ಯುಎಇ: ಭಾರತ ಮತ್ತು ಪಾಕಿಸ್ತಾನದಿಂದ ಚಾರ್ಟರ್ ವಿಮಾನಗಳ ಮೂಲಕ ಬರುವ ಪ್ರಯಾಣಿಕರಿಗೆ ನೂತನ ಕೋವಿಡ್ ನಿರ್ಬಂಧ

Update: 2021-06-15 15:25 GMT

ದುಬೈ,ಜೂ.15: ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ವು ಭಾರತ, ಪಾಕಿಸ್ತಾನ, ನೇಪಾಳ ಮತ್ತು ಉಗಾಂಡಾ ಸೇರಿದಂತೆ ವಿವಿಧ ದೇಶಗಳಿಂದ ಚಾರ್ಟರ್ ವಿಮಾನಗಳ ಮೂಲಕ ಆಗಮಿಸುವ ಪ್ರಯಾಣಿಕರಿಗೆ ನೂತನ ಕೋವಿಡ್ ನಿರ್ಬಂಧಗಳನ್ನು ವಿಧಿಸಿದೆ.

ಪ್ರಯಾಣಿಕರು ಕನಿಷ್ಠ 10 ದಿನಗಳ ಕಾಲ ಜಾಡು ಪತ್ತೆ ಹಚ್ಚುವ ಸಾಧನಗಳನ್ನು ಧರಿಸಿರಬೇಕು ಎಂದು ಸಾರ್ವತ್ರಿಕ ನಾಗರಿಕ ವಾಯುಯಾನ ಪ್ರಾಧಿಕಾರವು ತನ್ನ ನೂತನ ಸುತ್ತೋಲೆಯಲ್ಲಿ ತಿಳಿಸಿದೆ.
 
ಅಬುಧಾಬಿ, ಶಾರ್ಜಾ ಮತ್ತು ರಾಸ್ ಅಲ್-ಖೈಮಾಗಳಿಗೆ ಆಗಮಿಸಿರುವ ಪ್ರಯಾಣಿಕರಿಗೆ ಈಗಾಗಲೇ ಈ ಸಾಧನಗಳನ್ನು ನೀಡಿರುವುದನ್ನು ಟ್ರಾವೆಲ್ ಎಜೆನ್ಸಿಗಳು ಮತ್ತು ಚಾರ್ಟರ್ ವಿಮಾನಯಾನ ನಿರ್ವಾಹಕರು ದೃಢಪಡಿಸಿದ್ದಾರೆ.
 
ಅಬುಧಾಬಿಗೆ ಆಗಮಿಸುವ ಪ್ರಯಾಣಿಕರು ತಮ್ಮ 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಈ ಸಾಧನಗಳನ್ನು ಧರಿಸುವುದು 2020, ಸೆಪ್ಟೆಂಬರ್ನಿಂದಲೇ ಕಡ್ಡಾಯವಾಗಿದೆ.
ಪ್ರಯಾಣಿಕರು ಆಗಮಿಸಿದ ಬಳಿಕ ಪಿಸಿಆರ್ ಪರೀಕ್ಷೆಗೊಳಪಡಬೇಕಾಗುತ್ತದೆ ಮತ್ತು ಕ್ವಾರಂಟೈನ್ ಅವಧಿಯಲ್ಲಿ ನಾಲ್ಕು ಮತ್ತು ಎಂಟನೇ ದಿನ ಇನ್ನೂ ಎರಡು ಬಾರಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ.

ದುಬೈನಲ್ಲಿ ಪ್ರಯಾಣಿಕರು 10 ದಿನಗಳ ಐಸೊಲೇಷನ್ನಲ್ಲಿರಬೇಕಾಗುತ್ತದೆ ಮತ್ತು ಪಿಸಿಆರ್ ಪರೀಕ್ಷೆಗೊಳಪಡಬೇಕಾಗುತ್ತದೆ. ಪಟ್ಟಿಯಲ್ಲಿರುವ ದೇಶಗಳಿಂದ ಬರುವ ವಿಮಾನಗಳ ಸಿಬ್ಬಂದಿಗಳೂ ನೂತನ ನಿರ್ಬಂಧಗಳನ್ನು ಪಾಲಿಸುವುದು ಅಗತ್ಯವಾಗಿದೆ.
 
ಟ್ರಾನ್ಸಿಟ್ ಅವಧಿಯಲ್ಲಿ ಪ್ರಯಾಣಿಕರು ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ ಮತ್ತು ಯುಎಇ ಸಮುದಾಯದ ಜನರ ಸಂಪರ್ಕಕ್ಕೆ ಬಾರದೇ ಹೋಟೆಲ್ ನಿಂದ ವಿಮಾನ ನಿಲ್ದಾಣಕ್ಕೆ ಸಂಚರಿಸಲು ಮಾತ್ರ ಅವಕಾಶ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News