ದಮ್ಮಾಮ್‌: ಇಂಡಿಯನ್ ಸೋಶಿಯಲ್ ಫೋರಮ್ ನೆರವು; ಕೆಲಸದ ವೇಳೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ತವರಿಗೆ

Update: 2021-06-10 17:51 GMT

ದಮ್ಮಾಮ್, ಜೂ.10: ಕಟ್ಟಡ ಕಾಮಗಾರಿಯ ವೇಳೆ ಆಕಸ್ಮಿಕವಾಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಮೂಲತಃ ಬಜಾಲ್‌ನ ಪ್ರಸ್ತುತ ಕೃಷ್ಣಾಪುರದಲ್ಲಿ ನೆಲೆಸಿರುವ ಬದ್ರುದ್ದೀನ್ (47)ರನ್ನು ಭಾರತೀಯ ರಾಯಭಾರಿ ಕಚೇರಿಯ ಸಹಕಾರದೊಂದಿಗೆ ‘ಐಎಸ್‌ಎಫ್’ ತವರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ.

ಸೌದಿ ಅರೇಬಿಯಾದ ದಮಾಮ್ ಸಮೀಪದ ಸಫ್ವಾ ಎಂಬಲ್ಲಿ ಬದ್ರುದ್ದೀನ್ ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಿದ್ದರು. ಕಳೆದ ವರ್ಷದ ಡಿ.19ರಂದು 10 ಅಡಿ ಎತ್ತರದಿಂದ ಬಿದ್ದು ತಲೆಯ ಮೆದುಳಿನ ಭಾಗಕ್ಕೆ ತೀವ್ರ ಸ್ವರೂಪದ ಗಾಯಗೊಂಡು ಕೋಮಾಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುಮಾರು 15 ದಿನಗಳ ಕಾಲ ಚಿಕಿತ್ಸೆ ನೀಡಿದ ಕಂಪೆನಿಯು ಸಂಪೂರ್ಣ ಗುಣಮುಖವಾಗುವ ಮುಂಚೆಯೇ ಬದ್ರುದ್ದೀನ್‌ರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿತ್ತು. ರೂಮಿಗೆ ಹಿಂದಿರುಗಿದ ಬದ್ರುದ್ದೀನ್ ಅಸ್ವಸ್ಥರಾಗಿಯೇ ಇದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರಿಗೆ ತವರಿಗೆ ಮರಳುವ ಅಗತ್ಯವಿತ್ತು. ಆದರೆ ಕಂಪೆನಿ ತವರಿಗೆ ಕಳುಹಿಸಲು ಕೂಡ ನಿರಾಕರಿಸಿತ್ತು. ಎರಡು ವರ್ಷಗಳಿಂದ ಅವರ ಇಕಾಮ ನವೀಕರಿಸಿರಲಿಲ್ಲ ಮತ್ತು ವೇತನವನ್ನೂ ನೀಡಿರಲಿಲ್ಲ.

ಈ ಬಗ್ಗೆ ಬದ್ರುದ್ದೀನ್‌ರ ಸಹೋದ್ಯೋಗಿಗಳ ಮೂಲಕ ವಿಷಯ ಅರಿತುಕೊಂಡ ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ಕರ್ನಾಟಕ ಘಟಕದ ಸದಸ್ಯರಾದ ಮುುಹಮ್ಮದ್ ಆಲಿ ಮೂಳೂರು, ಇಬ್ರಾಹೀಂ ಕೃಷ್ಣಾಪುರ, ಯಾಸೀನ್ ಗುಲ್ಬರ್ಗ ಸ್ಥಳಕ್ಕೆ ಭೇಟಿ ನೀಡಿ ಬದ್ರುದ್ದೀನ್‌ರ ಆರೋಗ್ಯದ ಬಗ್ಗೆ ವಿಚಾರಿಸಿ ಮಾನಸಿಕ ಸ್ಥೈರ್ಯವನ್ನು ತುಂಬಿದ್ದರು. ಅಲ್ಲದೆ ಕಂಪೆನಿಯನ್ನು ಸಂಪರ್ಕಿಸಿ ತವರಿಗೆ ಮರಳಲು ಅವಕಾಶ ನೀಡುವಂತೆ ಕೋರಿದ್ದರು. ಕಂಪೆನಿ ಇದಕ್ಕೆ ಒಪ್ಪಿಗೆ ನೀಡಿದ್ದರೂ ಕೂಡ ಎರಡು ತಿಂಗಳ ಕಾಲ ಬದ್ರುದ್ದೀನ್‌ರನ್ನು ತವರಿಗೆ ಮರಳಿಸಿರಲಿಲ್ಲ. ಪಟ್ಟುಬಿಡದ ‘ಐಎಸ್‌ಎಫ್’ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಅನುಮತಿ ಪತ್ರ ಪಡೆದು ಜೂ.5ರಂದು ಬದ್ರುದ್ದೀನ್‌ರನ್ನು ತವರಿಗೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದೆ.

ಮೂರುವರೆ ವರ್ಷದ ಹಿಂದೆ ಮದುವೆಯಾಗಿ ದಮಾಮ್‌ಗೆ ತೆರಳಿದ್ದೆ. ಒಂದು ವರ್ಷ ಯಾವುದೇ ಸಮಸ್ಯೆ ಇಲ್ಲದೆ ಕೆಲಸ ಮಾಡಿದ್ದೆ. ಆ ಬಳಿಕ ಎರಡು ವರ್ಷ ನನ್ನ ಸಂಬಳ ಕೊಡದೆ ಕಂಪೆನಿ ಸತಾಯಿಸಿತು. ಡಿ.19ರಂದು ಕಟ್ಟಡವೊಂದರಲ್ಲಿ ಪ್ಲಂಬರ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದೆ. ಚಿಕಿತ್ಸೆಯ ವೆಚ್ಚವನ್ನು ಭರಿಸಲು ಮೀನಮೇಷ ಮಾಡಿದ ಕಂಪೆನಿಯು ಪೂರ್ಣ ಚಿಕಿತ್ಸೆಯನ್ನು ನೀಡದೆ ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಮಾಡಿಸಿತು. ಅಲ್ಲದೆ 2ವರ್ಷದ ಸಂಬಳವನ್ನೂ ಕೊಡಲು ನಿರಾಕರಿಸಿತು. ಕೊನೆಗೆ ‘ಐಎಸ್‌ಎಫ್’ ಸಂಘಟನೆಯ ನೆರವಿನಿಂದ ಮನೆಗೆ ಮರಳಿದೆ. ಈ ಸಂಘಟನೆಯ ನೆರವನ್ನು ನಾನು ಎಂದಿಗೂ ಮರೆಯಲಾರೆ.
- ಬದ್ರುದ್ದೀನ್ (ಬಜಾಲ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News