿಸ್ತರಣೆಯನ್ನು ಘೋಷಿಸಿದೆ.

ವಾಸ್ತವ್ಯ ಪರ್ಮಿಟ್ ಗಳ ವಿಸ್ತರಣೆಯನ್ನು ನ್ಯಾಶನಲ್ ಇನ್ಫಾರ್ಮೇಶನ್ ಸೆಂಟರ್ ನ ಸಹಕಾರದೊಂದಿಗೆ ಇಲೆಕ್ಟ್ರಾನಿಕ್ ರೂಪದಲ್ಲಿ ಮಾಡಲಾಗುವುದು ಎಂದು ಸೌದಿ ಅರೇಬಿಯದ ಪಾಸ್ಪೋರ್ಟ್ಸ್ ಮಹಾನಿರ್ದೇಶನಾಲಯ ಹೇಳಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯಾವ ದೇಶಗಳಿಂದ ಜನರು ಬರುವುದನ್ನು ಸೌದಿ ಅರೇಬಿಯ ನಿಷೇಧಿಸಿದೆಯೋ ಆ ದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸೌದಿ ನಿವಾಸಿಗಳ ವಾಸ್ತವ್ಯ ಪರ್ಮಿಟ್ ಹಾಗೂ ನಿರ್ಗಮನ ಮತ್ತು ಮರುಪ್ರವೇಶ ವೀಸಾಗಳ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗುವುದು.

ಈ ದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಜನರ ಸಂದರ್ಶನ ವೀಸಾಗಳ ಅವಧಿಯನ್ನೂ ಜುಲೈ 31ರವರೆಗೆ ವಿಸ್ತರಿಸಲಾಗುವುದು ಎಂದು ಪಾಸ್ಪೋರ್ಟ್ಸ್ ಮಹಾನಿರ್ದೇಶನಾಲಯ ತಿಳಿಸಿದೆ.
ಈ ವಿಸ್ತರಣೆಯು ಸೌದಿ ಅರೇಬಿಯವು ಫೆಬ್ರವರಿ 2ರಂದು ಘೋಷಿಸಿದ ಪ್ರಯಾಣ ನಿಷೇಧವು ಅನ್ವಯಿಸುವ 20 ದೇಶಗಳಿಗೆ ಮಾತ್ರ ಅನ್ವಯಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News