ಚುನಾವಣೋತ್ತರ ಹಿಂಸಾಚಾರ: ರಾಜ್ಯಪಾಲರ ಪತ್ರಕ್ಕೆ ಬಂಗಾಳ ಸರ್ಕಾರ ಆಕ್ಷೇಪ
ಕೊಲ್ಕತ್ತಾ, ಜೂ.16: ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸೆಗೆ ಸಂಬಂಧಿಸಿದಂತೆ ರಾಜ್ಯಪಾಲ ಜೈದೀಪ್ ಧನ್‌ಖರ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಬರೆದ ಪತ್ರಕ್ಕೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯಪಾಲರ ಪತ್ರ ಘಟನೆಯ ವಾಸ್ತವಾಂಶಗಳನ್ನು ಹೊಂದಿಲ್ಲ ಎಂದು ಟಿಎಂಸಿ ಟೀಕಿಸಿದೆ.
ರಾಜ್ಯಪಾಲರ ವಿರುದ್ಧ ಟ್ವೀಟ್ ಸಮರ ನಡೆಸಿರುವ ರಾಜ್ಯದ ಗೃಹ ಸಚಿವಾಲಯ ಈ ಪತ್ರದ ಅಂಶಗಳನ್ನು ಬಹಿರಂಗಪಡಿಸಿರುವುದು, ಎಲ್ಲ ನಿಯಮಾವಳಿಗಳ ಉಲ್ಲಂಘನೆ ಎಂದು ಹೇಳಿದೆ. ಜತೆಗೆ ಈ ಪತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಹೇಳಿದೆ.
ಈ ಪತ್ರವನ್ನು ರಾಜ್ಯಪಾಲರು ದಿಢೀರನೇ ಬಹಿರಂಗಪಡಿಸಿರುವುದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆಘಾತ ಮತ್ತು ನೋವು ತಂದಿದೆ. ಅವರು ಮುಖ್ಯಮಂತ್ರಿಗೆ ಬರೆದ ಪತ್ರ ವಾಸ್ತವಾಂಶಗಳನ್ನು ಒಳಗೊಂಡಿಲ್ಲ ಎಂದು ಇಲಾಖೆ ಹೇಳಿದೆ.
ಈ ಪತ್ರ ಬಹುತೇಕ ತಿರುಚಿದ ಅಂಶಗಳನ್ನು ಒಳಗೊಂಡಿದ್ದು, ಪತ್ರದ ಅಂಶಗಳನ್ನು ಎರ್ರಾಬಿರ್ರಿಯಾಗಿ ಮತ್ತು ಏಕಪಕ್ಷೀಯವಾಗಿ ಬಹಿರಂಗಪಡಿಸಿರುವುದು ಆಘಾತಕಾರಿ ಎಂದು ಗೃಹ ಇಲಾಖೆ ಹೇಳಿದೆ.
ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ಬಳಿಕ ಪರಿಸ್ಥಿತಿಯನ್ನು ಸಹಜಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಸಂಭವಿಸಿದ್ದು, ಇಡೀ ಕಾನೂನು ಮತ್ತು ಸುವ್ಯವಸ್ಥೆ ಭಾರತದ ಚುನಾವಣಾ ಆಯೋಗದ ಕೈಯಲ್ಲಿದ್ದಾಗ. ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಸರ್ಕಾರ ಪರಿಸ್ಥಿತಿಯನ್ನು ಅವಲೋಕಿಸಿ ಸಹಜ ಸ್ಥಿತಿಗೆ ತಂದಿದೆ ಎಂದು ಪ್ರತಿಪಾದಿಸಿದೆ.